ಭಾರತದ ಒಕ್ಕೂಟ ವ್ಯವಸ್ಥೆಯು ರೂಪುಗೊಂಡಿರುವ ಹದದಲ್ಲಿ ಅಭಿವೃದ್ಧಿಗೆ ಸಂಬಂಧಿಸಿದ ಹೆಚ್ಚಿನ ಕಾರ್ಯಕ್ರಮಗಳನ್ನು ರಾಜ್ಯ ಸರಕಾರಗಳು ಅನುಷ್ಟಾನಗೊಳಿಸುತ್ತವೆ. ಬಹುದೊಡ್ಡ ಸಂಖ್ಯೆಯ ಜನರು ತಮ್ಮ ಜೀವನೋಪಾಯಕ್ಕಾಗಿ, ಮಾನವ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ, ಕಲ್ಯಾಣ ಕಾರ್ಯಕ್ರಮಗಳಿಗಾಗಿ ಮತ್ತು ಭದ್ರತೆಗಾಗಿ ರಾಜ್ಯ ಸರಕಾರಗಳನ್ನು ಅವಲಂಬಿಸುತ್ತಿರುತ್ತಾರೆ. ರಾಜ್ಯ- ರಾಜ್ಯಗಳ ನಡುವೆ ಅಭಿವೃದ್ಧಿಯಲ್ಲಿನ ಭಾರೀ ಪ್ರಮಾಣದ ಏರುಪೇರುಗಳನ್ನು ಗಮನಿಸಿ ನೋಡಿದರೆ ಆರ್ಥಿಕ ಬೆಳವಣಿಗೆ ಮತ್ತು ಜನರ ಆದಾಯ ಪ್ರಮಾಣ ಹೆಚ್ಚಳದಲ್ಲಿ ರಾಜ್ಯ ಸರಕಾರಗಳು ಮಹತ್ವದ ಪಾತ್ರ ವಹಿಸುತ್ತವೆ ಎಂಬುದು ಎದ್ದು ಕಾಣುತ್ತದೆ. ಈ ಜವಾಬ್ದಾರಿಗಳನ್ನು ಮತ್ತು ಜನರ ಆಶೋತ್ತರಗಳನ್ನು ನಿಭಾಯಿಸಲು ರಾಜ್ಯ ಸರಕಾರಗಳಿಗೆ ಸಂಪನ್ಮೂಲಗಳ ಅಗತ್ಯವಿರುತ್ತದೆ. ದುರದೃಷ್ಟಕರ ಸಂಗತಿಯೆಂದರೆ ರಾಜ್ಯಗಳ ಆರ್ಥಿಕ ಸಾಮಥ್ರ್ಯವನ್ನು ಸಾಂಸ್ಥಿಕವಾಗಿ ದುರ್ಬಲಗೊಳಿಸಲಾಗುತ್ತಿದೆ.
ಜಿಎಸ್‍ಟಿ ಯುಗ ಆರಂಭವಾದಂದಿನಿಂದಲೇ ಸಂಪನ್ಮೂಲ ಕ್ರೋಢೀಕರಣದ ವಿಚಾರದಲ್ಲಿ ರಾಜ್ಯಗಳ ಸಾಮರ್ಥ್ಯ ಕುಂದಿದೆ. ಸಂಪನ್ಮೂಲ ಕ್ರೋಢೀಕರಣದಲ್ಲಿ ರಾಜ್ಯಗಳಿಗೆ ಹೋಲಿಸಿದಾಗ ಒಕ್ಕೂಟ ಸರ್ಕಾರದ ಸಾಧ್ಯತೆಯು ಈಗ ಬಹಳ ಹೆಚ್ಚಾಗಿದೆ. ಒಕ್ಕೂಟ ಸರ್ಕಾರ ಮತ್ತು ರಾಜ್ಯ ಸರಕಾರಗಳು ಅತ್ಯಂತ ಸವಾಲಿನ ಹಣಕಾಸು ಪರಿಸ್ಥಿತಿಯನ್ನು ಎದುರಿಸುತ್ತಿರುವಾಗ ಒಕ್ಕೂಟ ಸರ್ಕಾರವು ಪರಸ್ಪರ ಸಹಕಾರಿಯಾಗುವ ಪರಿಹಾರಗಳನ್ನು ಕಂಡುಕೊಳ್ಳುವುದಕ್ಕೆ ಬದಲಾಗಿ ರಾಜ್ಯಗಳ ಇಂದಿನ ಮತ್ತು ಭವಿಷ್ಯದ ಹಣಕಾಸು ಸಾಮರ್ಥ್ಯವನ್ನು ಕುಗ್ಗಿಸುವ ಕ್ರಮಗಳನ್ನು ಮತ್ತೆ ಮತ್ತೆ ಕೈಗೊಳ್ಳುತ್ತಿದೆ. ಒಕ್ಕೂಟದಿಂದ ಸಂಗ್ರಹಿಸಲಾಗುವ ತೆರಿಗೆಯಲ್ಲಿ ರಾಜ್ಯಗಳ ಪಾಲನ್ನು ಒಕ್ಕೂಟವು ವ್ಯವಸ್ಥಿತವಾಗಿ ಕಡಿತಗೊಳಿಸಿದೆ. ಜೊತೆಗೆ ತೆರಿಗೆಗಳ ಬದಲಾಗಿ ಸೆಸ್ ಮತ್ತು ಸರ್‌ಜಾರ್ಜ್ (ಮೇಲ್ತೆರಿಗೆಗಳು) ವಿಧಿಸುವ ಮೂಲಕ ರಾಜ್ಯಗಳ ಜೊತೆ ಹಂಚಿಕೊಳ್ಳಬೇಕಾದ ನಿಧಿ ಸಂಗ್ರಹವನ್ನು ಕಡಿತಗೊಳಿಸಿದೆ. ಜಿಎಸ್‍ಟಿಯ ಕೊರತೆಯನ್ನು ನಿಭಾಯಿಸಲು ಇತರ ಆಯ್ಕೆಗಳು ಲಭ್ಯವಿರುವಾಗಲೂ ದಂಡನಾತ್ಮಕ ಕ್ರಮಗಳಿಗೇ ಒತ್ತು ನೀಡುತ್ತಿದೆ.
