ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಗೃಹಲಕ್ಷ್ಮೀ ಯೋಜನೆಯನ್ನು ಘೋಷಿಸಿದ್ದು, ಗೃಹ ಲಕ್ಷ್ಮಿ ಯೋಜನೆಯಡಿ ಮಹಿಳೆಯ ಖಾತೆಗೆ ವರ್ಷಕ್ಕೆ 15,000 ರೂ.ಗಳನ್ನು ನೀಡುವುದಾಗಿ ಘೋಷಿಸಿದೆ.
ಈ ಕುರಿತು ಘೋಷಣೆಯನ್ನು ಮಾಡಿದ ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್, ದೀಪಾವಳಿಯ ಶುಭ ಸಂದರ್ಭದಲ್ಲಿ ತಾಯಿ ಲಕ್ಷ್ಮಿ ದೇವಿಯ ಕೃಪೆ ಮತ್ತು ಛತ್ತೀಸ್‌ಗಢ ಮಹಾ ತಾಯಿಯಂದಿರ ಆಶೀರ್ವಾದದೊಂದಿಗೆ ರಾಜ್ಯದ ಸ್ತ್ರೀಗಳ ಬಲವರ್ಧನೆಗೆ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಕಾಂಗ್ರೆಸ್ ಸರ್ಕಾರ ರಚನೆಯಾದ ತಕ್ಷಣ ರಾಜ್ಯದ ಮಹಿಳೆಯರಿಗೆ ಛತ್ತೀಸ್‌ಗಢ ಗೃಹ ಲಕ್ಷ್ಮಿ ಯೋಜನೆಯಡಿಯಲ್ಲಿ ಅವರ ಖಾತೆಗಳಿಗೆ ನೇರವಾಗಿ ವರ್ಷಕ್ಕೆ 15,000ರೂ.ಗಳನ್ನು ನೀಡಲಾಗುವುದು ಎಂದು ಘೋಷಿಸಿದ್ದಾರೆ.
ಸಾಮಾಜಿಕ ವೆಲ್ಪೇರ್ ಸ್ಕೀಂನ ಭಾಗವಾಗಿ ಛತ್ತೀಸ್‌ಗಢದ ಪ್ರತಿ ಮಹಿಳೆಗೆ ವರ್ಷಕ್ಕೆ 15,000ರೂಗಳನ್ನು ಛತ್ತೀಸ್‌ಗಢ ಗೃಹಲಕ್ಷ್ಮಿ ಯೋಜನೆಯ ಭಾಗವಾಗಿ ನೀಡಲಾಗುವುದು. ದೀಪಾವಳಿಯ ಸಂದರ್ಭದಲ್ಲಿ ನಾನು ಇದನ್ನು ಘೋಷಿಸಲು ಬಯಸುತ್ತೇನೆ. ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಮತ್ತೆ ಸರಕಾರವನ್ನು ರಚಿಸಿದರೆ ಎಲ್ಲಾ ತಾಯಿಯಂದಿರು ಮತ್ತು ಸಹೋದರಿಯರಿಗೆ 15,000ರೂ. ವರ್ಷಕ್ಕೆ ಅವರ ಖಾತೆಗೆ ಜಮೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಇದಕ್ಕೂ ಮೊದಲು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದ ಛತ್ತೀಸ್‌ಗಢದ ಸಿಎಂ ಭೂಪೇಶ್ ಬಘೇಲ್, ದೀಪಾವಳಿಯ ಸಂದರ್ಭದಲ್ಲಿ ರಾಜ್ಯದಲ್ಲಿ ಮಹಿಳೆಯರನ್ನು ಶಕ್ತಿಗೊಳಿಸಲು ಮಹತ್ವದ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದರು.
ನ.5ರಂದು ಕಾಂಗ್ರೆಸ್ ಛತ್ತೀಸ್‌ಗಢ ಚುನಾವಣೆಯ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಪ್ರಣಾಳಿಕೆಯಲ್ಲಿ ಜಾತಿಗಣತಿ, ಕೃಷಿ ಸಾಲ ಮನ್ನಾ, ಭತ್ತದ ಖರೀದಿ ಬೆಲೆಯಲ್ಲಿ ಹೆಚ್ಚಳ, 200 ಯುನಿಟ್‌ವರೆಗೆ ಉಚಿತ ವಿದ್ಯುತ್, 400ರವರೆಗಿನ ವಿದ್ಯುತ್ ಬಿಲ್‌ಗಳಲ್ಲಿ 50% ರಿಯಾಯಿತಿ, ಗ್ಯಾಸ್ ಸಿಲಿಂಡರ್‌ಗಳಲ್ಲಿ 500ರೂ. ಸಬ್ಸಿಡಿ ಸೇರಿ ಹಲವು ಘೋಷಣೆಗಳನ್ನು ಮಾಡಿದೆ.
