Homeಮುಖಪುಟಕೊರೊನಾ ಸಮಯದಲ್ಲಿ ಪ್ರೈಡ್ ತಿಂಗಳು; ಸಮಸ್ಯೆಗಳ ಸಾಗರಕ್ಕೆ ಆತ್ಮಗೌರವವೇ ಸಮಾಧಾನ

ಕೊರೊನಾ ಸಮಯದಲ್ಲಿ ಪ್ರೈಡ್ ತಿಂಗಳು; ಸಮಸ್ಯೆಗಳ ಸಾಗರಕ್ಕೆ ಆತ್ಮಗೌರವವೇ ಸಮಾಧಾನ

- Advertisement -
- Advertisement -

ಜೂನ್ ತಿಂಗಳನ್ನು ಪ್ರೈಡ್ (ಲೈಂಗಿಕ ಅಲ್ಪಸಂಖ್ಯಾತರ ಸಂಭ್ರಮ) ತಿಂಗಳಾಗಿ ಆಚರಿಸಲಾಗುತ್ತದೆ. ಹಾಗಾಗಿ, ಹಲವಾರು ಮಾಧ್ಯಮದ ಜನರು ಎಲ್‌ಜಿಬಿಟಿಕ್ಯುಕ್ಯುಐಎ (lesbian, gay, bisexual, transgender, queer, questioning, intersex and allies) ಸಮುದಾಯದ ವ್ಯಕ್ತಿಗಳನ್ನು ಸಂಪರ್ಕಿಸಿ, ಲೈಂಗಿಕ ಅಲ್ಪಸಂಖ್ಯಾತರ ಮತ್ತು ಅಂತರಲಿಂಗಿ (ಟ್ರಾನ್ಸ್) ವ್ಯಕ್ತಿಗಳ ಸ್ಥಿತಿಗತಿಗಳನ್ನು ಅರಿಯಲು ನಮ್ಮನ್ನು ಸಂಪರ್ಕಿಸಿದರು. ಗೌರಿ ಲಂಕೇಶ್ ಮಾಧ್ಯಮವು ಒಂದು ಟಿಪಿಕಲ್ ಹಣದಾಸೆಯಲ್ಲಿರುವ, ಕೃತಕ ಪ್ರಕಟಣಾ ಸಂಸ್ಥೆಯಾಗಿರದೇ, ಪ್ರಾಮಾಣಿಕ ಓದುಗರಿಗೆ ತಳಮಟ್ಟದಲ್ಲಿಯ ಸ್ಥಿತಿಗತಿಯ ವಾಸ್ತವವನ್ನು ತಲುಪಿಸಲು ಪ್ರಯತ್ನಿಸುತ್ತಿರುವ ಸಂಸ್ಥೆಯಾಗಿರುವುದರಿಂದ ಈಗ ನಾನು ಈ ಸಮುದಾಯದ ಸ್ಥಿತಿಯ ವಾಸ್ತವ ಚಿತ್ರಣವನ್ನು ಬರೆಯಲು ಪ್ರಯತ್ನಿಸುವೆ. ಸಾಮಾನ್ಯವಾಗಿ ಎಲ್‌ಜಿಬಿಟಿಕ್ಯುಕ್ಯುಐಎ ಸಮುದಾಯದ ಬಗ್ಗೆ ಎಲ್ಲವನ್ನೂ ರೋಚಕಗೊಳಿಸಲಾಗುತ್ತದೆ, ಆದರೆ, ವಾಸ್ತವದಲ್ಲಿ ಈ ಸಮುದಾಯದ ಸ್ಥಿತಿಯು ಕಿಂಚಿತ್ತೂ ಬದಲಾಗಿಲ್ಲ.