ಒಕ್ಕೂಟ ತೆರಿಗೆಗಳಲ್ಲಿ ರಾಜ್ಯಗಳ ಪಾಲು
ಒಕ್ಕೂಟವು ಸಂಗ್ರಹಿಸುವ ತೆರಿಗೆಗಳಲ್ಲಿ ರಾಜ್ಯದ ಪಾಲನ್ನು ಹಣಕಾಸು ಆಯೋಗಗಳು ಶಿಫಾರಸು ಮಾಡುತ್ತವೆ. ಅತ್ಯಂತ ಅನಿವಾರ್ಯ ಸಂದರ್ಭಗಳ ಹೊರತಾಗಿ ಒಕ್ಕೂಟ ಸರಕಾರಗಳು ಈ ಶಿಫಾರಸುಗಳನ್ನು ಅನುಸರಿಸುತ್ತಾ ಬಂದಿವೆ. ಆದರೆ, ಪ್ರಸ್ತುತ ಸರಕಾರವು ಈ ಸಾಂವಿಧಾನಿಕ ಬಾಧ್ಯತೆಯನ್ನು ಸಂಪೂರ್ಣವಾಗಿ ಕಡೆಗಣಿಸಿದೆ.
13 ಮತ್ತು 14ನೇ ಹಣಕಾಸು ಆಯೋಗವು ಶಿಫಾರಸ್ಸು ಮಾಡಿದ, ಆದರೆ ವಾಸ್ತವದಲ್ಲಿ ಬಿಡುಗಡೆ ಮಾಡಿದ ಆರ್ಥಿಕ ಪಾಲು
2010-11 ರಿಂದ 2013-14 ವರೆಗೆ (ಲಕ್ಷ ಕೋಟಿಗಳಲ್ಲಿ)

2014-15 ರಿಂದ 2019-20 ವರೆಗೆ

ಯುಪಿಎ ಸರಕಾರವು 13ನೇ ಹಣಕಾಸು ಆಯೋಗವು ಶಿಫಾರಸು ಮಾಡಿದುದಕ್ಕಿಂತ ಹೆಚ್ಚಿನ ನಿಧಿಯನ್ನು ರಾಜ್ಯಗಳಿಗೆ ಬಿಡುಗಡೆ ಮಾಡಿತ್ತು. ಆದರೆ ಎನ್‍ಡಿಎ ಸರಕಾರವು ಮೊದಲ ವರ್ಷದಲ್ಲಿಯೇ ಯೋಜನಾ ಆಯೋಗ ಶಿಫಾರಸು ಮಾಡಿದುದರಲ್ಲಿ 14 ಶೇಕಡಾ ನಿಧಿ ಕಡಿತ ಮಾಡುವ ಮೂಲಕ ಭರ್ಜರಿ ಹೊಡೆತ ನೀಡಿತ್ತು. ಪ್ರತೀ ವರ್ಷವೂ ಈ ನಿಧಿಯನ್ನು ಕಡಿತ ಮಾಡುತ್ತಾ ಬರುತ್ತಿದ್ದು, ಇದೀಗ 37 ಶೇಕಡಾದಷ್ಟು ಬೃಹತ್ ಕಡಿತದ ಹಂತಕ್ಕೆ ತಲುಪಿದೆ. 2014-15 ಮತ್ತು 2019-20ರ ನಡುವೆ ರಾಜ್ಯಗಳಿಗೆ 7,97,549 ಕೋಟಿ ರೂ. ಹಣ ಕಡಿತ ಮಾಡಲಾಗಿದೆ. ಇದು ರಾಜ್ಯಗಳ ಹಣಕಾಸು ಸಂಪನ್ಮೂಲ ಸಾಧ್ಯತೆಯನ್ನು ಕುಗ್ಗಿಸುವ ನಡೆಯೆಂಬುದನ್ನು ಯಾರೂ ಅಲ್ಲಗಳೆಯಲಾಗದು. ಕಳೆದ ಆರು ವರ್ಷಗಳಲ್ಲಿ ಆಗುತ್ತಿರುವ ಆರ್ಥಿಕ ಕುಂಟುವಿಕೆಯನ್ನು ಇದಕ್ಕೆ ಭಾಗಶಃ ಕಾರಣವಾಗಿ – ನೀಡಬಹುದು. ಇದು ಆರ್ಥಿಕ ರಂಗದಲ್ಲಿ ಎನ್‍ಡಿಎ ಬಿಂಬಿಸಿಕೊಳ್ಳುತ್ತಿರುವುದಕ್ಕಿಂತ ಭಿನ್ನವಾಗಿ, ಅವರ ವೈಫಲ್ಯವನ್ನು ಬಿಂಬಿಸುವ ಕನ್ನಡಿಯಾಗಿದೆ (ಇಲ್ಲಿ ಅದರ ಕುರಿತ ವಿವರಗಳಿಗೆ ಹೋಗುವುದಿಲ್ಲ).
