ಈ ತಿಂಗಳ ಆರಂಭದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ‘ದೇಶವು ಬಹುಸಂಖ್ಯಾತರ ಇಚ್ಛೆಗೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕು’ ಎಂಬ ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಅವರ ಹೇಳಿಕೆಗೆ ವಿವರಣೆ ನೀಡುವಂತೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಸಮನ್ಸ್ ನೀಡಿದೆ. ಅವರನ್ನು ಖುದ್ದಾಗಿ ಹಾಜರಾಗಲು ಸೂಚಿಸಿದೆ.
ಮೂಲಗಳ ಪ್ರಕಾರ, ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಕೊಲಿಜಿಯಂ ಮಂಗಳವಾರ (ಡಿಸೆಂಬರ್ 17) ಸುಪ್ರೀಂ ಕೋರ್ಟ್‌ನ ಚಳಿಗಾಲದ ವಿರಾಮದ ಮೊದಲು ಈ ವಿಷಯದ ಬಗ್ಗೆ ಚರ್ಚಿಸಲು ಸಭೆ ಸೇರಲಿದೆ.
ಡಿಸೆಂಬರ್ 8 ರಂದು ಪ್ರಯಾಗ್‌ರಾಜ್‌ನಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಕಾರ್ಯಕ್ರಮದಲ್ಲಿ, ನ್ಯಾಯಮೂರ್ತಿ ಯಾದವ್ ಅವರು ಏಕರೂಪ ನಾಗರಿಕ ಸಂಹಿತೆಯನ್ನು ಅನುಮೋದಿಸಿದರು ಎಂದು ವರದಿಯಾಗಿದೆ. “ಇದು ಕಾನೂನು.. ವಾಸ್ತವವಾಗಿ, ಕಾನೂನು ಬಹುಸಂಖ್ಯಾತರ ಅನುಗುಣವಾಗಿ ಕಾರ್ಯನಿರ್ವಹಿಸುತ್ತದೆ. ಬಹುಸಂಖ್ಯಾತರ ಕಲ್ಯಾಣ ಮತ್ತು ಸಂತೋಷಕ್ಕೆ ಯಾವುದು ಪ್ರಯೋಜನಕಾರಿಯೋ ಅದನ್ನು ಮಾತ್ರ ಸ್ವೀಕರಿಸಲಾಗುವುದು” ಎಂದು ಹೇಳಿದ್ದರು.
ಅವರ ಮಾತಿನ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ವೈರಲ್ ಆದ ಬಳಿಕ ಟೀಕೆಗೆ ಕಾರಣವಾಯಿತು. ವಿರೋಧ ಪಕ್ಷದ ನಾಯಕರು, ನ್ಯಾಯಾಧಿಶರ ಕಾಮೆಂಟ್‌ಗಳನ್ನು ವಿಭಜಕ ಮತ್ತು ಅಸಂವಿಧಾನಿಕ ಎಂದು ಕರೆದರು.
ನ್ಯಾಯಮೂರ್ತಿ ಯಾದವ್ ಅವರ ಹೇಳಿಕೆಗಳ ಕುರಿತು ಮಾಧ್ಯಮ ವರದಿಗಳಿಗೆ ಪ್ರತಿಕ್ರಿಯೆಯಾಗಿ, ಸುಪ್ರೀಂ ಕೋರ್ಟ್ ಡಿಸೆಂಬರ್ 10 ರಂದು ಅಲಹಾಬಾದ್ ಹೈಕೋರ್ಟ್‌ನಿಂದ ವರದಿ ಕೇಳಿದೆ. ಉನ್ನತ ನ್ಯಾಯಾಲಯದ ಅಧಿಕೃತ ಹೇಳಿಕೆಯಲ್ಲಿ, “ಅಲಹಾಬಾದ್‌ನಲ್ಲಿರುವ ನ್ಯಾಯಾಂಗದ ಹೈಕೋರ್ಟ್‌ನ ಹಾಲಿ ನ್ಯಾಯಾಧೀಶ ಶೇಖರ್ ಕುಮಾರ್ ಯಾದವ್ ಅವರು ನೀಡಿದ ಭಾಷಣದ ಪತ್ರಿಕೆಗಳ ವರದಿಗಳನ್ನು ಸುಪ್ರೀಂ ಕೋರ್ಟ್ ಗಮನಿಸಿದೆ.