ಕೊರೊನಾ ಕಾರಣದಿಂದ ವಿಧಿಸಲಾದ ಲಾಕ್‌ಡೌನ್‌ದಿಂದ ಇನ್ನಷ್ಟು ಸಂಕಷ್ಟಕ್ಕೊಳಗಾದ ಸಮುದಾಯದ ಚಿತ್ರಣ ಹೊರಬಂದಿದೆ. ಅಂತರಲಿಂಗಿ ಸಮುದಾಯದ ಜನರು ಜೀವನೋಪಾಯ ಕಳೆದುಕೊಂಡಿರುವುದು ವ್ಯಾಪಕವಾಗಿದೆ. ಸಾಂಪ್ರದಾಯಿಕ ಅಂತರಲಿಂಗಿಗಳಾದ ಹಿಜಡಾ ಮತ್ತು ಕಿನ್ನರ ಸಮುದಾಯದವರಿಗೆ ನಮ್ಮ ಬ್ರಾಹ್ಮಣ್ಯದ ಪಿತೃಪ್ರಧಾನ ವ್ಯವಸ್ಥೆಯಲ್ಲಿ ವಹಿಸಲಾದ ಕೆಲಸಗಳು ಈಗಾಗಲೇ ಮುಖ್ಯವಾಹಿನಿಯ ಸಮಾಜದಲ್ಲಿ ಅತ್ಯಂತ ಕಳಂಕಿತವಾದ ಕೆಲಸಗಳಾಗಿವೆ ಹಾಗೂ ಲಾಕ್‌ಡೌನ್ ಅವಧಿಯಲ್ಲಿ ಬಧಾಯಿ ಟೋಲಿ/ಮಾಂಗ್ತಿ ಮತ್ತು ಲೈಂಗಿಕ ವೃತ್ತಿಗಾಗಿ ನೃತ್ಯ ಮುಂತಾದ ಕೆಲಸಗಳು ಸಂಪೂರ್ಣವಾಗಿ ನಿಂತುಹೋಗಿವೆ.

ನಮ್ಮ ದೇಶದ ಪೊಲೀಸರು ಅಂತರಲಿಂಗಿ ಸಮುದಾಯದ ಶತ್ರುಗಳಂತೆ ವರ್ತಿಸಿದ್ದು, ಲಾಕ್‌ಡೌನ್‌ಅನ್ನು ಒಂದು ಸಾರ್ವಜನಿಕ ಆರೋಗ್ಯದ ವಿಷಯವಾಗಿ ಜಾರಿಗೊಳಿಸದೇ ಅದನ್ನು ದುಡಿಯುವ ವರ್ಗಕ್ಕೆ ಮತ್ತು ಅಂಚಿನಲ್ಲಿರುವ ಸಮುದಾಯಗಳನ್ನು ಹಿಂಸಿಸಲು ಒಂದು ನೆಪ ಮಾಡಿಕೊಂಡ ಹಾಗೆ ಕಾಣಿಸುತ್ತಿದೆ; ಈ ಸಮುದಾಯದವರು ತಮ್ಮ ಹೊಟ್ಟೆಪಾಡಿಗಾಗಿ ಹೊರಗೆ, ರಸ್ತೆಗೆ ಬರಲೇಬೇಕು. ಲೈಂಗಿಕ ವೃತ್ತಿ ಮತ್ತು ಭಿಕ್ಷಾಟನೆಯನ್ನು ಸಂಪೂರ್ಣವಾಗಿ ನಿಲ್ಲಿಸಲು ಈ ಲಾಕ್‌ಡೌನ್‌ಅನ್ನು ಒಂದು ಅಸ್ತ್ರವನ್ನಾಗಿ ಬಳಸಿದ್ದಾರೆ; ಹಾಗಾಗಿ ಈ ಸಮುದಾಯದವರನ್ನು ತಮ್ಮ ಜೀವನೋಪಾಯದಿಂದ ವಂಚಿತಗೊಳಿಸಿದ್ದಾರೆ ಹಾಗೂ ಅಂತರಲಿಂಗಿಗಳನ್ನು ಗುರಿಯಾಗಿಸಿ ಮಾಡಿದ ಹಿಂಸೆಯ ಪ್ರಮಾಣವು ಹೆಚ್ಚಾಗಿರುವುದು ಕಂಡುಬಂದಿದೆ.