90 ವಿಧಾನಸಭಾ ಕ್ಷೇತ್ರಗಳಿರುವ ಛತ್ತೀಸ್‌ಗಢ ವಿಧಾನಸಭಾ ಚುನಾವಣೆ ಎರಡು ಹಂತಗಳಲ್ಲಿ ನಡೆಯಲಿದೆ. ಈಗಾಗಲೇ ಮೊದಲ ಹಂತದ ಚುನಾವಣೆ ನ.7ರಂದು ನಡೆದಿದೆ. ಎರಡನೆ ಹಂತದ ಚುನಾವಣೆ ನ.17ರಂದು ನಡೆಯಲಿದೆ. ಡಿ.3ರಂದು ಇತರ ರಾಜ್ಯಗಳ ಜೊತೆ ಚುನಾವಣಾ ಫಲಿತಾಂಶ ಹೊರ ಬರಲಿದೆ.
ಇನ್ನು ಛತ್ತೀಸ್‌ಗಢ ವಿಧಾನಸಭಾ ಚುನಾವಣೆಗೆ ಶುಕ್ರವಾರ ಬಿಜೆಪಿ ಬಿಡುಗಡೆ ಮಾಡಿದ ಪ್ರಣಾಳಿಕೆಯನ್ನು ಕಾಂಗ್ರೆಸ್ ‘ನಕಲು’ ಎಂದು ಕರೆದಿದೆ. ಕಾಂಗ್ರೆಸ್‌ನ ಚುನಾವಣಾ ಗ್ಯಾರೆಂಟಿಗಳನ್ನು ‘ಬಿಟ್ಟಿ’ ಎಂದು ಟೀಕಿಸುವವರು ಈಗ ಚುನಾವಣೆಯಲ್ಲಿ ಗೆಲ್ಲಲು ಗ್ಯಾರೆಂಟಿಗಳನ್ನು ನೀಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಇನ್ನು ಕಾಂಗ್ರೆಸ್ ಗ್ಯಾರೆಂಟಿ ಘೋಷಣೆ ಬೆನ್ನಲ್ಲೇ ಬಿಜೆಪಿಯು ಛತ್ತೀಸ್‌ಗಢದಲ್ಲಿ ಗ್ಯಾರೆಂಟಿ ಯೋಜನೆಗಳನ್ನು ಘೋಷಿಸಿದೆ. 2 ವರ್ಷಗಳಲ್ಲಿ ಛತ್ತೀಸ್‌ಗಢದಲ್ಲಿ ಖಾಲಿ ಇರುವ 1 ಲಕ್ಷ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವುದು. ಬಡ ಕುಟುಂಬದ ಮಹಿಳೆಯರಿಗೆ ತಲಾ 500ರ ದರದಲ್ಲಿ ಅಡುಗೆ ಅನಿಲ ಸಿಲಿಂಡರ್ ನೀಡುವುದು, ಘರ್ ಘರ್ ನಿರ್ಮಲ್ ಜಲ ಅಭಿಯಾನ, ಭೂರಹಿತ ಕೃಷಿ ಕಾರ್ಮಿಕರಿಗೆ ವರ್ಷಕ್ಕೆ 10,000ರೂ. ಸೇರಿ ಹಲವು ಭರವಸೆಗಳನ್ನು ಘೋಷಿಸಿದೆ.
#WATCH | Raipur: Chhattisgarh CM Bhupesh Baghel says, " On the occasion of Diwali, I want to announce that, if Congress forms govt again in Chhattisgarh, we will launch 'Chhattisgarh Griha Lakshmi Yojana' and will give Rs 15,000 per year to all mothers and sisters" https://t.co/1Ex1aslhmx pic.twitter.com/9XwHfq64ga
— ANI (@ANI) November 12, 2023
ಇದನ್ನು ಓದಿ:ಗುಜರಾತ್: ಹಝರತ್ ಶಹೀದ್ ದರ್ಗಾ ತೆರವಿಗೆ ಹೈಕೋರ್ಟ್ ತಡೆ