ನ್ಯಾಯಮೂರ್ತಿ ಯಾದವ್ ಅವರ ಹೇಳಿಕೆಗಳನ್ನು ರಾಜಕೀಯ ಮತ್ತು ಕಾನೂನು ವಲಯಗಳಲ್ಲಿ ಖಂಡಿಸಲಾಯಿತು. ವಿಮರ್ಶಕರು ಅದನ್ನು ನ್ಯಾಯಾಂಗ ನಿಷ್ಪಕ್ಷಪಾತದ ಉಲ್ಲಂಘನೆ ಎಂದು ವಿವರಿಸಿದ್ದಾರೆ. ವಕೀಲ ಪ್ರಶಾಂತ್ ಭೂಷಣ್ ಮತ್ತು ಸಿಪಿಐ(ಎಂ) ನಾಯಕಿ ಬೃಂದಾ ಕಾರಟ್ ಅವರು ಮುಖ್ಯ ನ್ಯಾಯಮೂರ್ತಿ ಖನ್ನಾ ಅವರಿಗೆ ಪತ್ರ ಬರೆದು, ಹೇಳಿಕೆಗಳು ನ್ಯಾಯಾಧೀಶರ ಪ್ರಮಾಣವಚನವನ್ನು ಉಲ್ಲಂಘಿಸುತ್ತವೆ ಎಂದು ಪ್ರತಿಪಾದಿಸಿದರು.
ಭಾರತೀಯ ವಕೀಲರ ಸಂಘವು ನ್ಯಾಯಾಧೀಶರ ಹೇಳಿಕೆಗಳನ್ನು ಖಂಡಿಸುವ ನಿರ್ಣಯವನ್ನು ಅಂಗೀಕರಿಸಿತು. “ಕಠಿಣ ಮತ್ತು ದೃಢವಾದ ರೀತಿಯಲ್ಲಿ” ಸಮಸ್ಯೆಯನ್ನು ಪರಿಹರಿಸಲು ಸುಪ್ರೀಂ ಕೋರ್ಟ್ ಅನ್ನು ಒತ್ತಾಯಿಸಿತು.
ಈ ಮಧ್ಯೆ, ಕಳೆದ ಶುಕ್ರವಾರ ರಾಜ್ಯಸಭೆಯಲ್ಲಿ 55 ಪ್ರತಿಪಕ್ಷ ಸಂಸದರು ನ್ಯಾಯಮೂರ್ತಿ ಯಾದವ್ ಅವರನ್ನು ದೋಷಾರೋಪಣೆ ಮಾಡುವಂತೆ ನೋಟಿಸ್ ಸಲ್ಲಿಸಿದ್ದಾರೆ. ನ್ಯಾಯಾಧೀಶರು “ದ್ವೇಷ ಭಾಷಣ ಮತ್ತು ಪ್ರಚೋದನೆಯಲ್ಲಿ ತೊಡಗಿದ್ದಾರೆ. ಅವರು ವಿಎಚ್‌ಪಿ ಸಮಾರಂಭದ ತಮ್ಮ ಭಾಷಣದಲ್ಲಿ ಅಲ್ಪಸಂಖ್ಯಾತರನ್ನು ಗುರಿಯಾಗಿಸಿದರು; ಪಕ್ಷಪಾತ ಮತ್ತು ಪೂರ್ವಾಗ್ರಹವನ್ನು ಪ್ರದರ್ಶಿಸಿದರು” ಎಂದು ಆರೋಪಿಸಿದರು.
ಇದನ್ನೂ ಓದಿ; ಅವಿಶ್ವಾಸ ಗೊತ್ತುವಳಿ ಮಂಡನೆಯ ನಡುವೆಯೇ ಇಂದು ರಾಜ್ಯಸಭೆಯಲ್ಲಿ ಸಂವಿಧಾನ ಕುರಿತು ಚರ್ಚೆ


