Homeಕರ್ನಾಟಕಮೀಸಲಾತಿ ಮಿತಿ ಶೇ.75ಕ್ಕೆ ಏರಿಸಲು ಕಾಂಗ್ರೆಸ್ ಬದ್ಧ: ಸಿದ್ದರಾಮಯ್ಯ ಘೋಷಣೆ

ಮೀಸಲಾತಿ ಮಿತಿ ಶೇ.75ಕ್ಕೆ ಏರಿಸಲು ಕಾಂಗ್ರೆಸ್ ಬದ್ಧ: ಸಿದ್ದರಾಮಯ್ಯ ಘೋಷಣೆ

ಜನಸಂಖ್ಯೆಯ ಆಧಾರದಲ್ಲಿ ಎಲ್ಲಾ ಜಾತಿಗಳಿಗೆ ಮೀಸಲಾತಿ ನೀಡಲಾಗುವುದು ಎಂದಿರುವ ಅವರು ಅಮಿತ್ ಶಾ ಆರೋಪಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ

- Advertisement -
- Advertisement -

ಮೀಸಲಾತಿ ಮಿತಿಯನ್ನು ಶೇ.50ರಿಂದ ಶೇ. 75ಕ್ಕೆ  ಹೆಚ್ಚಿಸಲು ಕಾಂಗ್ರೆಸ್ ಬದ್ಧವಾಗಿದೆ. ಜನಸಂಖ್ಯೆಯ ಆಧಾರದಲ್ಲಿ ಎಲ್ಲಾ ಜಾತಿಗಳಿಗೆ ಮೀಸಲಾತಿ ನೀಡಲಾಗುವುದು ಎಂದು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.

ಮೀಸಲಾತಿ ವಿಚಾರದಲ್ಲಿ ಬಿಜೆಪಿ ಸರ್ಕಾರ ಗೊಂದಲಗಳನ್ನು ಸೃಷ್ಟಿಸಿ, ಮುಸ್ಲಿಮರಿಗಿದ್ದ 4% ಮೀಸಲಾತಿಯನ್ನು ಕಿತ್ತುಹಾಕಿ ಲಿಂಗಾಯತರು ಮತ್ತು ಒಕ್ಕಲಿಗರಿಗೆ ಹಂಚಿಕೆ ಮಾಡಿದ್ದೇವೆಂದು ರಾಜಕಾರಣ ಮಾಡುತ್ತಿರುವ ಬೆನ್ನಲ್ಲೇ ಸಿದ್ದರಾಮಯ್ಯನವರು ಕಾಂಗ್ರೆಸ್ ಪಕ್ಷದ ಮುಂದಿನ ನಡೆಯನ್ನು ತಿಳಿಸಿದ್ದಾರೆ.

“ಒಕ್ಕಲಿಗರು, ಲಿಂಗಾಯತರು ಅಥವಾ ಇತರ ಯಾವುದೇ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡುವುದಕ್ಕೆ ನಮ್ಮ ವಿರೋಧ ಇಲ್ಲ. ಪ್ರತಿಯೊಬ್ಬರಿಗೂ ಅವರ ಜನಸಂಖ್ಯೆಯ ಆಧಾರದ ಮೇಲೆ ಮೀಸಲಾತಿ ಹೆಚ್ಚಿಸಬೇಕೆಂಬುದನ್ನು ನಾವು ಬೆಂಬಲಿಸುತ್ತೇವೆ” ಎಂದಿದ್ದಾರೆ.

“ಒಕ್ಕಲಿಗರು ಮತ್ತು ಲಿಂಗಾಯತರಿಗೆ ಮೀಸಲಾತಿ ಹೆಚ್ಚಿಸಲು ಮುಸ್ಲಿಮರಿಗೆ ನೀಡಲಾಗಿರುವ ಮೀಸಲಾತಿಯನ್ನು ರದ್ದುಪಡಿಸುವ ಅಗತ್ಯವಿಲ್ಲ. ಮೀಸಲಾತಿ ಮಿತಿ ಶೇ.50 ತೆಗೆದರೆ ಪ್ರತಿ ಅರ್ಹ ಸಮುದಾಯಕ್ಕೂ ಅವರ ಜನಸಂಖ್ಯೆ ಆಧರಿಸಿ ಮೀಸಲಾತಿ ನೀಡಬಹುದು” ಎಂದು ತಿಳಿಸಿದ್ದಾರೆ.

