ತಮ್ಮ ಕಚೇರಿಗಳ ಮೇಲೆ ನಡೆದ ಆದಾಯ ತೆರಿಗೆ ವಿಚಾರದ ಬಗ್ಗೆ ನಟ ಸೋನು ಸೂದ್ ಪ್ರತಿಕ್ರಿಯೆ ನೀಡಿದ್ದು, ‘‘ಕಾಲವೆ ಕಥೆ ಹೇಳುತ್ತದೆ’’ ಎಂದು ಸೋಮವಾರ ಹೇಳಿದ್ದಾರೆ. ತಮ್ಮ ಫೌಂಡೇಷನ್‌ನಲ್ಲಿರುವ ಪ್ರತಿ ರೂಪಾಯಿಯು ಜೀವ ಉಳಿಸಲು ತನ್ನ ಸರದಿಗಾಗಿ ಕಾಯುತ್ತಿದೆ ಎಂದಿರುವ ಅವರು, “ನಾಲ್ಕು ದಿನಗಳಿಂದ ನಾನು ಅಥಿತಿಗಳನ್ನು ನೋಡಿಕೊಳ್ಳುವುದರಲ್ಲಿ ನಿರತನಾಗಿದ್ದೆ’’ ಎಂದು ಐಟಿ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸಮಾಜಮುಖಿ ಕೆಲಸಗಳ ಮೂಲಕ ಗುರುತಿಸಿಕೊಂಡಿರುವ ಬಾಲಿವುಡ್ ನಟ ಸೋನು ಸೂದ್ ಅವರಿಗೆ ಸೇರಿದ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಕಳೆದ ಬುಧವಾರ ಕಾರ್ಯಾಚರಣೆ ಕೈಗೊಂಡಿದ್ದರು. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಸೋನು ಸೂದ್ ಭೇಟಿಯಾದ ಬೆನ್ನಲ್ಲೇ ನಡೆದಿರುವ ಈ ಕಾರ್ಯಾಚರಣೆ ರಾಜಕೀಯ ಪ್ರೇರಿತ ಎಂಬ ಟೀಕೆಗಳಿಗೂ ಗುರಿಯಾಗಿತ್ತು.
ಇದನ್ನೂ ಓದಿ: ಕೊರೊನಾ ಕಾಲದ ಆಪದ್ಬಾಂಧವ, ನಟ ಸೋನು ಸೂದ್ ಮೇಲೆ ತೆರಿಗೆ ವಂಚನೆ ಆರೋಪ
ಮುಂಬೈನಲ್ಲಿರುವ ಸೂನು ಸೂದ್ ಅವರ ನಿವಾಸ ಹಾಗೂ ಲಕ್ನೋದಲ್ಲಿನ ಸೋನು ಸೂದ್ ಸಂಸ್ಥೆಯ ಮೇಲೆ ಐಟಿ ಕಾರ್ಯಾಚರಣೆ ಮಾಡಿದ್ದು, ಇದನ್ನು ಐಟಿ ‘ಸರ್ವೇ’ ಎಂದು ಕರೆದಿದೆ ಎಂದು ಮೂಲಗಳು ತಿಳಿಸಿವೆ.
ಈ ಬಗ್ಗೆ ಇಂದು ಪ್ರತಿಕ್ರಿಯೆ ನೀಡಿರುವ ಸೂನು ಸೂದ್, “ನೀವು ಯಾವಾಗಲೂ ನಿಮ್ಮ ಕಡೆಯ ಕತೆ ಹೇಳಬೇಕಾಗಿಲ್ಲ. ಅದಕ್ಕೊಂದು ಸಮಯ ಬರುತ್ತದೆ. ನನ್ನ ಫೌಂಡೇಷನ್‌ನ ಪ್ರತಿ ರೂಪಾಯಿಯು ಅಮೂಲ್ಯವಾದ ಜೀವವನ್ನು ಉಳಿಸಲು ಮತ್ತು ಅಗತ್ಯವಿರುವವರಿಗೆ ತಲುಪಲು ತನ್ನ ಸರದಿಗಾಗಿ ಕಾಯುತ್ತಿದೆ” ಎಂದು ಹೇಳಿದ್ದಾರೆ.
“ನಾನು ಕೆಲವು ಅತಿಥಿಗಳನ್ನು ನೋಡಿಕೊಳ್ಳುವುದರಲ್ಲಿ ನಿರತನಾಗಿದ್ದರಿಂದ, ಕಳೆದ ನಾಲ್ಕು ದಿನಗಳಿಂದ ನಿಮ್ಮ ಸೇವೆಯಲ್ಲಿ ಇರಲು ಸಾಧ್ಯವಾಗಲಿಲ್ಲ. ಈಗ ಮತ್ತೆ ಅದೇ ವಿನಮ್ರತೆಯಿಂದ ಮತ್ತೆ ಮರಳಿ ಬಂದಿದ್ದೇನೆ” ಸೋನು ಸೂದ್ ಹೇಳಿದ್ದಾರೆ.
ಇದನ್ನೂ ಓದಿ: ಕೇಜ್ರಿವಾಲ್ ಭೇಟಿ ಬೆನ್ನಲ್ಲೇ ಸೋನು ಸೂದ್ ಸಂಸ್ಥೆಗಳ ಮೇಲೆ ಐಟಿ ಕಾರ್ಯಾಚರಣೆ
ಈ ಹೇಳಿಕೆಯ ಜೊತೆಗೆ, “ಕಠಿಣವಾದ ದಾರಿಗಳಲ್ಲಿಯೂ ಸುಲಭವಾಗಿ ಪ್ರಯಾಣ ಮಾಡಬಹುದು,
ಪ್ರತಿಯೊಬ್ಬ ಭಾರತೀಯನ ಪ್ರಾರ್ಥನೆಗಳು ಪರಿಣಾಮಕಾರಿಯಾಗಿದೆ” ಎಂದು ಹೇಳಿರುವ ಅವರು ತಮ್ಮ ಸಂದೇಶದ ಪೋಸ್ಟ್‌ರ್ ಅನ್ನು ಟ್ವೀಟ್ ಮಾಡಿದ್ದಾರೆ.
“सख्त राहों में भी आसान सफर लगता है,
हर हिंदुस्तानी की दुआओं का असर लगता है” ? pic.twitter.com/0HRhnpf0sY— sonu sood (@SonuSood) September 20, 2021
ಕಳೆದ ಕೆಲವು ದಿನಗಳಿಂದ ಸೋನು ಸೂದ್ ಅವರ ಕಚೇರಿಗಳಲ್ಲಿ ಕಾರ್ಯಾಚರಣೆ ಮಾಡಿದ್ದ ಆದಾಯ ಇಲಾಖೆ ಅಧಿಕಾರಿಗಳು, ನಟ 20 ಕೋಟಿ ರೂ. ಗೂ ಅಧಿಕ ತೆರಿಗೆಗಳನ್ನು ವಂಚಿಸಿದ್ದಾರೆ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.
ಆದಾಯ ತೆರಿಗೆ ಅಧಿಕಾರಿಗಳು ನಡೆಸಿದ್ದ ದಾಳಿಯನ್ನು ವಿರೋಧಿಸಿ ವಿರೋಧ ಪಕ್ಷಗಳು ಕಟುವಾಗಿ ಟೀಕಿಸಿದ್ದವು. ಬಿಜೆಪಿಯ ಮಾಜಿ ಮಿತ್ರ ಪಕ್ಷ ಶಿವಸೇನೆಯು ‘ಇದು ಬಿಜೆಪಿಯ ತಾಲಿಬಾನ್ ಮನಸ್ಥಿತಿ’ ಎಂದು ಖಂಡಿಸಿತ್ತು.
ಇದನ್ನೂ ಓದಿ: ಸೋನು ಸೂದ್ ಕಚೇರಿಗಳ ಮೇಲೆ ಐಟಿ ದಾಳಿ: ತಾಲಿಬಾನ್ ಮನಸ್ಥಿತಿ ಎಂದ ಶಿವಸೇನೆ