ಸೆಸ್‍ಗಳು ಮತ್ತು ಸರ್ಚಾರ್ಜ್‍ಗಳು
ಒಕ್ಕೂಟ ಸರಕಾರವು ವಿಧಿಸುವ ಸೆಸ್‍ಗಳು ಮತ್ತು ಸರ್ಚಾರ್ಜ್‍ಗಳು ಸಂಪೂರ್ಣವಾಗಿ ಒಕ್ಕೂಟ ಸರ್ಕಾರದ ಪಾಲಾಗುತ್ತವೆ. ಅಂದರೆ, ಅವುಗಳನ್ನು ಇತರ ತೆರಿಗೆಗಳಂತೆ ರಾಜ್ಯಗಳ ಜೊತೆ ಹಂಚಿಕೊಳ್ಳುವುದಿಲ್ಲ. ಒಕ್ಕೂಟ ಸರ್ಕಾರವು ನಿರಂತರವಾಗಿ ಇದನ್ನು ಮಾಡುತ್ತಾ ಬರುತ್ತಿದ್ದು, ತೆರಿಗೆಗಳ ಬದಲಾಗಿ ಸರ್ಚಾರ್ಜ್‍ಗಳನ್ನು ವಿಧಿಸಿ, ಹೆಚ್ಚು ನಿಧಿ ಒಕ್ಕೂಟ ಸರ್ಕಾರದ ಬಳಿಯೇ ಉಳಿಯುವಂತೆ ಮಾಡುತ್ತಿದೆ. 2014-15 ಮತ್ತು 2019-20ರ ನಡುವೆ ಈ ಮೇಲ್ತೆರಿಗೆಗಳು ಒಕ್ಕೂಟ ಸರಕಾರದ ಒಟ್ಟು ತೆರಿಗೆ ಸಂಗ್ರಹದ 9.3 ಶೇಕಡಾದಿಂದ 15 ಶೇಕಡಾಕ್ಕೆ ನೆಗೆದಿವೆ. ತೆರಿಗೆಗಳನ್ನು ಮೇಲ್ತೆರಿಗೆಗಳಾಗಿ ಪರಿವರ್ತಿಸುವುದರ ಮೂಲಕ, ಪೆಟ್ರೋಲ್ ಮತ್ತು ಡೀಸೆಲ್ ವಿಷಯದಲ್ಲಿ ನಡೆದಂತೆ, ನಾಗರಿಕರು ಅಷ್ಟೇ ಪ್ರಮಾಣದ ತೆರಿಗೆ ಪಾವತಿಸುತ್ತಾರೆಯಾದರೂ, ಒಕ್ಕೂಟ ಸರ್ಕಾರವು ಹೆಚ್ಚಿನ ಪಾಲನ್ನು ತನ್ನಲ್ಲೇ ಉಳಿಸಿಕೊಂಡು ರಾಜ್ಯಗಳಿಗೆ ಕಡಿಮೆ ಪಾಲನ್ನು ನೀಡುತ್ತದೆ. ಪ್ರಸ್ತುತ ಒಕ್ಕೂಟ ಸರಕಾರವು ಇದನ್ನೇ ಮಾಡುತ್ತಿದೆ. 2019-20ರ ಒಂದು ವರ್ಷದಲ್ಲಿಯೇ ಒಕ್ಕೂಟ ಸರ್ಕಾರವು ಸೆಸ್ ಮತ್ತು ಸರ್‌ಚಾರ್ಜ್‍ಗಳಿಂದ 3,69,111 ಕೋಟಿ ರೂ.ಗಳ ನಿರೀಕ್ಷೆಯಲ್ಲಿದ್ದು, ಇದರಲ್ಲಿ ಒಂದು ರೂಪಾಯಿಯನ್ನೂ ಯಾವುದೇ ರಾಜ್ಯದ ಜೊತೆ ಹಂಚಿಕೊಳ್ಳಬೇಕಾಗಿಲ್ಲ. ರಾಜ್ಯಗಳ ಜೊತೆ ಹಂಚಿಕೊಳ್ಳಬೇಕಾದ ನಿಧಿಯ ಪ್ರಮಾಣವನ್ನು ಕಡಿಮೆ ಮಾಡಲು ಒಕ್ಕೂಟ ಸರ್ಕಾರವು ಇಂತಹ ದುಷ್ಟ ಅಡ್ಡದಾರಿಗಳನ್ನು ಬಳಸುವುದರಲ್ಲಿ ವಿಶೇಷ ಪರಿಣಿತಿ ಸಾಧಿಸಿದೆ.
ಜಿಎಸ್‍ಟಿ ಕೊರತೆಗೆ ಪರಿಹಾರ
(ಜಿಎಸ್‍ಟಿ ಕೊರತೆ: ಈ ಹಿಂದೆ ರಾಜ್ಯಗಳು ವಿಧಿಸುತ್ತಿದ್ದ ವಿವಿಧ ಸ್ತರದ ತೆರಿಗೆಗಳ ಬದಲಿಗೆ, ಈಗ ಜಿಎಸ್‍ಟಿಯಲ್ಲಿ ಕೇಂದ್ರವು ಸೂಚಿಸುವ ರೀತಿಯ ತೆರಿಗೆಯನ್ನು ವಿಧಿಸುವುದರಿಂದ ಹಲವು ರಾಜ್ಯಗಳಿಗೆ ಪ್ರತೀ ವರ್ಷವೂ ಕಡಿಮೆಯಾಗುವ ಆದಾಯ.) ಇದನ್ನು 2021-22ರವರೆಗೆ ಒಕ್ಕೂಟ ಸರ್ಕಾರವು ತುಂಬಿಕೊಡಬೇಕೆಂದು ನಿರ್ಧಾರವಾಗಿದೆ
