| ಸಂವರ್ತ `ಸಾಹಿಲ್’ |
ಹೊಸ ತಲೆಮಾರಿನ ದಲಿತ ಬರಹಗಾರ ಯೋಗೇಶ್ ಮೈತ್ರೇಯ ಜೊತೆಗಿನ ಸಂವಾದದ ಒಂದು ತುಣುಕು
ಅದು ಯೋಗೇಶ್ ಮೈತ್ರೇಯ ಪ್ರಕಟಿಸಿದ್ದ ಪಂಜಾಬಿ ಕವಿ ಕಮಲ್ ದೇವ್‍ಪಾಲ್ ಅವರ ಕವನಗಳ ಆಂಗ್ಲ ಅನುವಾದದ ಬಿಡುಗಡೆ ಕಾರ್ಯಕ್ರಮ. ಅಂದು ಪುಸ್ತಕ ಬಿಡುಗಡೆಯ ಭಾಗವಾಗಿ ಯೋಗೇಶ್ ಮೈತ್ರೇಯ, ವಿನುತಾ ಮಲ್ಯ ಮತ್ತು ಕೇಶವ್ ವಾಘಮಾರೆ ನಡೆಸಿಕೊಟ್ಟ ಸಂವಾದದಲ್ಲಿ ಯೋಗೇಶ್ ತಾನು ಪುಸ್ತಕ ಪ್ರಕಟಣೆಗೆ ಇಳಿದದ್ದು ದಂಧೆ ಮಾಡಲೆಂದಲ್ಲ, ಬದಲಾಗಿ ಚಳವಳಿಯ ಭಾಗವಾಗಿ ಎಂದರು. ಈಚಿನ ವರ್ಷಗಳಲ್ಲಿ ದಲಿತ ಸಾಹಿತ್ಯಕ್ಕೆ ಒಂದು ಮಾರುಕಟ್ಟೆ ಹುಟ್ಟಿಕೊಂಡಿದೆ, ಅದಕ್ಕಾಗಿ ಹೆಚ್ಚಿನ ಪ್ರಕಾಶನ ಸಂಸ್ಥೆಗಳು ದಲಿತ ಸಾಹಿತ್ಯದ ಕುರಿತು ಆಸಕ್ತಿ ಇಲ್ಲದೆ ಹೋದಾಗಲೂ ಅವುಗಳ ಪ್ರಕಟಣೆಯಲ್ಲಿ ಉತ್ಸಾಹ ತೋರುತ್ತಿದ್ದಾರೆ ಎಂದ ಯೋಗೇಶ್, ಈ ಎಲ್ಲಾ ಪ್ರಕಾಶನ ಸಂಸ್ಥೆಗಳು ಆ ಪುಸ್ತಕಗಳ ಬೆಲೆ ದುಬಾರಿ ಆಗಿರುವುದರಿಂದ ಅದು ಸಿಗಬೇಕಾದ ಕೈಗಳಿಗೆ ಸಿಗದೇ ಹೋಗುತ್ತದೆ ಮಾತ್ರವಲ್ಲದೆ ಅದು ಚಳುವಳಿಗೆ ಸಾಹಿತ್ಯ ಒದಗಿಸಬಹುದಾದ ಹುರುಪನ್ನು ತಪ್ಪಿಸಿಹಾಕುತ್ತದೆ ಎಂಬರ್ಥದ ಮಾತನ್ನಾಡಿದರು. ಮಾತು ಮುಂದುವರಿಸುತ್ತಾ ತಾನು ಹಣ ಇಲ್ಲದೇ ಇದ್ದರೂ ಪ್ರಕಾಶನಕ್ಕೆ ಇಳಿದಿರುವುದು ಚಳುವಳಿ ಕಟ್ಟಲು ಎಂದು ಹೇಳಿ ಅದನ್ನು ಕೊಂಚ ವಿವರಿಸಿದರು.