ಮದುವೆ ಸಮಾರಂಭಗಳನ್ನು ಮತ್ತು ಬಾರ್‌ಗಳನ್ನು ನಿರ್ಬಂಧಿಸಿರುವುದರಿಂದ, ಅಲ್ಲಿಯ ಕೆಲಸವೂ ಇಲ್ಲವಾಗಿದೆ. ಆಹಾರ ಸಾಗಿಸುವ ಲಾರಿಗಳಲ್ಲಿ ಕೆಲಸ ಮಾಡುವ ಅಥವಾ ಟ್ಯಾಕ್ಸಿ ಚಾಲನೆ ಮಾಡುವ ಟ್ರಾನ್ಸ್‌ಪುರುಷರೂ ಅತ್ಯಂತ ಗಂಭೀರ ಆರ್ಥಿಕ ಬಿಕ್ಕಟ್ಟನ್ನು ಎದರಿಸಬೇಕಾಗಿದೆ. ಹಾಗಾಗಿ ಸಂಕಷ್ಟದ ಸಮಯದಲ್ಲಿ ಮಾಡುವ ಸ್ವ ಉದ್ಯೋಗಕ್ಕೂ ಕುತ್ತು ಬಂದಿದೆ. ಔಪಚಾರಿಕ ಮತ್ತು ಅನೌಪಚಾರಿಕ ಈ ಎರಡೂ ವಲಯಗಳಲ್ಲಿ ವ್ಯಾಪಕ ತಾರತಮ್ಯ ಎದುರಿಸುವ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳಿಗೆ ಸಂಕಷ್ಟದ ಸ್ವಉದ್ಯೋಗವೊಂದೇ ಹೊಟ್ಟೆ ತುಂಬಿಸುವ
ದಾರಿಯಾಗಿತ್ತು, ಅದರಿಂದಲೇ ಈ ಸಮುದಾಯ ಜೀವನ ಸಾಗಿಸುತ್ತಿದ್ದವು. ಈಗ ಅದಕ್ಕೂ ಕುತ್ತು ಬಂದಿದೆ.

PC : Gay Star News

ಈ ಆರ್ಥಿಕ ಬಿಕ್ಕಟ್ಟಿನ ಕಾರಣದಿಂದ ಬಹಳಷ್ಟು ಟ್ರಾನ್ಸ್‌ಜೆಂಡರ್ ಮತ್ತು ಲೈಂಗಿಕ ಅಲ್ಪಸಂಖ್ಯಾತರು ಒಂದೋ ತಮ್ಮ ಜೈವಿಕ ಕುಟುಂಬಗಳೊಂದಿಗೆ ಅಥವಾ ತಮ್ಮ ಹಿಂಸಾತ್ಮಕ ಸಂಗಾತಿಗಳೊಂದಿಗೆ ಜೀವಿಸಬೇಕಾದ ಪರಿಸ್ಥಿತಿ ಬಂದೊದಗಿದೆ. ಹಾಗೂ ಅದರಿಂದಾಗಿ ಅನೇಕರು ಈ ಲಾಕ್‌ಡೌನ್ ಅವಧಿಯಲ್ಲಿ ಹೆಚ್ಚಿನ ನಿಂದನೆ ಮತ್ತು ಹಿಂಸೆಯನ್ನು ಅನುಭವಿಸಿದ್ದಾರೆ. ಅನೇಕ ಲೈಂಗಿಕ ಅಲ್ಪಸಂಖ್ಯಾತ ಕುಟುಂಬಗಳು ಪರಸ್ಪರ ಪ್ರತ್ಯೇಕಗೊಂಡು, ತಮ್ಮ ಲಿಂಗ ಮತ್ತು ಲೈಂಗಿಕತೆಯನ್ನು ಒಪ್ಪಿಕೊಳ್ಳದ ಸ್ಥಳಗಳಲ್ಲಿ ವಾಸಿಸುವ ಪರಿಸ್ಥಿತಿ ಬಂದಿದೆ.

