Homeಕರ್ನಾಟಕಧಾರ್ಮಿಕ ಪ್ರತಿನಿಧಿಗಳಿಂದ ನೂತನ ಶಾಸಕರಿಗೆ ತರಬೇತಿ ಶಿಬಿರ ಕೈಬಿಡಿ: ಸ್ಪೀಕರ್ ಖಾದರ್‌ಗೆ 'ಜಾಗೃತ ನಾಗರಿಕರ ಒಕ್ಕೂಟ'ದ...

ಧಾರ್ಮಿಕ ಪ್ರತಿನಿಧಿಗಳಿಂದ ನೂತನ ಶಾಸಕರಿಗೆ ತರಬೇತಿ ಶಿಬಿರ ಕೈಬಿಡಿ: ಸ್ಪೀಕರ್ ಖಾದರ್‌ಗೆ ‘ಜಾಗೃತ ನಾಗರಿಕರ ಒಕ್ಕೂಟ’ದ ಆಗ್ರಹ

- Advertisement -
- Advertisement -

16ನೇ ವಿಧಾನಸಭೆಗೆ ಮೊದಲ ಬಾರಿಗೆ ನೂತನವಾಗಿ ಆಯ್ಕೆಯಾದ 70 ಶಾಸಕರಿಗೆ 3 ದಿನಗಳ ಕಾಲ ಏರ್ಪಡಿಸಿರುವ ತರಬೇತಿ ಶಿಬಿರಕ್ಕೆ ವಿವಾದಿತ ಹಿನ್ನೆಲೆಯ ಸ್ವಾಮೀಜಿ ಹಾಗೂ ಲೇಖಕರನ್ನು ಆಹ್ವಾನಿಸಲಾಗಿರುವ ನಿಟ್ಟಿನಲ್ಲಿ ಸ್ಪೀಕರ್‌ ಯುಟಿ ಖಾದರ್‌ ಅವರ ನಡೆಗೆ ನಾಡಿನಾದ್ಯಂತ ಪ್ರಜ್ಞಾವಂತರು ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ‘ಜಾಗೃತ ನಾಗರಿಕರು ಕರ್ನಾಟಕ’ ಒಕ್ಕೂಟ, ಶಾಸಕರ ತರಬೇತಿ ಶಿಬಿರದ ಕಲಾಪಗಳಿಂದ ಧಾರ್ಮಿಕ ಪ್ರತಿನಿಧಿಗಳ ಪ್ರವಚನವನ್ನು ಕೈ ಬಿಡಬೇಕೆಂದು ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್‌ ಅವರಿಗೆ ಪತ್ರ ಬರೆಯುವ ಮೂಲಕ ಆಗ್ರಹ ಮಾಡಿದ್ದಾರೆ.

‘ಜಾಗೃತ ನಾಗರಿಕರು ಕರ್ನಾಟಕ’ ಬರೆದ ಪತ್ರದ ಸಾರಾಂಶ ಇಲ್ಲಿದೆ..

