HomeUncategorizedದೇಶಪಾಂಡೆಯ ದ್ರೋಹ ಕೈಗೆ ಅರ್ಥವಾಗುತ್ತಿಲ್ಲ ಯಾಕೆ?

ದೇಶಪಾಂಡೆಯ ದ್ರೋಹ ಕೈಗೆ ಅರ್ಥವಾಗುತ್ತಿಲ್ಲ ಯಾಕೆ?

- Advertisement -

ನಹುಷ |

ದೇಶಪಾಂಡೆಗೆ ವಯಸ್ಸಾಗಿದೆ… ದೀರ್ಘಕಾಲ ಅಧಿಕಾರ ಅನುಭವಿಸಿಯೂ ಆಗಿದೆ….. ಅವ್ರು ಶಿವರಾಮ ಹೆಬ್ಬಾರ್‍ಗೆ ಮಂತ್ರಿಗಿರಿ ಬಿಟ್ಟುಕೊಡೋದು ಚಲೋ… ಕಿರಿಯರಿಗೆ ಪ್ರೋತ್ಸಾಹಿಸುಬೇಕವ್ರು….” ಎಂದು ಮೂರ್ನಾಲ್ಕು ತಿಂಗಳ ಹಿಂದೊಂದು ದೇಶಾವರಿ ಹೇಳಿಕೆ ಒಗಾಯಿಸಿದ್ದರು ಆನಂದ ಅಸ್ನೋಟಿಕರ್. ಆಪರೇಷನ್ ಕಮಲದ ಸೆಳೆತಕ್ಕೆ ಸಿಲುಕಿ ಹೆಬ್ಬಾರ್ ತಕಧಿಮಿ ಕುಣಿಯುತ್ತಿದ್ದ ಕಾಲವದು.
ಈ ಪ್ರಹಸನದ ಬೆನ್ನಿಗೇ- ಅಂದರೆ ಲೋಕಸಭೆ ಇಲೆಕ್ಷನ್ ಘೋಷಣೆ ಒಂದೂವರೆ ವಾರವಷ್ಟೇ ಇದ್ದ ಹೊತ್ತಲ್ಲಿ ಬಿಜೆಪಿಯ ಅನಂತ್ಮಾಣಿ, ದೇಶಪಾಂಡೆಯೇ ತನ್ನ ಎದುರಾಳಿ ಆಗಬಹುದೆಂಬ ಆತಂಕದಲ್ಲಿ “ಮಂತ್ರಿ ದೇಶಪಾಂಡೆ ಅಂದ್ರೆ ಪರ್ಸೆಂಟೇಜ್ ಪಾಂಡೆ ಕಣ್ರೀ… ಹಳ್ಳೀಲಿ ಸರ್ಕಾರಿ ಬಾವಿ ತೆಗೆದ್ರೂ ಅದರ ಪರ್ಸೆಂಜೇಜು ದೇಶಪಾಂಡೆಗೆ ಹೋಗ್ತದೆ….!” ಎಂದು ಗಂಭೀರ ಆರೋಪ ಮಾಡಿದ್ದ.
ಈ ಇಬ್ಬರ ಟೀಕೆಯಲ್ಲಿ ದೇಶಪಾಂಡೆಯನ್ನು ಅಪಮಾನಕ್ಕೀಡು ಮಾಡುವಂಥದ್ದು ಯಾವುದು? ಸಾಕ್ಷಾತ್ ದೇಶಪಾಂಡೆ ಸಾಹೇಬರ ಪ್ರಕಾರ ಅಸ್ನೋಟಿಕರ್‍ನದೇ ಅಕ್ಷಮ್ಯ ಅಪರಾಧ. ಮುಗಿದ ಪಾರ್ಲಿಮೆಂಟ್ ಇಲೆಕ್ಷನ್‍ನಲ್ಲಿ ಅಸ್ನೋಟಿಕರ್‍ನ ಈ ಮಾತುಗಳನ್ನೇ ನೆಪಮಾಡಿಕೊಂಡು ಮೈತ್ರಿಕೂಟದ ಸೋಲಿಗೆ ಏನೆಲ್ಲಾ ಮಾಡಬಹುದೋ ಅದೆಲ್ಲಾ ದೇಶಪಾಂಡೆ ಮಾಡಿದ್ದಾರೆ. ಅಲ್ಲಿಗೆ ಸಮಯ ಸಾಧಕತನವನ್ನೇ ಸಿದ್ಧಾಂತ ಮಾಡಿಕೊಂಡಿರುವ ದೇಶಪಾಂಡೆಯ ದ್ರೋಹ-ದೋಖಾ ಬುದ್ಧಿ ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ದಾಖಲಾಗಿ ಹೋಗಿದೆ!!