“ಬಿಜೆಪಿ ಎಂದಿಗೂ ಒಕ್ಕಲಿಗರು ಮತ್ತು ಲಿಂಗಾಯತರಿಗೆ ಮೀಸಲಾತಿ ನೀಡುವ ಉದ್ದೇಶವನ್ನು ಹೊಂದಿರಲಿಲ್ಲ, ಆದರೆ ಮುಸ್ಲಿಮರಿಗೆ ಮೀಸಲಾತಿಯನ್ನು ತೆಗೆದುಹಾಕುವಲ್ಲಿ ಮಾತ್ರ ಆಸಕ್ತಿ ಹೊಂದಿತ್ತು” ಎಂದು ಟೀಕಿಸಿದ್ದಾರೆ.

“ಮುಸ್ಲಿಮರಿಗೆ ಮೀಸಲಾತಿ ನೀಡಲು ಒಕ್ಕಲಿಗರ ಇಲ್ಲವೇ ಲಿಂಗಾಯತರ ಮೀಸಲಾತಿಯನ್ನು ಕಡಿತಗೊಳಿಸುತ್ತೀರಾ?” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಶ್ನಿಸಿರುವುದಕ್ಕೆ ಸರಣಿ ಟ್ವೀಟ್‌ಗಳ ಮೂಲಕ ಸಿದ್ದರಾಮಯ್ಯ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.

“ಈ ಪ್ರಶ್ನೆಯಲ್ಲಿಯೇ ಜಾತಿ-ಜಾತಿಗಳ ಮತ್ತು ಧರ್ಮ-ಧರ್ಮದ ನಡುವೆ ಜಗಳ ಹಚ್ಚುವ ದುಷ್ಟ ಆಲೋಚನೆ ಇದೆ ಎನ್ನುವುದನ್ನು ಅರ್ಥಮಾಡಿಕೊಳ್ಳದಷ್ಟು ಕರ್ನಾಟಕದ ಜನತೆ ದಡ್ಡರಲ್ಲ. ಒಕ್ಕಲಿಗರು ಮತ್ತು ಲಿಂಗಾಯತರು ಸೇರಿದಂತೆ ಈ ರಾಜ್ಯದ ಮಹಾ ಜನತೆ ‘ಕಿತ್ತು ತಿನ್ನುವ ದುಷ್ಟರಲ್ಲ’, ‘ಹಂಚಿ ತಿನ್ನುವ ಔದಾರ್ಯ ಸಜ್ಜನರು’ ಎನ್ನುವುದನ್ನು ಅಮಿತ್ ಶಾ ಅವರಿಗೆ ವಿನಮ್ರವಾಗಿ ತಿಳಿಸಬಯಸುತ್ತೇನೆ” ಎಂದಿದ್ದಾರೆ.

“ಒಕ್ಕಲಿಗ, ಲಿಂಗಾಯತ ಇಲ್ಲವೇ ಇತರ ಅರ್ಹ ಜಾತಿಗಳಿಗೆ ಮೀಸಲಾತಿ ನೀಡುವುದಕ್ಕೆ ನಮ್ಮ ಪಕ್ಷದ ವಿರೋಧ ಇಲ್ಲ. ನಮ್ಮ ಪಕ್ಷ ಮೀಸಲಾತಿ ಹೆಚ್ಚಳದ ಪರವಾಗಿದೆ. ಬಿಜೆಪಿ ಕನ್ನಡಿಯೊಳಗಿನ ಗಂಟು ತೋರಿಸಿ ಜನರನ್ನು ತಪ್ಪು ದಾರಿಗೆಳೆಯುತ್ತಿರುವುದನ್ನಷ್ಟೇ ವಿರೋಧಿಸುತ್ತಿದ್ದೇವೆ” ಎಂದು ಸ್ಪಷ್ಟಪಡಿಸಿದ್ದಾರೆ.

