ನಾನೊಬ್ಬ ಆಮ್ ಆದ್ಮಿ (ಸಾಮಾನ್ಯ ಮನುಷ್ಯ). ಕಾಂಗ್ರೆಸ್ ಪಕ್ಷವು ಸಾಮಾನ್ಯ ಮನುಷ್ಯನನ್ನು ಸಿಎಂ ಮಾಡಿದೆ ಎಂದು ಪಂಜಾಬ್‌ನ ಮೊದಲ ದಲಿತ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ತಿಳಿಸಿದ್ದಾರೆ.
“ಒಂದಾನೊಂದು ಕಾಲದಲ್ಲಿ ನಮ್ಮ ಮನೆಗೆ ಚಾವಣಿ ಇರಲಿಲ್ಲ. ನಾನು ಮತ್ತು ನಮ್ಮ ಅಮ್ಮ ಸೇರಿ ಮಣ್ಣಿಗಿಂತ ಗೋಡೆ ಪ್ಲಾಸ್ಟಿಂಗ್ ಮಾಡುತ್ತಿದ್ದೆವು. ಅಂತಹ ಬಡತನದ ಪರಿಸ್ಥಿತಿಯಿಂದ ಬೆಳೆದುಬಂದ ನಾನು ಇಂದು ರಾಜ್ಯವೊಂದರ ಸಿಎಂ ಆಗಿದ್ದೇನೆ ಎಂದರೆ ಅದಕ್ಕೆ ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿ ಕಾರಣ” ಎಂದಿದ್ದಾರೆ.
ಇಂದು ಬೆಳಿಗ್ಗೆ ಪಂಜಾಬ್‌ನ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿ ಮಾತನಾಡಿದ ಅವರು, “ನಾನು ಬಡವರನ್ನು ಪ್ರತಿನಿಧಿಸುತ್ತೇನೆ. ರಾಜ್ಯದಲ್ಲಿ ಸಾಮಾನ್ಯ ಜನರ ಆಡಳಿತವು ಆರಂಭಗೊಂಡಿದೆ. ಸಿಎಂ ಅಥವಾ ಕ್ಯಾಬಿನೆಟ್‌ಗಿಂತಲೂ ಪಕ್ಷವು ಸುಪ್ರೀಂ. ಪಕ್ಷದ ಸಿದ್ಧಾಂತದಂತೆ ಸರ್ಕಾರ ಕೆಲಸ ಮಾಡುತ್ತದೆ” ಎಂದಿದ್ದಾರೆ.
Punjab CM Charanjit Singh Channi gets emotional in his first presser. He said, "we once didn't have roof in our house, my mother & I used to get mud to plaster our walls, it's Congress & @RahulGandhi's policies that I have become Chief Minister today" #कांग्रेस_दे_नाल_पंजाब pic.twitter.com/HcF1UM697d
— Gaurav Pandhi (@GauravPandhi) September 20, 2021
ಮೊದಲ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಕ್ಯಾಪ್ಟನ್ ಅಮರಿಂದರ್ ಸಿಂಗ್ ಪಂಜಾಬ್ ಜನರಿಗಾಗಿ ಸಾಕಷ್ಟು ಒಳ್ಳೆಯ ಕೆಲಸ ಮಾಡಿದ್ದಾರೆ. ನಾವು ಅವರ ಕೆಲಸವನ್ನು ಮುಂದುವರಿಸುತ್ತೇವೆ ಎಂದಿದ್ದಾರೆ. ಅಲ್ಲದೆ ಹೋರಾಟನಿರತ ರೈತರ ಪರವಾಗಿದ್ದು, ಕೃಷಿ ಕಾನೂನುಗಳ ರದ್ದತಿಗಾಗಿ ಕೆಲಸ ಮಾಡುತ್ತೇವೆ. ಚುನಾವಣಾ ಘೋಷಣೆಯಂತೆ ಬಡವರ ನೀರಿನ ಬಿಲ್ ಮನ್ನಾ ಮಾಡುತ್ತೇವೆ” ಎಂದು ಘೋಷಿಸಿದ್ದಾರೆ.
“ರೈತ ಮತ್ತು ದಮನಕ್ಕೊಳಗಾದ ಯಾರೇ ಆಗಲಿ ನಾನು ಸಾಮಾನ್ಯ ಜನರ ಪ್ರತಿನಿಧಿಯಾಗಿದ್ದೇನೆ. ನಾನು ಶ್ರೀಮಂತರ ಪ್ರತಿನಿಧಿಯಲ್ಲ. ಮರಳು ಗಣಿಗಾರಿಕೆ ಮತ್ತು ಇತರ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವವರು ನನ್ನ ಬಳಿಗೆ ಬರಬೇಡಿ. ನಾನು ನಿಮ್ಮ ಪ್ರತಿನಿಧಿಯಲ್ಲ” ಎಂದಿದ್ದಾರೆ.
58 ವರ್ಷದ ಚನ್ನಿ, ಪಂಜಾಬ್ ನ 16 ನೇ ಮುಖ್ಯಮಂತ್ರಿಯಾಗಿದ್ದಾರೆ. ಜೊತೆಗೆ ಪಂಜಾಬ್ ಉಪಮುಖ್ಯಮಂತ್ರಿಗಳಾಗಿ ಸುಖಜಿಂದರ್ ಸಿಂಗ್ ರಾಂಧವಾ ಮತ್ತು ಒಪಿ ಸೋನಿಯವರನ್ನು ಆಯ್ಕೆ ಮಾಡಲಾಗಿದೆ.
ಇಂದಿನ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಪಂಜಾಬ್ ರಾಜ್ಯಪಾಲ ಭನ್ವಾರಿ ಲಾಲ್ ಪುರೋಹಿತ್ ಪ್ರಮಾಣ ವಚನ ಬೋಧಿಸಿದರು. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮತ್ತು ಚೆನ್ನಿ ಆಪ್ತ ಹಾಗೂ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜ್ಯೋತ್‌ಸಿಂಗ್ ಸಿದು ಉಪಸ್ಥಿತರಿದ್ದರು. ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಕಾರ್ಯಕ್ರಮದಿಂದ ದೂರ ಉಳಿದಿದ್ದರು.
ಇದನ್ನೂ ಓದಿ: ಪಂಜಾಬ್‌ನಲ್ಲಿ ದಲಿತ ಮುಖ್ಯಮಂತ್ರಿ: ಕಾಂಗ್ರೆಸ್ ಉರುಳಿಸಿದ ರಾಜಕೀಯ ದಾಳ!


