ಪ್ರಧಾನಿ ನರೇಂದ್ರ ಮೋದಿ ಜನರನ್ನು ತಪ್ಪುದಾರಿಗೆಳೆಯಲು ಮತ್ತು ಪ್ರಚೋದಿಸಲು ಸುಳ್ಳುಗಳನ್ನು ಹರಡುತ್ತಿದ್ದಾರೆ, ಅವರು ಸುಳ್ಳುಗಾರರ ನಾಯಕ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಮೋದಿ ವಿರುದ್ಧ ವಾಗ್ಧಾಳಿಯನ್ನು ನಡೆಸಿದ್ದಾರೆ.
ಹೈದರಾಬಾದ್‌ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ‘ಸಣ್ಣತನದ ಮತ್ತು ಬಾಲಿಶ’ ಮಾತುಗಳನ್ನಾಡುವುದು ಪ್ರಧಾನಿ ಮೋದಿಗೆ ಯೋಗ್ಯವಲ್ಲ, ಪ್ರಧಾನಿ ಮೋದಿ ಸುಳ್ಳುಗಾರರ ನಾಯಕ, ಅವರು ಚುನಾವಣಾ ಪ್ರಣಾಳಿಕೆಯ ಬಗ್ಗೆ ಏಕೆ ಮಾತನಾಡುತ್ತಿಲ್ಲ ಮತ್ತು ಕಳೆದ 10 ವರ್ಷಗಳಲ್ಲಿ ಅವರ ಸರ್ಕಾರ ಏನು ಮಾಡಿದೆ ಎಂಬುವುದನ್ನು ಯಾಕೆ ಹೇಳುತ್ತಿಲ್ಲ? ಅವರು ತಮ್ಮ ಕೆಲಸದ ಮೇಲೆ ಮತಗಳನ್ನು ಕೇಳುವುದಿಲ್ಲ. ಅವರು ಕೇವಲ ಕಾಂಗ್ರೆಸ್‌ನ್ನು ನಿಂದಿಸುತ್ತಾರೆ ಮತ್ತು ಕಾಂಗ್ರೆಸ್‌ನ ಹೇಳಿಕೆಗಳನ್ನು ತಿರುಚುತ್ತಾರೆ ಎಂದು ಹೇಳಿದ್ದಾರೆ.
2-3 ವರ್ಷಗಳ ಹಿಂದೆ ಬಿಜೆಪಿ ನಾಯಕರು ಕಾಂಗ್ರೆಸ್ ನಮಗೆ ಪ್ರತಿಸ್ಪರ್ಧಿ ಅಲ್ಲ ಎಂದು ಹೇಳುತ್ತಿದ್ದರು, ಹಾಗಾದರೆ ನೀವು ಕಾಂಗ್ರೆಸ್‌ನ್ನು ಏಕೆ ನಿಂದಿಸುತ್ತಿದ್ದೀರಿ? ಇದರ ಅರ್ಥ ನೀವು ಭಯಪಡುತ್ತೀರಿ ಎಂದಾಗಿದೆ. ಭಯಪಡುವವರು ಮಾತ್ರ ಈ ರೀತಿಯ ಭಾಷೆಯನ್ನು ಬಳಸುತ್ತಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಮೋದಿ ‘ಎಂ’ ಪದವನ್ನು ಇಷ್ಟಪಡುತ್ತಾರೆ ಎಂದು ತೋರುತ್ತದೆ, ಯಾಕೆಂದರೆ ಅವರು ಯಾವಾಗಲೂ ಮೊಘಲ್, ಮಟನ್, ಮುಸ್ಲಿಂ ಲೀಗ್ ಮತ್ತು ಮಂಗಳಸೂತ್ರದ ಬಗ್ಗೆ ಮಾತನಾಡುತ್ತಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರ ಮಂಗಳಸೂತ್ರ ಕಿತ್ತುಕೊಳ್ಳುತ್ತೇವೆ ಎಂಬ ಪ್ರಧಾನಿ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಖರ್ಗೆ, ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಹಾಗೂ ವಿಭಜಿಸಲು ಇಂತಹ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ. ಮಂಗಳಸೂತ್ರವನ್ನು ಕಸಿದುಕೊಳ್ಳಲು ಯಾರಿಗೂ ಧೈರ್ಯವಿಲ್ಲ, ಮೋದಿಯಂತಹ ವ್ಯಕ್ತಿಯಿಂದ ಮಾತ್ರ ಇದು ಸಾಧ್ಯ ಎಂದು ಹೇಳಿದ್ದಾರೆ.
