ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಪ್ರಮುಖ ರಾಷ್ಟ್ರೀಯ ಪಕ್ಷಗಳು ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದನ್ನು ತಡೆಯಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಎಎಪಿ, ಕಾಂಗ್ರೆಸ್ ಪಕ್ಷಗಳ ನಾಯಕರು ಆರೋಪಿಸಿದ್ದಾರೆ. ಲೋಕಸಭೆ ಚುನಾವಣಾ ಹೊಸ್ತಿಲ್ಲಲ್ಲೇ ಪ್ರತಿಪಕ್ಷಗಳ ನಾಯಕರ ಬಂಧನ, ಬ್ಯಾಂಕ್ ಖಾತೆಗಳಿಗೆ ನಿರ್ಬಂಧ ಹೇರಿರುವುದು ಚುನಾವಣೆಗೆ ಮುನ್ನ ಬಿಜೆಪಿ ಪ್ರತಿಪಕ್ಷಗಳನ್ನು ಕಟ್ಟಿಹಾಕಲು ಮಾಡಿದ ವ್ಯವಸ್ಥಿತ ಪಿತೂರಿಯ ಭಾಗ ಎಂದು ಆರೋಪ ಕೇಳಿ ಬಂದಿದೆ.
ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್, ಚುನಾವಣೆ ಅತಿ ದೊಡ್ಡ ಉತ್ಸವ ಎಂದು ಚುನಾವಣಾ ಆಯೋಗ ಹೇಳುತ್ತಿದೆ. ಇದರಲ್ಲಿ ಭಾಗಿಯಾಗುವುದಕ್ಕೆ ಒಂದು ಪಕ್ಷಕ್ಕೆ ಮಾತ್ರ ಅವಕಾಶ? ಒಂದು ರಾಷ್ಟ್ರೀಯ ಪಕ್ಷಕ್ಕೆ ಮಾತ್ರ ಎಲ್ಲಾ ಸಂಪತ್ತು ಮತ್ತು ಎಲ್ಲಾ ಅಧಿಕಾರ? ಪ್ರಧಾನ ಪ್ರತಿಪಕ್ಷಕ್ಕೆ ಪಾರ್ಟಿಗೆ ನಿಯಮನುಸಾರ ಪಾರ್ಟಿ ಕಾರ್ಯಕರ್ತರಿಂದ ಸಂಗ್ರಹಿಸಿದ ಹಣವನ್ನು ಕೂಡ ಬಳಕೆ ಮಾಡಲು ಸಾಧ್ಯವಾಗುತ್ತಿಲ್ಲ. ಏನು ಕಾರಣ, ಆದಾಯ ತೆರಿಗೆ ಇಲಾಖೆ ಪ್ರಕಾರ, 10,000ರೂ ಪಾವತಿಸದ ಕಾರಣಕ್ಕೆ ಅವರು ನಮ್ಮ ಖಾತೆಯ 280 ಕೋಟಿಗೆ ನಿರ್ಬಂಧಿಸಿದ್ದಾರೆ. 96ರ ಸೀತಾ ರಾಮ್ ಕೇಸ್ ವಿಚಾರ ಹೇಳಿಕೊಂಡು ಈಗ ನೊಟೀಸ್ ನೀಡಲಾಗುತ್ತಿದೆ. ಇದು ಕಾಂಗ್ರೆಸ್ ಪಕ್ಷವನ್ನು ಚುನಾವಣಾ ಸಮರದಿಂದ ಹಿಂದೆ ಸರಿಯುವಂತೆ ಮಾಡುವ ಪಿತೂರಿಯಾಗಿದೆ. ಇದು ಪ್ರಧಾನ ಮಂತ್ರಿ ಮತ್ತು ಗೃಹ ಮಂತ್ರಿ ನೇರವಾಗಿ ಪಾಲ್ಗೊಂಡು ರೂಪಿಸಿದ ತಂತ್ರವಾಗಿದೆ. ಇದನ್ನು ಪ್ರಶ್ನಿಸಿ ನಾವು ಸುಪ್ರೀಂಕೋರ್ಟ್‌ಗೆ ಹೋಗಿದ್ದೆವು, ಆದರೆ ಸುಪ್ರೀಂಕೋರ್ಟ್ ಈ ಬಗ್ಗೆ ವಿಚಾರಣೆಗೆ ತಡ ಮಾಡುತ್ತಿದೆ. ಒಂದು ತಿಂಗಳ ಬಳಿಕ ಪ್ರಕರಣ ಕೈಗೆತ್ತಿಕೊಂಡರೆ ನಮಗೇನು ಪ್ರಯೋಜನ? ಚುನಾವಣೆ ಈ ವೇಳೆ ಮುಗಿಯುವುದಿಲ್ಲವೇ? ಚುನಾವಣೆಯಲ್ಲಿ ಪ್ರತಿಪಕ್ಷಗಳಿಗೆ ಸಕ್ರಿಯವಾಗಿ ಸ್ಪರ್ಧಿಸಲು ಅವಕಾಶ ನೀಡುವುತ್ತಿಲ್ಲ ಎಂದರೆ ಮತ್ತೆ ಯಾವ ರೀತಿಯ ಪ್ರಜಾಪ್ರಭುತ್ವ ದೇಶದಲ್ಲಿ ಬಾಕಿಯಾಗಿದೆ ಎಂದು ಕೆ.ಸಿ ವೇಣುಗೋಪಾಲ್ ಪ್ರಶ್ನಿಸಿದ್ದಾರೆ.
