ಕೇರಳದ ತೃಕ್ಕಾಕರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಉಮಾ ಥಾಮಸ್ ಅವರು ಸುಮಾರು 15 ಅಡಿ ಎತ್ತರದ ವೇದಿಕೆಯಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಘಟನೆ ಕೊಚ್ಚಿಯ ಕಲೂರ್‌ನಲ್ಲಿರುವ ಜವಹರಲಾಲ್ ನೆಹರೂ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ (ಡಿ.29) ಸಂಜೆ ನಡೆದಿದೆ.
ವರದಿಗಳ ಪ್ರಕಾರ, ಶಾಸಕಿ ಉಮಾ ಥಾಮಸ್ ಅವರು ಆಯತಪ್ಪಿ ವೇದಿಕೆಯಿಂದ ಕೆಳಗೆ ಬಿದ್ದಿದ್ದಾರೆ. ಅವರಿಗೆ ತೀವ್ರ ರಕ್ತಸ್ರಾವವಾಗಿದೆ. ತಕ್ಷಣವೇ ಶಾಸಕಿಯನ್ನು ಸ್ವಯಂ ಸೇವಕರು ಮತ್ತು ಇತರರು ಕ್ರೀಡಾಂಗಣದ ಬಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ತಲೆ ಮತ್ತು ಬೆನ್ನುಮೂಳೆಗೆ ಗಂಭೀರ ಗಾಯಗಳಾಗಿರುವ ಹಿನ್ನೆಲೆ ಶಾಸಕಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆಸ್ಪತ್ರೆ ಬಿಡುಗಡೆ ಮಾಡಿದ ವೈದ್ಯಕೀಯ ಬುಲೆಟಿನ್ ಪ್ರಕಾರ, ಶಾಸಕಿಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ತಲೆ ಬೆನ್ನಿನ ಭಾಗ ಮತ್ತು ಮುಖಕ್ಕೆ ಗಾಯಗಳಾಗಿದ್ದು, ಪಕ್ಕೆಲುಬುಗಳಲ್ಲೂ ಫ್ರಾಕ್ಚರ್ ಆಗಿದೆ. ಶ್ವಾಸಕೋಶದಲ್ಲಿ ಆಂತರಿಕ ರಕ್ತಸ್ರಾವ ಉಂಟಾಗಿದೆ. ಹೀಗಾಗಿ ವೆಂಟಿಲೇಟರ್ ಬೆಂಬಲದೊಂದಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಹೇಳಿದೆ.
ಆಸ್ಪತ್ರೆಗೆ ಭೇಟಿ ನೀಡಿದ ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಮತ್ತು ಕೈಗಾರಿಕಾ ಸಚಿವ ಪಿ.ರಾಜೀವ್ ಶಾಸಕಿಯ ಆರೋಗ್ಯ ಸ್ಥಿತಿಯ ಮಾಹಿತಿ ಪಡೆದಿದ್ದಾರೆ. ಸೂಕ್ತ ಚಿಕಿತ್ಸೆ ಒದಗಿಸಲು ವೈದ್ಯರಿಗೆ ನಿರ್ದೇಶನ ನೀಡಿದ್ದಾರೆ.
ಕೊಚ್ಚಿಯ ಜವಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಭಾನುವಾರ ‘ಮೃದಂಗ ನಾದಂ’ ಎಂಬ ಹೆಸರಿನಲ್ಲಿ ಭರತನಾಟ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕೇರಳ ಸರ್ಕಾರದ ಸಂಸ್ಕೃತಿ ವ್ಯವಹಾರಗಳ ಸಚಿವ ಸಾಜಿ ಚೆರಿಯನ್ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಟಿ, ನೃತ್ಯಗಾರ್ತಿ ದಿವ್ಯಾ ಉನ್ನಿ ಸೇರಿದಂತೆ ಸುಮಾರು 12,000 ಸಾವಿರ ನೃತ್ಯಗಾರರು ಈ ಕಾರ್ಯಕ್ರಮದಲ್ಲಿ ಭರತನಾಟ್ಯ ಪ್ರದರ್ಶನ ನೀಡಿ ಗಿನ್ನೆಸ್ ದಾಖಲೆಗೆ ಸಜ್ಜಾಗಿದ್ದರು. ಆದರೆ, ಕಾರ್ಯಕ್ರಮ ಉದ್ಘಾಟನೆಗೂ ಮುನ್ನವೇ ಶಾಸಕಿ ವೇದಿಕೆಯಿಂದ ಬಿದ್ದು ಅವಘಡ ಸಂಭವಿಸಿದೆ.
ಇದನ್ನೂ ಓದಿ : ಒಡಿಶಾ | ಬುಡಕಟ್ಟು ಮಹಿಳೆಯರನ್ನು ಮರಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು


