ಇಂಡಿಯಾ ಮೈತ್ರಿಕೂಟ ನಿತೀಶ್ ಕುಮಾರ್ ಅವರಿಗೆ ಪ್ರಧಾನಿ ಹುದ್ದೆಯ ಆಫರ್ ನೀಡಿದೆ ಎಂಬ ಜೆಡಿಯು ನಾಯಕ ಕೆಸಿ ತ್ಯಾಗಿ ಅವರ ಹೇಳಿಕೆಗೆ ಕಾಂಗ್ರೆಸ್ ಶನಿವಾರ ಪ್ರತಿಕ್ರಿಯಿಸಿದೆ.
ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್, “ಅಂತಹ ಯಾವುದೇ ಮಾಹಿತಿ ನಮಗೆ ಬಂದಿಲ್ಲ” ಎಂದಿದ್ದಾರೆ.
“ನಿತೀಶ್ ಕುಮಾರ್ ಅವರನ್ನು ಇಂಡಿಯಾ ಮೈತ್ರಿಕೂಟದ ರಾಷ್ಟ್ರೀಯ ಸಂಚಾಲಕರನ್ನಾಗಿ ಮಾಡಲು ನಿರಾಕರಿಸಿದವರು ಈಗ ನಿತೀಶ್ ಅವರನ್ನು ಪ್ರಧಾನಿ ಮಾಡಲು ಮುಂದಾಗಿರುವುದು ರಾಜಕೀಯದ ಆಟ” ಎಂದು ಕೆಸಿ ತ್ಯಾಗಿ ಇಂಡಿಯನ್ ಎಕ್ಸ್‌ಪ್ರೆಸ್ ಜೊತೆ ಮಾತನಾಡುತ್ತಾ ಹೇಳಿದ್ದರು.
ಇಂಡಿಯಾ ಮೈತ್ರಿಕೂಟದ ಸದಸ್ಯರಾದ ಕಾಂಗ್ರೆಸ್ ಮತ್ತು ಇತರ ಪಕ್ಷಗಳು ನಿತೀಶ್ ಕುಮಾರ್ ಅವರನ್ನು ‘ಕೆಟ್ಟದಾಗಿ ನಡೆಸಿಕೊಂಡಿವೆ’ ಎಂದಿರುವ ಕೆಸಿ ತ್ಯಾಗಿ, “ಜೆಡಿಯು ಇಂಡಿಯಾ ಒಕ್ಕೂಟಕ್ಕೆ ಮರಳುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಲೋಕಸಭೆಯ ಚುನಾವಣೆಯಲ್ಲಿ 12 ಸ್ಥಾನಗಳನ್ನು ಗೆಲ್ಲುವ ಮೂಲಕ ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷ ಎನ್‌ಡಿಎ ಮೈತ್ರಿಕೂಟದಲ್ಲಿ ನಿರ್ಣಾಯಕ ಮಿತ್ರ ಪಕ್ಷವಾಗಿ ಹೊರಹೊಮ್ಮಿದೆ.
ಲೋಕಸಭೆಗೂ ಮುನ್ನ ಇಂಡಿಯಾ ಒಕ್ಕೂಟದ ಪ್ರಮುಖ ಭಾಗವಾಗಿದ್ದ ನಿತೀಶ್ ಕುಮಾರ್, ಕಳೆದ ಜನವರಿಯಲ್ಲಿ ಮಮತಾ ಬ್ಯಾನರ್ಜಿ ಪ್ರಧಾನಿ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ಹೆಸರು ಪ್ರಸ್ತಾಪಿಸಿದ ಬೆನ್ನಲ್ಲೇ ಎನ್‌ಡಿಎ ಒಕ್ಕೂಟಕ್ಕೆ ಸೇರಿದ್ದರು.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 293 ಸ್ಥಾನಗಳನ್ನು ಗೆದ್ದು ಸರ್ಕಾರ ರಚಿಸುವ ಅರ್ಹತೆ ಪಡೆದಿದೆ. ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ 232 ಸ್ಥಾನಗಳನ್ನು ಗೆದ್ದುಕೊಂಡಿದೆ. ಚುನಾವಣೆ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಇಂಡಿಯಾ ಒಕ್ಕೂಟ ಎನ್‌ಡಿಎ ಬಣದಲ್ಲಿರುವ ನಿತೀಶ್ ಕುಮಾರ್ ಅವರ ಜೆಡಿಯು ಮತ್ತು ಚಂದ್ರಬಾಬು ನಾಯ್ಡು ಅವರ ಟಿಡಿಪಿ ಪಕ್ಷಗಳನ್ನು ತನ್ನತ್ತ ಸೆಳೆದು ಸರ್ಕಾರ ರಚಿಸುವ ಕಸರತ್ತು ನಡೆಸಿತ್ತು. ಆ ಬಳಿಕ ಸುಮ್ಮನಾಗಿದೆ.
ಇಂಡಿಯಾ ಒಕ್ಕೂಟದ ನಿತೀಶ್ ಕುಮಾರ್ ಅವರನ್ನು ತನ್ನತ್ತ ಸೆಳೆಯಲು ಪ್ರಯತ್ನ ನಡೆಸಿದಾಗ, ನಿತೀಶ್ ಅವರಿಗೆ ಪ್ರಧಾನಿ ಹುದ್ದೆ ನೀಡುವ ಆಫರ್ ಕೊಟ್ಟಿತ್ತು ಎಂಬ ಚರ್ಚೆಗಳು ನಡೆದಿತ್ತು.
ಇದನ್ನೂ ಓದಿ : ರಾಹುಲ್ ಗಾಂಧಿಗೆ ಲೋಕಸಭೆಯ ವಿಪಕ್ಷ ನಾಯಕನ ಪಟ್ಟ?