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಎಲ್ಲ ಪಕ್ಷಗಳಿಗೂ ಸಮಾನ ಅವಕಾಶಗಳನ್ನು ಒದಗಿಸಬೇಕು ಎಂದು ಈ ಮೊದಲು ಕಾಂಗ್ರೆಸ್ ಹೇಳಿತ್ತು. ಸೋನಿಯಾ ಗಾಂಧಿ ಈ ಕುರಿತು ಸುದ್ದಿಗೋಷ್ಟಿಯನ್ನು ನಡೆಸಿ, ಕಾಂಗ್ರೆಸ್ ಪಕ್ಷವನ್ನು ಆರ್ಥಿಕ ಸಂಕಷ್ಟಕ್ಕೆ ದೂಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ವ್ಯವಸ್ಥಿತ ಪ್ರಯತ್ನಗಳು ನಡೆಯುತ್ತಿವೆ. ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿರುವ ಈ ಕ್ರಮವು ಕಾಂಗ್ರೆಸ್ ಪಕ್ಷದ ಮೇಲಷ್ಟೆ ಅಲ್ಲ, ಭಾರತದ ಪ್ರಜಾತಂತ್ರ ವ್ಯವಸ್ಥೆಯ ಮೇಲೆಯೇ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತನಾಡಿ, ಚುನಾವಣೆಯಲ್ಲಿ ಹೋರಾಟ ನಡೆಸುವ ನಮ್ಮ ಸಾಮರ್ಥ್ಯವನ್ನೇ ನಾಶ ಮಾಡಲಾಗಿದೆ. ನಾವು ಚುನಾವಣಾ ಪ್ರಚಾರ ಕಾರ್ಯ ಮಾಡುವ ಶಕ್ತಿ ಕಳೆದುಕೊಂಡಿದ್ದೇವೆ ಎಂದು ಹೇಳಿದ್ದರು. ಅಜಯ್ ಮಾಕನ್ ಅವರು ಮಾತನಾಡಿ, ಪಕ್ಷದ ಬ್ಯಾಂಕ್ ಖಾತೆಗಳನ್ನು ಸ್ಥಗಿತ ಮಾಡಿ, ಅದರಿಂದ 115.32 ಕೋಟಿಯಷ್ಟು ಮೊತ್ತವನ್ನು ಒತ್ತಾಯದಿಂದ ಪಡೆದುಕೊಂಡಿರುವ ಬಿಜೆಪಿ, ಆ ಮೂಲಕ ಸಾಮಾನ್ಯ ಜನರು ಕಾಂಗ್ರೆಸ್‌ಗೆ ನೀಡಿದ್ದ ದೇಣಿಗೆಗಳನ್ನು ಲೂಟಿ ಮಾಡಿದೆ ಎಂದು ಆರೋಪಿಸಿದ್ದರು.
ಸಿಎಂ ಸಿದ್ದರಾಮಯ್ಯ ಈ ಕುರಿತು ಮಾತನಾಡಿ, ಲೋಕಸಭಾ ಚುನಾವಣೆಯ ಸಮಯದಲ್ಲಿ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿ ಪಕ್ಷವು ಹಣದ ಕೊರತೆಯಿಂದ ಗೋಳಾಡುವಂತೆ ಮಾಡಬೇಕು ಎನ್ನುವುದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ದುರುದ್ದೇಶವಾಗಿದೆ. ನಮ್ಮ ಪಕ್ಷದ ಖಾತೆಯಲ್ಲಿರುವುದು ಪಕ್ಷದ ಅಭಿಮಾನಿಗಳಾದ ಸಾಮಾನ್ಯ ಜನರಿಂದ ಸಂಗ್ರಹಿಸಿರುವ ಹಣ ಹೊರತು ದೊಡ್ಡ ಉದ್ಯಮಪತಿಗಳದ್ದಲ್ಲ ಎಂದು ಹೇಳಿದ್ದರು.
ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಸರ್ಕಾರ ಪಕ್ಷದ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸುವ ಮೂಲಕ ತನ್ನ ಪಕ್ಷದ ಮೇಲೆ ಸರ್ಜಿಕಲ್ ಸ್ಟ್ರೈಕ್’ನಡೆಸುತ್ತಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಈ ಹಿಂದೆ ಆರೋಪಿಸಿದ್ದರು.