ಟೆಂಪೋಗಳಲ್ಲಿ ಹಣ ಸಾಗಿಸುತ್ತಿರುವ ಕಾರಣ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ‘ಅದಾನಿ ಮತ್ತು ಅಂಬಾನಿ’ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿದೆ ಎಂಬ ಪ್ರಧಾನಿಯವರ ಇತ್ತೀಚಿನ ಟೀಕೆಗಳ ಬಗ್ಗೆ ಖರ್ಗೆ ಅವರು ಪ್ರತಿಕ್ರಿಯಿಸಿದ್ದು, ಇಡಿ, ಸಿಬಿಐ ಮತ್ತು ಐಟಿಯನ್ನು ದಾಳಿ ನಡೆಸಿ ಹಣವನ್ನು ವಶಪಡಿಸಿಕೊಳ್ಳಲು ಏಕೆ ಬಳಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೀಡಿದ ಆರು ಭರವಸೆಗಳಲ್ಲಿ ಐದನ್ನು ಈಡೇರಿಸಿದೆ ಎಂದು ಹೇಳಿರುವ ಅವರು, ಲೋಕಸಭೆ ಚುನಾವಣೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಒಂದನ್ನು ಜಾರಿಗೊಳಿಸಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ. ಕರ್ನಾಟಕ, ಹಿಮಾಚಲ ಪ್ರದೇಶ ಅಥವಾ ತೆಲಂಗಾಣದಲ್ಲಿ ನೀಡಿದ ಭರವಸೆಗಳನ್ನು ನಾವು ಈಡೇರಿಸುತ್ತೇವೆ ಎಂದು ಹೇಳಿದ್ದಾರೆ.
ಇಂಡಿಯಾ ಮೈತ್ರಿ ಕೂಟ ಅಧಿಕಾರಕ್ಕೆ ಬಂದರೆ ಯುವಕರಿಗಾಗಿ ಪೆಹಲಿ ನೌಕ್ರಿ ಪಕ್ಕಿ ಯೋಜನೆಯನ್ನು ಜಾರಿಗೊಳಿಸುವುದಾಗಿ ಮತ್ತು ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ 30 ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಪುನರುಚ್ಚರಿಸಿದ ಮಲ್ಲಿಕಾರ್ಜುನ ಖರ್ಗೆ ಮಹಾಲಕ್ಷ್ಮಿ ಯೋಜನೆಯಡಿ ಬಡ ಕುಟುಂಬದ ಮಹಿಳೆಯರಿಗೆ ಪ್ರತಿ ವರ್ಷ 1 ಲಕ್ಷ ರೂ. ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇ 50ರಷ್ಟು ಮೀಸಲಾತಿ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ.
ಅಸಂಘಟಿತ ವಲಯ ಮತ್ತು ಗಿಗ್ ಕಾರ್ಮಿಕರಿಗೆ ಸಂಬಂಧಿಸಿದ ಕಾನೂನುಗಳನ್ನು ಸಹ ಸರ್ಕಾರ ಬಲಪಡಿಸುತ್ತದೆ, ಎಂಎಸ್‌ಪಿಗೆ ಕಾನೂನು ಖಾತರಿಯೊಂದಿಗೆ ರೈತರಿಗೆ ನ್ಯಾಯ ಒದಗಿಸಲಾಗುವುದು. ಆರೋಗ್ಯ, ಶಿಕ್ಷಣ, ಉದ್ಯೋಗಗಳು ಮತ್ತು ವ್ಯಾಪಾರ ಅವಕಾಶಗಳಂತಹ ವಿವಿಧ ಕ್ಷೇತ್ರಗಳಲ್ಲಿ ವಿವಿಧ ಸಮುದಾಯಗಳ ಸ್ಥಿತಿಗತಿಗಳ ಬಗ್ಗೆ ಸತ್ಯವನ್ನು ತಿಳಿಯಲು ಜಾತಿ ಗಣತಿಯನ್ನು ಮಾಡಲಾಗುತ್ತದೆ. ಎಲ್ಲರಿಗೂ ನ್ಯಾಯ ಒದಗಿಸಲು ಮೀಸಲಾತಿ ಮೇಲಿನ ಶೇ.50 ಮಿತಿಯನ್ನು ತೆಗೆದು ಹಾಕಲಾಗುವುದು ಎಂದು ಖರ್ಗೆ ಹೇಳಿದ್ದಾರೆ.
ಹರಿಯಾಣದಲ್ಲಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಕೇಳಿದಾಗ, ಶಾಸಕರು ಸರ್ಕಾರ ರಚಿಸಬೇಕೇ ಅಥವಾ ರಾಜ್ಯಪಾಲರ ಆಳ್ವಿಕೆಗೆ ಒತ್ತಾಯಿಸಬೇಕೇ ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ. ಈ ವಿಚಾರದಲ್ಲಿ ಹೈಕಮಾಂಡ್ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಲೋಕಸಭೆ ಚುನಾವಣೆಯ ನಂತರ ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂಬ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ನಾಯಕರು ಹತಾಶೆಯಿಂದ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಸದೃಢವಾಗಿದ್ದು, ಅವಧಿ ಪೂರ್ಣಗೊಳಿಸಲಿದೆ ಎಂದು ಹೇಳಿದ್ದಾರೆ.
ಇದನ್ನು ಓದಿ: ಲೈಂಗಿಕ ದೌರ್ಜನ್ಯ ಪ್ರಕರಣ: ಬಿಜೆಪಿ ಮುಖಂಡ ಜಿ ದೇವರಾಜೇಗೌಡ ಬಂಧನ