ಇದರೊಂದಿಗೆ ಅನೇಕ ಟ್ರಾನ್ಸ್‌ಜೆಂಡರ್ ಮತ್ತು ಲೈಂಗಿಕ ಅಲ್ಪಸಂಖ್ಯಾತ ವ್ಯಕ್ತಿಗಳಿಗೆ ದೈಹಿಕ ಡಿಸ್‌ಫೊರಿಯ ಹೆಚ್ಚಿರುವುದನ್ನು ಅನುಭವಿಸಿದ್ದಾರೆ- ಫಿಸಿಕಲ್ ಡಿಸ್‌ಫೊರಿಯ ಎಂದರೆ ಸ್ವಂತ ತನ್ನದೇ ದೇಹದೊಂದಿಗೆ ಗುರುತಿಸಿಕೊಳ್ಳುವದು ಕಷ್ಟ ಆಗುವುದು ಅಥವಾ ತುಂಬಾ ಅಂತರ ಅನುಭವಿಸುವುದು ಎನ್ನಬಹುದು. ಲಾಕ್‌ಡೌನ್‌ನಿಂದಾದ ಪ್ರತ್ಯೇಕಿಸುವಿಕೆ ಮತ್ತು ಗಮನವನ್ನು ಬೇರೆಡೆ ಹರಿಸಲು ದಾರಿ ಇಲ್ಲದ ಕಾರಣದಿಂದ ಹಲವಾರು ಟ್ರಾನ್ಸ್‌ಜೆಂಡರ್ ವ್ಯಕ್ತಿಗಳಿಗೆ ತಮ್ಮ ಲಿಂಗವನ್ನು ದೃಢೀಕರಿಸುವ ಆಪ್ತಸಮಾಲೋಚನೆಯ ಅಗತ್ಯ ಕಂಡುಬಂದಿತು ಹಾಗೂ ಹಾರ್ಮೋನ್ ಥೆರಪಿ ಮತ್ತು ಸರ್ಜರಿಗಳ ಅಗತ್ಯವೂ ಕಂಡುಬಂದಿದೆ. ಆದರೆ, ಕೋವಿಡ್ ಸಂಬಂಧಿತ ಆಸ್ಪತ್ರೆಗಳ ನಿಯಮಾವಳಿಗಳ ಕಾರಣದಿಂದ ಹೆಚ್ಚಿನ ಟ್ರಾನ್ಸ್ ವ್ಯಕ್ತಿಗಳಿಗೆ ಅತ್ಯಂತ ಅಗತ್ಯವಿರುವ ಸಮಯದಲ್ಲಿ, ಅವರ ಮಾನಸಿಕ ಆರೋಗ್ಯ ವ್ಯಾಪಕವಾಗಿ ಕುಸಿಯುತ್ತಿರುವ ಸಂದರ್ಭದಲ್ಲಿ ಲಿಂಗ ಸಂಬಂಧಿತ ಆರೈಕೆ ಸಿಗಲಿಲ್ಲ. ಅದಕ್ಕಿಂತ ದುಃಖದ ಸಂಗತಿಯೆಂದರೆ, ಎಚ್‌ಐವಿ ಸೋಂಕು ಹೊಂದಿರುವ ಲೈಂಗಿಕ ಅಲ್ಪಸಂಖ್ಯಾತರಿಗೆ ಕೋವಿಡ್ ಸೋಂಕು ತಗುಲಿದಾಗ ಅವರು ಪಟ್ಟ ಪಾಡು ಶೋಚನೀಯವಾಗಿತ್ತು. ಯಾವ ಆಸ್ಪತ್ರೆಗೆ ಹೋದರೂ ಅವರನ್ನು ಸೇರಿಸಿಕೊಳ್ಳಲಿಲ್ಲ ಹಾಗೂ ಅವರಲ್ಲಿ ಸಾವಿನ ಸಂಖ್ಯೆಯೂ ಗಣನೀಯವಾಗಿ ಹೆಚ್ಚಿತ್ತು.

ಜೂನ್ ತಿಂಗಳಲ್ಲಿ ಕಾರ್ಪೊರೇಟ್ ಜಗತ್ತು ಕೂಡ ಎಲ್‌ಜಿಬಿಟಿಕ್ಯುಕ್ಯುಐಎ ಸಮುದಾಯದ ಬಗ್ಗೆ ಸಾಂಸ್ಥಿಕ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತದೆ. ಆಗ ಆ ಕಾರ್ಯಕ್ರಮಗಳಲ್ಲಿ ಮಾತನಾಡಲು ಸಮುದಾಯದ ಭಾಷಣಕಾರರನ್ನು ಸಂಪರ್ಕಿಸಲಾಗುತ್ತದೆ. ಈ ವರ್ಷ ಲಾಕ್‌ಡೌನ್ ಕಾರಣದಿಂದ ಪ್ರೈಡ್ ತಿಂಗಳನ್ನು ಆಚರಿಸುವುದು ಕಷ್ಟವಾಗಿತ್ತು, ಆದರೆ ಸಾಮಾನ್ಯವಾಗಿ ಪ್ರೈಡ್‌ನ ಪರಿಕಲ್ಪನೆ ಏನು ಎಂದು ಎಲ್ಲರಿಗೆ ತಿಳಿಸಲು ಮಾಧ್ಯಮಗಳು ಮತ್ತು ಕಾರ್ಪೊರೇಟ್ ಜಗತ್ತು ಟ್ರಾನ್ಸ್‌ಜೆಂಡರ್ ವ್ಯಕ್ತಿಗಳಿಂದ ಉಚಿತ ದುಡಿಮೆಯನ್ನು ಬಳಸಿಕೊಳ್ಳುತ್ತಾರೆ, ಆದರೆ ಟ್ರಾನ್ಸ್ ವ್ಯಕ್ತಿಗಳ ಜೀವನದಲ್ಲಿ ಯಾವುದೇ ರಚನಾತ್ಮಕ ಬದಲಾವಣೆಗಳು ಆಗದೇ, ಅವರ ಜಗತ್ತು ಹಾಗೆಯೇ ಮುಂದುವರೆಯುತ್ತದೆ.