ಈ ವರ್ಷ ಜಿಎಸ್‍ಟಿ ಸಂಗ್ರಹದಲ್ಲಿ ಭಾರೀ ಪ್ರಮಾಣದ ಕೊರತೆಯ ಕಾರಣದಿಂದ ರಾಜ್ಯಗಳಿಗೆ ಪರಿಹಾರ ನೀಡಬೇಕಾದ ಅಂಶಗಳ ಬಗೆಗಿನ ಬಿಕ್ಕಟ್ಟು ಇನ್ನೂ ಮುಂದುವರಿದಿದೆ. ಜಿಎಸ್‍ಟಿ ಆರಂಭವಾದಂದಿನಿಂದಲೂ ಇರುವ ಈ ಕೊರತೆಯು ನಿರಂತರವಾಗಿ ಮುಂದುವರಿದಿದೆ. ಪರಿಹಾರಗಳನ್ನು ಜಿಎಸ್‍ಟಿ ಸೆಸ್‍ಗಳ ನಿಧಿ ಸಂಗ್ರಹದಿಂದ ನೀಡಲಾಗಿದೆ. ಈ ಜಿಎಸ್‍ಟಿ ಸೆಸ್‍ಗಳು ಹಿಂದೆ ವಿವರಿಸಿದ ಒಕ್ಕೂಟ ಸರಕಾರದ ಮೇಲ್ತೆರಿಗೆಗಳಿಗಿಂತ ಭಿನ್ನವಾದ ತೆರಿಗೆಗಳಾಗಿವೆ. ಜಿಎಸ್‍ಟಿ ಮೇಲ್ತೆರಿಗೆಗಳನ್ನು ‘ಐಷಾರಾಮಿ ಅಥವಾ ಪಾಪದ’ ಸರಕುಗಳ ಮೇಲೆ ಹೆಚ್ಚುವರಿಯಾಗಿ ವಿಧಿಸಲಾಗುತ್ತದೆ. ಇವುಗಳಿಗೆ ತಮ್ಮದೇ ಆದ ಸಮರ್ಥನೆಗಳಿವೆ. ಪರಿಹಾರ ನಿಧಿಗಾಗಿ ಇವುಗಳನ್ನು ವಿಧಿಸಲಾಗುತ್ತಿಲ್ಲ. ಬದಲಾಗಿ ಪರಿಹಾರದ ಅಗತ್ಯಕ್ಕೆ ಹೊರತಾಗಿಯೂ ಈ ಮೇಲ್ತೆರಿಗೆಗಳು ಮುಂದುವರಿಯುತ್ತವೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಜಿಎಸ್‍ಟಿ ಕೊರತೆಗೆ ಪರಿಹಾರವು 2021-22ರಲ್ಲಿ ಕೊನೆಗೊಳ್ಳಲಿದೆಯಾದರೂ, ಮೇಲ್ತೆರಿಗೆಗಳು ಮಾತ್ರ ಆ ಬಳಿಕವೂ ಮುಂದುವರಿಯಲಿವೆ.

2019-20ರಲ್ಲಿ 95,444 ಕೋಟಿ ರೂ. ಸೆಸ್‍ಗಳನ್ನು ಸಂಗ್ರಹಿಸಲಾಗಿದೆ. ಈ ವರ್ಷವನ್ನು ಹೊರತುಪಡಿಸಿ ಮಿಕ್ಕೆಲ್ಲಾ ವರ್ಷಗಳಲ್ಲಿ ಹಿಂದಿನ ವರ್ಷ ಸಂಗ್ರಹವಾದ ಮೊತ್ತವನ್ನು ಮುಂಬರುವ ವರ್ಷಗಳಲ್ಲಿಯೂ ಸಂಗ್ರಹಿಸಲಾಗುವುದು ಮತ್ತು ಹಿಂದಿಗಿಂತ ಹೆಚ್ಚಳವಾಗುವ ಸಾಧ್ಯತೆಯೇ ಇರುತ್ತದೆ. “ದೇವರ ಕೈ ಚಳಕ”ವೂ ಸೇರಿದಂತೆ ಯಾವುದೇ ತುರ್ತು ಅಗತ್ಯಗಳಿಗೆ ಜಿಎಸ್‍ಟಿ ಮೇಲ್ತೆರಿಗೆಗಳ ರೂಪದಲ್ಲಿ ಹಣಕಾಸು ಯಂತ್ರದ ಖಾತರಿ ಇದ್ದೇ ಇರುತ್ತದೆ. ಈ ಕಾರಣದಿಂದಲೇ ಹಲವಾರು ರಾಜ್ಯಗಳು ಒಕ್ಕೂಟ ಸರಕಾರವು ಈ ಕೊರತೆಯನ್ನು ಪೂರ್ಣ ಪ್ರಮಾಣದಲ್ಲಿ 2022ರ ನಂತರವೂ ಖಾತರಿಯಾಗಿ ಮುಂದುವರಿಯಲಿರುವ ಸೆಸ್ ಆದಾಯದಿಂದ ಹೊತ್ತುಕೊಂಡು ರಾಜ್ಯಗಳಿಗೆ ನೀಡಬೇಕು ಎಂದು ಜಿಎಸ್‍ಟಿ ಮಂಡಳಿಯ ಹೊರಗೂ ಒಳಗೂ ವಾದಿಸುತ್ತಿವೆ. ಒಕ್ಕೂಟ ಸರಕಾರವು ಒಂದು ರೂಪಾಯಿಯ ಹೊರೆಯನ್ನೂ ಹೊರಬೇಕಾಗಿಲ್ಲ ಎಂಬುದು ನಿಮಗೆ ತಿಳಿದಿರಲಿ. ಆದರೆ, ರಾಜ್ಯಗಳ ಮೇಲೆ ಹೊರಿಸಲಾಗುತ್ತಿರುವ ಹೊರೆಯು ರಾಜ್ಯ ಸರಕಾರಗಳ ಕಾರ್ಯ ನಿರ್ವಹಣೆಯ ಮೇಲೆ, ಅವುಗಳ ಆರ್ಥಿಕ ಸ್ಥಿತಿಯ ಮೇಲೆ, ಅವುಗಳ ಅಭಿವೃದ್ಧಿ ಮತ್ತು ಜನಕಲ್ಯಾಣ ಕಾರ್ಯಕ್ರಮಗಳ ಮೇಲೆ ದುಷ್ಪರಿಣಾಮ ಬೀರುವ ಎಲ್ಲಾ ಸಾಧ್ಯತೆಗಳಿವೆ.