ಈ ಬಾರಿ ಕೈ ಸಿಂಬಾಲ್‍ನಲ್ಲಿ ಹರಿಪ್ರಸಾದ್, ಮ್ಯಾಗಿ, ಕೆ.ಎಚ್.ಗೌಡ, ಭೀಮಣ್ಣನಾಯ್ಕ… ಹೀಗೆ ಯಾರೇ ನಿಂತರೂ ಗೆಲ್ಲುವ ಅವಕಾಶ ಹೆಚ್ಚಿತ್ತು. ದೇಶಪಾಂಡೆ ಮತ್ತವನ ಮಗನ ಬಿಟ್ಟು ಕಾಂಗ್ರೆಸ್‍ನ ಎರಡನೇ ಸಾಲಿನ ಲೀಡರ್ ಯಾರಿಗಾದರೂ ಅಭ್ಯರ್ಥಿ ಮಾಡಿ, ದೇಶಪಾಂಡೆಯನ್ನು ಕಿತಾಪತಿ ಮಾಡದಂತೆ ಮೂಗುದಾರ ಹಾಕಿ ಕೂಡ್ರಿಸಿದ್ದರೆ ಅನಂತ್ಮಾಣಿಯನ್ನ ಸುಲಭವಾಗಿ ಮಾಜಿ ಮಾಡಬಹುದಿತ್ತು. ಅಷ್ಟೂ ದೊಡ್ಡಮಟ್ಟದಲ್ಲಿ ಮಾಣಿ ಬಗ್ಗೆ ಬೇಸರ-ಹೇಸಿಗೆ ಕ್ಷೇತ್ರದಲ್ಲಿ ಹೆಪ್ಪುಗಟ್ಟಿತ್ತು! ಆದರೆ ಹಾವು ಮುಂಗುಸಿಯಂತೆ ಕಿತ್ತಾಡುವ ಮ್ಯಾಗಿ-ದೇಶಪಾಂಡೆ ಒಂದಾಗಿ ನೆಲೆ-ಬೆಲೆಯೇ ಜಿಲ್ಲೆಯಲ್ಲಿ ಇಲ್ಲದ ಜೆಡಿಎಸ್‍ಗೆ ಕ್ಷೇತ್ರವನ್ನು ತಟ್ಟೆಯಲ್ಲಿಟ್ಟು ಕೊಟ್ಟಿದ್ದರು.
ಮ್ಯಾಗಿ ಮೈತ್ರಿಕೂಟದ ಪ್ರಚಾರಕ್ಕೆಂದು ಜಿಲ್ಲೆಗೆ ಒಂದು ಸಲವೂ ಬರಲಿಲ್ಲ. ದೇಶಪಾಂಡೆ ಮತದಾನಕ್ಕೆ ವಾರವಿರುವಾಗ ಕಾಟಾಚಾರಕ್ಕೆ ಬಂದವರು, ನಾಲ್ಕುದಿನ ಮೊದಲೇ ನಾಪತ್ತೆಯಾಗಿ ಹೋದರು. ಹೋದಲ್ಲೆಲ್ಲ ತನ್ನ ಶಿಷ್ಯರನ್ನು ರಹಸ್ಯವಾಗಿ ಕರೆದು ಅಸ್ನೋಟಿಕರ್ ಸೋಲಿಸಲು ‘ಆದೇಶ’ ಕೊಟ್ಟರು.
ಏಐಸಿಸಿ ಮಟ್ಟದಲ್ಲಿ ಪ್ರಭಾವವಿರುವ ಬಿ.ಕೆ.ಹರಿಪ್ರಸಾದ್, ಮಾರ್ಗರೆಟ್ ಆಳ್ವ, ಸಿದ್ದರಾಮಯ್ಯನಂಥವರೇ ಅದ್ಯಾಕೋ ದೇಶಪಾಂಡೆಯ ಈ ಸ್ವಭಾವ ಕಂಡೂ ಕಾಣದಂತಿದ್ದಾರೆ. ಬಸವರಾಜ ಹೊರಟ್ಟಿ ಹತ್ತಿರವೇ “ನಂಗೆ ರಾಜಕೀಯ ಸಾಕಾಗಿದೆ… ಪಕ್ಷ, ಸರ್ಕಾರ ನನ್ನ ಮೇಲೆ ಕ್ರಮ ಕೈಗೊಂಡರೂ ಬೇಜಾರಿಲ್ಲ… ನಾನು ರೀಟೈರ್ ಆಗ್ತೀನೋ ಹೊರತು ಆ ಅಧಿಕ ಪ್ರಸಂಗಿ ಅಸ್ನೋಟಿಕರ್ ಪರ ಕೆಲಸ ಮಾಡೋದಿಲ್ಲ…” ಎಂದು ಖಡಾಖಂಡಿತವಾಗೇ ಹೇಳಿದ್ದರು ಎನ್ನಲಾಗುತ್ತಿದೆ.
