Homeಕರ್ನಾಟಕಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಅಭಿವೃದ್ಧಿ ಕುಂಠಿತವಾಗುತ್ತದೆಂಬುದು ಸತ್ಯವೇ?

ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಅಭಿವೃದ್ಧಿ ಕುಂಠಿತವಾಗುತ್ತದೆಂಬುದು ಸತ್ಯವೇ?

- Advertisement -
- Advertisement -

ಕರ್ನಾಟಕದ ಕಾಂಗ್ರೆಸ್ ಸರ್ಕಾರ ತನ್ನ ಚುನಾವಣಾ ಭರವಸೆಯಂತೆ ಜಾರಿಗೆ ತಂದಿರುವ ಐದು ಗ್ಯಾರಂಟಿಗಳ ಬಗ್ಗೆ ಜನ ಬೇರೆಬೇರೆ ಬಗೆ ಆತಂಕಗಳನ್ನು ವ್ಯಕ್ತಪಡಿಸ್ತಿದಾರೆ. ಅವುಗಳಲ್ಲಿ ಕೆಲವು ಹೀಗಿವೆ;

ಮೊದಲನೆಯದು, ಈ ಗ್ಯಾರಂಟಿಗಳಿಂದ ಜನರಿಗೆ ತಿಂಗಳಿಗಿಷ್ಟು ಅಂತ ಉಚಿತವಾಗಿ ಹಣ ಸಿಗುವುದರಿಂದ ಅಥವಾ ಹಣ ಉಳಿಯುವುದರಿಂದ ಜನ ದುಡಿಯೋದು ಬಿಟ್ಟು ಸೋಮಾರಿಗಳಾಗ್ತಾರೆ. ಎರಡನೆಯದು, ಹೀಗೆ ಸಾವಿರಾರು ಕೋಟಿ ಖರ್ಚು ಮಾಡೋದ್ರಿಂದ ಸರ್ಕಾರದ ಹಣ ಪೋಲಾಗಿ ಅಭಿವೃದ್ಧಿಗೆ ಹಣ ಇಲ್ಲದಾಗುತ್ತದೆ, ಕಡೆಗೆ ಕರ್ನಾಟಕ ಶ್ರೀಲಂಕಾ ತರ ಆಗ್ತದೆ. ಮೂರನೆಯದಾಗಿ, ನನ್ನ ಟ್ಯಾಕ್ಸ್ ಹಣ ಅಭಿವೃದ್ಧಿಗೇ ಹೊರತು ಬಡಜನರಿಗೆ ಫ್ರೀಯಾಗಿ ಕೊಡೋದಕ್ಕಲ್ಲ. ಈ ರೀತಿಯಾಗಿ ಮೋಹನದಾಸ್ ಪೈ ಟ್ವೀಟ್ ಕೂಡಾ ಮಾಡಿದ್ದು ಅದನ್ನ ಸಾವಿರಾರು ಮಂದಿ ಶೇರ್ ಮಾಡಿದ್ದೂ ಆಯ್ತು. ಮತ್ತೊಂದು ಕಡೆಯಿಂದ, ಪ್ರಧಾನಿ ಮೋದಿಯವರೇ ಕಾಂಗ್ರೆಸ್ ಗ್ಯಾರಂಟಿಗಳಿಂದ ದೇಶಾನೇ ದಿವಾಳಿಯಾಗುತ್ತೆ ಅಂತಾನೂ ಹೇಳಿದ್ದಾಯ್ತು.

ಹಾಗಾದ್ರೆ ಈ ರೀತಿಯ ಗ್ಯಾರಂಟಿಗಳು ನಿಜಕ್ಕೂ ರಾಜ್ಯವನ್ನು ದಿವಾಳಿ ಮಾಡುತ್ತವೆಯೇ ಅಥವಾ ರಾಜ್ಯದ ಉದ್ಧಾರ ಮಾಡುತ್ತವೆಯೇ? ಇದರ ಬಗ್ಗೆ ನಮ್ಮ ನಿಮ್ಮೆಲ್ಲರ ಜೊತೆ ಮುಖ್ಯವಾಗಿ ಕಾಂಗ್ರೆಸ್ ಕಾರ್ಯಕರ್ತರು, ಶಾಸಕರು ಮತ್ತು ಮಂತ್ರಿಗಳೂ ತಿಳಿದುಕೊಳ್ಳುವ ಅವಶ್ಯಕತೆಯಿದೆ. ಏಕೆಂದರೆ ಅವರುಗಳಲ್ಲೇ ಕೆಲವರು ಈ ಗ್ಯಾರಂಟಿ ಯೋಜನೆಗಳ ಸರಿತಪ್ಪುಗಳ ಬಗ್ಗೆ ಭಾರೀ ಗೊಂದಲದಲ್ಲಿದ್ದಾರೆ.

ಮೊದಲನೆಯದಾಗಿ, ನಮ್ಮ ದೇಶದಲ್ಲಿ ಜನರಿಗೆ ಈ ರೀತಿ ಹಣವನ್ನು ಹಂಚುವಂತಹ ಪರಿಸ್ಥಿತಿ ಇದೆಯೇ? ಈ ಅಂಕಿಅಂಶಗಳನ್ನ ಗಮನಿಸಿ.

2022-23ರಲ್ಲಿ ಈ ದೇಶದಲ್ಲಿ ಮಾರಾಟವಾಗಿರೋ ದ್ವಿಚಕ್ರ ವಾಹನಗಳ ಸಂಖ್ಯೆ 15.86 ಮಿಲಿಯನ್. ಅಂದರೆ 1 ಕೋಟಿ ಐವತ್ತೆಂಟು ಲಕ್ಷದ ಅರವತ್ತು ಸಾವಿರ ಟು ವೀಲರ್‌ಗಳು. ಅದೇ 2014-15ರಲ್ಲಿ ಮಿಲಿಯನ್ ಟು ವೀಲರ್‌ಗಳು, 2018-19ರಲ್ಲಿ 21.18 ಮಿಲಿಯನ್ ಟು ವೀಲರ್‌ಗಳು ಅಂದರೆ ಎರಡು ಕೋಟಿ ಹನ್ನೊಂದು ಲಕ್ಷದ ಎಂಬತ್ತು ಸಾವಿರ ಮಾರಾಟವಾಗಿದ್ವು.

ಅದೇ ರೀತಿ ಆರಂಭಿಕ ಹಂತದ ಸ್ಕೂಟರ್‌ಗಳ ಮಾರಾಟ (75 ರಿಂದ 125 ಸಿ.ಸಿ) 2018-19ರಿಂದ 2022-23ಕ್ಕೆ ಶೇ.28ರಷ್ಟು ಕಡಿಮೆಯಾಗಿವೆ. ಆರಂಭಿಕ ಹಂತದ ಮೋಟರ್ ಸೈಕಲ್‌ಗಳ ಮಾರಾಟ (75 ರಿಂದ 110 ಸಿ.ಸಿ) ಇದೇ ಅವಧಿಯಲ್ಲಿ 38%ರಷ್ಟು ಕಡಿಮೆಯಾಗಿದೆ.

