ಅವರು 11 ರ ಬಾಲ್ಯದಲ್ಲೇ ಮನೆಯಿಂದ ಹೊರಹಾಕಲ್ಪಟ್ಟವರು. ಅಂದು ಪೋಷಕರು, ಸಮಾಜ ಯಾರಿಗೂ ಬೇಡವಾದವರು. ತೃತೀಯ ಲಿಂಗಿಗಳೆಂಬ ಕಾರಣಕ್ಕೆ ಎಲ್ಲರಿಂದಲೂ ದ್ವೇಷಿಸಲ್ಪಟ್ಟವರು. ಆದರೆ ಹಠಕ್ಕೆ, ಅವಮಾನವನ್ನು ಮೆಟ್ಟಿ ನಿಲ್ಲಬೇಕೆಂಬ ಛಲಕ್ಕೆ ಕೊನೆಯಿಲ್ಲ. ಒಂದೊಮ್ಮೆ ತನ್ನವರಿಂದಲೇ ಎಸೆಯಲ್ಪಟ್ಟಿದ್ದ ವ್ಯಕ್ತಿ ಇಂದು ನೂರಾರು ಜನರಿಗೆ ರೋಲ್ ಮಾಡೆಲ್ ಆಗಿ ಗುರುತಿಸಿಕೊಂಡಿದ್ದಾರೆ. 2019 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆಯುತ್ತಾರೆ. ಆ ಮೂಲಕ ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಪದ್ಮ ಪ್ರಶಸ್ತಿಯನ್ನು ಪಡೆದ ತೃತೀಯ ಲಿಂಗಿ ಎಂಬ ಹೆಗ್ಗಳಿಕೆಗೂ ಪಾತ್ರರಾಗುತ್ತಾರೆ. ಅವರು ಮತ್ತಾರೂ ಅಲ್ಲ. ದೇಶದ ಸುಪ್ರಸಿದ್ದ ಭರತನಾಟ್ಯ ಕಲಾವಿದೆ ನರ್ತಕಿ ನಟರಾಜನ್. ಇಂದು ತಮಿಳು ನಾಡು ಸರ್ಕಾರ ನರ್ತಕಿ ನಟರಾಜನ್ ಅವರನ್ನು ರಾಜ್ಯದ ಡೆವೆಲಪ್‌ಮೆಂಟ್ ಕೌನ್ಸಿಲ್‌ನ (SDPC) ಸದಸ್ಯರನ್ನಾಗಿ ನೇಮಿಸಿದೆ. ತಮಿಳು ನಾಡು ಡೆವಲಪ್ ಮೆಂಟ್ ಕೌನ್ಸಿಲ್ ಸದಸ್ಯರಾಗಿ ನೇಮಕಗೊಂಡ ನರ್ತಕಿ ನಟರಾಜನ್ ರಾಜ್ಯದ ಅಭಿವೃದ್ಧಿ ಮತ್ತು ತೃತೀಯ ಲಿಂಗಿಗಳ ಅಭಿವೃದ್ಧಿಗಾಗಿ ಶ್ರಮಿಸುವುದಾಗಿ ಹೇಳಿದ್ದಾರೆ.
ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಭಾನುವಾರ ನರ್ತಕಿ ನಟರಾಜನ್ ಅವರನ್ನು ಎಂಟು ಜನ ಸದಸ್ಯರನ್ನೊಳಗೊಂಡ ಅಭಿವೃದ್ಧಿ ಕೌನ್ಸಿಲ್‌ನ ಸದಸ್ಯರನ್ನಾಗಿ ನೇಮಿಸಿರುವುದು ಕಲಾವಿದರಿಗೆ ಕೊಟ್ಟ ದೊಡ್ಡ ಅವಕಾಶ. ಎಲ್‌ಜಿಬಿಟಿಕ್ಯೂ ಸಮುದಾಯಕ್ಕೆ ಸಿಕ್ಕ ದೊಡ್ಡ ಪ್ರಾತಿನಿಧ್ಯ. ನರ್ತಕಿ ನಟರಾಜನ್ ಕೇವಲ ಎಲ್‌ಜಿಬಿಟಿ ಸಮುದಾಯದ ಪ್ರತಿನಿಧಿ ಎಂಬ ಕಾರಣಕ್ಕೆ ಮಾತ್ರ ಅವರಿಗೆ ಈ ಅವಕಾಶ ದೊರೆತಿಲ್ಲ. ಬದಲಾಗಿ ನರ್ತಕಿ ನಟರಾಜನ್ ಕಲೆಗೆ ನೀಡಿದ ಅಪಾರ ಕೊಡುಗೆಯನ್ನು ಪರಿಗಣಿಸಿ ಸರ್ಕಾರ ಈ ಜವಾಬ್ಧಾರಿಯನ್ನು ನೀಡಿದೆ. ನಟರಾಜನ್ ಈಗಾಗಲೇ ಪದ್ಮಶ್ರೀ ಪ್ರಶಸ್ತಿ ಸೇರಿ ದೇಶ ವಿದೇಶಗಳ ಹಲವಾರು ಪ್ರಶಸ್ತಿ ಗೌರವಗಳಿಗೆ ಭಾಜನರಾಗಿದ್ದಾರೆ. ಆದರೆ ತಮಿಳುನಾಡು ಸರ್ಕಾರ ನೀಡಿರುವ ಹೊಸ ಜವಾಬ್ದಾರಿ ಕಲಾವಿದೆಯಾಗಿ, ತೃತೀಯ ಲಿಂಗಿಗಳ ಪ್ರತಿನಿಧಿಯಾಗಿ ಅವರ ಹೊಣೆಗಾರಿಕೆಯನ್ನು ಹೆಚ್ಚಿಸಿದೆ. ಮೊಟ್ಟ ಮೊದಲಬಾರಿಗೆ ತಮಿಳುನಾಡಿನ ಅಭಿವೃದ್ಧಿ ಪ್ರಾಧಿಕಾರಕ್ಕೆ ಕಲಾವಿದೆಯನ್ನು ಆಯ್ಕೆ ಮಾಡಿರುವುದು ನರ್ತಕಿ ನಟರಾಜನ್ ಅವರಿಗೆ ಮತ್ತು ಎಲ್ಲರಿಗೂ ಅತ್ಯಂತ ಹೆಮ್ಮೆಯ ಸಂಗತಿಯೆಂಬುದರಲ್ಲಿ ಎರಡು ಮಾತಿಲ್ಲ.
ಇದನ್ನೂ ಓದಿ: ಬ್ರಿಟೀಷರ ಎದೆ ನಡುಗಿಸಿದ್ದ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ
ಅನೇಕ ತೃತೀಯ ಲಿಂಗಿಗಳು ಸೂಕ್ತ ಚಿಕಿತ್ಸೆ ಸಿಗದೇ ಮತ್ತು ಕೋವಿಡ್ ಸಾಂಕ್ರಾಮಿಕದ ಕಾರಣದಿಂದ ನಿರುದ್ಯೋಗಿಗಳಾಗಿ ಹಸಿವು ಮತ್ತು ಬಡತನದಿಂದ ಮೃತಪಟ್ಟಿದ್ದಾರೆ. ಆದರೆ ದೇಶಕ್ಕೆ ಮತ್ತು ಸಮಾಜಕ್ಕೆ ಅವರ ಬಗ್ಗೆ ಕಾಳಜಿಯಿಲ್ಲ. ನಾವು ಇನ್ನುಮುಂದೆ ತೃತೀಯ ಲಿಂಗಿಗಳನ್ನು ಸಮಾಜದ ಭಾಗವಾಗಿ ಪರಿಗಣಿಸುವ ಅವಶ್ಯಕತೆ ಇದೆ. ಅವರಿಗೆ ಉದ್ಯೋಗಾವಕಾಶಗಳನ್ನು ನೀಡಲು ಮುಂದಾಗಬೇಕು. ಅದರಿಂದ ತೃತೀಯ ಲಿಂಗಿಗಳ ಬಡತನ ಕಡಿಮೆಯಾಗುತ್ತದೆಯಲ್ಲದೇ ಸಮಾಜದಲ್ಲಿ ಘನತೆಯಿಂದ ಬದುಕಲು ಸಾಧ್ಯ ಎಂದು ನರ್ತಕಿ ನಟರಾಜನ್ ಅಭಿಪ್ರಾಯ ಪಡುತ್ತಾರೆ.
