ಕಾಂಗ್ರೆಸ್ ಸಂಸದ ಮಾಣಿಕಂ ಟ್ಯಾಗೋರ್ ಅವರು ಸೋಮವಾರ (ಡಿ.9) ಲೋಕಸಭೆಯಲ್ಲಿ ನಿಲುವಳಿ ಸೂಚನೆ ಮಂಡಿಸಿದ್ದು, ಎನ್‌ಡಿಎ ಮಿತ್ರ ಪಕ್ಷಗಳ ನಾಯಕರಾದ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್‌ಗೆ ಇಡಿ, ಸಿಬಿಐ ಕ್ಲೀನ್ ಚಿಟ್ ನೀಡಿರುವ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ.
ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ಯಂತಹ ಕೇಂದ್ರೀಯ ಸಂಸ್ಥೆಗಳ ಕಾರ್ಯನಿರ್ವಹಣೆಯ ಕುರಿತು ಚರ್ಚೆಗೆ ಟ್ಯಾಗೋರ್ ಆಗ್ರಹಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಟ್ಯಾಗೋರ್, “ಚಂದ್ರಬಾಬು ನಾಯ್ಡು ಮತ್ತು ಅಜಿತ್ ಪವಾರ್ ಅವರನ್ನು ಸ್ವಚ್ಛಗೊಳಿಸಿದ ಮೋದಿಯವರ ಎರಡು ‘ವಾಶಿಂಗ್ ಮೆಷಿನ್’ಗಳ ಕುರಿತು ನಾನು ನಿಲುವಳಿ ಸೂಚನೆ ಮಂಡಿಸಿದ್ದೇನೆ. ನಾವು ಇಡಿ, ಸಿಬಿಐಗಳ ಕಾರ್ಯ ನಿರ್ವಹಣೆಯ ಬಗ್ಗೆ ಚರ್ಚಿಸಲು ಬಯಸಿದ್ದೇವೆ” ಎಂದಿದ್ದಾರೆ.
ನಾಯ್ಡು ಮತ್ತು ಪವಾರ್‌ಗೆ ಕ್ಲೀನ್ ಚಿಟ್ ನೀಡುವಾಗ ‘ಸೂಕ್ತ ಪ್ರಕ್ರಿಯೆ’ ಅನುಸರಿಸಲಾಗಿದೆಯೇ? ಎಂದು ಕಾಂಗ್ರೆಸ್ ನಾಯಕ ಪ್ರಶ್ನಿಸಿದ್ದು, ಈ ಎರಡೂ ಸಂಸ್ಥೆಗಳ ವಿಶ್ವಾಸಾರ್ಹತೆ ‘ಅಪಾಯದಲ್ಲಿದೆ’ ಎಂದು ಹೇಳಿದ್ದಾರೆ.
ಮಾಣಿಕಂ ಟ್ಯಾಗೋರ್ ಅವರ ನಿಲುವಳಿ ಸೂಚನೆ ಹೀಗಿದೆ : “ಗೌರವಾನ್ವಿತ (ಲೋಕಸಭಾ) ಸ್ಪೀಕರ್ ಸರ್ (ಓಂ ಬಿರ್ಲಾ), ಹೈ ಪ್ರೊಫೈಲ್ ಪ್ರಕರಣಗಳಲ್ಲಿ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಕ್ಲೀನ್ ಚಿಟ್ ನೀಡಿದ್ದಕ್ಕಾಗಿ ನಾನು ಕಳವಳ ವ್ಯಕ್ತಪಡಿಸುತ್ತೇನೆ. 1000 ಕೋಟಿ ರೂಪಾಯಿಯ ಐಟಿ ಬೇನಾಮಿ ಆಸ್ತಿ ಪ್ರಕರಣ ಮತ್ತು 371 ಕೋಟಿ ರೂ. ಮೌಲ್ಯದ ಕೌಶಲ ಅಭಿವೃದ್ಧಿ ಹಗರಣದಲ್ಲಿ ಕ್ಲೀನ್ ಚಿಟ್ ನೀಡಿರುವುದು ನಮ್ಮ ತನಿಖಾ ಸಂಸ್ಥೆಗಳ ನ್ಯಾಯಸಮ್ಮತತೆಯ ಬಗ್ಗೆ ಅನುಮಾನಗಳನ್ನು ಹುಟ್ಟು ಹಾಕುತ್ತದೆ.”
ಬಿಜೆಪಿ ಮೈತ್ರಿ ಪಕ್ಷವಾದ ಎನ್‌ಸಿಪಿಯ ನಾಯಕ ಅಜಿತ್ ಪವಾರ್ ಅವರು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಒಂದೇ ದಿನದಲ್ಲಿ, ಬೇನಾಮಿ ಆಸ್ತಿ ವಹಿವಾಟು ತಡೆ ಮೇಲ್ಮನವಿ ನ್ಯಾಯಮಂಡಳಿಯು ಅಜಿತ್ ಪವಾರ್ ಮತ್ತು ಅವರ ಕುಟುಂಬದ ವಿರುದ್ಧದ ಬೇನಾಮಿ ಆಸ್ತಿ ಮಾಲೀಕತ್ವದ ಆರೋಪವನ್ನು ವಜಾಗೊಳಿಸಿದೆ.
ನ್ಯಾಯಾಲಯದ ತೀರ್ಪಿನ ನಂತರ, ಆದಾಯ ತೆರಿಗೆ ಇಲಾಖೆಯು 2021 ರ ಬೇನಾಮಿ ವಹಿವಾಟು ಪ್ರಕರಣದಲ್ಲಿ ವಶಪಡಿಸಿಕೊಂಡಿದ್ದ 1,000 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಅಜಿತ್ ಕುಮಾರ್ ಅವರಿಗೆ ವಾಪಸ್ ನೀಡಿದೆ.
ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟದ ಪಕ್ಷ ಟಿಡಿಪಿಯ ಮುಖ್ಯಸ್ಥ ಹಾಗೂ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ವಿರುದ್ದದ ಕೌಶಲ್ಯಾಭಿವೃದ್ಧಿ ನಿಗಮದ 371 ಕೋಟಿ ರೂಪಾಯಿ ಹಗರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಕ್ಲೀನ್ ಚಿಟ್ ನೀಡಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದಿನ ಜಗನ್‌ಮೋಹನ್ ರೆಡ್ಡಿ ಸರ್ಕಾರ ರಚಿಸಿದ್ದ ಸಿಐಡಿ ತನಿಖೆ ಆಧರಿಸಿ ಚಂದ್ರಬಾಬು ನಾಯ್ಡು ಅವರನ್ನು 2023ರಲ್ಲಿ ಬಂಧಿಸಲಾಗಿತ್ತು. 53 ದಿನಗಳ ಕಾಲ ಜೈಲಿನಲ್ಲಿದ್ದ ಅವರು ಅಕ್ಟೋಬರ್ 31, 2023ರಂದು ರಂದು ಜಾಮೀನು ಪಡೆದು ಹೊರ ಬಂದಿದ್ದರು.
ಇದನ್ನೂ ಓದಿ : ರಾಜ್ಯಸಭಾ ಸ್ಪೀಕರ್ ಧಂಖರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ವಿಪಕ್ಷಗಳ ತಯಾರಿ – ವರದಿ