ಹೊಸತಾಗಿ ಆಯ್ಕೆಯಾಗಿರುವ ರಾಜ್ಯ ಸರಕಾರದಲ್ಲಿ ವಿಧಾನಸಭಾಧ್ಯಕ್ಷರಾಗಿ ಆಯ್ಕೆಯಾಗಿರುವ ತಮಗೆ ಅಭಿನಂದನೆಗಳು. ಹೊಸತಾಗಿ ಆಯ್ಕೆಯಾಗಿರುವ  70 ವಿಧಾನಸಭಾ ಸದಸ್ಯರಿಗೆ ತಾವು ಕರ್ನಾಟಕ ವಿಧಾನಸಭೆಯ ವತಿಯಿಂದ ದಿನಾಂಕ ಜೂನ್‌ 26-27ರ ವರೆಗೆ ವಿಶೇಷ ತರಬೇತಿ ಶಿಬಿರ ಏರ್ಪಡಿಸುವ ಬಗ್ಗೆ ಪತ್ರಿಕಾ ಹೇಳಿಕೆಯನ್ನು ನೋಡಿದೆವು. ಹೊಸದಾಗಿ ಆಯ್ಕೆಯಾದ ಸದಸ್ಯರಿಗೆ ಸದಸ್ಯರ ಜವಾಬ್ದಾರಿ, ಸದನದಲ್ಲಿ ನಡವಳಿಕೆ, ಶಾಸಕರಾಗಿ ಜನತೆಗೆ ತೋರಿಸಬೇಕಾದ ಹೊಣೆಗಾರಿಕೆ ಇತ್ಯಾದಿಗಳ ಬಗ್ಗೆ ಸದನದ ಹಿರಿಯ ಸದಸ್ಯರ ಜೊತೆ ಸಂವಾದ ಏರ್ಪಡಿಸುವುದು ಸ್ವಾಗತಾರ್ಹ ಕ್ರಮವಾಗಿದೆ. ಆದರೆ ”ಹೊಸ ಶಾಸಕರಿಗೆ ಪ್ರೇರಣಾ ಭಾಷಣ ಮಾಡಲು ರವಿಶಂಕರ್‌ ಗುರೂಜಿ, ಡಾ.ವೀರೇಂದ್ರ ಹೆಗ್ಗಡೆ, ಡಾ.ಗುರುರಾಜ ಕರ್ಜಗಿ, ಬ್ರಹ್ಮ ಕುಮಾರಿ ಆಶಾ ದೀದಿ ಹಾಗೂ ಶಾಂತಿ ಪ್ರಕಾಶನದ ಮಹಮ್ಮದ್‌ ಕುಂಞಿ ಇವರನ್ನು ಕರೆಸುವ ಔಚಿತ್ಯ ಅರ್ಥವಾಗಲಿಲ್ಲ” ಎಂದು ಹೇಳಿದ್ದಾರೆ.

”ಹೊಸ ಶಾಸಕರಿಗೆ ಸಂವಿಧಾನದ ಆಶಯಗಳಾದ ಜಾತ್ಯಾತೀತತೆ, ಸಾಮಾಜಿಕ ನ್ಯಾಯ, ಪ್ರಜಾಪ್ರಭುತ್ವ, ಮತ್ತು ಸಮಾಜವಾದದ ಜೊತೆಗೆ ಸರ್ವೋದಯ, ಜಾತಿ, ಲಿಂಗ, ವರ್ಗ, ಪಂಗಡ,ಭಾಷೆ, ಸಂಸ್ಕೃತಿಗಳ ತಾರತಮ್ಯವಿಲ್ಲದೇ, ಸರ್ವರ ಸಂಕ್ಷೇಮಕ್ಕಾಗಿ ಶ್ರಮಿಸಬೇಕಾದ ಕರ್ತವ್ಯಗಳ ಪ್ರೇರಣೆ ಒದಗಿಸುವ ಪ್ರೇರೇಪಕರು ಬೇಕೇ ಹೊರತೂ, ಧಾರ್ಮಿಕ ಆಧ್ಯಾತ್ಮ ಪ್ರವಚನ ನೀಡುವವರಲ್ಲ. ಸರ್ವಧರ್ಮ ಸಮಭಾವ ಮತ್ತು ಮತ ನಿರಪೇಕ್ಷ ಆಡಳಿತ ಎಂದರೆ ಸರಕಾರದ ಎಲ್ಲ ಕಾರ್ಯಕ್ರಮಗಳಿಗೆ ವಿವಿಧ ಧರ್ಮದ ಪ್ರತಿನಿಧಿಗಳನ್ನು ಕರೆಸಿ ಪ್ರವಚನ ನೀಡುವುದು ಎಂದು ತಾವು ಭಾವಿಸಿದಂತಿದೆ. ಆದರೆ ಜಾತ್ಯಾತೀತತೆ ಮತ್ತು ಮತ ನಿರಪೇಕ್ಷತೆ ಎಂದರೆ ರಾಜಕೀಯದೊಡನೆ ಧರ್ಮವನ್ನು ಬೆರೆಸದೇ ದೂರ ಇಡುವುದು ಎಂಬುದನ್ನು ತಾವು ದಯವಿಟ್ಟು ಮನನ ಮಾಡಿಕೊಳ್ಳಬೇಕು” ಎಂದು ತಿಳಿಸಿದ್ದಾರೆ.