“ಒಟ್ಟು ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವುದೊಂದೇ ಈಗಿನ ಮೀಸಲಾತಿಯ ಗೊಂದಲ-ವಿವಾದವನ್ನು ಪರಿಹರಿಸಲು ಇರುವ ಸರಿಯಾದ ಮಾರ್ಗ. ಮೀಸಲಾತಿಗೆ ಈಗ ವಿಧಿಸಲಾಗಿರುವ ಶೇಕಡಾ 50ರ ಮಿತಿ ಸಂವಿಧಾನದಲ್ಲಿ ಹೇರಲಾದ ಮಿತಿ ಅಲ್ಲ, ಅದು ಇಂದಿರಾ ಸಹಾನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶದ ಭಾಗ” ಎಂದು ನೆನಪಿಸಿದ್ದಾರೆ.

“ಈಗಾಗಲೇ ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದವರಿಗೆ ಶೇಕಡಾ ಹತ್ತರಷ್ಟು ಮೀಸಲಾತಿ ನೀಡಿ ಶೇಕಡಾ 50ರ ಮಿತಿಯನ್ನು ಉಲ್ಲಂಘಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಒಟ್ಟು ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲು ಅನುಕೂಲವಾಗುವಂತೆ ಸಂವಿಧಾನಕ್ಕೆ ತಿದ್ದುಪಡಿ ತರಬೇಕು” ಎಂದು ಆಗ್ರಹಿಸಿದ್ದಾರೆ.

“ಎಲ್ಲ ಜಾತಿಗಳಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಪ್ರಾತಿನಿಧ್ಯ ಸಿಗುವಂತೆ ಮೀಸಲಾತಿಯನ್ನು ಪರಿಷ್ಕರಿಸಿ ಜಾರಿಗೆ ತರಬೇಕು ಮತ್ತು ಈ ಮೀಸಲಾತಿಯನ್ನು ಸಂವಿಧಾನದ ಒಂಭತ್ತನೇ ಶೆಡ್ಯೂಲ್ ಗೆ ಸೇರಿಸಬೇಕು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಒಟ್ಟು ಮೀಸಲಾತಿ ಪ್ರಮಾಣವನ್ನು ಶೇಕಡಾ 50ರಿಂದ ಶೇಕಡಾ 75ರ ವರೆಗೆ ಹೆಚ್ಚಿಸಿ ಎಲ್ಲ ಸಮುದಾಯಗಳಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಯನ್ನು ನೀಡುತ್ತೇವೆ” ಎಂದು ಭರವಸೆ ನೀಡಿದ್ದಾರೆ.

“ಮೀಸಲಾತಿ ಪರಿಷ್ಕರಣೆಗೆ ಕರ್ನಾಟಕ ರಾಜ್ಯಕ್ಕೆ ಹೆಚ್ಚು ಅನುಕೂಲ ಇದೆ. ಯಾಕೆಂದರೆ ನಮ್ಮಲ್ಲಿ ನ್ಯಾಯವಾದಿ ಕಾಂತರಾಜ್ ಅಧ್ಯಕ್ಷತೆಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಮನೆ ಮನೆಗೆ ತೆರಳಿ ವೈಜ್ಞಾನಿಕವಾಗಿ ಗಣತಿ ಮಾಡಿರುವ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯ ವರದಿ ಸಿದ್ಧ ಇದೆ. ಅದರ ಆಧಾರದಲ್ಲಿ ಮೀಸಲಾತಿ ರೂಪಿಸಿದರೆ ಸುಪ್ರೀಂ ಕೋರ್ಟ್ ಕೂಡಾ ಒಪ್ಪಿಕೊಳ್ಳಬಹುದು ಎಂಬ ಭರವಸೆ ನನಗಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

“1994ರಲ್ಲಿ ಎಂ.ವೀರಪ್ಪ ಮೊಯಿಲಿ ಸರ್ಕಾರ ರಾಜ್ಯದ ಒಟ್ಟು ಮೀಸಲಾತಿ ಪ್ರಮಾಣವನ್ನು ಶೇಕಡಾ 73ಕ್ಕೆ ಹೆಚ್ಚಿಸಿ ಆದೇಶ ಮಾಡಿತ್ತು. ಅದಿನ್ನು ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿದೆ. ಅಲ್ಲಿಯೂ ರಾಜ್ಯ ಸರ್ಕಾರ ಜಾತಿಗಣತಿಯ ವರದಿಯನ್ನು ಮುಂದಿಟ್ಟು ಮೀಸಲಾತಿ ಹೆಚ್ಚಳಕ್ಕೆ ಅನುಮತಿ ಕೋರಿದರೆ ನ್ಯಾಯಾಲಯ ಖಂಡಿತ ಒಪ್ಪಿಗೆ ನೀಡಬಹುದು” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

“ಸಾಮಾಜಿಕ ಅನ್ಯಾಯವನ್ನೇ ರಾಜಕೀಯದ ಅಸ್ತ್ರವನ್ನಾಗಿ ಮಾಡಿಕೊಂಡು ಬಂದ ಭಾರತೀಯ ಜನತಾ ಪಕ್ಷಕ್ಕಾಗಲಿ, ಅದರ ಅಧ್ಯಕ್ಷರಿಗಾಗಲಿ ಸಾಮಾಜಿಕ ನ್ಯಾಯ ಅರ್ಥವಾಗಲಾರದು. ನಮ್ಮದು ಕೋಮುವಾದವನ್ನು ಉಸಿರಾಡುವ ಗುಜರಾತ್ ಅಲ್ಲ, ಬಸವವಾದವನ್ನು ಮೈಗೂಡಿಸಿಕೊಂಡಿರುವ ಕರ್ನಾಟಕ ಎನ್ನುವುದನ್ನು ನೆನಪಿಸಬಯಸುತ್ತೇನೆ” ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

“ಸಾಧನೆಯ ಬಲದಿಂದಾಗಲಿ, ಸವಕಲುಗೊಂಡಿರುವ ಕೋಮುವಾದದಿಂದಾಗಲಿ ಚುನಾವಣೆಯನ್ನು ಎದುರಿಸಲು ಅಸಾಧ್ಯವೆಂದು ಗೊತ್ತಾದಾಗ ಅವಸರದಲ್ಲಿ ಈ ಅಡ್ಡಕಸುಬಿ ಮೀಸಲಾತಿ ನೀತಿಯನ್ನು ರಾಜ್ಯ ಸರ್ಕಾರ ಘೋಷಿಸಿತ್ತು. ಈ ಮೀಸಲಾತಿಯನ್ನು ಒಕ್ಕಲಿಗ ಇಲ್ಲವೇ ಲಿಂಗಾಯತರ ಮೇಲಿನ ಪ್ರೀತಿ ಇಲ್ಲವೇ ಕಾಳಜಿಯಿಂದ ಘೋಷಿಸಿದ್ದಲ್ಲ, ಇದರ ಹಿಂದಿನ ದುರುದ್ದೇಶ ಮುಸ್ಲಿಂ ಮತ್ತು ಒಕ್ಕಲಿಗ-ಲಿಂಗಾಯತರ ನಡುವೆ ದ್ವೇಷ ಹುಟ್ಟಿಸುವುದೇ ಆಗಿದೆ” ಎಂದು ಎಚ್ಚರಿಸಿದ್ದಾರೆ.

“ಅಮಿತ್ ಶಾ ಅವರ ಪ್ರಶ್ನೆಯಲ್ಲಿಯೇ ಬಿಜೆಪಿಯ ದುಷ್ಟ ಆಲೋಚನೆ ಸ್ಪಷ್ಟವಾಗಿದೆ. ಆದರೆ ನ್ಯಾಯಾಲಯದ ಮೇಲೆ ನಂಬಿಕೆ ಇಟ್ಟಿರುವ ಮುಸ್ಲಿಮರು ಮೀಸಲಾತಿ ರದ್ದತಿಯಿಂದ ಅಧೀರರಾಗಲಿಲ್ಲ, ಪ್ರಚೋದನೆಗೂ ಒಳಗಾಗಲಿಲ್ಲ. ಅದೇ ರೀತಿ ಇದು ಕನ್ನಡಿಯೊಳಗಿನ ಗಂಟು ಎನ್ನುವುದನ್ನು ಅರ್ಥಮಾಡಿಕೊಂಡಿರುವ ಜಾಗೃತ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳು ಕೂಡಾ ಹೊಸ ಮೀಸಲಾತಿ ಘೋಷಣೆಯಿಂದ ಸಂಭ್ರಮಗೊಳ್ಳಲಿಲ್ಲ. ಇದು ನಮ್ಮ ಕರ್ನಾಟಕ” ಎಂದು ಬಣ್ಣಿಸಿದ್ದಾರೆ.

