“ದೇಶದಲ್ಲಿ ‘ಜಾತ್ಯತೀತ ನಾಗರಿಕ ಸಂಹಿತೆ’ ಜಾರಿಗೊಳಿಸುವ ಅಗತ್ಯವಿದೆ. ಈಗ ಇರುವ ನಾಗರಿಕ ಸಂಹಿತೆ ‘ಕೋಮುವಾದಿ ಮತ್ತು ತಾರತಮ್ಯ’ ಸ್ವರೂಪದಿಂದ ಕೂಡಿದೆ” ಎಂದು ಪ್ರಧಾನಿ ನರೇಂದ್ರ ಗುರುವಾರ ತನ್ನ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಹೇಳಿದ್ದಾರೆ. ಈ ಮೂಲಕ ‘ಸಮಾನ ನಾಗರಿಕ ಸಂಹಿತೆ’ ಜಾರಿಗೆ ಮುಂದಾಗಿರುವುದನ್ನು ಸಮರ್ಥಿಸಿಕೊಂಡಿದ್ದಾರೆ.
ಪ್ರಧಾನಿಯ ಈ ಹೇಳಿಕೆಗೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇದು ಸಂವಿಧಾನ ಶಿಲ್ಪಿ ಡಾ.ಬಿಆರ್ ಅಂಬೇಡ್ಕರ್ ಅವರಿಗೆ ಮಾಡಿರುವ ದೊಡ್ಡ ಅವಮಾನ ಎಂದಿದೆ.
ಈ ಕುರಿತು ಎಕ್ಸ್‌ನಲ್ಲಿ ಬರೆದುಕೊಂಡಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ “ಜೈವಿಕವಲ್ಲದ ಪ್ರಧಾನಿಯ ಇತಿಹಾಸವನ್ನು ತಿರುಚುವ, ಕುಚೇಷ್ಟೆ ಮಾಡುವ ಹಾಗೂ ಕಳಂಕ ತರುವ ಸಾಮರ್ಥ್ಯಕ್ಕೆ ಗಡಿ ಎಂಬುವುದೇ ಇಲ್ಲ. ಅದು ಇಂದು ಕೆಂಪು ಕೋಟೆಯ ಮೇಲಿಂದ ಸಂಪೂರ್ಣವಾಗಿ ಅನಾವರಣಗೊಂಡಿದೆ. ನಾವು ಇಲ್ಲಿಯವರೆಗೆ ಕೋಮುವಾದಿ ನಾಗರಿಕ ಸಂಹಿತೆಯನ್ನು ಹೊಂದಿದ್ದೆವು ಎಂಬುವುದು ಅಂಬೇಡ್ಕರ್ ಅವರಿಗೆ ಮಾಡುವ ದೊಡ್ಡ ಅವಮಾನವಾಗಿದೆ. 1950ರ ಮಧ್ಯಭಾಗದಲ್ಲಿ ನೈಜವಾಗಿ ಹೊರ ಹೊಮ್ಮಿದ್ದ ಹಿಂದೂ ವೈಯಕ್ತಿಕ ಕಾನೂನುಗಳಲ್ಲಿ ಸುಧಾರಣೆ ತಂದ ಮಹಾನ್ ದಾರ್ಶನಿಕರವರು. ಈ ಸುಧಾರಣೆಗಳನ್ನು ಆರೆಸ್ಸೆಸ್ ಹಾಗೂ ಜನಸಂಘ ತೀವ್ರವಾಗಿ ವಿರೋಧಿಸಿದ್ದವು” ಎಂದು ಹೇಳಿದ್ದಾರೆ.
The non-biological PM's capacity for malice, mischief, and maligning of history knows no bounds. It was on full display today from the Red Fort.
