ಬೇರೆಯವರನ್ನು ತಕ್ಷಣವೇ ಅನರ್ಹಗೊಳಿಸುವಾಗ ಶಿಕ್ಷೆಗೊಳಗಾದ ಬಿಜೆಪಿ ಶಾಸಕ ನೆಹರೂ ಓಲೆಕಾರ್‌ರವರನ್ನು ಏಕೆ ಅನರ್ಹಗೊಳಿಸಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಪ್ರಶ್ನಿಸಿದೆ.
ಭ್ರಷ್ಟಾಚಾರ ಹಾಗೂ ಸ್ವಜನ ಪಕ್ಷಪಾತ ಪ್ರಕರಣದಲ್ಲಿ ಹಾವೇರಿ ಬಿಜೆಪಿ ಶಾಸಕ ನೆಹರು ಓಲೆಕಾರ್‌ಗೆ 2023ರ ಫೆಬ್ರುವರಿಯಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಆ ಆದೇಶಕ್ಕೆ ತಡೆ ನೀಡುವಂತೆ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್‌ನ ಕೆ.ನಟರಾಜನ್‌ರವರ ಏಕಸದಸ್ಯ ಪೀಠ ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿದೆ.
ಅಧೀನ ನ್ಯಾಯಾಲಯದ ಆದೇಶವು ದೋಷಪೂರಿತವಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಹಾಗಾಗಿ ಶಿಕ್ಷೆಗೆ ತಡೆ ನೀಡಿದೆ. ಹಾಗಾಗಿ ಸುಪ್ರೀಂ ಕೋರ್ಟ್ ತೀರ್ಪುಗಳ ಅನ್ವಯ ಶಾಸಕ ಒಲೆಕಾರ್‌ರವರು ದೋಷಿ ಎಂಬ ಅಧೀನ ನ್ಯಾಯಾಲಯದ ಆದೇಶವನ್ನು ರದ್ದುಪಡಿಸುವಂತೆ ಶಾಸಕರ ಪರ ವಕೀಲರು ವಾದ ಮಂಡಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರಾದ ಕೆ.ನಟರಾಜನ್‌ರವರು. ‘ಅರ್ಜಿದಾರರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿದೆಯೇ’ ಎಂದು ಪ್ರಶ್ನಿಸಿತು. ಓಲೆಕಾರ್ ಪರ ವಕೀಲರು ಇಲ್ಲ ಎಂದು ಉತ್ತರಿಸಿದಾಗ, “ಏಕೆ ಇನ್ನೂ ಅನರ್ಹಗೊಳಿಸಿಲ್ಲ? ಬೇರೆಯವರನ್ನು ತಕ್ಷಣವೇ ಅನರ್ಹಗೊಳಿಸಲಾಗುತ್ತದೆ?” ಎಂದು ಮರು ಪ್ರಶ್ನಿಸಿತು.
ಅದಕ್ಕೆ ಉತ್ತರಿಸಿದ ಓಲೆಕಾರ್ ಪರ ವಕೀಲರು, “ಶಾಸಕರನ್ನು ಅನರ್ಹಗೊಳಿಸುವ ಅಧಿಕಾರ ಸ್ಪೀಕರ್‌ರವರಿಗಿದೆ. ಆ ಕುರಿತು ಅವರು ತೀರ್ಮಾನ ಕೈಗೊಳ್ಳುತ್ತಾರೆ. ಆದರೆ, ದೋಷಿಯೆಂಬ ಅಧೀನ ನ್ಯಾಯಾಲಯದ ಆದೇಶ ದೋಷಪೂರಿತವಾಗಿರುವುದರಿಂದ ಅದನ್ನು ರದ್ದಗೊಳಿಸಬೇಕೆಂದು ಮನವಿ ಮಾಡಿದರು.