ಮೋಹನದಾಸ್ ಪೈ

Society of Indian Automobile Manufacturers (SIAM) ಪ್ರಕಾರ 2022-23ರಲ್ಲಿ ಒಟ್ಟು 38 ಲಕ್ಷದ ತೊಂಬತ್ತು ಸಾವಿರ ಕಾರುಗಳು ಈ ದೇಶದಲ್ಲಿ ಮಾರಾಟವಾಗಿವೆ. ಆದರೆ, ಆರಂಭಿಕ ಹಂತದ ಸಣ್ಣ ಕಾರುಗಳು 2016-17ರಲ್ಲಿ 5,83,000 ಮಾರಾಟ ಆಗಿದ್ರೆ 2022-23ರಲ್ಲಿ 252,000 ಕಾರುಗಳು ಮಾತ್ರ ಮಾರಾಟವಾಗಿವೆ. ಇದೇ ಸಮಯದಲ್ಲಿ ಎಸ್‌ಯುವಿ ಕಾರುಗಳ ವ್ಯಾಪಾರ ಒಟ್ಟು ಪ್ಯಾಸೆಂಜರ್ ವೆಹಿಕಲ್‌ಗಳ ಮಾರಾಟಕ್ಕೆ ಹೋಲಿಸಿದರೆ ಶೇ. ಐವತ್ತಕ್ಕಿಂತ ಹೆಚ್ಚಿದೆ. ಇದರರ್ಥ ಆರಂಭಿಕ ಹಂತದ ಸಣ್ಣ ಕಾರುಗಳನ್ನ ಕೊಳ್ಳುವವರು ಕಡಿಮೆಯಾಗಿದ್ರೆ ಎಸ್‌ಯುವಿಗಳನ್ನು ಕೊಳ್ಳುವವರ ಸಂಖ್ಯೆ ಜಾಸ್ತಿಯಾಗಿದೆ.

2022ರಲ್ಲಿ 14.4 ಕೋಟಿ ಸ್ಮಾರ್ಟ್ ಫೋನುಗಳು ಭಾರತಕ್ಕೆ ಆಮದಾಗಿದ್ದು 2021ರಲ್ಲಿ ಇದು ಹತ್ತಿರಹತ್ತಿರ 16 ಕೋಟಿಯಷ್ಟಿತ್ತು. ಅದೇ ರೀತಿ ಎಲ್ಲಾ ಬಗೆಯವೂ ಸೇರಿದರೆ ಒಟ್ಟು 20 ಕೋಟಿ ಮೊಬೈಲ್ ಫೋನ್‌ಗಳು 2022ರಲ್ಲಿ ಆಮದಾಗಿದ್ದರೆ, 2021ರಲ್ಲಿ ಇದು 22.4 ಕೋಟಿಗಳಷ್ಟಿತ್ತು. ಇದೇ ಸಮಯದಲ್ಲಿ ಆಪಲ್ ಸಂಸ್ಥೆಯ ದುಬಾರಿ ಫೋನುಗಳು ಮಾರಾಟ ಜಾಸ್ತಿಯಾಗಿದೆ.

ರೈಲುಗಳಲ್ಲಿ ಸಂಚರಿಸಿದವರ ಸಂಖ್ಯೆ 2018-19ರಲ್ಲಿ ಸುಮಾರು 800 ಕೋಟಿ ಇದ್ರೆ 2022-23ರಲ್ಲಿ ಇದು 640 ಕೋಟಿಗೆ ಇಳಿದಿತ್ತು. ಇದು 2018-19ಕ್ಕಿಂತ 24% ರಷ್ಟು ಕಡಿಮೆ.

FMCG (Fast-moving consumer goods) ಮಾರುಕಟ್ಟೆಯ ಅತಿ ದೊಡ್ಡ ಕಂಪನಿಯಾದ ಹಿಂದೂಸ್ತಾನ್ ಯೂನಿಲಿವರ್‌ನ ಅಂಕಿಅಂಶಗಳ ಪ್ರಕಾರ FMCG ಮಾರ್ಕೆಟ್ ವಾಲ್ಯೂಮ್ ಕಡೆಯ ಒಂದೂವರೆ ವರ್ಷಗಳಿಂದ ಕಡಿಮೆಯಾಗ್ತಾ ಇದೆ. ಗ್ರಾಮೀಣ ಭಾಗದ FMCG ಮಾರ್ಕೆಟ್ ವಾಲ್ಯೂಮ್ ಇನ್ನೂ ವೇಗವಾಗಿ ಕಡಿಮೆಯಾಗ್ತಾ ಇದೆ. FMCG ಅಂದರೆ ಪೇಸ್ಟು, ಸೋಪು, ಸೇರಿದಂತೆ ಅಗತ್ಯವಾದ ಎಲ್ಲಾ ದಿನಬಳಕೆ ವಸ್ತುಗಳ ಮಾರಾಟ ಕಡಿಮೆಯಾಗಿದೆ.

ಈಗ ಎಲ್ಲಾ ಅಂಕಿಅಂಶಗಳು ಸರಳವಾಗಿ ಕಟ್ಟಿಕೊಡುವ ಚಿತ್ರಣವೇನೆಂದರೆ, ನಮ್ಮ ಮಧ್ಯಮ, ಕೆಳ ಮಧ್ಯಮ ವರ್ಗ ಮತ್ತು ಬಡವರಿಗೆ ಅಗತ್ಯ ಇರೋ ಇಂಥಾ ವಸ್ತುಗಳ ಮಾರಾಟ ಕಡಿಮೆಯಾಗಿದೆ ಮತ್ತು ಮೇಲ್ ಮಧ್ಯಮ ವರ್ಗ ಹಾಗೂ ಶ್ರೀಮಂತರು ಕೊಳ್ಳುವ ವಸ್ತುಗಳ ವ್ಯಾಪಾರ ಜಾಸ್ತಿಯಾಗಿದೆ. ಇದರ ಅರ್ಥ ಕಳೆದ ಐದಾರು ವರ್ಷಗಳಿಂದ ಮಧ್ಯಮ, ಕೆಳಮಧ್ಯಮ ಹಾಗೂ ಬಡವರು ಕೊಳ್ಳುವ ಶಕ್ತಿ ಕಡಿಮೆಯಾಗಿದೆ ಮತ್ತು ಮೇಲ್ ಮಧ್ಯಮ ಹಾಗೂ ಶ್ರೀಮಂತರ ಕೊಳ್ಳುವ ಶಕ್ತಿ ಇನ್ನೂ ಜಾಸ್ತಿಯಾಗಿದೆ ಎಂದು. ಬಡವರ, ಕೆಳ ಹಾಗೂ ಮಧ್ಯಮ ವರ್ಗದವರ ಸಂಪಾದನೆ ಕಡಿಮೆಯಾಗಿದೆ. ಇದೇ ಸಮಯದಲ್ಲಿ ಶ್ರೀಮಂತರ, ಮೇಲ್ ಮಧ್ಯಮ ವರ್ಗದ ಸಂಪಾದನೆ ಜಾಸ್ತಿಯಾಗಿದೆ. ಕೊರೊನಾದಂತ ಸಮಯದಲ್ಲೂ ಈ ದೇಶದಲ್ಲಿ ಐವತ್ತು ಜನ ಹೊಸಾ ಬಿಲಿಯನೇರ್‌ಗಳು ಹುಟ್ಕೊಂಡಿದ್ದು ನಮ್ಮ ಆರ್ಥಿಕ ನೀತಿಗಳು ಹೆಚ್ಚು ಶ್ರೀಮಂತರಿಗೆ ಸಹಾಯ ಮಾಡ್ತಿರೋದನ್ನ ತೋರಿಸುತ್ತದೆ.

