ನೂತನ ಶಾಸಕರಿಗೆ ಮೂರು ದಿನಗಳ ತರಬೇತಿ ಶಿಬಿರ ನಡೆಸಲು ಕೆಲವು ವಿವಾದಿತ ವ್ಯಕ್ತಿಗಳನ್ನು ಅಹ್ವಾನಿಸಲು ಸಿದ್ದತೆ ನಡೆದಿತ್ತು. ಇದಕ್ಕೆ ಸಾರ್ವಜನಿಕ ವಲಯದಿಂದ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆ ಆಹ್ವಾನಿತರ ಪಟ್ಟಿಯಲ್ಲಿದ್ದ ರವಿಶಂಕರ್ ಗುರೂಜಿ ಮತ್ತು ಡಾ.ಗುರುರಾಜ ಕರ್ಜಗಿ ಅವರ ಹೆಸರನ್ನು ಕೈ ಬಿಡಲಾಗಿದೆ.
ಸಾರ್ವಜನಿಕರ ಭಾರೀ ವಿರೋಧವೇ ಈ ಇಬ್ಬರ ಹೆಸರನ್ನು ಕೈಬಿಡಲು ಕಾರಣ ಎಂದು ಹೇಳಲಾಗಿದೆ. ಗುರುರಾಜ ಕರ್ಜಗಿ ಅವರ ಬದಲಾಗಿ ಮಾಜಿ ವಿಧಾನ ಪರಿಷತ್ ಸದಸ್ಯ ಮತ್ತು ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಅವರನ್ನು ಭಾಷಣಕ್ಕೆ ಆಹ್ವಾನಿಸಲಾಗಿದೆ.
ನೂತನ ಶಾಸಕರಿಗೆ ಮೂರು ದಿನಗಳ ತರಬೇತಿ ಶಿಬಿರವು ಜೂನ್ 26 ರಿಂದ ಜೂನ್ 29 ವರೆಗೆ ನೆಲಮಂಗಲದ ಕ್ಷೇಮ ವನದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ, ಮಹಮ್ಮದ್ ಕುಂಞ, ಮತ್ತು ವೀಣಾ ಅವರು ನೂತನ ಶಾಸಕರಿಗೆ ಪ್ರವಚನ ನೀಡಲಿದ್ದಾರೆ.
‘ರವಿಶಂಕರ್ ಗುರೂಜಿ ಅವರನ್ನು ಆಹ್ವಾನಿಸಿಯೇ ಇಲ್ಲ’ ಎಂದ ಸ್ಪೀಕರ್ ಖಾದರ್
ಶಿಬಿರಕ್ಕೆ ಆಹ್ವಾನಿತರ ಪಟ್ಟಿಯಲ್ಲಿದ್ದ ವಿವಾದಿತ ವ್ಯಕ್ತಿ ರವಿಶಂಕರ್ ಗುರೂಜಿ ಹಾಗೂ ಡಾ.ಗುರುರಾಜ ಕರ್ಜಗಿ ಅವರನ್ನು ಕೈಬಿಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿರುವ ಸ್ಪೀಕರ್ ಯುಟಿ ಖಾದರ್, ”ಆಧ್ಯಾತ್ಮಿಕ ಚಿಂತಕರಿಗೆ ಆಹ್ವಾನ ನೀಡಿದ್ದೇವೆ. ಎಲ್ಲಾ ಸಂಪನ್ಮೂಲ ವ್ಯಕ್ತಿಗಳು ಇನ್ನೂ ನಮಗೆ ಸಮ್ಮತಿ ಸೂಚಿಸಿಲ್ಲ. ಕೆಲವರು ಮಾತ್ರ ಒಪ್ಪಿಗೆ ನೀಡಿದ್ದಾರೆ. ಇನ್ನೂ ಯಾವುದೇ ತೀರ್ಮಾನವಾಗಿಲ್ಲ. ಈ ಬಗ್ಗೆ ಈಗಾಗಲೇ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣದಲ್ಲಿ ವ್ಯತಿರಿಕ್ತವಾದ ಮಾತುಗಳು ಕೇಳಿಬರುತ್ತಿದೆ. ತರಬೇತಿ ಶಿಬಿರವನ್ನು ನೋಡದೆ ಈಗಲೇ ಹೇಳಿಕೆಗಳನ್ನು ನೀಡುವುದು ಸರಿಯಲ್ಲ” ಎಂದು ಹೇಳಿದರು.
”ಆ ತರಬೇತಿ ಶಿಬಿರದಲ್ಲಿ ಏನಾದರೂ ಕುಂದುಕೊರತೆಗಳಿದ್ದರೆ, ಆ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದ್ದಲ್ಲಿ ಸರಿಪಡಿಸುತ್ತೇವೆ. ಈಗಲೇ ಪೂರ್ವಾಗ್ರಹ ಪೀಡಿತರಾಗಿ ಮಾತನಾಡುವುದು ತಪ್ಪು. ರವಿಶಂಕರ್ ಗುರೂಜಿಯವರನ್ನು ನಾನು ಭೇಟಿ ಮಾಡಿದ ತಕ್ಷಣ ನಾನು ತರಬೇತಿ ಶಿಬಿರಕ್ಕೆ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ ಎಂದು ಗುಲ್ಲೆಬ್ಬಿಸುವುದು ತಪ್ಪು. ನನಗೆ ಹಿಂದಿನಿಂದಲೂ ಅವರೊಂದಿಗೆ ಆತ್ಮೀಯ ಒಡನಾಡಿಯಾಗಿದ್ದೇನೆ. ಅಲ್ಲದೆ ಅವರು ಈಗ ಅಮೆರಿಕದಲ್ಲಿ ದೊಡ್ಡಮಟ್ಟದ ಕಾರ್ಯಕ್ರಮದ ಹಿಂದಿದ್ದಾರೆ. ದೇಶದಲ್ಲಿಯೇ ಇಲ್ಲದ ಅವರ ಬಗ್ಗೆ ಇಲ್ಲಸಲ್ಲದ ಮಾತನಾಡುವುದು ತಪ್ಪು” ಎಂದರು.
”ಅಲ್ಲದೇ ಈ ಬಗ್ಗೆ ನನ್ನಲ್ಲಿ ಸ್ಪಷ್ಟೀಕರಣ ಕೇಳದೆ ಹೇಳಿಕೆಗಳನ್ನು ಕೊಡುವವರಿಗೆ ನಾನೇನು ಹೇಳಲು ಹೋಗುವುದಿಲ್ಲ. ಆದ್ದರಿಂದ ತರಬೇತಿ ಕ್ಯಾಂಪ್ ಮುಗಿದ ಬಳಿಕ ಅದರ ಸಾಧಕ ಬಾಧಕಗಳು, ಸಲಹೆ ಸೂಚನೆಗಳನ್ನು ನೀಡಿದರೆ ಅದನ್ನು ಸ್ವಾಗತಿಸಲು ತಯಾರಿದ್ದೇವೆ” ಎಂದು ಯು.ಟಿ.ಖಾದರ್ ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಧಾರ್ಮಿಕ ಪ್ರತಿನಿಧಿಗಳಿಂದ ನೂತನ ಶಾಸಕರಿಗೆ ತರಬೇತಿ ಶಿಬಿರ ಕೈಬಿಡಿ: ಸ್ಪೀಕರ್ ಖಾದರ್‌ಗೆ ‘ಜಾಗೃತ ನಾಗರಿಕರ ಒಕ್ಕೂಟ’ದ ಆಗ್ರಹ


