ಭಾರತದಲ್ಲಿ ಸಂವಿಧಾನ ಸರ್ವೋಚ್ಚವಾಗಿದೆ. ಪ್ರಜಾಪ್ರಭುತ್ವದ ಮೂರು ಅಂಗಗಳು ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತವೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್. ಗವಾಯಿ ಬುಧವಾರ (ಜೂ.25) ಹೇಳಿದ್ದಾರೆ.
“ಕೆಲವರು ಸಂಸತ್ತು ಸರ್ವೋಚ್ಚ ಎನ್ನುತ್ತಿದ್ದಾರೆ. ಆದರೆ, ಸಂವಿಧಾನವೇ ಸರ್ವೋಚ್ಚ ಎಂಬುವುದು ನನ್ನ ಅಭಿಪ್ರಾಯ ಎಂದಿದ್ದಾರೆ.
ಕಳೆದ ತಿಂಗಳು 52ನೇ ಸಿಜೆಐ ಆಗಿ ಪ್ರಮಾಣ ವಚನ ಸ್ವೀಕರಿಸಿರುವ ನ್ಯಾಯಮೂರ್ತಿ ಗವಾಯಿ, ತಮ್ಮ ಹುಟ್ಟೂರು ಪೂರ್ವ ಮಹಾರಾಷ್ಟ್ರದ ಅಮರಾವತಿ ನಗರದಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಹೇಳಿಕೆ ನೀಡಿದ್ದಾರೆ.
ಪ್ರಜಾಪ್ರಭುತ್ವದ ಅಂಗಳಾದ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗದಲ್ಲಿ ಯಾವುದ ಸರ್ವೋಚ್ಚ ಎಂಬುದರ ಕುರಿತು ಯಾವಾಗಲೂ ಚರ್ಚೆ ನಡೆಯುತ್ತದೆ. ಸಂಸತ್ತು ಸರ್ವೋಚ್ಚ ಎಂದು ಹಲವರು ಹೇಳುತ್ತಾರೆ ಮತ್ತು ನಂಬುತ್ತಾರೆ. ಆದರೆ, ನನ್ನ ಪ್ರಕಾರ, ಭಾರತದ ಸಂವಿಧಾನವೇ ಸರ್ವೋಚ್ಚ. ಪ್ರಜಾಪ್ರಭುತ್ವದ ಮೂರು ಅಂಗಗಳು ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತವೆ” ಎಂದು ಸಿಜೆಐ ಹೇಳಿದ್ದಾರೆ.
ಸಂವಿಧಾನದ ‘ಮೂಲ ರಚನೆ’ ಸಿದ್ಧಾಂತದ ಅಡಿಪಾಯದ ಮೇಲೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಉಲ್ಲೇಖಿಸಿದ ಸಿಜೆಐ ಗವಾಯಿ, ಸಂಸತ್ತಿಗೆ ಸಂವಿಧಾನ ತಿದ್ದುಪಡಿ ಮಾಡುವ ಅಧಿಕಾರವಿದೆ. ಆದರೆ, ಅದು ಸಂವಿಧಾನದ ಮೂಲ ರಚನೆಯನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಸರ್ಕಾರದ ವಿರುದ್ಧ ಆದೇಶಗಳನ್ನು ಹೊರಡಿಸುವುದರಿಂದ ನ್ಯಾಯಾಧೀಶರು ಸ್ವತಂತ್ರರಾಗುವುದಿಲ್ಲ. ನ್ಯಾಯಾಧೀಶರು ಯಾವಾಗಲೂ ನಮಗೆ ಒಂದು ಕರ್ತವ್ಯವಿದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ನಾವು ನಾಗರಿಕರ ಹಕ್ಕುಗಳು, ಸಾಂವಿಧಾನಿಕ ಮೌಲ್ಯಗಳು ಮತ್ತು ತತ್ವಗಳ ರಕ್ಷಕರು. ನಮಗೆ ಕೇವಲ ಅಧಿಕಾರವಿಲ್ಲ, ಬದಲಾಗಿ ನಮ್ಮ ಮೇಲೆ ಕರ್ತವ್ಯವನ್ನು ಹೊರಿಸಲಾಗಿದೆ” ಎಂದು ಸಿಜೆಐ ಹೇಳಿದ್ದಾರೆ.
ಜನರು ತಮ್ಮ ತೀರ್ಪಿನ ಬಗ್ಗೆ ಏನು ಹೇಳುತ್ತಾರೆ ಅಥವಾ ಏನು ಅನುಭವಿಸುತ್ತಾರೆ ಎಂಬುದರ ಮೇಲೆ ನ್ಯಾಯಾಧೀಶರು ಮಾರ್ಗದರ್ಶನ ಪಡೆಯಬಾರದು. ನಾವು ಸ್ವತಂತ್ರವಾಗಿ ಯೋಚಿಸಬೇಕು. ಜನರು ಏನು ಹೇಳುತ್ತಾರೆ ಎಂಬುದು ನಮ್ಮ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯ ಭಾಗವಾಗುವುದಿಲ್ಲ ಎಂದು ತಿಳಿಸಿದ್ದಾರೆ.
ನಾನು ಯಾವಾಗಲೂ ನನ್ನ ತೀರ್ಪುಗಳು ಮತ್ತು ಕೆಲಸಗಳು ಮಾತನಾಡಲು ಬಿಡುತ್ತೇನೆ. ಸಂವಿಧಾನದಲ್ಲಿ ಪ್ರತಿಪಾದಿಸಲಾದ ಮೂಲಭೂತ ಹಕ್ಕುಗಳ ಪರವಾಗಿ ಯಾವಾಗಲೂ ನಿಲ್ಲುತ್ತೇನೆ ಎಂದು ಸಿಜೆಐ ಹೇಳಿದ್ದಾರೆ. ಭಾಷಣದಲ್ಲಿ ಅವರು ತಮ್ಮ ಕೆಲವು ತೀರ್ಪುಗಳನ್ನು ಉಲ್ಲೇಖಿಸಿದ್ದಾರೆ.
‘ಬುಲ್ಡೋಜರ್ ನ್ಯಾಯ’ದ ವಿರುದ್ಧದ ತಮ್ಮ ತೀರ್ಪಿನ ಬಗ್ಗೆ ಉಲ್ಲೇಖಿಸಿದ ಅವರು, ಆಶ್ರಯ ಪಡೆಯುವ ಹಕ್ಕು ಸರ್ವೋಚ್ಚವಾಗಿದೆ ಎಂದು ಹೇಳಿದ್ದಾರೆ.
ತನ್ನ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ ಸಿಜೆಐ, “ನಾನು ವಾಸ್ತುಶಿಲ್ಪಿಯಾಗಬೇಕೆಂದು ಬಯಸಿದ್ದೆ. ಆದರೆ, ನನ್ನ ತಂದೆ ನಾನು ವಕೀಲನಾಗಬೇಕೆಂದು ಬಯಸಿದ್ದರು. ನನ್ನ ತಂದೆಯೂ ವಕೀಲರಾಗಬೇಕೆಂದು ಬಯಸಿದ್ದರು. ಆದರೆ, ಅದು ಸಾಧ್ಯವಾಗಿಲ್ಲ. ಏಕೆಂದರೆ ಆ ಸಮಯದಲ್ಲಿ ಅವರನ್ನು ಸ್ವಾತಂತ್ರ್ಯ ಚಳವಳಿಯ ಭಾಗವಾಗಿ ಬಂಧಿಸಲಾಗಿತ್ತು ಎಂದಿದ್ದಾರೆ.