ತಾರತಮ್ಯ ವಿರೋಧಿ ಕಾನೂನುಗಳಿಲ್ಲದೆ, ಯಾವುದೇ ಸಾಮಾಜಿಕ ಸುರಕ್ಷತೆ ಮತ್ತು ಜೀವನೋಪಾಯದ ಖಾತ್ರಿ ಇಲ್ಲದೆ, ಆರೋಗ್ಯ ಸೇವೆ ಇಲ್ಲದೇ, ನಾಗರಿಕ ಹಕ್ಕುಗಳಿಲ್ಲದೆ ಹಾಗೂ ಎಲ್‌ಜಿಬಿಟಿಕ್ಯುಕ್ಯುಐಎ ವಿರೋಧಿ ಶಾಸನಾತ್ಮಕ ಕ್ರಮಗಳು ಹೆಚ್ಚುತ್ತಿರುವ ಸಮಯದಲ್ಲಿ ಎಲ್‌ಜಿಬಿಟಿಕ್ಯುಕ್ಯುಐಎ ಸಮುದಾಯಗಳಾದ ನಾವು ಆತ್ಮಗೌರವದಿಂದಲೇ ನಮ್ಮ ಮೇಲೆ ಎಸೆಯಲಾಗುತ್ತಿರುವ ಸಾಮಾಜಿಕ ಕಳಂಕವನ್ನು ಎದುರಿಸಬಲ್ಲೆವು ಎಂಬ ಆಸೆಯೊಂದಿಗೆ ಹೆಜ್ಜೆಗಳನ್ನು ಮುಂದಿಡುತ್ತಿದ್ದೇವೆ.

ಕಾರ್ತಿಕ್ ಬಿಟ್ಟು

ಕಾರ್ತಿಕ್ ಬಿಟ್ಟು
ಕರ್ನಾಟಕದ ಒಂದು ತಮಿಳು ಕುಟುಂಬದಲ್ಲಿ ಹುಟ್ಟಿ, ಬೆಂಗಳೂರು, ಹೈದರಾಬಾದ್ ಮತ್ತು ಹರಿಯಾಣದಲ್ಲಿ ಕೆಲಸ ಮಾಡಿದ್ದಾರೆ. ಅನೇಕ ಸಮುದಾಯಗಳ ಚಳವಳಿಗಳಲ್ಲಿ ತೊಡಗಿಸಿಕೊಂಡಿರುವ ಬಿಟ್ಟು ನಮ್ಮ ಸಮಯದ ಒಬ್ಬ ಇಂಟಲೆಕ್ಚುವಲ್ ಆಕ್ಟಿವಿಸ್ಟ್.

ಕನ್ನಡಕ್ಕೆ: ರಾಜಶೇಖರ್ ಅಕ್ಕಿ


ಇದನ್ನೂ ಓದಿ: 11 ವರ್ಷಕ್ಕೆ ಮನೆ ಬಿಟ್ಟ, ಪದ್ಮಶ್ರಿ ಪಡೆದ, ತಮಿಳುನಾಡು ಸರ್ಕಾರದ ಭಾಗವಾದ ತೃತೀಯ ಲಿಂಗಿ ಭರತನಾಟ್ಯ ಕಲಾವಿದೆ ನರ್ತಕಿ… 

ಇದನ್ನೂ ಓದಿ: ಅಕ್ಕಯ್ ಸಂದರ್ಶನ; ಮಂಗಳ ಮತ್ತು ಅಮಂಗಳ ಅನ್ನುವಂತದ್ದೆಲ್ಲ ಬ್ರಾಹ್ಮಣ್ಯ ಪ್ರೇರಿತ; ಇರುವುದು ಮನುಷ್ಯರು ಮತ್ತು ವೈವಿಧ್ಯತೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...