ಕಾಂಗ್ರೆಸ್ ಪಕ್ಷದ 11 ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಲಾಗಿದೆ. ಇದರ ಪರಿಣಾಮವಾಗಿ ನಾವು ಯಾವುದೇ ಜಾಹೀರಾತು ಕೊಡುವಂತಿಲ್ಲ. ಅಭ್ಯರ್ಥಿಗಳಿಗೆ ಚುನಾವಣಾ ಖರ್ಚಿಗೆ ಹಣ ಕೊಡಲು ಸಾಧ್ಯವಾಗುತ್ತಿಲ್ಲ. ಬಲವಂತವಾಗಿ ಕಾಂಗ್ರೆಸ್ ಹಣ ಫ್ರೀಜ್ ಮಾಡಲಾಗಿದೆ. ಹೀಗಾದರೆ ನಾವು ಚುನಾವಣೆಯನ್ನು ಎದುರಿಸುವುದು ಹೇಗೆ? ಮೋದಿ ಸರ್ಕಾರ ಫಾಸಿಸಂ ಮಾಡುತ್ತಿದೆ ಎಂದು ರಾಜ್ಯ ಉಸ್ತುವಾರಿ ಸುರ್ಜೇವಾಲಾ ಆಕ್ರೋಶ ವ್ಯಕ್ತಪಡಿಸಿದ್ದರು.
ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಗುರುವಾರ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ. ಕೇಜ್ರಿವಾಲ್ ಅವರು ಚುನಾವಣೆಯಲ್ಲಿ ಪ್ರಚಾರ ಮಾಡದಂತೆ ತಡೆಯಲು ಬಿಜೆಪಿ ಮಾಡಿದ ವ್ಯವಸ್ಥಿತ ಪಿತೂರಿ ಎಂದು ಈ ಹಿಂದೆ ಸಮನ್ಸ್ ವೇಳೆ ಎಎಪಿ ಆರೋಪಿಸಿತ್ತು. ಇದೀಗ ದೆಹಲಿಯ ಆಮ್ ಆದ್ಮಿ ಪಕ್ಷದ ಕಚೇರಿಯನ್ನು ಎಲ್ಲಾ ಕಡೆಯಿಂದ ಸೀಲ್ ಮಾಡಲಾಗಿದೆ ಎಂದು ದೆಹಲಿ ಸಚಿವೆ ಮತ್ತು ಎಎಪಿ ನಾಯಕಿ ಅತಿಶಿ ಶನಿವಾರ ಆರೋಪಿಸಿದ್ದಾರೆ.
ಆಮ್ ಆದ್ಮಿ ಪಕ್ಷದ ಕಚೇರಿಯನ್ನು ಎಲ್ಲಾ ಕಡೆಯಿಂದ ಸೀಲ್ ಮಾಡಲಾಗಿದೆ. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ರಾಷ್ಟ್ರೀಯ ಪಕ್ಷದ ಕಚೇರಿ ಪ್ರವೇಶವನ್ನು ಸೀಲ್ ಮಾಡುವುದು ಹೇಗೆ ಸಾಧ್ಯ? ಇದು ಭಾರತೀಯ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ಇದರ ವಿರುದ್ಧ ದೂರು ನೀಡಲು ನಾವು ಚುನಾವಣಾ ಆಯೋಗಕ್ಕೆ ಸಮಯವನ್ನು ಕೇಳಿದ್ದೇವೆ ಎಂದು ಎಎಪಿ ನಾಯಕ ಅತಿಶಿ ಎಕ್ಸ್‌ನಲ್ಲಿ ಬರೆದಿದ್ದಾರೆ.
ಬಿಜೆಪಿ ತನ್ನ ವಿರೋಧಿಗಳ ಧ್ವನಿಯನ್ನು ಹತ್ತಿಕ್ಕಲು ಯತ್ನಿಸುತ್ತಿದೆ ಎಂದು ಪ್ರತಿಪಕ್ಷಗಳ ಈ ಹಿಂದೆ ಹಲವು ಬಾರಿ ಆರೋಪವನ್ನು ಮಾಡಿದ್ದವು, ಇದೀಗ ಲೋಕಸಭೆ ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದನ್ನು ತಡೆಯಲು ಸರಕಾರಿ ತನಿಖಾ ಸಂಸ್ಥೆಗಳನ್ನು ಆಯುಧವಾಗಿ ಬಳಸಿಕೊಳ್ಳುತ್ತಿದೆ ಎಂಬ ಆರೋಪ ಮತ್ತೆ ಕೇಳಿ ಬಂದಿದೆ.
Aam Aadmi Party office has been sealed off from all sides. How can access to a national party office be stopped during the Lok Sabha election? This against the ‘level playing field’ promised in the Indian Constitution.
We are seeking time with the Election Commission to… pic.twitter.com/wf9VdittvW
— Atishi (@AtishiAAP) March 23, 2024
ಇದನ್ನು ಓದಿ: ಮಹುವಾ ಮೊಯಿತ್ರಾ ನಿವಾಸದ ಮೇಲೆ ಸಿಬಿಐ ದಾಳಿ