ಒಂದು ನಿದರ್ಶನ: ಕರ್ನಾಟಕದ ಉದಾಹರಣೆಯನ್ನು ನೋಡೋಣ
ಯಾವುದೇ ಪಕ್ಷದ ಸರಕಾರವಿದ್ದರೂ ಕರ್ನಾಟಕವು ಕಳೆದ 15 ವರ್ಷಗಳಲ್ಲಿ ಅತ್ಯುತ್ತಮವಾದ ವಿತ್ತೀಯ ಸಾಧನೆಯ ದಾಖಲೆ ಹೊಂದಿದೆ. ಪ್ರತೀ ವರ್ಷವೂ ಅದು ಆದಾಯ ಹೆಚ್ಚಳ, ಹಣಕಾಸು ಕೊರತೆ, ಮತ್ತು ನಿವ್ವಳ ಸಾಲಗಳ ಮರುಪಾವತಿ ಗುರಿಗಳನ್ನು ಸಾಧಿಸಿದೆ. ಇಂತಹ ಅತ್ಯುತ್ತಮ ಪರಂಪರೆ ಇರುವ ರಾಜ್ಯವನ್ನು ಅಪಾಯಕ್ಕೆ ತುತ್ತಾಗಬಹುದಾದ ಭವಿಷ್ಯದತ್ತ ತಳ್ಳಲಾಗುತ್ತಿದೆ.
2010-11 ಮತ್ತು 2013-14ರ ವರೆಗೆ (ಯುಪಿಎ ಅವಧಿ) ಕರ್ನಾಟಕವು 45,713 ಕೋಟಿ ರೂ.ಗಳ ಅನುದಾನ ಪಡೆಯಬೇಕೆಂದು ಹಣಕಾಸು ಆಯೋಗವು ಅಂದಾಜು ಮಾಡಿತ್ತು. ಆದರೆ, ವಾಸ್ತವವಾಗಿ ಅದು 47,036 ಕೋಟಿ ಅನುದಾನ ಪಡೆದಿತ್ತು. ಅಂದರೆ, ಹಣಕಾಸು ಆಯೋಗದ ಅಂದಾಜಿಗಿಂತ 1,323 ಕೋಟಿ ರೂ. (ಶೇಕಡಾ 2.9) ಹೆಚ್ಚು. 2014-15ರಿಂದ 2019-20ರ ನಡುವೆ, ಅಂದರೆ ಎನ್‍ಡಿಎ ಆಡಳಿತದ ಅವಧಿಯಲ್ಲಿ 13 ಮತ್ತು 14ನೇ ಹಣಕಾಸು ಆಯೋಗವು ಕರ್ನಾಟಕಕ್ಕೆ ನಿವ್ವಳ ಅನುದಾನವನ್ನು 2,03,039 ಕೋಟಿ ರೂ. ಎಂದು ಅಂದಾಜು ಮಾಡಿತ್ತಾದರೂ, ಸಿಕ್ಕಿದ್ದು ಮಾತ್ರ 1,65,963 ಕೋಟಿ ರೂ.ಗಳು ಮಾತ್ರ. ಅಂದರೆ, 37,076 ಕೋಟಿ ರೂ.ಗಳು ಕಡಿಮೆ- ಶೇ.18.2ರಷ್ಟು ಕಡಿಮೆ. 2019-20ಕ್ಕೆ ಈ ಆಯೋಗದ ಅಂದಾಜು ಪ್ರಕಾರ ಕರ್ನಾಟಕಕ್ಕೆ ಸಿಗಬೇಕಾಗಿದ್ದ ಮೊತ್ತ 48,768 ಕೋಟಿ ರೂ.ಗಳು. ವಾಸ್ತವವಾಗಿ ಸಿಕ್ಕಿದ್ದು 30,919 ಕೋಟಿ ರೂ.ಗಳು-ಅಂದರೆ ಆಯೋಗದ ಅಂದಾಜಿಗಿಂತ 17,849 ಕೋಟಿ ರೂ. ಕಡಿಮೆ. 2020-21ರಲ್ಲಿ ರಾಜ್ಯ ಬಜೆಟ್ ಕರ್ನಾಟಕದ ಪಾಲನ್ನು 28,591 ಕೋಟಿ ರೂ.ಗಳೆಂದು ಅಂದಾಜು ಮಾಡಿದೆ. ಆದರೆ, ರಾಜ್ಯಕ್ಕೆ ಕೇವಲ 15,017 ಕೋಟಿ ರೂ.ಗಳು ಮಾತ್ರ ಸಿಗಬಹುದು. ಇದು 2019-20ರ ಅಂದಾಜಿಗಿಂತ 33,591 ಕೋಟಿ ರೂ. ಕಡಿಮೆ. ಅಂದರೆ, ಇದು 39,806 ಕೋಟಿ ರೂ.ಗಳ. ಬಜೆಟ್ ಅಂದಾಜಿಗಿಂತ 24,689 ಕೋಟಿ ರೂ.ಗಳಷ್ಟು ಕಡಿಮೆಯಾಗುತ್ತದೆ.
