ರಾಜ್ಯಸಭೆಯ ಚುನಾವಣೆಗಳು ಘೋಷಣೆಯಾಗುತ್ತಿದ್ದಂತೆ ರಾಜಕೀಯ ಕೂಡ ಗರಿಗೆದರಿದ್ದು, ಗುಜರಾತ್‌ನಲ್ಲಿ ಇಬ್ಬರು ಕಾಂಗ್ರೆಸ್ ಶಾಸಕರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಅಲ್ಲಿ ಇದೇ ತಿಂಗಳು 19 ರಂದು 18 ಸ್ಥಾನಗಳಿಗೆ ರಾಜ್ಯಸಭಾ ಚುನಾವಣೆ ನಡೆಯಲಿದೆ.
ರಾಜ್ಯಸಭಾ ಚುನಾವಣೆಗೆ ಮುನ್ನವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಗುಜರಾತ್ ಕಾಂಗ್ರೆಸ್ ಶಾಸಕರು ಅಕ್ಷಯ್ ಪಟೇಲ್ ಮತ್ತು ಜಿತು ಚೌಧರಿ. ಗುಜರಾತ್ ವಿಧಾನಸಭಾ ಸ್ಪೀಕರ್ ರಾಜೇಂದ್ರ ತ್ರಿವೇದಿರನ್ನು ಭೇಟಿಯಾಗಿ ರಾಜೀನಾಮೆ ಪತ್ರ ನೀಡಿದ್ದಾರೆ. ಹೀಗಾಗಿ ಗುಜರಾತ್ ಕಾಂಗ್ರೆಸ್ ನಲ್ಲಿ ಮತ್ತೆ ರಾಜಕೀಯ ಬೇಗುದಿ ಶುರುವಾಗಿದೆ.
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ಸ್ಪೀಕರ್ ತ್ರಿವೇದಿ, ನಾನು ಕಾಂಗ್ರೆಸ್ ಶಾಸಕರ ರಾಜೀನಾಮೆ ಪತ್ರ ಅಂಗೀಕರಿಸಿದ್ದೇನೆ. ಪಟೇಲ್ ವಡೋದರಾದ ಕರ್ಜನ್ ಕ್ಷೇತ್ರದ ಶಾಸಕ ಮತ್ತು ಚೌಧರಿ ವಲ್ಸಾದ್ನ ಕಪ್ರದ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಮುಂದಿನ ನಿರ್ಧಾರದವರೆಗೂ ಇಬ್ಬರು ಶಾಸಕರಾಗಿ ಮುಂದುವರಿಯುವುದಿಲ್ಲ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಮಾರ್ಚ್ ನಲ್ಲಿ ಐವರು ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ್ದರು. ಇದೀಗ ಮತ್ತೆ ಇಬ್ಬರು ಶಾಸಕರು ರಾಜೀನಾಮೆ ಸಲ್ಲಿಸಿದ್ದಾರೆ. ಸದ್ಯ ಗುಜರಾತ್ ನ ವಿಧಾನಸಭೆಯ 182 ಮಂದಿ ಶಾಸಕರ ಪೈಕಿ ಆಡಳಿತರೂಢ ಬಿಜೆಪಿ 103, ಕಾಂಗ್ರೆಸ್ 66 ಶಾಸಕರನ್ನು ಹೊಂದಿದೆ.
ಇನ್ನು, ಗುಜರಾತ್ ನ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಬಿಜೆಪಿಯಿಂದ 3, ಕಾಂಗ್ರೆಸ್ ನಿಂದ ಇಬ್ಬರು ಅಭ್ಯರ್ಥಿಗಳು ಕಣಕ್ಕಿಳಿದಿದ್ಧಾರೆ. ಈ ಹೊತ್ತಲ್ಲೇ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದರ ಹಿಂದೆ ಬಿಜೆಪಿ ಕೈವಾಡ ಇದೆ ಎಂದು ಪಕ್ಷದ ನಾಯಕರು ಆರೋಪಿಸಿದ್ಧಾರೆ.
ಓದಿ: 18 ರಾಜ್ಯಸಭಾ ಸ್ಥಾನಗಳಿಗೆ ಜೂನ್ 19 ರಂದು ಚುನಾವಣೆ: ಚುನಾವಣಾ ಆಯೋಗ