ಈ ದೇಶದಲ್ಲಿ ನೂರು ಕೋಟಿಗಿಂತ ಹೆಚ್ಚು ಜನಸಂಖ್ತೆ ಮಧ್ಯಮ, ಕೆಳ ಮಧ್ಯಮ ಮತ್ತು ಬಡವರ್ಗದಲ್ಲಿ ಇದೆ. ಈ ಬಹುಸಂಖ್ಯಾತರ ಸಂಪಾದನೆ ಕಡಿಮೆ ಆಗಿದೆ. ಅದರಿಂದ ಅವರ ಕೊಳ್ಳುವ ಶಕ್ತಿ ಮತ್ತು ಖರ್ಚು ಮಾಡುವ ಶಕ್ತಿಯೂ ಕಡಿಮೆಯಾಗಿದೆ.

ಇದು ಸಾಮಾನ್ಯ ಜನರೇ ಹೆಚ್ಚು ಓಡಾಡುವ ರೈಲು ಪ್ರಯಾಣದ ಸಂಖ್ಯೆಯಲ್ಲೂ ಕಂಡುಬರ್ತಿದೆ. ಯಾವುದೇ ದೇಶದಲ್ಲಿ ಬಹುಸಂಖ್ಯಾತ ಜನರ ಕೊಳ್ಳುವ ಶಕ್ತಿ ಕಡಿಮೆಯಾದಾಗ ಅದು ಅವರ ಕಷ್ಟ ಮಾತ್ರವಲ್ಲದೆ ಒಟ್ಟಾರೆ ದೇಶದ ಅರ್ಥವ್ಯವಸ್ಥೆಗೇ ಪೆಟ್ಟು ಬೀಳುತ್ತದೆ. ಕಾರಣ, ಒಟ್ಟು ಬಳಕೆಯ ವೆಚ್ಚ ಅಂದರೆ consumption expenditure ಅನ್ನೋದು ಬಹುತೇಕ ಒಟ್ಟು ಎಕಾನಮಿಯ ಗಾತ್ರದ ಶೇ.60ರಷ್ಟು ಬಳಕೆಯ ವೆಚ್ಚದಿಂದ ಬರ್ತದೆ.

ಇಲ್ಲೇ ನೋಡಿ, ಟು ವೀಲರ್‌ಗಳ ವ್ಯಾಪಾರ ಕಡಿಮೆಯಾಗಿರುವುದು ಟು ವೀಲರ್ ಕೊಳ್ಳಲಾಗದ ಬಡವರಿಗೆ ಮಾತ್ರ ಸಮಸ್ಯೆ ಅಲ್ಲ, ಟು ವೀಲರ್ ಉತ್ಪಾದಿಸುವ ದೊಡ್ಡ ಕಂಪನಿಗಳಿಗೂ ಏಟು, ಅವುಗಳಿಗೆ ಸ್ಪೇರ್ ಪಾರ್ಟ್ ತಯಾರಿಸುವ ಸಣ್ಣ ಮತ್ತು ಮಧ್ಯಮ ಗಾತ್ರದ ಕಂಪನಿಗಳ ಸಂಪಾದನೆಗೆ ಏಟು. ಇದರಿಂದ ಅಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಏಟು. ಒಟ್ಟಾರೆ ಎಕಾನಮಿಗೇ ದೊಡ್ಡ ಸವಾಲು.

ಈ ಕಾರಣಗಳಿಗಾಗಿಯೇ ಇಂತಹ ಸಮಯಗಳಲ್ಲಿ ಜನರ ಕೈಗೆ ಹಣ ಸಿಗುವ ಹಾಗೆ ಮಾಡಿ ಅವರ ಕೊಳ್ಳುವ ಶಕ್ತಿ ಹೆಚ್ಚಾಗುವಂತೆ ಮಾಡಿದರೆ ಅದರಿಂದ ದೇಶದ ಅರ್ಥವ್ಯವಸ್ಥೆಯನ್ನು ರಿವೈವ್ ಮಾಡಬಹುದೆಂದು ಹಲವು ಅರ್ಥಶಾಸ್ತ್ರಜ್ಞರು ಹೇಳುವ ಮಾತು.

ಇದನ್ನೇ ಸಮಗ್ರವಾಗಿ ಅವಲೋಕಿಸಿದಾಗ, ಈ ದೇಶದಲ್ಲಿ ಕ್ರಮೇಣವಾಗಿ ಮಧ್ಯಮ, ಕೆಳ ಮಧ್ಯಮ ಮತ್ತು ಬಡವರಿಗೆ ಸಂಪಾದನೆ ಕಡಿಮೆಯಾಗ್ತಾ ಇರೋದ್ರಿಂದ, ಅವರ ವೈಯಕ್ತಿಕ ಕಷ್ಟ ಮತ್ತು ಇದರಿಂದ ದೇಶಕಾಗ್ತಿರೋ ಕಷ್ಟ-ನಷ್ಟದಿಂದ ಪಾರುಮಾಡುವ ಒಂದು ತಕ್ಷಣದ ದಾರಿ ಅಂದ್ರೆ ಜನಸಾಮಾನ್ಯರ ಕೈಗೆ ಹಣ ಸಿಗುವಂತೆ ಮಾಡುವುದು ಮತ್ತು ಅದರ ಮೂಲಕ ಅವರ ಕೊಳ್ಳುವ ಶಕ್ತಿ ಜಾಸ್ತಿ ಮಾಡುವುದು.

ಈ ಒಂದು ಎಕನಾಮಿಕ್ ಆಂಗಲ್‌ನಿಂದ ನೋಡಿದಾಗ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳ ಮೂಲಕ ಕರ್ನಾಟಕದ ಬಹುಸಂಖ್ಯಾತರ ಕೈಗೆ ಹಣ ಸಿಗುವಂತೆ ಮಾಡುವುದು ಅತ್ಯವಶ್ಯಕ ಎಂದು ಮೇಲ್ನೋಟಕ್ಕೇ ಗೊತ್ತಾಗುತ್ತದೆ.

ಹಾಗಾದ್ರೆ ಹೀಗೆ ಉಚಿತವಾಗಿ ಹಣ ಕೊಡೋದ್ರಿಂದ ಜನ ಸೋಮಾರಿಗಳಾಗಲ್ವ ಅನ್ನುವ ಪ್ರಶ್ನೆ ಎದ್ದಿದೆ! ಈ ಪ್ರಶ್ನೆಯಲ್ಲಿ ಎರಡು ಅಂಶಗಳಿವೆ. ಒಂದು, ಉಚಿತ ಹಣ ಸಿಕ್ಕಿ ಜನ ದುಡಿಮೆ ಬಿಟ್ಟು ಸೋಮಾರಿಗಳಾದ್ರೆ, ಅದರಿಂದ ಒಟ್ಟು ದೇಶದ ಎಕಾನಮಿಗೇ ಏಟಾಗ್ತದೆ, ಇದು ನಂತರ ದೇಶದ ಅಥವಾ ರಾಜ್ಯದ ಅಭಿವೃದ್ಧಿಗೂ ತೊಂದರೆ ಮಾಡುತ್ತದೆಂಬುದು; ಮತ್ತೊಂದು, ಹಣ ಉಚಿತವಾಗಿ ಪಡೆದವರು ಕೆಲಸ ಮಾಡದೆ ಆರಾಮಾಗಿರ್ತಾರೆ, ಆದ್ರೆ ನಾವು ಮಾತ್ರ ಕಷ್ಟಪಟ್ಟು ದುಡಿತಾನೇ ಇರ್ಬೇಕು. ಇದೆಷ್ಟು ಸರಿ ಎಂಬುದು.

ಈಗಿನ ಗ್ಯಾರಂಟಿಗಳ ಲೆಕ್ಕದಲ್ಲಿ ಹೀಗೆ ಒಂದು ಸ್ವಲ್ಪ ಹಣ ಅಂದರೆ, ಒಂದು ಕುಟುಂಬಕ್ಕೆ ಸರಾಸರಿಯಾಗಿ ಅಂದಾಜು ತಿಂಗಳಿಗೆ ನಾಲ್ಕೈದು ಸಾವಿರ ಹಣ ಸಿಕ್ಕಿದ್ರೆ ಜನ ದುಡಿಯೋದು ಬಿಟ್ಟು ಸೋಮಾರಿಗಳಾಗ್ತಾರಾ? 2014ರ ಹೊತ್ತಿಗೇನೆ ಈ ಪ್ರಪಂಚದ 119 ದೇಶಗಳಲ್ಲಿ ಜನರಿಗೆ ಉಚಿತವಾಗಿ ಹಣ ಕೊಡುವ ಒಂದಲ್ಲ ಒಂದು ರೀತಿಯ ಯೋಜನೆಗಳು ಜಾರಿಯಲ್ಲಿದ್ವು. ಬಹುತೇಕ ದೇಶಗಳಲ್ಲಿ ಯಾವುದೇ ಷರತ್ತು ಇಲ್ಲದೆ ಹಣ ಕೊಡುವ ಯೋಜನೆಗಳೂ ಇದರಲ್ಲಿ ಸೇರಿವೆ.

ಈ ಎಲ್ಲ ದೇಶಗಳ ಯೋಜನೆಗಳ ಪರಿಣಾಮದ ಅಧ್ಯಯನಗಳು ಸ್ಪಷ್ಟವಾಗಿ ತೋರಿಸಿರೋದು ಏನಂದ್ರೆ, ಹಣ ಉಚಿತವಾಗಿ ಪಡೆದ ಜನರು ಬಹುತೇಕ ಯಾರೂ ಸೋಮಾರಿಗಳಾಗಿಲ್ಲ. ಸೋಮಾರಿಗಳಾಗುವುದರ ಬದಲು ಉಚಿತವಾಗಿ ಹಣ ಪಡೆದು ಭರವಸೆಯಿಂದ ಮತ್ತು ಆತ್ಮಸ್ಥೈರ್ಯದಿಂದ ಅವರುಗಳು ಇನ್ನೂ ಹೆಚ್ಚು ದುಡಿಮೆ ಮಾಡಿ ತಮ್ಮ ಜೀವನಮಟ್ಟವನ್ನು ಮತ್ತಷ್ಟು ಸುಧಾರಣೆ ಮಾಡಿಕೊಳ್ಳುವ ಪ್ರಯತ್ನ ಮಾಡಿದಾರೆ ಅಂತ.

ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞೆ ಎಸ್ತರ್ ಡುಫ್ಲೋರವರ ತಂಡ ಘಾನಾ ದೇಶದಲ್ಲಿ ಬಡವರಿಗೆ ಹೀಗೆ ಉಚಿತ ಹಣ ಕೊಡುವ ಯೋಜನೆಯ ಪರಿಣಾಮದ ಬಗ್ಗೆ ನೇರವಾಗಿ ಅಲ್ಲಿನ ಜನಗಳ ಜತೆ ಭಾಗವಹಿಸಿ ಅಧ್ಯಯನ ಮಾಡಿ, ಜನರು ಉಚಿತ ಸಿಕ್ಕಷ್ಟೂ ಹೆಚ್ಚು ದುಡಿದ ಮತ್ತು ದುಡಿಯುವ ಇಚ್ಛೆ ತೋರಿಸಿದ್ದನ್ನು ತಮ್ಮ ‘Good economics for hard times’ ಪುಸ್ತಕದಲ್ಲಿ ದಾಖಲಿಸಿದಾರೆ. ಇಂಡೋನೇಶಿಯ ಸೇರಿದಂತೆ ಇತರ ಹಲವು ದೇಶಗಳ ಅಧ್ಯಯನದಲ್ಲೂ ಕೂಡ ಉಚಿತ ಹಣದ ಕೊಡುಗೆ ಜನರನ್ನು ಸೋಮಾರಿಗಳನ್ನಾಗಿಸಿಲ್ಲ ಅನ್ನೋದನ್ನ ತಿಳಿಸಿಕೊಟ್ಟಿದ್ದಾರೆ.

ಇಂತಹ ಅಧ್ಯಯನಗಳು, ನಮ್ಮ ರಾಜ್ಯಗಳಲ್ಲಿ ಕಲ್ಯಾಣ ಯೋಜನೆಗಳಿಂದ ಜನ ಸೋಮಾರಿಗಳಾಗ್ತಾರಾ? ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಮೋದಿಯವರೇ ಹೇಳಿದಂತೆ ದೇಶ ದಿವಾಳಿಯಾಗುತ್ತೆ ಅನ್ನುವ ಮಾತಿಗೆ ಸಮರ್ಥ ಉತ್ತರಗಳನ್ನು ನೀಡುತ್ತವೆ; ಖಂಡಿತಾ ಇಲ್ಲ.

ಎರಡನೆಯದು, ಈ ಯೋಜನೆಗಳಿಂದ ಸರ್ಕಾರದ ಹಣ ಸಿಕ್ಕಾಪಟ್ಟೆ ಪೋಲಾಗಿ, ಅದರಿಂದ ಸಾಲ ಜಾಸ್ತಿ ಆಗಿ ಅಭಿವೃದ್ದಿಗೆ ದುಡ್ಡಿಲ್ಲದಾಗಿ ಕರ್ನಾಟಕ ಶ್ರೀಲಂಕಾ ಆಗೋಗತ್ತೆಂಬುದು; ಹೀಗೆ ಉಚಿತ ಕೊಡುಗೆಗಳನ್ನ ಜನಕ್ಕೆ ಕೊಡೋದ್ರಿಂದ ಒಂದು ರಾಜ್ಯದ ಅಭಿವೃದ್ಧಿಗೆ ತೊಂದರೆಯಾಗುತ್ತೆ ಅನ್ನುವ ಹಾಗಿದ್ದರೆ ತಮಿಳುನಾಡು ಅಭಿವೃದ್ಧಿ ಆಗುವ ಹಾಗೇ ಇರಲಿಲ್ಲ ಅಲ್ಲವೇ? ಏಕೆಂದರೆ ಈ ರೀತಿಯ ವೆಲ್‌ಫೇರ್ ಸ್ಕೀಮುಗಳನ್ನ ಹೆಚ್ಚಾಗಿ ಶುರುಮಾಡಿದ್ದೇ ತಮಿಳುನಾಡು. ಆದರೆ, ಇವತ್ತಿಗೆ ತಮಿಳುನಾಡಿನ ಜಿಡಿಪಿ ಕರ್ನಾಟಕಕಿಂತ ಎರಡು ಲಕ್ಷ ಕೋಟಿಯಷ್ಟು ಹೆಚ್ಚಿದೆ. ಒಟ್ಟಾರೆ ಸಮಗ್ರ ಅಭಿವೃದ್ಧಿಯ ಸೂಚ್ಯಂಕವಾದ ಎಚ್‌ಡಿಐ ರ್‍ಯಾಕಿಂಗ್‌ನಲ್ಲಿ ತಮಿಳುನಾಡು ಕರ್ನಾಟಕಕ್ಕಿಂತ ನಾಲ್ಕೈದು ಸ್ಥಾನ ಮೇಲೆಯೇ ಇದೆ. ತಮಿಳುನಾಡು ಉದಾಹರಣೆಯಿಂದ ಸ್ಪಷ್ಟವಾಗುವುದೇನೆಂದರೆ ಸಾಮಾನ್ಯ ಜನರ ಕೈಗೆ ಹಣ ಸಿಗುವಂತೆ ಮಾಡುವ ಗ್ಯಾರಂಟಿಗಳಂತ ಯೋಜನೆಗಳಿಂದ ನಿಜವಾಗಿಯೂ ರಾಜ್ಯದ ಆರ್ಥಿಕ ಅಭಿವೃದ್ಧಿ ಆಗುತ್ತದೆಯೇ ಹೊರತು ರಾಜ್ಯ ಇತ್ತೀಚಿಗೆ ಶ್ರೀಲಂಕದಲ್ಲಾದ ರೀತಿ ಆರ್ಥಿಕ ದಿವಾಳಿ ಆಗಿಬಿಡುವುದಿಲ್ಲವೆಂದು. (ಶ್ರೀಲಂಕದ ಆರ್ಥಿಕ ಸಮಸ್ಯೆ ಬೇರೆಯೇ ಒಂದು ಅಧ್ಯಾಯವಾಗಿರುವುದರಿಂದ ಇಲ್ಲಿ ಚರ್ಚಿಸಲಾಗಿಲ್ಲ. ಅದನ್ನು ತಿಳಿಯದವರು ಇಲ್ಲಿಗೆ ಅದನ್ನು ಬೆಸೆಯುತ್ತಿರುವುದು ದೌರ್ಭಾಗ್ಯ.)

ಹಾಗಾದರೆ ಈ ಯೋಜನೆಗಳಿಂದ ರಾಜ್ಯದ ಅಭಿವೃದ್ಧಿ ಹೇಗೆ ಸಾಧ್ಯ?

ಇಲ್ಲಿ ಮತ್ತೊಮ್ಮೆ ಹೇಳುವುದಾದರೆ ಈ ಗ್ಯಾರಂಟಿಗಳಿಂದ ಒಂದು ಮನೆಗೆ ತಿಂಗಳಿಗೆ ಸುಮಾರು ಐದಾರು ಸಾವಿರ ರೂ ಸಿಗುತ್ತೆ ಅಂದಾದರೆ, ಅಷ್ಟು ದುಡ್ಡನ್ನ ಡಬ್ಬಿ ಒಳಗೆ ಇಟ್ಟುಕೊಳ್ಳುವಂತ ಪರಿಸ್ಥಿತಿ ಶೇ.99ರಷ್ಟು ಕುಟುಂಬಗಳಿಗೆ ಇಲ್ಲ. ಏಕೆಂದರೆ ಈ ದೇಶದಲ್ಲಿ ಶೇ.ಐವತ್ತಕ್ಕಿಂತ ಹೆಚ್ಚು ಕುಟುಂಬಗಳ ತಿಂಗಳ ಸರಾಸರಿ ಆದಾಯ 10,000/- ಆಸುಪಾಸಲ್ಲಿದೆ. ಇಷ್ಟು ಕಡಿಮೆ ಸಂಪಾದನೆ ಇರುವವರು ತಮ್ಮ ಅಗತ್ಯಗಳಿಗೆ, ಮಕ್ಕಳ ಶಿಕ್ಷಣಕ್ಕೆ, ಆರೋಗ್ಯ ಸಮಸ್ಯೆಗೆ ಹಣಕಾಸು ಹೊಂದಿಸಲಾಗದೆ ಪರದಾಡುತ್ತಿರುತ್ತಾರೆ. ಹಾಗಾಗಿ ಈ ಯೋಜನೆಗಳಿಂದ ಸಿಗುವ ಹೆಚ್ಚುವರಿ ದುಡ್ಡನ್ನು ಅವರು ತಮ್ಮ ಅವಶ್ಯಕತೆಗಳಿಗೋಸ್ಕರ ಖರ್ಚು ಮಾಡುತ್ತಾರೆ. ಹೀಗೆ ಲಕ್ಷಾಂತರ ಕುಟುಂಬಗಳು ಹಣ ಖರ್ಚು ಮಾಡಿದಾಗ ಸಹಜವಾಗಿ ಒಟ್ಟು ಆರ್ಥಿಕ ಚಟವಟಿಕೆ ಪುಟಿದೆದ್ದು ರಾಜ್ಯದ ಅಭಿವೃದ್ಧಿಗೆ ಬೇಕಾಗಿರುವ ತೆರಿಗೆ ಸಂಗ್ರಹವೂ ಹೆಚ್ಚುತ್ತದೆ.