ಖಾನಾಪುರದ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಪ್ರಾಮಾಣಿಕವಾಗಿ ಪ್ರಬಲವಾಗಿ ಆಸ್ನೋಟಿಕರ್ ಪರ ಕೆಲಸ ಮಾಡುತ್ತಿದ್ದರು. ಇದನ್ನು ಕಂಡು ಸಿಡಿಮಿಡಿಗೊಂಡ ದೇಶಪಾಂಡೆ ಆಕೆಯನ್ನು ಕರೆದು “ನೋಡಮ್ಮಾ… ನೀನು ಈಗ ಜೆಡಿಎಸ್ ಪರ ಹೀಗೆಲ್ಲ ಕೆಲ್ಸ ಮಾಡಿದ್ರೆ ಮುಂದಿನ ಅಸೆಂಬ್ಲಿ ಇಲೆಕ್ಷನ್‍ದಾಗೆ ತೊಂದ್ರೆ ಅಕ್ಕೇತಿ… ನಿಂಗ ಕಳ್ದಬಾರಿ ಠಕ್ಕರ್ ಕೊಟ್ಟಿದ್ದ ಜೆಡಿಎಸ್‍ನ ನಾಸೀರ್ ಭಾಗವನ್‍ಗೆ ಹೆಲ್ಪ್ ಆಕ್ಕೇತಿ… ನೋಡ್ ಸ್ವಲ್ಪ ವಿಚಾರ ಮಾಡ್…” ಎಂದು ಹೆದರಿಸಿ ಆಕೆಯ ವೇಗಕ್ಕೆ ಕಡಿವಾಣ ಹಾಕಿದ್ದಾರೆ.
ಅಸ್ನೋಟಿಕರ್ ಮಾಣಿ ಮೇಲೆ ದಾಳಿ ಮಾಡುತ್ತಿದ್ದ ಪರಿ ನೋಡಿದರೆ ಬಿಜೆಪಿಗೆ ಡ್ಯಾಮೇಜು ಆಗುತ್ತದೆ, ಮೈತ್ರಿ ಕೂಟ ಬಲಗೊಳಿಸುತ್ತದೆಂದು ದೇಶಪಾಂಡೆ ಜೆಡಿಎಸ್‍ನ ಬಸವರಾಜ ಹೊರಟ್ಟಿಯನ್ನು ಬಳಸಿಕೊಂಡರು. ಅಸ್ನೋಟಿಕರ್‍ಗೆ ಆಕ್ರಮಣಶೀಲತೆ ಕಮ್ಮಿ ಮಾಡುವಂತೆ ಹೊರಟ್ಟಿಯಿಂದ “ಬುದ್ಧಿ” ಹೇಳಿಸಿದರು. ಹೊರಟ್ಟಿ ಸಂಚು ಅರಿಯದ ಅಸ್ನೋಟಿಕರ್ ಕೊನೆಕೊನೆಯಲ್ಲಿ ಜೋಶ್ ಕಳಕೊಂಡರು. ಇದು ಆತನಿಗೆ ದೊಡ್ಡ ಹೊಡೆತವನ್ನೇ ಕೊಟ್ಟಿದೆ!!
ಇಷ್ಟೆಲ್ಲಾ ಎಡರುತೊಡರು ಎದುರಾದರೂ ಅಸ್ನೋಟಿಕರ್ ತೀರಾ ದುರ್ಬಲವಾಗಿಲ್ಲ. ದೇಶಪಾಂಡೆ ತಲೆಕಂಡರಾಗದ ಕಾಂಗ್ರೆಸ್‍ನ ಹಳಿಯಾಳದ ಎಮ್ಮೆಲ್ಸಿ ಘೋಟನೇಕರ್, ಶಾಸಕ ಹೆಬ್ಬಾರ್, ಮಾಜಿ ಶಾಸಕರಾದ ಸತೀಶ್ ಸೈಲ್, ಮಂಕಾಳ ವೈದ್ಯ, ಆರ್.ಎನ್.ನಾಯ್ಕ, ಜೆ.ಡಿ.ನಾಯ್ಕ ಒಂದು ಹಂತದವರೆಗೆ ಮೈತ್ರಿಕೂಟದ ಗೆಲುವಿಗೆ ಪ್ರಯತ್ನ ಪಟ್ಟಿದ್ದಾರೆ. ಕಿತ್ತೂರು, ಖಾನಾಪುರದಲ್ಲಿ ಮಾಣಿಗೆ ಹಿನ್ನಡೆಯಾಗಿದೆ. ಕರಾವಳಿಯಲ್ಲಿ ಮೈತ್ರಿಕೂಟ ಏದುಸಿರುಬಿಡುತ್ತಿದೆ. ಘಟ್ಟದ ಮೇಲೆ ಸಮಬಲ ಇರುವಂತಿದೆ. ಎತ್ತಿಂದೆತ್ತ ಲೆಕ್ಕಹಾಕಿ ತಾಳೆ ಹಾಕಿದರೂ ಎದುರು ಹಿಂದುತ್ವ, ಬ್ರಾಹ್ಮಣಿಕೆ ಮಸಲತ್ತುಗಳು ಮೇಲುಗೈ ಸಾಧಿಸಿರುವುದು ಕಾಣಿಸುತ್ತದೆ.