“ನನ್ನ ಬಳಿ ಹಣ ಇಲ್ಲ. ನಾನು ಒಬ್ಬರ ಇಬ್ಬರ ಬಳಿ ಚಂದಾ ಎತ್ತಿ ಇಲ್ಲ ಸಾಲ ಮಾಡಿ ಪುಸ್ತಕ ಪ್ರಕಟಣೆ ಮಾಡುತ್ತಿಲ್ಲ. ಬದಲಾಗಿ ಜನರ ಬಳಿ ಹೋಗಿ ಒಬ್ಬರೊಬ್ಬರ ಬಳಿ ನೂರು-ಇನ್ನೂರು ರೂಪಾಯಿ ಪಡೆದು ಅವರ ಕೈಗೆ ಒಂದು ಪುಸ್ತಕ ಕೊಡುತ್ತೇನೆ. ಇದರಿಂದ ಜನರ ಸಂಪರ್ಕ ಸಾಧ್ಯವಾಗುತ್ತದೆ, ಜನರ ಕೈಗೆ ಸಾಹಿತ್ಯ ತಲುಪುತ್ತದೆ. ಲಾಭವೂ ಇಲ್ಲದ ನಷ್ಟವೂ ಇಲ್ಲದ ಪ್ರಕಾಶನ ಸಂಸ್ಥೆ ನಡೆಯುತ್ತದೆ, ಚಳವಳಿಗೆ ಒಂದು ಮಟ್ಟದ ಶಕ್ತಿ ಸಿಗುತ್ತದೆ.”
ಅದೇ ಸಂವಾದ ಕಾರ್ಯಕ್ರಮದಲ್ಲಿ ಕೇಶವ್ ವಾಘಮಾರೆ ಅಂದು ಬಿಡುಗಡೆ ಆಗಿದ್ದ ಕವನ ಸಂಕಲನದ ಒಂದು ಕವಿತೆಯನ್ನು ತಾನು ಮರಾಠಿಗೆ ಅನುವಾದ ಮಾಡಿರುವುದಾಗಿ ಹೇಳಿ ಅದನ್ನು ವಾಚಿಸಲು ಮುಂದಾದರು. ಆಗ ಯೋಗೇಶ್ ಆ ಕವಿತೆಯ ಆಂಗ್ಲ ಅನುವಾದ ಮೊದಲು ತಾನು ಓದುತ್ತೇನೆ, ಬಳಿಕ ಕೇಶವ್ ಅವರು ಮರಾಠಿ ಅನುವಾದ ಓದಬಹುದು ಎಂದು ಮೊದಲು ಕಮಲ್ ದೇವ್‍ಪಾಲ್‍ಅವರ ಪಂಜಾಬಿ ಕವಿತೆಯ ಆಂಗ್ಲ ಅನುವಾದವನ್ನು ವಾಚಿಸಿದರು. ಆಮೇಲೆ ಕೇಶವ್ ಅದರ ಮರಾಠಿ ಅನುವಾದವನ್ನು ವಾಚಿಸಿದರು. ಈ ಎರಡೂ ವಾಚನಗಳು ಮುಗಿದ ನಂತರ “ಅನುವಾದ ಮುಖ್ಯವಾಗುವುದು ಕೇವಲ ಸಾಹಿತ್ಯದ ವಿನಿಮಯಕ್ಕಾಗಿ ಅಲ್ಲ. ಬದಲಾಗಿ ಭಾಷಾ ಪ್ರಾಂತ್ಯದ ಆಕಡೆ ಜನರ ಬದುಕು ಹೇಗಿದೆ ಎಂಬುದನ್ನು ತಿಳಿಯಲು ಮತ್ತು ಆ ಲೋಕದ ಜೊತೆ ಕೈಜೋಡಿಸಿ ಲೋಕವನ್ನು ಜಾತಿ ಮುಕ್ತಗೊಳಿಸಲು, ಸಮಾನತೆ ಸಹಬಾಳ್ವೆ ಸಾಧ್ಯಗೊಳಿಸಲು.” ಎಂದು ಯೋಗೇಶ್ ಹೇಳಿದರು. ಯೋಗೇಶ್ ಅವರ ಮಾತನ್ನು ಕೇಳಿದಾಗ ನನಗೆ ತಕ್ಷಣಕ್ಕೆ ನೆನಪಾಗಿದ್ದು ಜಾರ್ಜ್ ಸಿಮ್ಮೆಲ್ ಅವರ ಒಂದು ಪ್ರಬಂಧ. ಅದರ ಶೀರ್ಷಿಕೆ
‘ಬ್ರಿಜ್ ಆಂಡ್ ಡೋರ್’, ಅಂದರೆ ‘ಸೇತುವೆ ಮತ್ತು ಬಾಗಿಲು’ ಸಿಮ್ಮೆಲ್ ಓರ್ವ ಸಮಾಜಶಾಸ್ತ್ರಜ್ಞನಾಗಿದ್ದು ಆತ ಮನುಷ್ಯ ಏಕಕಾಲಕ್ಕೆ ಸಂಪರ್ಕ ಸಾಧಿಸಲಿಚ್ಛಿಸುವ ಮತ್ತು ಪ್ರತ್ಯೇಕೀಕರಣ ಬಯಸುವ ಜೀವಿ ಎಂದು ಹೇಳುತ್ತಾ ಅದನ್ನು ನಿರೂಪಿಸಲು ಸೇತುವೆ ಮತ್ತು ಬಾಗಿಲಿನ ಪ್ರತಿಮೆ ಉಪಯೋಗಿಸುತ್ತಾನೆ. ಆತನ ಪ್ರಕಾರ ಸೇತುವೆ ಮತ್ತು ಬಾಗಿಲು ಮನುಷ್ಯನ ಒಡಲಾಳದ ಅಗತ್ಯವೊಂದರ ಮೂರ್ತ ರೂಪ.
ಸಿಮ್ಮೆಲ್ ಪ್ರಕಾರ ಹಾದಿಯ ನಿರ್ಮಾಣ ಮಾನವ ಇತಿಹಾಸದ ಒಂದು ಪ್ರಮುಖ ಸಾಧನೆ. ಇದು ಮನುಷ್ಯನಲ್ಲಿ ಇರುವ ಸಾಮುದಾಯಿಕ ಭಾವನೆಯ ಪ್ರತ್ಯಕ್ಷ ರೂಪ. ಯಾಕೆಂದರೆ ಹಾದಿ ಚಲನೆಗೆ ಮಾತ್ರ ಸಾಕ್ಷಿಯಲ್ಲ. ಬದಲಾಗಿ ಚಲನೆಯ ಮೂಲಕ ಸಂಪರ್ಕ ಸಾಧನೆ, ಬಾಂಧವ್ಯದ ಸಾಧ್ಯತೆಗಳಿಗೆ ಸಹ ಸಾಕ್ಷಿ. ಅದರರ್ಥ ನಡೆನಡೆದು ಹಾದಿ ನಿರ್ಮಿಸಿದ ಮನುಷ್ಯನ ಪಾದಗಳ ಸ್ಫೂರ್ತಿ- ಮನುಷ್ಯನ ಒಳಗಿರುವ ಎಲ್ಲೆ ಮೀರಿ ಸಂಬಂಧ ಸಾಧಿಸುವ ತುಡಿತ. ಈ ಬಯಕೆಯ ಪರಾಕಾಷ್ಠೆ ಎಂದರೆ ಸೇತುವೆಯ ನಿರ್ಮಾಣ ಎನ್ನುತ್ತಾನೆ ಸಿಮ್ಮೆಲ್. ಎರಡು ದಡಗಳ ಇರುವಿಕೆ ಸಹಜ. ಪ್ರಾಕೃತಿಕವಾದ ಅಂತರವು ಪ್ರತ್ಯೇಕತೆ ಮತ್ತು