ಉದಾಹರಣೆಗೆ, ಒಂದು ಕುಟುಂಬ ಐದುಸಾವಿರ ಕೊಟ್ಟು ಬಟ್ಟೆ ತಗೊಂಡ್ರೆ, ಆ ಬಟ್ಟೆ ಅಂಗಡಿ ಮಾಲೀಕನಿಗೆ ಅದ್ರಲ್ಲಿ ಒಂದು ಸಾವಿರ ಲಾಭ ಬರತ್ತೆ ಅಂದುಕೊಂಡ್ರೆ, ಅವನು ಉಳಿದ ನಾಲ್ಕು ಸಾವಿರ ಬಂಡವಾಳದ ಕಡೆಗೆ ಹಾಕ್ತಾನೆ. ಲಾಭದ ಒಂದು ಸಾವಿರದಲ್ಲಿ ಆತ ತನ್ನ ಮಕ್ಕಳಿಗೆ ಸ್ಕೂಲ್ ಬುಕ್ಕುಗಳನ್ನು ತಂದುಕೊಡಬಹುದು. ಪುಸ್ತಕದ ಅಂಗಡಿಯವನು ತನಗೆ ಬಂದ ಲಾಭದಲ್ಲಿ ಹೋಟೆಲ್ಲಿಗೆ ಕುಟಿಂಬದ ಜೊತೆ ಹೋಗಿ ಊಟ ಮಾಡಬಹುದು. ಹೀಗೆ ಎಕಾನಮಿಯೊಳಗೆ ಒಬ್ಬನ ಖರ್ಚು ಮತ್ತೊಬ್ಬನ ಸಂಪಾದನೆಯಾಗಿರುತ್ತೆ.

ಇದನ್ನೂ ಓದಿ: ಮತದಾರರಿಗೆ ಕಾಂಗ್ರೆಸ್ ನೀಡಿದ ಐದು ಗ್ಯಾರಂಟಿಗಳು ಮತ್ತು ಆರ್ಥಿಕತೆ

 

ಹಾಗೂ ಪ್ರತಿಯೊಬ್ಬ ಖರ್ಚು ಮಾಡುವಾಗ್ಲೂ ಟ್ಯಾಕ್ಸ್ ಕಟ್ತಾ ಇರ್ತಾನೆ. ಹೀಗೆ ಜನರಿಗೆ ಹಣ ಕೊಟ್ಟು ಅವರ ಕೊಳ್ಳುವ ಶಕ್ತಿ ಜಾಸ್ತಿ ಮಾಡಿದಾಗ ಅವರ ವೈಯಕ್ತಿಕ ಜೀವನಮಟ್ಟವೂ ಸುಧಾರಿಸುವುದಲ್ಲದೆ ರಾಜ್ಯದ ಆರ್ಥಿಕತೆಯೂ ಅಭಿವೃದ್ಧಿಯಾಗತ್ತೆ. ಜೊತೆಗೆ ಇದರಿಂದ ದೊಡ್ಡ ಕಂಪನಿಗಳ ಬ್ಯುಸಿನೆಸ್ ಕೂಡ ಜಾಸ್ತಿಯಾಗುತ್ತೆ.

ಹಾಗಾಗಿ, ಈ ಗ್ಯಾರಂಟಿ ಸ್ಕೀಮುಗಳಿಂದ ಜನಸಾಮಾನ್ಯರಿಗೆ ಅನುಕೂಲವಾಗುವುದರ ಜೊತೆ ರಾಜ್ಯದ ಸಮಗ್ರ ಅಭಿವೃದ್ಧಿಯಾಗುತ್ತದೆಯೇ ಹೊರತು ಶ್ರೀಲಂಕಾ ತರಹ ಆರ್ಥಿಕ ದಿವಾಳಿ ಆಗುವುದಿಲ್ಲ. ಶ್ರೀಲಂಕಾ ತರಾ ಆಗುತ್ತದೆ ಎನ್ನುವುದು ತಲೆಬುಡವಿಲ್ಲದ ಆತಂಕ ಮತ್ತು ವಾದ, ಜನಸಾಮಾನ್ಯರಿಗೆ ಆಗುತ್ತಿರುವ ಅನುಕೂಲದ ಬಗ್ಗೆ ಕೆಲ ಉಳ್ಳವರಿಗೆ ಆಗುತ್ತಿರುವ ಹೊಟ್ಟೆಕಿಚ್ಚಿನ ಭಾಗವಷ್ಟೆ.

ಇನ್ನು ನಮ್ಮ ಟ್ಯಾಕ್ಸ್ ಹಣ ಅಭಿವೃದ್ಧಿಗೇ ಹೊರತು ಫ್ರೀ ಹಂಚುವುದಕ್ಕಲ್ಲ ಅಂತ ಕೆಲವರು ಹೇಳ್ತಾ ಇದಾರೆ. ಮೋಹನದಾಸ್ ಪೈ ಇದರ ಬಗ್ಗೆ ಟ್ವೀಟ್ ಅಭಿಯಾನ ಕೂಡ ಶುರುಮಾಡಿದ್ರು.