To say that we have had a "communal civil code" till now is a gross insult to Dr. Ambedkar, who was the greatest champion of reforms…
— Jairam Ramesh (@Jairam_Ramesh) August 15, 2024
ಜೈರಮೇಶ್ ಆಗಸ್ಟ್ 31, 2018 ರ ಕೌಟುಂಬಿಕ ಕಾನೂನಿನ ಸುಧಾರಣೆಯ ಕುರಿತಾದ 21ನೇ ಕಾನೂನು ಆಯೋಗದ ಸಮಾಲೋಚನಾ ಪತ್ರವನ್ನು ಉಲ್ಲೇಖಿಸಿದ್ದು, ಆಯೋಗವು ಪೂರ್ಣಪ್ರಮಾಣದ ಸಮಾನ ನಾಗರಿಕ ಸಂಹಿತೆಯ ಜಾರಿಯ ವಿರುದ್ಧ ವಾದ ಮಂಡಿಸಿದೆ ಎಂಬುವುದರತ್ತ ಬೊಟ್ಟು ಮಾಡಿದ್ದಾರೆ.
“ಭಾರತೀಯ ಸಂಸ್ಕೃತಿಯ ವೈವಿಧ್ಯತೆಯನ್ನು ಆಚರಿಸಬಹುದು ಮತ್ತು ಆಚರಿಸಬೇಕು. ನಿರ್ದಿಷ್ಟ ಗುಂಪುಗಳು ಅಥವಾ ಸಮಾಜದ ದುರ್ಬಲ ವರ್ಗಗಳು ಈ ಪ್ರಕ್ರಿಯೆಯಲ್ಲಿ ಅನನುಕೂಲತೆಯನ್ನು ಹೊಂದಿರಬಾರದು. ಈ ಸಂಘರ್ಷದ ಪರಿಹಾರವು ಎಲ್ಲಾ ಭಿನ್ನಾಭಿಪ್ರಾಯಗಳ ನಿರ್ಮೂಲನೆ ಎಂದಲ್ಲ. ಆದ್ದರಿಂದ ಈ ಹಂತದಲ್ಲಿ ಅಗತ್ಯವೂ ಅಲ್ಲದ ಮತ್ತು ಅಪೇಕ್ಷಣೀಯವೂ ಅಲ್ಲದ ಏಕರೂಪದ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವ ಬದಲು ತಾರತಮ್ಯದಿಂದ ಕೂಡಿರುವ ಕಾನೂನುಗಳನ್ನು ಸರಿಪಡಿಸಬೇಕು. ಹೆಚ್ಚಿನ ದೇಶಗಳು ಭಿನ್ನಾಭಿಪ್ರಾಯಗಳನ್ನು ಗುರುತಿಸುವತ್ತ ಸಾಗುತ್ತಿವೆ. ವಿವಿದತೆಯು ತಾರತಮ್ಯವನ್ನು ಸೂಚಿಸುವುದಿಲ್ಲ, ಅದು ದೃಢವಾದ ಪ್ರಜಾಪ್ರಭುತ್ವವನ್ನು ಸೂಚಿಸುತ್ತದೆ” ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
ಏಕರೂಪ ನಾಗರಿಕ ಸಂಹಿತೆ 1989 ರಿಂದ ಬಿಜೆಪಿಯ ಲೋಕಸಭಾ ಚುನಾವಣಾ ಪ್ರಣಾಳಿಕೆಯ ಭಾಗವಾಗಿದೆ. ಈ ಬಾರಿ ಅದನ್ನೂ ಜಾರಿಗೊಳಿಸಲು ಬಿಜೆಪಿ ಮುಂದಾಗಿದೆ. ಆದರೆ, ಕೇಂದ್ರದಲ್ಲಿ ಬಿಜೆಪಿ ಬಹುಮತದ ಕೊರತೆಯಿದ್ದು, ಟಿಡಿಪಿ ಮತ್ತು ಜೆಡಿಯು ಬಲದಿಂದ ಎನ್‌ಡಿಎ ಸರ್ಕಾರ ಕಟ್ಟಿದೆ. ಹಾಗಾಗಿ, ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸಲು ಸಾಧ್ಯವಾಗುತದಾ? ಎಂಬ ಪ್ರಶ್ನೆ ಎದ್ದಿದೆ.
ಇದನ್ನೂ ಓದಿ : ಸಿಎಎ ವಿರೋಧಿ ಪ್ರತಿಭಟನೆಗಳ ಕೇಂದ್ರಬಿಂದು ಅಸ್ಸಾಂನಲ್ಲಿ ಪೌರತ್ವ ಪಡೆದ ಮೊದಲನೇ ಅರ್ಜಿದಾರ


