ಮಹಾರಾಷ್ಟ್ರದಲ್ಲಿ ಈಗಾಲೇ ರಾಷ್ಟ್ರಪತಿ ಆಳ್ವಿಕೆ ಜಾರಿಯಲ್ಲಿದೆ. ಈ ಮಧ್ಯೆ ಶಿವಸೇನೆ ಸರ್ಕಾರ ರಚಿಸುವ ಹುಮ್ಮಸ್ಸಿನಲ್ಲಿದ್ದು, ಶತಪ್ರಯತ್ನ ನಡೆಸುತ್ತಿದೆ. ಈಗ ಶಿವಸೇನೆ, ಎನ್‌ಸಿಪಿ, ಕಾಂಗ್ರೆಸ್ ಪಕ್ಷಗಳು ಒಂದುಗೂಡಿ ಸರ್ಕಾರ ರಚಿಸುವ ಸಾಧ್ಯತೆ ದಟ್ಟವಾಗಿದೆ.
ಈಗಾಗಲೇ ಮೂರು ಪಕ್ಷಗಳು ಸಾಮಾನ್ಯ ಕನಿಷ್ಠ ನೀತಿ ( common minimum programme- cmp)ಗಳನ್ನು ರೂಪಿಸಿದ್ದು, ಶೀಘ್ರದಲ್ಲೇ ಅಂತಿಮಗೊಳ್ಳಲಿದೆ ಎಂದು ಎನ್‌ಸಿಪಿ ಹೇಳಿದೆ. ಮುಂದಿನ ಸಿಎಂ ಶಿವಸೇನೆ ಪಕ್ಷದಿಂದಲೇ ಆಗಲಿದ್ದಾರೆ. ಹೇಳಿದಂತೆ ನಡೆದುಕೊಳ್ಳುವುದು ಪಕ್ಷದ ಗೌರವ. ಸಿಎಂ ಸ್ಥಾನವನ್ನು ಶಿವಸೇನೆಗೆ ಬಿಟ್ಟು ಕೊಡಲಾಗುವುದು ಎಂದು ಎನ್‌ಸಿಪಿಯ ಮುಂಬೈ ಪ್ರದೇಶ ಅಧ್ಯಕ್ಷ ನವಾಬ್ ಮಲಿಕ್ ಹೇಳಿದ್ದಾರೆ.
`ಕಾಂಗ್ರೆಸ್ ಎರಡೂ ಪಕ್ಷಗಳಜತೆ ಸೇರಿ ಮೈತ್ರಿ ರಚಿಸುತ್ತದೆಯೋ ಅಥವಾ ಹೊರಗಿದ್ದುಕೊಂಡೇ ಬೆಂಬಲ ಸೂಚಿಸುತ್ತದೆಯೋ ಎಂಬುದು ಶೀಘ್ರದಲ್ಲೇ ನಿರ್ಧಾರವಾಗಲಿದೆ. ಇನ್ನೊಮ್ಮೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ದೆಹಲಿಯಲ್ಲಿ ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ’ ಎಂದವರು ತಿಳಿಸಿದ್ದಾರೆ.
ಮೈತ್ರಿಗೂ ಮೊದಲು ಅಧಿಕಾರ ಹಂಚಿಕೆಯ ಕುರಿತ ಸೂತ್ರ ಮತ್ತು ನಿಯಮಾವಳಿಗಳನ್ನು ಅಂತಿಮಗೊಳಿಸಬೇಕು. ಉದ್ಧವ್ ಠಾಕ್ರೆ ಅವರ ಜತೆ ಮಾತುಕತೆಯ ನಂತರ ಸೋನಿಯಾ ಗಾಂಧಿ ಮತ್ತು ಶರದ್ ಪವಾರ್ ಅವರು ಭೇಟಿಯಾಗಲಿದ್ದಾರೆ.
ಭಾನುವಾರದ ನಂತರ ರಾಜಕೀಯ ಚಟುವಟಿಕೆಗಳು ಮತ್ತಷ್ಟು ಗರಿಗೆದರಲಿವೆ. ಯಾಕಂದ್ರೆ ಸೋಮವಾರದೊಳಗೆ ಮೂರು ಪಕ್ಷಗಳು ನಿರ್ಧಾರ ತೆಗೆದುಕೊಳ್ಳಲಿದ್ದು, ಸರ್ಕಾರ ರಚನೆಯಾಗುವ ಸಾಧ್ಯತೆಯಿದೆ. ಸಾಮಾನ್ಯ ಕನಿಷ್ಠ ನೀತಿಯ ಫಾರ್ಮೂಲಾವನ್ನು ಮೂರು ಪಕ್ಷಗಳ ನಾಯಕರಿಗೆ ರವಾನಿಸಲಾಗಿದ್ದು, ಮುಂದೆ ಆಗುವ ಸಾಧ್ಯಾಸಾಧ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಲಾಗುವುದು ಎಂದು ಎನ್‌ಸಿಪಿ ಹೇಳಿದೆ.