”ಶಾಸಕರಿಗೆ ಬೇಕಾದ ಧಾರ್ಮಿಕ, ಆಧ್ಯಾತ್ಮಿಕ, ಮಾರ್ಗದರ್ಶನ ಒದಗಿಸುವುದು ಶಾಸನ ಸಭೆಯ ಸಭಾಧ್ಯಕ್ಷರಾದ ತಮ್ಮ ಜವಾಬ್ದಾರಿಯಲ್ಲ. ಯಾರಾದರೂ ಶಾಸಕರು ವೈಯಕ್ತಿಕವಾಗಿ ಯಾವುದಾದರೊಂದು ಧಾರ್ಮಿಕ ಆಚರಣೆಯಲ್ಲಿ ಪಾಲ್ಗೊಳ್ಳುವುದು ಅವರ ವೈಯಕ್ತಿಕ ಆಯ್ಕೆ. ಆದರೆ ಶಾಸನ ಸಭೆಯನ್ನು ಪ್ರವೇಶಿಸುವ ಮೊದಲು ಅವರೆಲ್ಲ ಧಾರ್ಮಿಕ ಪ್ರೇರೇಪಣೆ ಪಡೆದು ಬರಬೇಕೆಂದು ತಾವು ಭಾವಿಸಿರುವುದು ಸಂವಿಧಾನದ ನಿಯಮಗಳಿಗೆ ವಿರುದ್ಧವಾಗಿದೆ. ಚುನಾಯಿತ ಪ್ರತಿನಿಧಿಗಳಿಗೆ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ತಾರತಮ್ಯರಹಿತ ಜನಸೇವೆ ಮಾಡುವ ಬಗ್ಗೆ ಹಿತವಚನ ನೀಡುವ ಅಗತ್ಯವಿದೆಯೇ ಹೊರತೂ ಧಾರ್ಮಿಕ ನೆಲೆಯ ಚಿಂತನೆಗಳಲ್ಲ” ಎಂದು ತಿಳಿಹೇಳಿದ್ದಾರೆ.

”ಕರ್ನಾಟಕದ ಜನ, ಕೇವಲ ಧಾರ್ಮಿಕ ವಿಷಯಗಳನ್ನು, ಕೋಮುವಾದದ ಚುನಾವಣೆಗಳನ್ನು ಮಾಡಿಕೊಂಡು ಜನರ ಅಭಿವೃದ್ದಿಯನ್ನು ಕಡೆಗಣಿಸಿ ಭ್ರಷ್ಟಾಚಾರದಲ್ಲಿ ಮುಳುಗಿದ್ದ ಬಿ.ಜೆ.ಪಿ.ಯನ್ನು ಸೋಲಿಸಿ ಕಾಂಗ್ರೆಸ್‌ ಪಕ್ಷವನ್ನು ಅತ್ಯಧಿಕ ಸ್ಥಾನಗಳ ಮೂಲಕ ಅಧಿಕಾರಕ್ಕೆ ತಂದಿದ್ದಾರೆ. ನೀವೂ ಸಹ ಧಾರ್ಮಿಕ ಗುರುಗಳ ಶಿಷ್ಯರಾಗಿ, ಅವರ ಮಾರ್ಗದರ್ಶನದಂತೆ ಗುಪ್ತ ಅಜೆಂಡಾಗಳನ್ನು ಜಾರಿಗೊಳಿಸುತ್ತ ಆಡಳಿತ ನಡೆಸಲಿ ಎಂದಲ್ಲ. ಉದ್ಯೋಗ, ಆರೋಗ್ಯ, ಸಾಮಾಜಿಕ ಭದ್ರತೆ, ದುರ್ಬಲರ ಸಂಕ್ಷೇಮ, ಸಾಂಸ್ಕೃತಿಕ ಬಹುಳತ್ವದ ಬಗ್ಗೆ, ವೈಜ್ಞಾನಿಕ ಮನೋಭಾವಗಳ ಬಗ್ಗೆ ಗೌರವ ಹೊಂದಿ ಕರ್ನಾಟಕದ ಸಮಗ್ರ ಅಭಿವೃದ್ದಿಯನ್ನು ಸಾಧಿಸಲಿ ಎಂದು ಜನರ ನಿರೀಕ್ಷೆ ಇದೆ. ಇದಕ್ಕೆ ಬೇಕಾದ ಪ್ರೇರಣೆ ಒದಗಿಸಲು ಸಂವಿಧಾನ ತಜ್ಞರು, ಅಭಿವೃದ್ದಿ ಚಿಂತಕರು,ರಾಜಕೀಯ ಆರ್ಥಿಕ ಸಾಮಾಜಿಕ ಶಾಸ್ತ್ರಜ್ಞರನ್ನು ಆಹ್ವಾನಿಸಿ ತರಬೇತಿ ಕೊಡಿಸಿರಿ” ಎಂದು ಹೇಳಿದ್ದಾರೆ.

