ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವ ಬಗ್ಗೆ ಇನ್ನೂ ಹಗ್ಗ-ಜಗ್ಗಾಟ ಮುಂದುವರೆದಿದೆ. ಶಿವಸೇನೆಗೆ ಹಕ್ಕು ಮಂಡನೆಗೆ ರಾಜ್ಯಪಾಲರು ನೀಡಿದ್ದ ಕಾಲಾವಧಿ ಮುಗಿದಿದೆ. ಹೀಗಾಗಿ ಚುನಾವಣೆಯಲ್ಲಿ ಮೂರನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಎನ್‌ಸಿಪಿ ಪಕ್ಷಕ್ಕೆ ರಾಜ್ಯಪಾಲರು ಸರ್ಕಾರ ರಚಿಸಲು ರಾತ್ರಿ ಎಂಟು ಗಂಟೆಯವರೆಗೆ ಗಡುವು ನೀಡಿದ್ದಾರೆ.
ಇನ್ನು ಎನ್‌ಸಿಪಿ ಮತ್ತು ಶಿವಸೇನೆ ಮೈತ್ರಿ ಮಾಡಿಕೊಳ್ಳುವುದು ಪಕ್ಕಾ ಆಗಿದ್ದು, ಕಾಂಗ್ರೆಸ್ ನಿರ್ಧಾರಕ್ಕಾಗಿ ಎನ್‌ಸಿಪಿ ಕಾಯುತ್ತಿದೆ. ನಿನ್ನೆಯಷ್ಟೇ ಎರಡು ಬಾರಿ ಕಾರ್ಯಕಾರಿ ಸಮಿತಿ ಸಭೆ ನಡೆಸಿದ ಬಳಿಕವೂ ಬಲಪಂಥೀಯ ಸಿದ್ಧಾಂತಗಳನ್ನು ಹೊಂದಿರುವ ಶಿವಸೇನೆಗೆ ಬೆಂಬಲ ನೀಡುವುದೋ, ಬೇಡವೋ ಎಂಬ ಬಗ್ಗೆ ಕಾಂಗ್ರೆಸ್ ಇನ್ನೂ ತೀರ್ಮಾನಿಸಲು ಸಾಧ್ಯವಾಗಿಲ್ಲ. ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಕೂಡ ಸೋನಿಯಾ ಗಾಂಧಿ ಅವರಿಗೆ ಕರೆ ಮಾಡಿ ಬೆಂಬಲ ಸೂಚಿಸುವಂತೆ ಮನವಿ ಮಾಡಿದ್ದಾರೆ. ಸದ್ಯದಲ್ಲೇ ನಿರ್ಧಾರವನ್ನು ತಿಳಿಸುತ್ತೇವೆ ಎಂದು ಸೋನಿಯಾ ತಿಳಿಸಿದ್ದಾರೆ.
ಇತ್ತ ಶಿವಸೇನೆ ಜತೆ ಸರ್ಕಾರ ರಚಿಸಲು ಯೋಜನೆಯಲ್ಲಿರುವ ಎನ್‌ಸಿಪಿ, ಕಾಂಗ್ರೆಸ್ ಬೆಂಬಲ ನೀಡಲಿ ಎಂದು ಪಟ್ಟು ಹಿಡಿದು ಕುಳಿತಿದೆ. ಈಗ ಮಹಾರಾಷ್ಟ್ರದಲ್ಲಿ ರಾಜಕೀಯ ಸ್ಥಿತಿ ಅತಂತ್ರವಾಗಿದೆ. ಯಾವ ಪಕ್ಷ ಸರ್ಕಾರ ರಚಿಸುತ್ತೋ ಎಂಬ ಕುತೂಹಲ ಮನೆ ಮಾಡಿದೆ. ಅಷ್ಟೇ ಅಲ್ಲದೇ ಯಾವ ಪಕ್ಷಗಳೂ ಸರ್ಕಾರ ರಚಿಸುವುದಿಲ್ಲ, ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಈಗಾಗಲೇ ಕಾಂಗ್ರೆಸ್ ನಾಯಕರು ಮತ್ತೊಂದು ಸುತ್ತಿನ ಮಾತುಕತೆ ನಡೆಸುತ್ತಿದ್ದಾರೆ. ಎನ್‌ಸಿಪಿ ನಾಯಕ ಶರದ್ ಪವಾರ್, ಸೋನಿಯಾ ಗಾಂಧಿ ಜತೆ ಕರೆ ಮಾಡಿ ಮಾತನಾಡಿದ್ದಾರೆ. ಒಟ್ಟಿನಲ್ಲಿ ಈಗ ಚೆಂಡು ಕಾಂಗ್ರೆಸ್ ಅಂಗಳದಲ್ಲಿದ್ದು, ಕಾಂಗ್ರೆಸ್‌ನ ಮುಂದಿನ ನಡೆಯತ್ತ ಎಲ್ಲರ ಚಿತ್ತ ನೆಟ್ಟಿದೆ.


