ಅಝರ್ ಬೈಜಾನ್‌ನ ರಾಜಾಧಾನಿ ಬಾಕುವಿನಲ್ಲಿ 29ನೇ ವಿಶ್ವ ಹವಾಮಾನ ಶೃಂಗಸಭೆ (COP29) ನಡೆಯುತ್ತಿದೆ. ನವೆಂಬರ್ 11ರಂದು ಪ್ರಾರಂಭಗೊಂಡಿರುವ ಈ ಸಭೆ, 22ರವರೆಗೆ ಮುಂದುವರಿಯಲಿದೆ.
ಈ ಬಾರಿಯ ಹವಾಮಾನ ಶೃಂಗಸಭೆಯನ್ನು ‘finance COP’ ಎಂದು ಹೆಸರಿಸಲಾಗಿದೆ. ಈ ಮೂಲಕ ‘ಹಸಿರುಮನೆ ಅನಿಲ’ ಹೊರಸೂಸುವಿಕೆಯನ್ನು ಕಡಿಮೆ ಮಾಡುವಲ್ಲಿ ಕಡಿಮೆ-ಆದಾಯದ ದೇಶಗಳನ್ನು ಬೆಂಬಲಿಸಲು ಹಣಕಾಸು ನೆರವು ನೀಡುವ ಉದ್ದೇಶವನ್ನು ಪ್ರಮುಖವಾಗಿ ಹೊಂದಲಾಗಿದೆ.
ಹವಾಮಾನ ಬದಲಾವಣೆಯ ನಿಯಂತ್ರಣಕ್ಕೆ ಟ್ರಿಲಿಯನ್ ಡಾಲರ್ ಹಣ ಸಂಗ್ರಹಿಸುವುದು. ಅದನ್ನು ಅಭಿವೃದ್ದಿ ಹೊಂದುತ್ತಿರುವ ಮತ್ತು ಹಿಂದುಳಿದಿರುವ ರಾಷ್ಟ್ರಗಳಿಗೆ ಹವಾಮಾನ ಬಿಕ್ಕಟ್ಟು ಪರಿಹರಿಸಲು ನೀಡುವುದು ಈ ಬಾರಿಯ ಶೃಂಗಸಭೆಯ ಮುಖ್ಯ ಚರ್ಚೆಯಾಗಿದೆ.
ಈ ವಿಚಾರವೇ ವಿವಿಧ ದೇಶಗಳ ನಡುವೆ ಜಗಳಕ್ಕೆ ಕಾರಣವಾಗಿದೆ. ಒಂದೊಂದು ರಾಷ್ಟ್ರಗಳು ಒಂದೊಂದು ರೀತಿಯ ಅಭಿಪ್ರಾಯಗಳ ಪಟ್ಟು ಹಿಡಿದಿರುವುದರಿಂದ ಒಮ್ಮತಕ್ಕೆ ಬರಲು ಸಾಧ್ಯವಾಗುತ್ತಿಲ್ಲ.
ಸಂಪದ್ಭರಿತ ಅಥವಾ ಮುಂದುವರಿದ ರಾಷ್ಟ್ರಗಳು ವಾರ್ಷಿಕ 100 ಬಿಲಿಯನ್ ಡಾಲರ್ ನೆರವನ್ನು ಹವಾಮಾನ ಯೋಜನೆಗಳ ನಿಧಿಗೆ ನೀಡಬೇಕು ಎಂದು 2009ರಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆ ಒಪ್ಪಂದ ಈ ವರ್ಷ ಕೊನೆಗೊಳ್ಳಲಿದೆ. ಆದರೆ, ನಿಗದಿತ ಗುರಿ ತಲುಪಲು ಸಾಧ್ಯವಾಗಿಲ್ಲ. ಹಾಗಾಗಿ, ಇನ್ನೂ ಹೆಚ್ಚಿನ ನೆರವನ್ನು ನೀಡುವ ಒಪ್ಪಂದ ಮಾಡಿಕೊಳ್ಳಬೇಕು ಎಂಬುವುದು ಕೆಲ ರಾಷ್ಟ್ರಗಳ ವಾದ.