ಬಿರುಕನ್ನು ತೋರಿಸಿದರೆ ಆ ದಡಗಳನ್ನು ದಾಟಲು ಗಾಳಿಯಲ್ಲಿ ರಸ್ತೆಯನ್ನು ನಿಲ್ಲಿಸುವುದು ಇದೆಯಲ್ಲ ಅದು ಮನುಷ್ಯನಲ್ಲಿ ಬಾಂಧವ್ಯ ಬೆಸೆಯಲು ಇರುವ ತುಡಿತದ ಆಳ ಮತ್ತು ಅದನ್ನು ಸಾಧಿಸಲು ಇರುವ ಸಂಕಲ್ಪಶಕ್ತಿಯನ್ನು ತೋರಿಸುತ್ತದೆ ಎನ್ನುತ್ತಾನೆ. ಅದೇ ಹೊತ್ತಿಗೆ ಯಾವುದೇ ಅಡೆ-ತಡೆ ಇಲ್ಲದ ಪ್ರದೇಶದಲ್ಲಿ ಅಂದರೆ ಅನಂತದಂತಿರುವ ಬಯಲಿನಲ್ಲಿ ಗೋಡೆ ನಿರ್ಮಿಸಿ ಅಥವಾ ಬೇಲಿ ಹಾಕಿ ‘ಖಾಸಗಿ’ ಪ್ರದೇಶ ನಿರ್ಮಿಸಿಕೊಳ್ಳುವ ಮನುಷ್ಯನ ಇನ್ನೊಂದು ಮಗ್ಗುಲ ಕಡೆಯೂ ಗಮನ ಸೆಳೆಯುವ ಸಿಮ್ಮೆಲ್, ಅಲ್ಲಿ ಗೋಡೆಯ ಬದಲು ಬಾಗಿಲಿನ ಕಡೆ ಒತ್ತು ಕೊಟ್ಟು ಹೇಳುವುದೇನೆಂದರೆ ಪ್ರತ್ಯೇಕತೆಗೆ ಮತ್ತು ಒಂದು ಬಗೆಯ ಖಾಸಗೀತನಕ್ಕೆ ಹಪಹಪಿಸುವ ಮನುಷ್ಯ ಅದನ್ನು ಆಗಾಗ ಮೀರುವ ಅಗತ್ಯವನ್ನು ಮನಗಂಡು ಆ ಸಾಧ್ಯತೆಯನ್ನು ಬಾಗಿಲಿನ ಮೂಲಕ ಸಾಧಿಸಿಕೊಂಡಿದ್ದಾನೆ. ಕಿಟಕಿ ಕೇವಲ ಕಣ್ಣಿಗೆ ಹಾದಿ, ಆದರೆ ಬಾಗಿಲು ಮನುಷ್ಯನಿಗೆ ಹಾದಿ ಆಗಿದೆ ಎನ್ನುವ ಸಿಮ್ಮೆಲ್ ಬಾಗಿಲು ಇಲ್ಲದ ಗೋಡೆಯ ಕುರಿತು ಏನೂ ಹೇಳುವುದಿಲ್ಲ. ಆದರೆ ಸೇತುವೆ ಮತ್ತು ಬಾಗಿಲು- ಇವುಗಳ ಹಿಂದೆ ಮನುಷ್ಯನ ಯಾವ ಆಂತರಿಕ ಸ್ಫೂರ್ತಿ ಕಾರ್ಯ ನಿರ್ವಹಿಸುತ್ತಿದೆ ಎಂಬುದನ್ನು ತಿಳಿಸುತ್ತಾ ಮನುಷ್ಯ ಜೀವನದ ಒಂದು ಮಹತ್ತರ ಅಗತ್ಯದ ಕುರಿತಾಗಿ ಬೆಳಕು ಚೆಲ್ಲುತ್ತಾನೆ. ಅದುವೇ ಸಂಪರ್ಕ ಸಾಧನೆ, ಬಾಂಧವ್ಯ ಬೆಸುಗೆ.