“ಈಗ ನಿರೀಕ್ಷೆಯಂತೆ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಕಪಾಳಮೋಕ್ಷ ಮಾಡಿದೆ. ಹೊಸ ಮೀಸಲಾತಿಯನ್ನು ಜಾರಿಗೆ ತರುವುದಿಲ್ಲ ಎಂದು ಸಾಲಿಸಿಟರ್ ಜನರಲ್ ಮೂಲಕ ನ್ಯಾಯಾಲಯಕ್ಕೆ ಭರವಸೆ ನೀಡಿರುವ ಕೇಂದ್ರ ಸರ್ಕಾರದ ಗೃಹಸಚಿವರು ಚುನಾವಣಾ ಭಾಷಣದಲ್ಲಿ ಅದರ ವಿರುದ್ಧವಾಗಿ ಮಾತನಾಡುತ್ತಿದ್ದಾರೆ. ಗೃಹಸಚಿವ ಅಮಿತ್ ಶಾ ಅವರೇ, ಇದು ಕರ್ನಾಟಕ, ಇಲ್ಲಿ ಹೊಡೆಯುವ, ಬಡಿಯುವ, ಮುರಿಯುವ, ಸುಡುವ ‘ಗುಜರಾತ್ ಮಾದರಿ’ ನಡೆಯುವುದಿಲ್ಲ. ಇಲ್ಲಿ ಏನಿದ್ದರೂ ಪ್ರೀತಿಸುವ, ಪೊರೆಯುವ ಮತ್ತು ಕಟ್ಟುವ ‘ಕರ್ನಾಟಕ ಮಾದರಿ’ಯೇ ನಡೆಯುವುದು” ಎಂದು ಕಿವಿಮಾತು ಹೇಳಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಉನ್ನತ ಸಾಂಸ್ಥಿಕ ಹುದ್ದೆಗಳಲ್ಲಿ ‘ಬಹುಜನ’ ಪ್ರಾತಿನಿಧ್ಯದ ಕೊರತೆ: ವ್ಯವಸ್ಥಿತ ತಾರತಮ್ಯದ ರೂಪ ಎಂದ ರಾಹುಲ್ ಗಾಂಧಿ 

ಉನ್ನತ ಸಂಸ್ಥೆಗಳ ಹಿರಿಯ ನಾಯಕತ್ವದಲ್ಲಿ "ಬಹುಜನ" ಸಮುದಾಯಗಳಿಗೆ ಪ್ರಾತಿನಿಧ್ಯದ ಕೊರತೆಯಿದೆ ಎಂದು ರಾಹುಲ್ ಗಾಂಧಿ ಸೋಮವಾರ ಆರೋಪಿಸಿದ್ದಾರೆ. ಇದು ವ್ಯವಸ್ಥಿತ ತಾರತಮ್ಯದ ಒಂದು ರೂಪವಾಗಿದ್ದು ಅದನ್ನು ಪರಿಹರಿಸಬೇಕು ಎಂದು ಹೇಳಿದ್ದಾರೆ.  ಲೋಕಸಭೆಯ ವಿರೋಧ ಪಕ್ಷದ...