ಶ್ರೀಮಂತ ರಾಷ್ಟ್ರಗಳು ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಹೆಚ್ಚಿನ ಮೊತ್ತವನ್ನು ನೀಡಬೇಕು ಎಂಬ ಬಗ್ಗೆ ಚರ್ಚೆಯಾಗುತ್ತಿದೆ. ಆದರೆ, ಜಗತ್ತಿನ ದೊಡ್ಡಣ್ಣ ಎಣಿಸಿರುವ ಯುಎಸ್‌ನಲ್ಲಿ ಡೊನಾಲ್ಡ್ ಟ್ರಂಪ್ ಮತ್ತೆ ಅಧ್ಯಕ್ಷರಾಗಿರುವುದು ಹೆಚ್ಚಿನ ಮೊತ್ತ ಸಂಗ್ರಹಿಸಿರುವ ವಿಷಯದಲ್ಲಿ ಹಿನ್ನಡೆಗೆ ಕಾರಣವಾಗಬಹುದು.
ಜಾಗತಿಕ ತಾಪಮಾನ ನಿಯಂತ್ರಣ ಪ್ರಯತ್ನಗಳ ಹೆಗ್ಗುರುತಾಗಿರುವ ಪ್ಯಾರಿಸ್ ಒಪ್ಪಂದದಿಂದ ಹೊರ ನಡೆಯುವುದಾಗಿ ಎರಡನೇ ಬಾರಿಗೆ ಹೇಳಿರುವ ಡೊನಾಲ್ಡ್ ಟ್ರಂಪ್ ಆಡಳಿತವು, ಯುಎಸ್‌ನಿಂದ ನೀಡಲಾಗುವ ಹವಾಮಾನ ಹಣಕಾಸು ನೆರವು ನಿಲ್ಲಿಸಬಹುದು. ಇದು ಒಟ್ಟಾರೆ ಗುರಿಯನ್ನು ಸಂಭಾವ್ಯವಾಗಿ ಕುಗ್ಗಿಸಬಹುದು.
At a signing ceremony at #COP29Azerbaijan, the COP29 Presidency reaffirmed its support for the Fund for responding to Loss and Damage, moving from pledges to action. This marks an important milestone for the Fund which is now expected to start financing projects in 2025.… pic.twitter.com/mOdw6fLWcT
— COP29 Azerbaijan (@COP29_AZ) November 12, 2024
ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳು ನಿಧಿ ಸಂಗ್ರಹದಲ್ಲಿ ಗಣನೀಯ ಹೆಚ್ಚಳಕ್ಕೆ ಒತ್ತಾಯಿಸುತ್ತಿವೆ. ಕೆಲ ರಾಷ್ಟ್ರಗಳು ವಾರ್ಷಿಕ 1 ಟ್ರಿಲಿಯನ್ ಡಾಲರ್‌ಗಿಂತಲೂ ಹೆಚ್ಚು ಸಂಗ್ರಹಕ್ಕೆ ಕರೆ ಕೊಟ್ಟಿವೆ.
ಅರಬ್ ರಾಷ್ಟ್ರಗಳು 1.1 ಟ್ರಿಲಿಯನ್ ವಾರ್ಷಿಕ ಗುರಿಯನ್ನು ಪ್ರಸ್ತಾಪಿಸಿವೆ. ಇದರಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಂದ 441 ಶತಕೋಟಿ ನೇರ ಅನುದಾನ ಒಳಗೊಂಡಿದೆ. ಭಾರತ, ಆಫ್ರಿಕನ್ ದೇಶಗಳು ಮತ್ತು ಸಣ್ಣ ದ್ವೀಪ ರಾಷ್ಟ್ರಗಳು ಇದೇ ರೀತಿಯ ಅಂಕಿ ಅಂಶಗಳನ್ನು ಪ್ರಸ್ತಾಪಿಸಿದೆ. ಹವಾಮಾನ ಕ್ರಮದ ತುರ್ತು ಅಗತ್ಯವನ್ನು ಒತ್ತಿ ಹೇಳಿವೆ.