ನಮ್ಮ ಅಗತ್ಯಗಳು ದೊಡ್ಡದಾಗುತ್ತಾ ಹೋದಂತೆ, ನಮ್ಮ ಹಕ್ಕಿನ ಪಾಲು ಅಪಾಯಕಾರಿ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ. ರಾಜ್ಯದ ಜಿಎಸ್‍ಟಿ ಕೊರತೆಯು 25-27 ಸಾವಿರ ಕೋಟಿ ರೂ.ಗಳಾಗುವ ನಿರೀಕ್ಷೆ ಇದೆ. ಇಂದಿನ ಸ್ಥಿತಿಯಲ್ಲಿ ಒಕ್ಕೂಟವು 18-19 ಸಾವಿರ ಕೋಟಿ ರೂ.ಗಳ ಕೊರತೆ ತುಂಬುವ ಭರವಸೆ ನೀಡುತ್ತಿದೆ. ಇದು ಬಜೆಟ್ ಲೆಕ್ಕಾಚಾರದ ಆದಾಯದಲ್ಲಿ 6-8 ಸಾವಿರ ಕೋಟಿ ರೂ.ಗಳ ಕೊರತೆಯ ಕಂದಕವನ್ನು ಮತ್ತೂ ಉಳಿಸುತ್ತದೆ. ಇದಕ್ಕಿಂತ ಮಿಗಿಲಾಗಿ ಈ ವರ್ಷ ಒಕ್ಕೂಟದ ಅನುದಾನದ ಅಂದಾಜು 31,579 ಕೋಟಿ ರೂ.ಗಳಾಗಿದ್ದರೆ, ವಾಸ್ತವವಾಗಿ ಅದು ಕೇವಲ 17,372 ಕೋಟಿ ರೂ.ಗಳನ್ನಷ್ಟೇ ಪಡೆಯಬಹುದು. ಅಂದರೆ, 14,198 ಕೋಟಿ ರೂ.ಗಳಷ್ಟು ಭಾರೀ ಪ್ರಮಾಣದ ಕಡಿತ.
ಕಳೆದ ವರ್ಷಕ್ಕೆ ಹೋಲಿಸಿದಾಗ ಕರ್ನಾಟಕವು ಹೆಚ್ಚುಕಡಿಮೆ 50,000 ಕೋಟಿ ರೂ.ಗಳಷ್ಟು ಕಡಿಮೆ ಹಣವನ್ನು ಒಕ್ಕೂಟದಿಂದ ಪಡೆಯಲಿದೆ. ಈ ವರ್ಷದ ಬಜೆಟ್ ಒಟ್ಟು 1,80,217 ಕೋಟಿ ರೂ.ಗಳ ಆದಾಯದ ಅಂದಾಜು ಮಾಡಿದೆ. ಇದು 1,14,758 ಕೋಟಿ ರೂ.ಗಳಷ್ಟಾಗಬಹುದು. ಅಂದರೆ, 65,459 ಕೋಟಿ ರೂ.ಗಳ ಆದಾಯ ಕೊರತೆ. ಈ ಕೊರತೆಯನ್ನು ನಿಭಾಯಿಸಲು ರಾಜ್ಯ ಸರಕಾರ ಭಾರೀ ಪ್ರಮಾಣದ ಸಾಲ ಎತ್ತಬೇಕಾದ ಅನಿವಾರ್ಯತೆಗೆ ಸಿಲುಕಿದೆ.
ದಶಕಗಳಿಂದ ಕರ್ನಾಟಕವು ಒಟ್ಟಾಗಿ 3.2 ಲಕ್ಷ ಕೋಟಿ ರೂ.ಗಳ ಸಾಲದ ಹೊರೆಯನ್ನು ಹೊತ್ತುಕೊಂಡಿದೆ. ಆದರೆ ಈಗ ಒಂದೇ ವರ್ಷದಲ್ಲಿ 90,000 ಕೋಟಿ ರೂ.ಗಳ ಸಾಲದ ಹೊರೆಯನ್ನು ಹೊತ್ತುಕೊಳ್ಳಬೇಕಾಗಿದೆ. ಅಂದರೆ, ಇಡೀ ದಶಕ ಕಾಲದ ಸಾಲದ ಪ್ರಮಾಣದಲ್ಲಿ ಅರ್ಧ ಒಂದೇ ವರ್ಷದಲ್ಲಿ! ಬೇರೆ ಮಾತುಗಳಲ್ಲಿ ಹೇಳಬೇಕಾದರೆ, ಒಕ್ಕೂಟ ಸರಕಾರದ ತೆರಿಗೆಯಲ್ಲಿ ರಾಜ್ಯದ ಪಾಲು ಮತ್ತು ಜಿಎಸ್‍ಟಿ ಕೊರತೆಯ ಪೂರ್ಣ ಪ್ರಮಾಣದ ಪರಿಹಾರ ನೀಡದೇ ಒಕ್ಕೂಟ ಸರ್ಕಾರವು ರಾಜ್ಯವನ್ನು ಬೃಹತ್ ಸಾಲದ ಶೂಲಕ್ಕೆ ತಳ್ಳುತ್ತಿದೆ. ಕರ್ನಾಟಕದಿಂದಲೇ ಆಯ್ಕೆಯಾದ ಮಾನನೀಯ ಹಣಕಾಸು ಸಚಿವರು ಹಣಕಾಸು ಆಯೋಗವು ರಾಜ್ಯಕ್ಕೆ

ನೀಡಲು ಶಿಫಾರಸ್ಸು ಮಾಡಿದ್ದ 5495 ಕೋಟಿ ರೂ.ಗಳ ವಿಶೇಷ ಅನುದಾನಗಳನ್ನು ಕರ್ನಾಟಕಕ್ಕೆ ಮಾತ್ರ ಕಡಿತ ಮಾಡುವುದರ ಮೂಲಕ ರಾಜ್ಯವನ್ನು ವಿಶೇಷ ಗೌರವಕ್ಕೆ ಆಯ್ಕೆ ಮಾಡಿದ್ದಾರೆ! ಆ ಮೂಲಕ ರಾಜ್ಯದ ಹಣಕಾಸು ಪರಿಸ್ಥಿತಿಯನ್ನು ಇನ್ನಷ್ಟು ಬಿಕ್ಕಟ್ಟಿಗೆ ದೂಡಿದ್ದಾರೆ. ಈ ಎಲ್ಲಾ ಸಾಲಗಳನ್ನು ಮುಂಬರುವ ವರ್ಷಗಳಲ್ಲಿ ಮರುಪಾವತಿ ಮಾಡಬೇಕಾಗುತ್ತದೆ. ಇದರಿಂದಾಗಿ ಒಕ್ಕೂಟ ಸರ್ಕಾರವು ಯೋಜಿಸಿ ಅನುಷ್ಟಾನ ಮಾಡುವುದಕ್ಕೆ ಮೊದಲೇ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಅನುಷ್ಟಾನ ಮಾಡಿ, ಅಗತ್ಯ ಸೇವೆಗಳ ನೀಡಿಕೆಯಲ್ಲಿ ಸರಾಸರಿಗಿಂತ ಬಹಳ ಮೇಲ್ಮಟ್ಟದ ಸಾಧನೆ ತೋರಿರುವ ಕರ್ನಾಟಕ ರಾಜ್ಯವು ಮುಂದೆ ಸಾಲ ಮರುಪಾವತಿ ಮಾಡುವ ಹೊಣೆಗಾರಿಕೆಯ ಕಾರಣದಿಂದ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡಲಾಗದ ಸ್ಥಿತಿಗೆ ತಲುಪಲಿದೆ. ಇದು ಕರ್ನಾಟಕ ರಾಜ್ಯವನ್ನು ಒಕ್ಕೂಟ ಸರ್ಕಾರವು ಎಲ್ಲಿಗೆ ನೂಕಿದೆ ಎಂಬುದನ್ನು ತೋರಿಸುತ್ತದೆ!