ಗಾಯಗಳ ತೀವ್ರತೆಯಿಂದಾಗಿ ನೌಕಾಪಡೆಯ ಮುಖ್ಯಸ್ಥ ತಂಗ್ಸಿರಿ ಸಾವನ್ನಪ್ಪಿದ್ದಾರೆ: ದೃಢಪಡಿಸಿದ ಇರಾನ್

ತಾನು ನಡೆಸಿದ ದಾಳಿಯಿಂದ ಇರಾನ್‌ ನೌಕಾಪಡೆಯ ರಿಯರ್ ಅಡ್ಮಿರಲ್ ಅಲಿರೆಜಾ ತಂಗ್ಸಿರಿ ಸಾವನ್ನಪ್ಪಿದ್ದಾರೆ ಎಂದು ಕಳೆದ ಗುರುವಾರ (ಮಾ.26) ಇಸ್ರೇಲ್ ಹೇಳಿಕೊಂಡಿತ್ತು. ಸುದ್ದಿ ಖಷಿತಪಡಿಸಿರುವ ಇರಾನ್, ದಾಳಿಯಿಂದ ಸಂಭವಿಸಿದ ತೀವ್ರ ಗಾಯಗಳಿಂದ ತಂಗ್ಸಿರಿ...

ಬಹುಭಾಷಾ ನಟ ಪ್ರಕಾಶ್ ರಾಜ್‌ ತಾಯಿ ಸ್ವರ್ಣಲತಾ ನಿಧನ

ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ತಾಯಿ ಸ್ವರ್ಣಲತಾ ಅವರು ತಮ್ಮ 86 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರು ವಯೋಸಹಜ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ನಟ ಪ್ರಕಾಶ್‌ ರಾಜ್‌ ಅವರು ತಮ್ಮ ತಾಯಿಯೊಂದಿಗೆ ಇದ್ದ...

ಮುಂಬೈ: ಸ್ವ-ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ಆಕ್ರೋಶ: ದಾದರ್‌ನಲ್ಲಿ ಮೂಢನಂಬಿಕೆ ವಿರೋಧಿ ಅಭಿಯಾನ

ಮುಂಬೈ: ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ಅವರ ಚಟುವಟಿಕೆಗಳ ಸುತ್ತ ವ್ಯಾಪಕ ಆಕ್ರೋಶ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ವಿವೇಕ್ ಜಾಗರ್ ಉಪಕ್ರಮದಡಿಯಲ್ಲಿ ಮಹಾರಾಷ್ಟ್ರ ಅಂಧಾಶ್ರದ್ಧ ನಿರ್ಮೂಲನ ಸಮಿತಿ (MANS) ಮಹಾರಾಷ್ಟ್ರ ಘಟಕವು ಭಾನುವಾರ...

ನೋಟಿಸ್ ನೀಡದೆ ಮಸೀದಿ ಬಂದ್; ಉತ್ತರ ಪ್ರದೇಶ ಸರ್ಕಾರವನ್ನು ಪ್ರಶ್ನಿಸಿದ ಅಲಹಾಬಾದ್ ಹೈಕೋರ್ಟ್

ಪೂರ್ವ ಸೂಚನೆ ನೀಡದೆ ಅಥವಾ ಮಾಲೀಕರಿಗೆ ವಿಚಾರಣೆಗೆ ಅವಕಾಶ ನೀಡದೆ ಪ್ರಾರ್ಥನಾ ಸ್ಥಳಕ್ಕೆ ಬೀಗ ಹಾಕಬಹುದೇ ಎಂಬ ಬಗ್ಗೆ ವಿವರಣೆ ನೀಡಬೇಕು ಎಂದು ಅಲಹಾಬಾದ್ ಹೈಕೋರ್ಟ್ ಉತ್ತರ ಪ್ರದೇಶ ಸರ್ಕಾರವನ್ನು ಕೇಳಿದೆ. ಮುಜಫರ್‌ನಗರದಲ್ಲಿ ಮಸೀದಿಯನ್ನು...

ಬಿಜು ಪಟ್ನಾಯಕ್ ಕುರಿತು ಹೇಳಿಕೆ : ಬಿಜೆಪಿ ಸಂಸದ ನಿಶಿಕಾಂತ್ ದುಬೆ ವಿರುದ್ಧ ತೀವ್ರ ಆಕ್ರೋಶ

ಒಡಿಶಾದ ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಅವರ ಕುರಿತು ಬಿಜೆಪಿ ಸಂಸದ ನಿಶಿಕಾಂತ್ ದುಬೆ ನೀಡಿರುವ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ದುಬೆ ನೇತೃತ್ವದ ಸಂವಹನ ಮತ್ತು ಐಟಿ ಕುರಿತ ಸಂಸದೀಯ ಸ್ಥಾಯಿ...