ಡೆವಲೆಪ್‌ಮೆಂಟ್ ಕೌನ್ಸಿಲ್‌ನ ಭಾಗವಾಗುವ ಮುಂಚೆಯೇ ತೃತೀಯ ಲಿಂಗಿಗಳಿಗೆ ನೃತ್ಯ ತರಬೇತಿಯನ್ನು ನೀಡುವ ಒಂದು ಕೇಂದ್ರವನ್ನು ಸ್ಥಾಪಿಸುವ ಯೋಚನೆ ನನ್ನಲ್ಲಿತ್ತು. ಈ ಹೊಸ ಅವಕಾಶದಿಂದ ನನ್ನ ಯೋಚನೆಯನ್ನು ಸಾಕಾರಗೊಳಿಸುವ ಪ್ರಯತ್ನಕ್ಕೆ ಬಲ ಬಂದಿದೆ ಎಂದು ನಟರಾಜನ್ ತಮ್ಮ ನೃತ್ಯ ಕೇಂದ್ರದ ಬಗ್ಗೆಯೂ ಮಾತನಾಡುತ್ತಾರೆ.
ತೃತೀಯ ಲಿಂಗಿಗಳನ್ನು ಮತ್ತು ಎಲ್‌ಜಿಬಿಟಿಗಳನ್ನು ಸಮಾಜದಲ್ಲಿ ಎಲ್ಲರಂತೆಯೇ ಕಾಣುವ ದಿನಗಳು ಬರಬೇಕು. ಮುಜುಗರದಿಂದ, ಹಿಂಜರಿಕೆಯಿಂದ ತಮ್ಮ ಕನಸುಗಳನ್ನು ಸಾಕಾರಗೊಳಿಸಲು ಸಾಧ್ಯವಾಗದ ತೃತೀಯ ಲಿಂಗಿಗಳ ಸಮುದಾಯದ ಅನೇಕರಿಗೆ ನರ್ತಕಿ ನಟರಾಜನ್ ಸಾಧನೆ ಒಂದಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.
ನರ್ತಕಿ ನಟರಾಜನ್ ಸಾಧನೆಯ ದಾರಿ
ತಮಿಳುನಾಡಿನ ಒಂದು ಸಾಮಾನ್ಯ ಹಳ್ಳಿಯಲ್ಲಿ ಹುಟ್ಟಿದ ನರ್ತಕಿ ನಟರಾಜನ್ ಜೀವನದ ಹಾದಿ ಅಷ್ಟು ಸರಳವಾಗಿರಲಿಲ್ಲ. ಸಾಕಷ್ಟು ಅವಮಾನ, ತಿರಸ್ಕಾರಗಳ ನಡುವೆಯೇ ಅವರು ಸಂಘರ್ಷಗಳನ್ನು ನಡೆಸುತ್ತ ಜೀವನದ ಅನೇಕ ಘಟ್ಟಗಳನ್ನು ದಾಟಿ ಬಂದಿದ್ದಾರೆ. ನರ್ತಕಿ ನಟರಾಜನ್ ತಮಿಳುನಾಡಿನ ಮಧುರೈ ಜಿಲ್ಲೆಯ ಅನುಪ್ಪನಾಡಿ ಎಂಬ ಕುಗ್ರಾಮದಲ್ಲಿ 1984 ರಲ್ಲಿ ಜನಸಿದರು. ಒಂಭತ್ತು ಜನ ಒಡಹುಟ್ಟಿದವರೊಂದಿಗೆ ನರ್ತಕಿ ನಟರಾಜನ್ ಬಾಲ್ಯ ಅತ್ಯಂತ ಬಡತನದಿಂದ ಕೂಡಿತ್ತು. ಅವರಿಗೆ 10 ವರ್ಷವಾಗಿದ್ದ ಪೋಷಕರು ನರ್ತಕಿ ನಟರಾಜನ್ ಅವರ ವರ್ತನೆಯಲ್ಲಿನ ಬದಲಾವಣೆಗಳನ್ನು ಗುರುತಿಸಿದರು. ಆನಂತರ ಕುಟುಂಬದಿಂದ ತಿರಸ್ಕ್ರತರಾಗಿ ನಟರಾಜನ್ ತಮ್ಮ 11 ವಯಸ್ಸಿನಲ್ಲಿ ಮನೆ ಮತ್ತು ಸ್ವಗ್ರಾಮದಿಂದ ಹೊರಗೆ ಹೋಗಬೇಕಾಯಿತು. ಸ್ನೇಹಿತ ಶಕ್ತಿ ಭಾಸ್ಕರ್ ಅವರ ಜೊತೆ ಸೇರಿ ತಂಜಾವೂರಿಗೆ ನಟರಾಜನ್ ಓಡಿಹೋದರು. ಅಲ್ಲಿ ಅವರು ಕಿಟ್ಟಪ್ಪ ಪಿಲ್ಲೈ ಎಂಬ ಭರತನಾಟ್ಯ ಗುರುವಿಗಾಗಿ ಹುಡುಕಾಡಿದರು.