ನಮ್ಮ ಟ್ಯಾಕ್ಸ್ ಹಣ ಅಂತ ಮಾತಾಡ್ತಿರೋರು ಯಾರು ಅಂದ್ರೆ ಆದಾಯ ತೆರಿಗೆ ಕಟ್ಟುತ್ತಾ ಅದು ಮಾತ್ರೆ ತೆರಿಗೆ ಅಂದುಕೊಂಡಿರುವವರು. ಇವರಿಗೆ ಗೊತ್ತಿಲ್ಲದ ವಿಷಯ ಏನಂದ್ರೆ ನಮ್ಮ ದೇಶದಲ್ಲಿ ಕಳೆದ ವರ್ಷ ನೇರ ತೆರಿಗೆಯಾದ ಆದಾಯ ತೆರಿಗೆಯಿಂದ 9 ಲಕ್ಷ ಕೋಟಿ ರುಪಾಯಿಯಷ್ಟು ಹಣ ಸಂಗ್ರಹ ಆಗಿದ್ರೆ ಪರೋಕ್ಷ ತೆರಿಗೆಯಾದ ಜಿಎಸ್‌ಟಿಯಿಂದ 18 ಲಕ್ಷ ಕೋಟಿಗಿಂತ ಹೆಚ್ಚು ಹಣ ಕಲೆಕ್ಟ್ ಆಗಿದೆ. ಮತ್ತು ಇದರಲ್ಲಿ ಮೂರನೇ ಎರಡು ಭಾಗದಷ್ಟು ಅಂದ್ರೆ ಅಂದಾಜು 12 ಲಕ್ಷ ಕೋಟಿಯಷ್ಟು ಜಿಎಸ್‌ಟಿ ತೆರಿಗೆಯನ್ನು ಈ ದೇಶದ ಶೇ.50ರಷ್ಟು ಕೆಳವರ್ಗದ ಜನ ಕಟ್ಟಿದ್ದಾರೆಂದು ಅಂಕಿಅಂಶಗಳು ಹೇಳ್ತಿವೆ.

ಅದೂಅಲ್ಲದೆ, ಜಿಎಸ್‌ಟಿ ತೆರಿಗೆಯನ್ನು ಬಡವ ಶ್ರೀಮಂತ ಎಂಬ ಭೇದವಿಲ್ಲದೆ ಎಲ್ಲರೂ ಒಂದೇ ಮಟ್ಟದಲ್ಲಿ ಕಟ್ತಾರೆ. ಉದಾಹರಣೆಗೆ, ಒಂದು ಕೋಲ್ಗೇಟ್ ಟೂತ್ ಪೇಸ್ಟ್‌ಅನ್ನು ಬಡವ ತಗೊಂಡ್ರೂ ನೂರು ರೂಪಾಯಿ, ಅಂಬಾನಿಯಂಥ ಆಗರ್ಭ ಶ್ರೀಮಂತ ತಗಂಡ್ರೂ ಅಷ್ಟೇ ಬೆಲೆ. ಇದರರ್ಥ ತಾನು ಕೊಳ್ಳುವ ಯಾವುದೇ ವಸ್ತುವಿಗೆ ಆಗರ್ಭ ಶ್ರೀಮಂತ ಕಟ್ಟುವಷ್ಟೇ ಟ್ಯಾಕ್ಸ್‌ಅನ್ನು ಕಡುಬಡವನೂ ಕಟ್ಟಿರ್ತಾನೆ. ತನ್ನ ಸಂಪಾದನೆಯ ಶೇಕಡಾವಾರು ಹೆಚ್ಚು ಪಾಲನ್ನು ತೆರಿಗೆ ಕಟ್ಟೋನು ಬಡವನೇ ಹೊರತು ಶ್ರೀಮಂತ ಅಲ್ಲ.

ಉದಾಹರಣೆಗೆ, ಒಂದು ಬಡ ಕುಟುಂಬ ಹತ್ತು ಸಾವಿರ ಸಂಪಾದಿಸಿದ್ರೆ ಮನೆ ಬಾಡಿಗೆ ತರಹದ ಖರ್ಚು ಕಳೆದು ಉಳಿದ ಅಷ್ಟನ್ನೂ ಖರ್ಚುಮಾಡಿ ಅದರಲ್ಲಿ ಸರಾಸರಿ 15% ತೆರಿಗೆ ಕಟ್ಟುತ್ತೆ. ಅದೇ, ಒಂದು ಲಕ್ಷ ಸಂಪಾದಿಸುವ ಅಥವಾ ಸಂಬಳ ತೆಗೆದುಕೊಳ್ಳುವವ ಕುಟುಂಬದ ಅಗತ್ಯಗಳಿಗೆ 20000ರೂ ಖರ್ಚು ಮಾಡಿದ್ರೆ ಅದ್ರಲ್ಲಿ 15% ಅಂದ್ರೆ 3000 ರೂ ಜೊತೆಗೆ ಆದಾಯ ತೆರಿಗೆ ತಿಂಗಳ ಲೆಕ್ಕದಲ್ಲಿ ನೋಡಿದ್ರೆ ಸುಮಾರು ಹತ್ತು ಸಾವಿರ. ಎರಡೂ ಸೇರಿಸಿದರೆ ತಿಂಗಳಿಗೆ ಅವರ ಸಂಪಾದನೆಯಲ್ಲು 13% ತೆರಿಗೆ ಕಟ್ಟಿರ್ತಾರೆ. ಹಾಗಾಗಿ, ನಮ್ಮ ತೆರಿಗೆ ಹಣ ಅಂತ ಮಾತಾಡೋರು ಅರ್ಧ ವಿಷಯ ಮಾತ್ರ ತಿಳ್ಕೊಂಡು ಮಾತಾಡ್ತಿದಾರೆ ಎನ್ನುವುದು ಸ್ಪಷ್ಟ.

ನಾವು ಆದಾಯ ತೆರಿಗೆ ಕಟ್ಟುವಷ್ಟು ಸಂಪಾದನೆ ಮಾಡುವಲ್ಲಿ, ನಮ್ಮ ಸಮಾಜ ಮತ್ತು ಕಟ್ಟಕಡೆಯ ವರ್ಗ ನಮಗೆ ಕೊಟ್ಟ ಬೆಂಬಲದ ಪಾಲೂ ಇದೆ, ಹಾಗಾಗಿ ನಮ್ಮ ಟ್ಯಾಕ್ಸ್ ಹಣ ನಮ್ಮದೇ ಸರ್ಕಾರದ ನೀತಿಗಳಿಂದ ಕಷ್ಟದಲ್ಲಿರೋ ಸಹನಾಗರಿಕರಿಗೆ ಬಳಕೆಯಾದ್ರೆ ಅದು ನಮಗೆ ಖುಷಿ ಕೊಡುವ ವಿಷಯ ಎಂದು ಕಳಕಳಿ ಮತ್ತು ಅರಿವು ಇರುವ ಕೆಲವರು ಹೇಳಿದ್ದಾರೆ ಎಂಬುದನ್ನು ಇಲ್ಲಿ ನೆನಸಿಕೊಳ್ಳುವುದು ಸೂಕ್ತ.