ಮುರ್ಷಿದಾಬಾದ್ ರಾಮನವಮಿ ಹಿಂಸಾಚಾರ; ಆರ್‌ಎಸ್‌ಎಸ್ ನಾಯಕ ಸೇರಿದಂತೆ 30 ಜನರ ಬಂಧನ

ಮಾರ್ಚ್ 27 ರಂದು ಮುರ್ಷಿದಾಬಾದ್ ಜಿಲ್ಲೆಯ ಜಂಗಿಪುರ ಉಪವಿಭಾಗದ ರಘುನಾಥಗಂಜ್‌ನಲ್ಲಿ ನಡೆದ ರಾಮನವಮಿ ಮೆರವಣಿಗೆ ಹಿಂಸಾಚಾರಕ್ಕೆ ತಿರುಗಿದ ನಂತರ ಸುಮಾರು 30 ಜನರು ಗಾಯಗೊಂಡರು. ಈ ಘಟನೆಯು ವ್ಯಾಪಕ ಉದ್ವಿಗ್ನತೆಗೆ ಕಾರಣವಾಗಿದ್ದು, ಅಂಗಡಿ...

ದೆಹಲಿ ಗಲಭೆ ಪ್ರಕರಣ: ಮಧ್ಯಂತರ ಜಾಮೀನು ಅವಧಿ ಅಂತ್ಯ; ಇಂದು ತಿಹಾರ್ ಜೈಲಿಗೆ ಮರಳಲಿರುವ ಶಾರ್ಜೀಲ್ ಇಮಾಮ್

2020 ರ ಈಶಾನ್ಯ ದೆಹಲಿ ಗಲಭೆಯ ಹಿಂದಿನ ದೊಡ್ಡ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ನೀಡಿದ್ದ 10 ದಿನಗಳ ಮಧ್ಯಂತರ ಜಾಮೀನು ಅವಧಿ ಮುಗಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಕಾರ್ಯಕರ್ತ ಶಾರ್ಜೀಲ್ ಇಮಾಮ್...

ಕುವೈತ್ ವಿದ್ಯುತ್ ಸ್ಥಾವರ, ಉಪ್ಪು ನಿವಾರಣಾ ಘಟಕದ ಮೇಲೆ ಇರಾನ್ ದಾಳಿ: ಭಾರತ ಮೂಲದ ಕಾರ್ಮಿಕ ಸಾವು

ದುಬೈ: ಕುವೈತ್‌ನಲ್ಲಿ ವಿದ್ಯುತ್ ಮತ್ತು ನೀರು ನಿವಾರಣಾ ಘಟಕದ ಮೇಲೆ ಇರಾನ್ ನಡೆಸಿದ ದಾಳಿಯಲ್ಲಿ ಭಾರತೀಯ ಪ್ರಜೆಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ದೇಶದ ಸರ್ಕಾರಿ ಸುದ್ದಿ ಸಂಸ್ಥೆ ಕುನಾ ಸೋಮವಾರ ವರದಿ ಮಾಡಿದೆ. ದಾಳಿಯ ಸಮಯದಲ್ಲಿ...

1,100 ಕ್ಕೂ ಹೆಚ್ಚು ಬಾಂಬ್ ಬೆದರಿಕೆ ಆರೋಪ; ದೆಹಲಿ ಪೊಲೀಸರಿಂದ ಮೈಸೂರಿನ ವ್ಯಕ್ತಿ ಬಂಧನ

ದೇಶಾದ್ಯಂತ ಹಲವು ಶಾಲೆಗಳು, ಹೈಕೋರ್ಟ್‌ ಮತ್ತು ಸರ್ಕಾರಿ ಕಚೇರಿಗಳಿಗೆ 1,100 ಕ್ಕೂ ಹೆಚ್ಚು ಬಾಂಬ್ ಬೆದರಿಕೆಗಳನ್ನು ಕಳುಹಿಸಿದ ಆರೋಪದ ಮೇಲೆ ದೆಹಲಿ ಪೊಲೀಸರು ಮೈಸೂರಿನ ವ್ಯಕ್ತಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ದೆಹಲಿ...