”ತಾವು ಆಹ್ವಾನಿಸಿರುವ ವ್ಯಕ್ತಿಗಳು ಈ ಮೇಲಿನ ಯಾವ ಅಗತ್ಯಗಳನ್ನೂ ಪೂರೈಸುವ ಪರಿಣಿತರಲ್ಲ. ಕೆಲವರಂತೂ ಕೋಮುವಾದಿ ನೀತಿಗಳ ಸಮರ್ಥಕರು, ಹಾಗೂ ಸ್ವಂತದ ವ್ಯವಹಾರಗಳಲ್ಲಿ ವಿವಾದಾಸ್ಪದರೂ ಆಗಿದ್ದಾರೆ. ಇಂತಹವರ ಭಾಷಣಗಳು ಹೊಸ ಶಾಸಕರಿಗೆ ಯಾವ ಬಗೆಯ ಮಾದರಿಗಳನ್ನು ಒದಗಿಸಬಲ್ಲುದು ಎಂಬ ಬಗ್ಗೆ ನಾವು ಆತಂಕಿತರಾಗಿದ್ದೇವೆ. ಇದು ಅದರ ಕುರಿತ ನಮ್ಮ ಪ್ರತಿಭಟನೆಯ ಪತ್ರವಾಗಿದೆ. ಈ ಧಾರ್ಮಿಕ ಪ್ರತಿನಿಧಿಗಳ ಉಪನ್ಯಾಸಗಳನ್ನು ರದ್ದು ಮಾಡಬೇಕೆಂದು ಆಗ್ರಹಿಸುತ್ತೇವೆ. ನಿಮ್ಮ ಒಳ್ಳೆಯತನದ ಬಗ್ಗೆ ಗೌರವವಿದೆ. ಆದರೆ ತಮ್ಮ ಈ ತಪ್ಪು ನಡೆ ಜನತೆಗೆ ತಪ್ಪು ಸಂದೇಶ ಹೋಗಬಾರದೆಂಬ ಕಳಕಳಿ ಉಳ್ಳವರೂ ಆಗಿದ್ದೇವೆ” ಎಂದು ತಿಳಿಸಿದ್ದಾರೆ.

ಶಾಸಕರ ತರಬೇತಿ ಶಿಬಿರದ ಕಲಾಪಗಳಿಂದ ಧಾರ್ಮಿಕ ಪ್ರತಿನಿಧಿಗಳ ಪ್ರವಚನವನ್ನು ಕೈ ಬಿಡಬೇಕೆಂದು ನಮ್ಮ ಒಕ್ಕೊರಲ ಆಗ್ರಹವಾಗಿದೆ ಎಂದು ಡಾ.ಕೆ.ಮರುಳಸಿದ್ದಪ್ಪಡಾ.ಜಿ.ರಾಮಕೃಷ್ಣ, ಡಾ.ವಿಜಯಾ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಪ್ರೊ.ರಾಜೇಂದ್ರ ಚೆನ್ನಿ, ಕೆ.ಎಸ್.ವಿಮಲಾ, ಬಿ.ಶ್ರೀಪಾದ ಭಟ್, ಟಿ.ಸುರೇಂದ್ರ ರಾವ್, ಡಾ.ಬಂಜಗೆರೆ ಜಯಪ್ರಕಾಶ್, ಡಾ.ನಿರಂಜನಾರಾಧ್ಯ, ಡಾ.ಮೀನಾಕ್ಷಿ ಬಾಳಿ, ಡಾ.ಎನ್.ಗಾಯತ್ರಿ, ಡಾ.ವಸುಂಧರಾ ಭೂಪತಿ, ರುದ್ರಪ್ಪ ಹುನಗವಾಡಿ ಅವರು ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್‌ ಅವರಿಗೆ ಪತ್ರ ಬರೆದಿದ್ದಾರೆ.

ಇದನ್ನೂ ಓದಿ: ಶಿಬಿರದ ಸಂಪನ್ಮೂಲ ವ್ಯಕ್ತಿಗಳ ಕುರಿತು ಮರು ಪರಿಶೀಲಿಸಿ: ಸ್ಪೀಕರ್ ನಡೆಗೆ ಕಾಂಗ್ರೆಸ್ ಮಾಜಿ ಶಾಸಕರ ವಿರೋಧ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...