ಕೇಸರಿ-ಭಜರಂಗಿ ಪಡೆಯ ಲೆಕ್ಕಾಚಾರದಂತೆ ಮಾಣಿ ಎರಡು ಲಕ್ಷ ಅಂತರದಲ್ಲಿ ಗೆಲ್ಲುತ್ತಾನೆ. ಅಷ್ಟು ಸರಳ ಸಮೀಕರಣ ಕ್ಷೇತ್ರದಲ್ಲಿಲ್ಲ. ಮಾಣಿ ವಿರುದ್ಧ ಅಂಡರ್ ಕರಂಟ್ ಕ್ಷೇತ್ರಾದಾದ್ಯಂತ ಹರಿದಾಡಿರುವುದಂತೂ ಖರೆ. ಹೀಗಾಗಿ ಅಸ್ನೋಟಿಕರ್ ಹೋರಾಟ ಕೊಟ್ಟಿದ್ದಾನೆ. ಹೀಗಾಗಿ ಅಸ್ನೋಟಿಕರ್ ಸೋತರೂ ಸಣ್ಣ ಅಂತರದಲ್ಲಷ್ಟೇ ಎಂಬ ವಿಶ್ಲೇಷಣೆಯೂ ನಡೆದಿದೆ.
ಅನಂತ್ಮಾಣಿ ಗೆದ್ದರೂ ಅದು ಅಪಮಾನದ ಗೆಲುವು; ದೇಶಪಾಂಡೆಯ ಪಕ್ಷ ದ್ರೋಹದ ಫಲ. ಕಾಂಗ್ರೆಸ್ ಹೈಕಮಾಂಡ್ ದೇಶಪಾಂಡೆ ವಿರುದ್ಧ ಕ್ರಮಕ್ಕೆ ಯೋಚಿಸಬೇಕಾದ ಕಾಲವಿದು. ಆತನನ್ನು ಪಕ್ಷದಿಂದ ಹೊರಹಾಕಿದರೆ ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ದಲಿತರು ಒಂದಾಗಿ ಕಾಂಗ್ರೆಸ್ ಬೆಂಬಲಿಸುವುದು ನಿಸ್ಸಂಶಯ. ಅಂದಹಾಗೆ, ಆಪರೇಷನ್ ಕಮಲದ ಹುಮ್ಮಸ್ಸಿನಲ್ಲಿರುವ ಬಿಜೆಪಿಯ ಟಾರ್ಗೆಟ್ ಪಟ್ಟಿಯಲ್ಲೂ ದೇಶಪಾಂಡೆಯ ಹೆಸರಿಲ್ಲ. ಯಾಕೆಂದರೆ ಆತ ಬಿಜೆಪಿ ಸೇರಿದರೆ ಆ ಪಾರ್ಟಿಗೆ ಲಾಭಕ್ಕಿಂತ ಲುಕ್ಸಾನೇ ಜಾಸ್ತಿ ಎಂಬುದು ಅವರಿಗೂ ಗೊತ್ತು. ಆತ ಕಾಂಗ್ರೆಸಲ್ಲೇ ಇದ್ದರೆ ಬಿಜೆಪಿಗೆ ಲಾಭ ಜಾಸ್ತಿ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಸೀದಿ ಒಡೆಯುವ ಮಾತುಗಳು: ‘ಮುತಾಲಿಕ್‌’ ಮುಂದುವರಿದ ಭಾಗ ‘ಕಾಳಿ ಸ್ವಾಮೀಜಿ’ ಪ್ರಕರಣ

ಕೋಮು ಪ್ರಚೋದನೆ ಮಾಡಿರುವ ರಿಷಿ ಕುಮಾರ ಸ್ವಾಮೀಜಿ (ಕಾಳಿ ಸ್ವಾಮೀಜಿ) ಈಗ ಸುದ್ದಿಯಲ್ಲಿದ್ದಾರೆ. ಮಸೀದಿ ಒಡೆಯಬೇಕೆಂದು ಕರೆ ನೀಡಿದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ. ಬಾಬ್ರಿ ಮಸೀದಿ ರೀತಿಯಲ್ಲಿ ಶ್ರೀರಂಗಪಟ್ಟಣದ ಮಸೀದಿ ಕೆಡವಬೇಕೆಂದು ಕಾಳಿ...
Wordpress Social Share Plugin powered by Ultimatelysocial