ಸಾಹಿತ್ಯವನ್ನು ಎಂ.ಎಚ್. ಅಬ್ರಾಹಮ್ಸ್ ‘ದೀಪ ಮತ್ತು ಕನ್ನಡಿ’ ಎಂದು ಕಂಡಂತೆ ನಾವು ಅನುವಾದದ ಕೆಲಸವನ್ನು, ಅದನ್ನು ಮಾತ್ರ ಯಾಕೆ ಜೀವಪರ ಸಾಹಿತ್ಯವನ್ನೆಲ್ಲಾ ‘ಸೇತುವೆ ಮತ್ತು ಬಾಗಿಲು’ ಆಗಿ ಕಾಣಬಹುದೇನೋ ಎಂದುಕೊಳ್ಳುತ್ತೇನೆ. ಸಾಮಾಜಿಕ ಜಾಲತಾಣದಲ್ಲಿ ಆಕಸ್ಮಿಕವಾಗಿ ಕೆಲವು ವರ್ಷಗಳ ಹಿಂದೆ ಪರಿಚಿತರಾದ ಯೋಗೇಶ್ ಅವರ ಕವಿತೆಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಬೆನ್ನಿಗೆ ಅನುವಾದ ಮಾಡುತ್ತಾ ಬಂದಿದ್ದೆ. ಒಂದೊಂದಾಗಿ ಅನುವಾದ ಮಾಡುತ್ತಾ ಹೋದ ಕಾರಣ ಯೋಗೇಶ್ ಮತ್ತು ನನ್ನ ನಡುವೆ ಸ್ನೇಹ ಏರ್ಪಟ್ಟಿತ್ತು. ಆದರೆ ಎಂದೂ ಭೇಟಿ ಆಗಿರಲಿಲ್ಲ. ದೇವ್ ಕಮಾಲ್ ಪಾಲ್ ಅವರ ಪುಸ್ತಕ ಪುಣೆಯ ಚಿಕ್ಕದೊಂದು ಕೆಫೆಯಲ್ಲಿ ಬಿಡುಗಡೆ ಆದ ದಿನ ಮೊದಲ ಬಾರಿಗೆ ಯೋಗೇಶ್ ಮತ್ತು ನನ್ನ ಭೇಟಿ. ಆ ಹೊತ್ತಿಗಾಗಲೇ ಅವರ ಐವತ್ತೈದು ಕವನಗಳ ಕನ್ನಡಾನುವಾದ ಪುಸ್ತಕ ‘ಓದುವುದೆಂದರೆ ಸ್ಪರ್ಶಿಸಿದಂತೆ’ ಇದರ ಕರಡು ಪ್ರತಿ ಸಿದ್ಧವಾಗಿತ್ತು.
ಸಾಮಾನ್ಯವಾಗಿ ದಲಿತ ಸಾಹಿತ್ಯ ಎಂದರೆ ದಲಿತರ ಮೇಲಾದ ದಮನಗಳ ಕುರಿತಾಗಿಯೇ ಇರುತ್ತದೆ ಎಂದು ನಂಬಿರುವ ಮತ್ತು ಅದನ್ನೇ ನಿರೀಕ್ಷಿಸುವ ದೊಡ್ಡದೊಂದು ಓದುಗ ವರ್ಗವಿದೆ. ಆಕ್ರೋಶ ಮತ್ತು ಆಕ್ರಂದನ ದಲಿತ ಸಾಹಿತ್ಯದ ಡಿಫೈನಿಂಗ್ ಲಕ್ಷಣ ಎಂದು ಭಾವಿಸಿರುವವರಿಗೆ ಹೊಸ ತಲೆಮಾರಿನ ದಲಿತ ಬರಹಗಾರರು ಗೂಗ್ಲಿ ಎಸೆಯುತ್ತಿರುವುದನ್ನು ಯೋಗೇಶ್ ಮೈತ್ರೇಯ ಸೇರಿ ಹಲವಾರು ಯುವ ಬರಹಗಾರರ ಬರವಣಿಗೆಯಲ್ಲಿ ಕಾಣಬಹುದು.