ಲೋಕಾಯುಕ್ತ ವಕೀಲರ್ ಆಕ್ಷೇಪ ವ್ಯಕ್ತಪಡಿಸಿದರು. ಯಾವುದೇ ಜನಪ್ರತಿನಿಧಿ ಕ್ರಿಮಿನಲ್ ಪ್ರಕರಣದಲ್ಲಿ 2 ವರ್ಷಗಳ ಕಾಲ ಶಿಕ್ಷೆಗೆ ಒಳಗಾದರೆ ಅವರು ತನ್ನಿಂದ ತಾನೇ ಅನರ್ಹಗೊಳ್ಳುತ್ತಾರೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಶಾಸಕ ನೆಹರು ಓಲೆಕಾರ್ ಕ್ರಿಮಿನಲ್ ಪಿತೂರಿ ನಡೆಸಿರುವ ಸಾಕ್ಷ್ಯಾಧಾರಗಳಿವೆ. ಅದರ ಆಧಾರದಲ್ಲಿ ತೀರ್ಪು ನೀಡಲಾಗಿದೆ. ಆದ ಕಾರಣ ಅವರ ಮಧ್ಯಂತರ ಅರ್ಜಿಯನ್ನು ವಜಾಗೊಳಿಸಬೇಕು ಎಂದು ವಾದಿಸಿದರು. ಪೀಠ ವಾದ-ವಿವಾದಗಳನ್ನು ಆಲಿಸಿ ತೀರ್ಪು ಕಾಯ್ದಿರಿಸಿದೆ.
‘ಮೋದಿ ಸರ್‌ನೇಮ್’ ಬಳಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂರತ್ ಕೋರ್ಟ್ 2 ವರ್ಷಗಳ ಜೈಲು ಶಿಕ್ಷೆ ವಿಧಿಸಿದ ದಿನದಿಂದ ಕಾಂಗ್ರೆಸ್ ನಾಯಕ, ವಯನಾಡ್ ಸಂಸದ ರಾಹುಲ್ ಗಾಂಧಿಯವರ ಲೋಕಸಭಾ ಸದಸ್ಯತ್ವ ಸ್ಥಾನ ಅನರ್ಹಗೊಳಿಸಲಾಗಿದೆ ಎಂದು ಲೋಕಸಭಾ ಸೆಕ್ರೆಟರಿಯೇಟ್ ಪ್ರಕಟಣೆ ಹೊರಡಿಸಿದ್ದಾರೆ. ಆದರೆ ಭ್ರಷ್ಟಾಚಾರ ಹಾಗೂ ಸ್ವಜನ ಪಕ್ಷಪಾತ ಪ್ರಕರಣದಲ್ಲಿ ಹಾವೇರಿ ಬಿಜೆಪಿ ಶಾಸಕ ನೆಹರು ಓಲೆಕಾರ್‌ಗೆ 2023ರ ಫೆಬ್ರುವರಿಯಲ್ಲಿ ನ್ಯಾಯಾಲಯ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಆದರೂ ಈವರೆಗೆ ಅವರ ಶಾಸಕ ಸ್ಥಾನವನ್ನು ರದ್ದುಗೊಳಿಸಿಲ್ಲ. ಇದು ನೆಹರುಗೆ ಒಂದು ನ್ಯಾಯ, ಗಾಂಧಿಗೊಂದು ನ್ಯಾಯವೇ ಎನ್ನುವ ಪ್ರಶ್ನೆ ಎದ್ದಿತ್ತು. ಕರ್ನಾಟಕ ಹೈಕೋರ್ಟ್ ಸಹ ಅದೇ ಅಭಿಪ್ರಾಯ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಶಿಕ್ಷೆಗೊಳಗಾದ ಜನಪ್ರತಿನಿಧಿಗಳ ಸ್ಥಾನ ರದ್ದು: ಶಾಸಕ ನೆಹರು ಓಲೇಕಾರ್‌ಗೊಂದು ನ್ಯಾಯ, ರಾಹುಲ್‌ಗೊಂದು ನ್ಯಾಯವೇ?