ಕರ್ನಾಟಕವು ಹಲವಾರು ಸವಾಲುಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಎದುರಿಸಬೇಕಾದ ಸ್ಥಿತಿಗೆ ತಲುಪಿದೆ. ಅಬಕಾರಿ ತೆರಿಗೆಯಂತಹ ತೆರಿಗೆಗಳನ್ನೂ ಹೆಚ್ಚಿಸುವ ಹಾಗಿಲ್ಲ. ಕಚ್ಚಾ ತೈಲದ ಬೆಲೆಯು ಈಚಿನ ಇತಿಹಾಸದಲ್ಲೇ ಅತ್ಯಂತ ಕಡಿಮೆ ಇದ್ದರೂ, ಒಕ್ಕೂಟ ಸರ್ಕಾರವು ಪೆಟ್ರೋಲ್, ಡೀಸೆಲ್‍ಗಳ ಮೇಲೆ ತೆರಿಗೆಯನ್ನು ಒಂದೇ ಬಾರಿಗೆ ವಿಪರೀತ ಹೆಚ್ಚಿಸಿರುವುದರಿಂದ ರಾಜ್ಯ ಸರಕಾರಗಳಿಗೆ ಇಂಧನಗಳ ಮೇಲಿನ ತೆರಿಗೆಯನ್ನು ಹೆಚ್ಚಿಸಿ ಸಂಪನ್ಮೂಲಗಳನ್ನು ಕ್ರೋಢೀಕರಿಸುವ ಅವಕಾಶವೇ ಇಲ್ಲದಾಗಿದೆ. ಇದಕ್ಕಿಂತ ದೊಡ್ಡ ವಿಷಯ ಎಂದರೆ, ಜಿಎಸ್‍ಟಿ ಕೊರತೆಯ ಪರಿಹಾರದ ಅವಕಾಶವು 2021-22ರಲ್ಲಿ ಕೊನೆಗೊಳ್ಳುತ್ತದೆ. ಆ ನಂತರದಲ್ಲಿ ಒಂದೇ ವರ್ಷದಲ್ಲಿ ಕರ್ನಾಟಕದ ಆದಾಯವು ವಿಪರೀತವಾಗಿ ಕುಸಿದು ಹೋಗಲಿದೆ.
ಅಂದರೆ ಸಾಲ ಮರುಪಾವತಿ ಹೊಣೆಗಾರಿಕೆ ಜೊತೆಗೆ, ಅನುದಾನ ಕಡಿತ ಮತ್ತು ಜಿಎಸ್‍ಟಿ ಪರಿಹಾರದ ಕಾಲಾವಧಿ ಮೀರುವ ಕಾರಣದಿಂದ ರಾಜ್ಯದ ಆರ್ಥಿಕ ಸಾಮರ್ಥ್ಯವು ಧ್ವಂಸಗೊಳ್ಳಲಿದೆ. ಮುಂದಿನ ವರ್ಷಗಳ ಪರಿಸ್ಥಿತಿಯನ್ನು ಕಣ್ಣಮುಂದೆ ತಂದುಕೊಂಡರೆ, ಸಾಲದ ಬಡ್ಡಿ ಮತ್ತು ಅಸಲನ್ನು ತೀರಿಸಿ, ಸಂಬಳಗಳು ಮತ್ತು ನಿವೃತ್ತಿ ವೇತನಗಳನ್ನು ಪಾವತಿ ಮಾಡಿ, ಸರಕಾರ ನಡೆಸಲು ಬೇಕಾದ ಅತ್ಯಗತ್ಯ ವೆಚ್ಚವನ್ನು ಭರಿಸಿದರೆ ಜನರ ಕಲ್ಯಾಣ ಮತ್ತು ಅಭಿವೃದ್ಧಿಗಾಗಿ ಉಳಿಯುವ ಹಣವಾದರೂ ಏನು? ತೀರಾ ಕಡಿಮೆಯಲ್ಲಿ ಕಡಿಮೆ!