ಅನೇಕ ವರ್ಷಗಳ ನಂತರ ಆ ಕಾಲದ ಪ್ರಸಿದ್ಧ ಭರತನಾಟ್ಯ ಕಲಾವಿದ ಮತ್ತು ಗುರುವಾದ ಕಿಟ್ಟಪ್ಪ ಪಿಳ್ಳೈ ಅವರು ನರ್ತಕಿ ನಟರಾಜನ್ ಅವರಿಗೆ ಭರತನಾಟ್ಯ ತರಬೇತಿ ನೀಡಲು ಒಪ್ಪಿದರು. ಈ ಅವಧಿಯಲ್ಲಿ ನಟರಾಜನ್ ಅನೇಕ ಸಾರಿ ಪಿಳ್ಳೈ ಅವರನ್ನು ಕಾಡಿ ಬೇಡಿ ಇತರರಿಂದ ಅವಮಾನಗಳನ್ನು ಎದುರಿಸಿದರು. ಮುಂದೆ ನಟರಾಜನ್ ಅವರಿಗೆ ಗುರು ಕಿಟ್ಟಪ್ಪ ಪಿಳ್ಳೈ ಅವರೇ ʼನರ್ತಕಿʼ ಎಂಬ ಬಿರುದು ನೀಡಿದರು.
ಇದು ತಮಿಳು ನಾಡಿನ ಇತಿಹಾಸದಲ್ಲಿಯೇ ದೊಡ್ಡ ಘಟನೆಯಾಗಿತ್ತು. ಮತ್ತು ನಟರಾಜನ್ ವಿಚಾರದಲ್ಲಿ ಹಲವು ವಿವಾದಗಳು ಎದ್ದವು. ಭರತನಾಟ್ಯಂ ಎಂಬ ಶಾಸ್ತ್ರೀಯ ದೈವದತ್ತ ಕಲೆಯನ್ನು ಪಿಳ್ಳೈ ಅವರು ಭೃಷ್ಟಗೊಳಿಸಿದರು ಎಂಬ ಅಪವಾದಗಳು ತಮಿಳುನಾಡಿನಲ್ಲಿ ಕೇಳಿಬಂದವು. ಆದರೆ ನರ್ತಕಿ ನಟರಾಜನ್ ಯಾವ ನಿಂದನೆಗಳಿಗೂ ಜಗ್ಗಲಿಲ್ಲ. ಸತತ 15 ವರ್ಷ ನೃತ್ಯಾಭ್ಯಾಸ ಮಾಡಿದರು. ತಂಜಾವೂರಿನ ನಾಯಕಿ ಭಾವ ನೃತ್ಯ ಶೈಲಿಯಲ್ಲಿ ಪರಿಣಿತಿಯನ್ನು ಸಾಧಿಸಿದರು. ಅನೇಕ ದೇವಸ್ಥಾನಗಳಲ್ಲಿ ನೃತ್ಯ ಪ್ರದರ್ಶನಗಳನ್ನು ನೀಡುತ್ತ ನಟರಾಜನ್ ಭರತನಾಟ್ಯ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡತೊಡಗಿದರು.
ನಟರಾಜನ್ ತನ್ನ ನೃತ್ಯಾಭ್ಯಾಸದ ನಡುವೆಯೇ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಬರೆದು ಉತ್ತೀರ್ಣರಾದರು. ಕಾನೂನು ವ್ಯಾಸಂಗವನ್ನು ಮಾಡಲು ನಟರಾಜನ್ ಬಯಸಿದ್ದರು. ಆದರೆ ತಮಿಳುನಾಡಿನ ಯಾವ ಕಾನೂನು ಕಾಲೇಜುಗಳೂ ಅವರಿಗೆ ಕಾನೂನು ಪದವಿಗೆ ಪ್ರವೇಶವನ್ನು ನೀಡಲು ತಯಾರಿರಲಿಲ್ಲ. ನಂತರ ನರ್ತಕಿ ನಟರಾಜನ್ ಭರತನಾಟ್ಯವನ್ನೇ ಉಸಿರಾಗಿಸಿಕೊಂಡು ತಮ್ಮೊಳಗಿನ ಸ್ತ್ರೀ ