ಮಧ್ಯಪ್ರದೇಶದ ಭೋಪಾಲ್ ಶಾಸಕಿ ಪ್ರಗ್ಯಾ ಸಿಂಗ್ ಅವರನ್ನು ರಕ್ಷಣಾ ಸಚಿವಾಲಯದ ಸಂಸದೀಯ ಸಮಿತಿಗೆ ನೇಮಕ ಮಾಡಿರುವ ಬಿಜೆಪಿ ಕ್ರಮವನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ. ಇದು ದೇಶಕ್ಕೆ ಮಾಡಿದ ಅಪಮಾನ ಎಂದು ಆರೋಪಿಸಿದೆ.
ಮಹಾರಾಷ್ಟ್ರದಲ್ಲಿ 2008 ರ ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿಯಾಗಿರುವ ಪ್ರಗ್ಯಾ ಸಿಂಗ್ ಠಾಕೂರ್ ಅವರನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಸಚಿವಾಲಯದ ಸಂಸದೀಯ ಸಮಾಲೋಚನಾ ಸಮಿತಿಯ 21 ಸದಸ್ಯರನ್ನು ನೇಮಕ ಮಾಡಿದೆ. 21 ಮಂದಿಯಲ್ಲಿ ಪ್ರಗ್ಯಾ ಸಿಂಗ್ ಠಾಕೂರ್‌ರನ್ನೂ ಸಹ ನೇಮಕ ಮಾಡಲಾಗಿದೆ.
ಮತಾಂಧ ನಾಥೂರಾಮ್ ಗೋಡ್ಸೆಯನ್ನು ದೇಶಭಕ್ತ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಪ್ರಗ್ಯಾ ಸಿಂಗ್ ಠಾಕೂರ್‌ರನ್ನು ಬಿಜೆಪಿ ಸರ್ಕಾರ ರಕ್ಷಣಾ ಸಚಿವಾಲಯದ ಸಂಸದೀಯ ಸಮಿತಿಗೆ ನೇಮಕ ಮಾಡಿದೆ. ಬಿಜೆಪಿಯ ಕ್ರಮ ರಾಷ್ಟ್ರದ ರಕ್ಷಣಾ ಪಡೆಗೆ ಮತ್ತು ರಾಷ್ಟ್ರದ ಗೌರವಾನ್ವಿತ ಸಂಸದರಿಗೆ ಮತ್ತು ಪ್ರತಿಯೊಬ್ಬ ಭಾರತೀಯರಿಗೂ ಮಾಡಿದ ಅವಮಾನವಾಗಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಇದನ್ನೂ ಓದಿ: ರಕ್ಷಣಾ ಸಚಿವಾಲಯ ಸಂಸದೀಯ ಸಮಿತಿಗೆ ಸಾಧ್ವಿ ಪ್ರಗ್ಯಾ ಸಿಂಗ್ ನೇಮಕ: ಕೇಂದ್ರದ ನಿರ್ಧಾರಕ್ಕೆ ವಿರೋಧ
ನ್ಯಾಯಾಲಯದಲ್ಲಿ ಇನ್ನೂ ಮಾಲೆಗಾಂವ್ ಸ್ಫೋಟ ಪ್ರಕರಣ ವಿಚಾರಣೆ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ರಕ್ಷಣಾ ಸಚಿವಾಲಯದ ಸಮಿತಿಗೆ ಪ್ರಗ್ಯಾ ಸಿಂಗ್ ನೇಮಕ ಮಾಡಿರುವುದು ಪ್ರಜಾಪ್ರಭುತ್ವಕ್ಕೆ ಮಾರಕ. ಎಲ್ಲವನ್ನೂ ಸಂವಿಧಾನವೇ ಮಾರ್ಗದರ್ಶನ ನೀಡಬೇಕು ಎಂದೇನಿಲ್ಲ. ಆದರೆ ಕೆಲವು ನಿರ್ಧಾರಗಳನ್ನು ನೈತಿಕ ಆಧಾರದ ಮೇಲೆ ತೆಗೆದುಕೊಳ್ಳಲಾಗುತ್ತದೆ ಎಂದು ಕಾಂಗ್ರೆಸ್ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಿಜೆಪಿ 303 ಸ್ಥಾನಗಳನ್ನು ಗೆದ್ದಿದೆ. ಬಿಜೆಪಿ ಮುಂದೆ ಸಾಕಷ್ಟು ಆಯ್ಕೆಗಳಿವೆ. ನಿರ್ಣಯ ತೆಗೆದುಕೊಳ್ಳುವಲ್ಲಿ ಅವರು ಸ್ವತಂತ್ರರಾಗಿದ್ದಾರೆ. ಯಾರ ವಿರುದ್ಧ ಯಾವುದೇ ಕೇಸುಗಳಿಲ್ಲವೋ ಅಂತಹವರನ್ನು ನೇಮಕ ಮಾಡಬೇಕಿತ್ತು. ಅವರನ್ನು ರಕ್ಷಣಾ ಸಮಿತಿಗೆ ನಾಮನಿರ್ದೇಶನ ಮಾಡಬೇಕಾಗಿತ್ತು ಕಾಂಗ್ರೆಸ್ ತಿಳಿಸಿದೆ.
ಇನ್ನು ಕಾಂಗ್ರೆಸ್ ಟೀಕೆಗಳಿಗೆ ಬಿಜೆಪಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಲೋಕಸಭಾ ಸ್ಪೀಕರ್ ಅಥವಾ ರಾಜ್ಯಸಭಾ ಅಧ್ಯಕ್ಷರು ಸಹ ಸವಲತ್ತುಗಳು, ಅರ್ಜಿಗಳು ಮತ್ತು ಎಂಪಿಎಲ್‌ಎಡಿಗಳಂತಹ ತಾತ್ಕಾಲಿಕ ಸಮಿತಿಗಳಿಗೆ ನಾಮನಿರ್ದೇಶನ ಮಾಡುತ್ತಾರೆ. ಪ್ರಜ್ಞಾ ಠಾಕೂರ್ ರೈಲ್ವೆ ಕುರಿತ ಸ್ಥಾಯಿ ಸಮಿತಿಗೆ ಸಂಬಂಧಿಸಿದ ಇಲಾಖೆಯ ಸದಸ್ಯರೂ ಆಗಿದ್ದಾರೆ. ಮಹಾರಾಷ್ಟ್ರದ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆಯಡಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನ್ನ ವಿರುದ್ಧದ ಆರೋಪಗಳನ್ನು ಕೈಬಿಟ್ಟ ನಂತರ ಸಾಧ್ವಿಗೆ 2017 ರ ಏಪ್ರಿಲ್‌ನಲ್ಲಿ ಬಾಂಬೆ ಹೈಕೋರ್ಟ್ ಜಾಮೀನು ನೀಡಿತ್ತು.


