ಸಚಿನ್ ಪೈಲಟ್ ಬಂಡಾಯದಿಂದ ಉಂಟಾಗಿರುವ ರಾಜಸ್ಥಾನ ರಾಜಕೀಯ ಬಿಕ್ಕಟ್ಟಿನ ಮಧ್ಯೆ ಪಕ್ಷದ ಪ್ರಮುಖ ಸಭೆಗಳಿಗೆ ಹಾಜರಾಗದ ಕಾರಣ ರಾಜಸ್ಥಾನ ಕಾಂಗ್ರೆಸ್ ಪಕ್ಷದ 19 ಶಾಸಕರಿಗೆ ನೋಟಿಸ್ ನೀಡಿದ್ದು, ಅವರ ಮನೆ ಮುಂದೆ ಕೂಡ ನೋಟಿಸ್ ಅಂಟಿಸಲಾಗಿದೆ.
ಕಾಂಗ್ರೆಸ್ ಪಕ್ಷವು ಸಚಿನ್ ಪೈಲಟ್ ಜೊತೆಗಿರುವ ಶಾಸಕರಿಗೆ ಎಸ್‌ಎಂಎಸ್, ವಾಟ್ಸಾಪ್, ಇಮೇಲ್ ಮತ್ತು ಪೋಸ್ಟ್ ಮೂಲಕ ನೋಟಿಸ್ ಕಳುಹಿಸಿದೆ. ಅಷ್ಟೇ ಅಲ್ಲದೇ ನೋಟಿಸ್ ತಲುಪಿಲ್ಲ ಎಂಬ ಕಾರಣವನ್ನು ತಪ್ಪಿಸಲು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಬರೆಯಲ್ಪಟ್ಟ ನೋಟಿಸ್ ಅನ್ನು ಶಾಸಕರ ಮನೆಯ ಹೊರಗಿನ ಗೋಡೆಗಳ ಮೇಲೆ ಅಂಟಿಸಲಾಗಿದೆ.
“ಕೆಲವು ಸದ್ಯಸ್ಯರಿಗೆ ಸಭೆಯ ಸಂಪೂರ್ಣ ಮಾಹಿತಿ ಇದ್ದಾಗಲೂ ಸಹ ಉದ್ದೇಶಪೂರ್ವಕವಾಗಿ ಸಭೆಗಳಿಗೆ ಹಾಜರಾಗದಿರುವುದು ವಿಷಾದನೀಯ” ಎಂದು ನೋಟಿಸ್ ನಲ್ಲಿ ಬರೆಯಲಾಗಿದೆ.
“ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳುವಂತೆ ನಿಮ್ಮನ್ನು ಕೋರಲಾಗಿದೆ. ಸಮರ್ಪಕ ಕಾರಣಗಳನ್ನು ಮುಂಚಿತವಾಗಿ ಮತ್ತು ಲಿಖಿತವಾಗಿ ನೀಡದೆ ಸಭೆಯಲ್ಲಿ ಭಾಗವಹಿಸಲು ವಿಫಲವಾದರೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಅದರ ಸಿದ್ಧಾಂತದಿಂದ ಹೊರಗುಳಿಯುವ ನಿಮ್ಮ ಉದ್ದೇಶ ಸ್ಪಷ್ಟ ಮತ್ತು ನಿಖರ ಸಾಕ್ಷ್ಯವೆಂದು ಪರಿಗಣಿಸಲಾಗುತ್ತದೆ. ಇದು ಸಂಬಂಧಿತ ಕಾನೂನು ಮತ್ತು ಭಾರತದ ಸಂವಿಧಾನದ ಪ್ರಕಾರ ಶಿಸ್ತು ಕ್ರಮಕ್ಕೆ ಆಹ್ವಾನಿಸುತ್ತದೆ” ಎಂದು ಕಾಂಗ್ರೆಸ್ ನೋಟಿಸ್‌ನಲ್ಲಿ ತಿಳಿಸಿದೆ. ಎರಡು ದಿನಗಳಲ್ಲಿ ನೋಟಿಸ್‌ಗೆ ಉತ್ತರಿಸಲು ಶಾಸಕರಿಗೆ ತಿಳಿಸಲಾಗಿದೆ.
ಭಾನುವಾರದಿಂದ ಸಚಿನ್ ಪೈಲಟ್ ದೆಹಲಿಯಲ್ಲಿದ್ದಾರೆ . ಅವರೊಂದಿಗಿನ ಶಾಸಕರು ಗುರ್ಗಾಂವ್ ಪಕ್ಕದ ರೆಸಾರ್ಟ್ ನಲ್ಲಿ ಉಳಿದಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ನಾನು ಇನ್ನೂ ಕಾಂಗ್ರೆಸ್ಸಿಗ, ಬಿಜೆಪಿ ಸೇರುವುದಿಲ್ಲ: ಪೈಲಟ್ ಮಾತಿನ ಅರ್ಥವೇನು?