ಯಾವ ದೇಶಗಳು ಹೆಚ್ಚಿನ ಕೊಡುಗೆ ನೀಡಬೇಕು ಎಂಬುವುದರ ಕುರಿತ ಭಿನ್ನಾಭಿಪ್ರಾಯಗಳು ಮಾತುಕತೆ ಸವಾಲುಗಳಾಗಿ ಪರಿಣಮಿಸಿದೆ.
ಸಾಂಪ್ರದಾಯಿಕವಾಗಿ ಶ್ರೀಮಂತ ರಾಷ್ಟ್ರಗಳು ನೆರವು ನೀಡುವ ಭಾಧ್ಯತೆ ಹೊಂದಿವೆ. ಆದರೆ, ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳಾದರೂ, ಚೀನಾ ಮತ್ತು ಗಲ್ಫ್ ತೈಲ ರಾಷ್ಟ್ರಗಳು ವೇಗವಾಗಿ ಅಭಿವೃದ್ದಿ ಹೊಂದುತ್ತಿರುವ ಕಾರಣ, ಅವುಗಳೂ ನೆರವು ನೀಡಬೇಕು ಎಂಬ ಬೇಡಿಕೆಯಿದೆ. ಆದರೆ, ಇದನ್ನು ಚೀನಾ ವಿರೋಧಿಸಿದೆ. ತನ್ನನ್ನು ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರ ಎಂದೇ ಹೇಳಿಕೊಂಡಿದೆ.
COP29ರ ಹಣಕಾಸು ಮಾತುಕತೆಗಳ ಫಲಿತಾಂಶವು ನಿರ್ಣಾಯಕವಾಗಿದೆ. ಏಕೆಂದರೆ ಇದು ಮಹತ್ವಾಕಾಂಕ್ಷೆಯ ಹವಾಮಾನ ಯೋಜನೆಗಳನ್ನು ಕಾರ್ಯಗತಗೊಳಿಸುವ ದೇಶಗಳ ಸಾಮರ್ಥ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.
2050ರ ಹೊತ್ತಿಗೆ ಶೂನ್ಯ ಹೊರಸೂಸುವಿಕೆಯನ್ನು ಸಾಧಿಸುವುದು ಯಎನ್ ಹವಾಮಾನ ಯೋಜನೆಗಳ ಗುರಿಯಾಗಿದೆ. ಈ ಗಡುವು ಸಮೀಪಿಸುತ್ತಿದೆ. ಹೀಗಿರುವಾಗ ಸರಿಯಾದ ನೆರವು ಸಿಗದಿದ್ದರೆ ಆರ್ಥಿಕ ಕಾರಣಕ್ಕೆ ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳು ಹಿಂದುಳಿಯಬಹುದು.
ಶೃಂಗಸಭೆ ಮುಂದುವರೆಯುತ್ತಿದೆ. ಅದು ಅಂತ್ಯಗೊಳ್ಳುವ ಮುನ್ನ ಅಭಿವೃದ್ದಿ ಹೊಂದಿದ ರಾಷ್ಟ್ರಗಳ ಆರ್ಥಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಅವರಿಂದ ನೆರವು ಪಡೆಯುವುದು ಮತ್ತು ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳ ಹವಾಮಾನ ಯೋಜನೆಗಳಿಗೆ ನೆರವು ನೀಡುವುದು ಈ ಎರಡು ವಿಷಯಗಳಲ್ಲಿ ಒಮ್ಮತದ ಅಭಿಪ್ರಾಯ ಬರಬೇಕಿದೆ.
ಇದನ್ನೂ ಓದಿ : COP29 Azerbaijan : ಪಳೆಯುಳಿಕೆ ಇಂಧನ ಅರ್ಥಿಕತೆಯ ರಾಷ್ಟ್ರದಲ್ಲಿ ಹವಾಮಾನ ಶೃಂಗಸಭೆ