ಧ್ವಂಸಗೊಂಡ ಹೊಸ ಗಣರಾಜ್ಯ ವ್ಯವಸ್ಥೆಯ ನಿರೀಕ್ಷೆ
ಪ್ರಸ್ತುತ ಸರಕಾರವು ಮೊಂಡುತನದ ನಿಲುವನ್ನು ತೆಗೆದುಕೊಂಡು ಜಿಎಸ್‍ಟಿ ಮಂಡಳಿ ಮತ್ತು ಸಂಸತ್ತಿಗೆ ನೀಡಿದ ಸಾರ್ವಭೌಮ ಭರವಸೆಯನ್ನು ಮುರಿದು ಆರ್ಥಿಕ ಹೊಣೆಗಾರಿಕೆಯನ್ನು ರಾಜ್ಯಗಳ ಮಡಿಲಿಗೆ ತಳ್ಳುತ್ತಿದೆ. ಅದೂ ಕೂಡಾ ರಾಜ್ಯಗಳು ಹಿಂದೆಂದೂ ಕಾಣದ ಮತ್ತು ಜಿಎಸ್‍ಟಿ ಆರಂಭವಾದಂದಿನಿಂದ ಎದುರಿಸುತ್ತಿರುವ ಹಣಕಾಸು ಬಿಕ್ಕಟ್ಟಿನ ಸಂದರ್ಭದಲ್ಲಿ. ಈಗ ರಾಜ್ಯಗಳು ಹಣಕಾಸು ಕ್ರೋಢೀಕರಣದಲ್ಲಿ ಮತ್ತು ತೆರಿಗೆಯ ವಿಷಯದಲ್ಲಿ ತಮಗಿದ್ದ ಸ್ವಾತಂತ್ರ್ಯವನ್ನೇ ಬಹಳಷ್ಟು ಕಳೆದುಕೊಂಡಿವೆ. ಸರಳವಾಗಿ ಹೇಳುವುದಾದರೆ, ಈ ವರ್ಷದಲ್ಲಿ ಎದುರಿಸುತ್ತಿರುವ ಹಣಕಾಸು ಸವಾಲುಗಳನ್ನು ಎದುರಿಸಲು ಬೇಕಾಗಿರುವ ಸಾಮಥ್ರ್ಯವು ಒಕ್ಕೂಟ ಸರಕಾರಕ್ಕೆ ಹೋಲಿಸಿದಾಗ ರಾಜ್ಯ ಸರಕಾರಗಳಲ್ಲಿ ತೀರಾ ಸೀಮಿತವಾಗಿದೆ. ಜಿಎಸ್‍ಟಿ ಪರಿಕಲ್ಪನೆ ಮತ್ತು ಅನುಷ್ಟಾನ ಸಂದರ್ಭದಲ್ಲಿ ರಾಜ್ಯಗಳ ಸ್ವಾಯತ್ತತೆಯ ನಾಶದ ಕುರಿತು ಇದ್ದ ಆತಂಕದ ಬಗ್ಗೆ ಚರ್ಚೆಗಳು ನಡೆದಿದ್ದವು. ನಮ್ಮಲ್ಲಿ ಕೆಲವರು ಈ ಆತಂಕಗಳ ವಿರುದ್ಧವಾಗಿ ವಾದಿಸಿ ನಮ್ಮ ರಾಜ್ಯಗಳು ಜಿಎಸ್‍ಟಿ ಜೊತೆಯಲ್ಲಿ ಬರುವಂತೆ ಮಾಡಿದ್ದೆವು. ದುರದೃಷ್ಟವಶಾತ್ ಒಕ್ಕೂಟ ಸರಕಾರದ ನಡವಳಿಕೆ ಮತ್ತು ದಬ್ಬಾಳಿಕೆಯ ಮನೋವೃತ್ತಿಯು ‘ಸಂದೇಹವಾದಿ’ಗಳೇ ಸರಿಯಾಗಿದ್ದರು ಎಂಬುದನ್ನು ಸಾಬೀತುಪಡಿಸುತ್ತಿದೆ. ಜಿಎಸ್‍ಟಿ ಮಂಡಳಿಯು ಹೊಸ ರೀತಿಯ ಗಣರಾಜ್ಯ ವ್ಯವಸ್ಥೆಯ ಒಂದು ಪ್ರಯೋಗವೆಂದು ಕೆಲವರಿಂದ ಪರಿಗಣಿತವಾಗಿತ್ತು. ಈ ಸರಕಾರವು ಅಂತಹಾ ಎಲ್ಲಾ ನಿರೀಕ್ಷೆಗಳನ್ನು ಹೊಸಕಿ ಹಾಕಿದೆ.
- ಕೃಷ್ಣ ಭೈರೇಗೌಡ

(ಹೊಸ ತಲೆಮಾರಿನ ರಾಜಕಾರಣಿಗಳಲ್ಲಿ ಕೃಷ್ಣ ಭೈರೇಗೌಡ ಅವರಿಗೆ ವಿಶಿಷ್ಟ ಸ್ಥಾನವಿದೆ. ಖಚಿತ ವಿಶ್ಲೇಷಣೆಗಳಿಗೆ ಅವರು ಹೆಸರುವಾಸಿ. ವಿಧಾನಮಂಡಲದಲ್ಲಿ ಪುರಾವೆಗಳೊಂದಿಗೆ ಚರ್ಚೆಗಿಳಿಯುವ ಅವರ ಶೈಲಿಯನ್ನು ಬರಹದಲ್ಲಿಯೂ ಕಾಣಬಹುದು. ಈ ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದಾಗ ಜಿಎಸ್‍ಟಿ ಮಂಡಳಿಯ ಸದಸ್ಯರೂ ಆಗಿದ್ದರು. ರಾಜ್ಯಗಳ ವಿತ್ತೀಯ ಸ್ವಾಯತ್ತತೆಯ ಮೇಲಾಗುತ್ತಿರುವ ಆಕ್ರಮಣದ ಕುರಿತು ಇಲ್ಲಿ ಬರೆದಿದ್ದಾರೆ.)
ಅನುವಾದ: ನಿಖಿಲ್ ಕೋಲ್ಪೆ