ಮತ್ತೊಂದು ದಿಕ್ಕಿನಲ್ಲಿ ನೋಡಿದರೆ, ಸರ್ಕಾರದಿಂದ ಕೋಟಿಗಟ್ಟಲೆ ಹಣವನ್ನು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಪಡೆಯುತ್ತಿರೋ ಶ್ರೀಮಂತರು ನಿಜಕ್ಕೂ ಈ ಸಮಾಜಕ್ಕೆ ಅದನ್ನು ವಾಪಸ್ ಮಾಡ್ತಿಲ್ಲ. ಉದಾಹರಣೆಗೆ, 2019ರಲ್ಲಿ ಕಾರ್ಪೊರೆಟ್ ಟ್ಯಾಕ್ಸ್‌ಅನ್ನು ಶೇ.30ರಿಂದ ಶೇ.22.5ಕ್ಕೆ ಇಳಿಸಿದ್ದರಿಂದ ಪ್ರತಿ ವರ್ಷ ಸರ್ಕಾರಕ್ಕೆ ಆಗ್ತಿರೋ ನಷ್ಟ ಕನಿಷ್ಟ ಒಂದು ಲಕ್ಷ ಕೋಟಿ. ಕಾರ್ಪೊರೆಟ್ ಟ್ಯಾಕ್ಸ್ ಇಳಿಸೋದ್ರಿಂದ ಖಾಸಗಿ ಕಂಪನಿಗಳು ಬಂಡವಾಳ ಹೂಡಿ ಉದ್ಯೋಗ ಸೃಷ್ಟಿಸಲಿ ಎಂಬುದಾದರೆ, ತೆರಿಗೆ ಕಡಿತದಿಂದ ಕೋಟ್ಯಂತರ ಹಣ ಉಳಿಸಿದ ಕಂಪನಿಗಳು ಬಂಡವಾಳ ಮಾತ್ರ ಹೂಡಲೇ ಇಲ್ಲ ಎನ್ನುತ್ತವೆ ಹಲವು ಅಧ್ಯಯನಗಳ ಅಂಕಿಅಂಶಗಳು.

ಕಡೆಯದಾಗಿ, ಮೋದಿಯವರು ಹೇಳಿರೋ ಹಾಗೆ ಈ ಗ್ಯಾರಂಟಿಗಳಿಂದ ದೇಶ ದಿವಾಳಿಯಾಗುತ್ತಾ?

ಇಡೀ ದೇಶದಲ್ಲಿ ಹೀಗೆ ಕಲ್ಯಾಣ ಯೋಜನೆಗಳಿಗೆ ಮೊದಲಿನಿಂದ ಅತಿಹೆಚ್ಚು ಹಣ ವಿನಿಯೋಗಿಸುತ್ತಿರುವುದು ದಕ್ಷಿಣದ ರಾಜ್ಯಗಳು. ಇಡೀ ದೇಶದಲ್ಲಿ ಹೆಚ್ಚು ಅಭಿವೃದ್ಧಿಯಾಗಿ ದೇಶದ ಒಟ್ಟು ಜಿಡಿಪಿಯಲ್ಲಿ ಶೇ.30 ರಷ್ಟು ಕೊಡುಗೆ ಕೊಡ್ತಿರೋದೂ ಕೂಡ ಈ ದಕ್ಷಿಣದ ಐದು ರಾಜ್ಯಗಳೇ. HDIನಲ್ಲಿ (ಹ್ಯೂಮನ್ ಡೆವಲಪ್‌ಮೆಂಟ್ ಇಂಡೆಕ್ಸ್) ಕೂಡ ಉತ್ತಮ ಸ್ಥಿತಿಯಲ್ಲಿ ಇರೋದು ದಕ್ಷಿಣದ ರಾಜ್ಯಗಳೇ.

ಹೀಗೆ ಕಲ್ಯಾಣ ಯೋಜನೆಗಳನ್ನು ಅತಿಹೆಚ್ಚು ಜಾರಿ ಮಾಡಿಯೂ ಈ ರಾಜ್ಯಗಳು ಅಭಿವೃದ್ಧಿಯಲ್ಲಿ ಚೆನ್ನಾಗಿ ಮುಂದುವರಿದಿವೆ ಅಂದ್ರೆ ಈ ಗ್ಯಾರಂಟಿಗಳಿಂದ ದೇಶ ದಿವಾಳಿಯಾಗುತ್ತೆ ಎನ್ನುವ ಮೋದಿಯವರ ಮಾತು ಸತ್ಯಕ್ಕೆ ದೂರ ಅಥವಾ ಇನ್ನೂ ಸ್ಪಷ್ಟವಾಗಿ ಸುಳ್ಳು ಎಂದು ಹೇಳಬೋದು.

ಒಟ್ಟಾರೆಯಾಗಿ, ಈ ಗ್ಯಾರಂಟಿಗಳ ಬಗ್ಗೆ ಜನಗಳಿಗಿಂತ ಹೆಚ್ಚಾಗಿ ಟಿವಿ ಚಾನೆಲುಗಳು ಹುಟ್ಟಿಸುತ್ತಿರುವ ಆತಂಕಗಳು ಸಂಪೂರ್ಣ ಆಧಾರರಹಿತ ಎನ್ನಬಹುದು. ಈ ಯೋಜನೆಗಳಿಂದ ರಾಜ್ಯದ ಜನಕ್ಕೆ ಮತ್ತು ರಾಜ್ಯಕ್ಕೆ ಒಳ್ಳೆಯದಾಗುತ್ತೆ ಅನ್ನೋದು ಬಹುತೇಕ ಸತ್ಯ.

ಡಾ. ಬಿ.ಸಿ. ಬಸವರಾಜು

ಡಾ. ಬಿ.ಸಿ. ಬಸವರಾಜು
ಎಂಜಿನಿಯರಿಂಗ್ ವಿದ್ಯಾಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಕೆಲಸನಿರ್ವಹಿಸುತ್ತಿರುವ ಬಸವರಾಜು ಹಾಡುಗಾರರೂ, ಪ್ರಚಲಿತ ವಿದ್ಯಮಾನಗಳಿಗೆ ಲೇಖನಗಳು ಮತ್ತು ವಿಡಿಯೋಗಳ ಮೂಲಕ ನಿರಂತರವಾಗಿ ಪ್ರತಿಕ್ರಿಯಿಸುತ್ತಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚೀನಾದ ಕಮ್ಯುನಿಸ್ಟ್ ಪಕ್ಷದೊಂದಿಗೆ ಬಿಜೆಪಿಯ12 ಸಭೆ: ದಾಖಲೆ ಕೇಳಿದ ಕಾಂಗ್ರೆಸ್

0
ಬಿಜೆಪಿ ಚೀನಾದೊಂದಿಗೆ ನಿಕಟ ಸಂಪರ್ಕ ಹೊಂದಿದೆ ಎಂದು ಕಾಂಗ್ರೆಸ್ ಸೋಮವಾರ ಆರೋಪಿಸಿದ್ದು, 2008 ರಿಂದ ಬಿಜೆಪಿ ನಾಯಕರು ಮತ್ತು ಚೀನಾದ ಅಧಿಕಾರಿಗಳ ನಡುವೆ 12 ಉನ್ನತ ಮಟ್ಟದ ಸಭೆಗಳು ನಡೆದಿವೆ ಎಂದು ಆರೋಪಿಸಿದೆ....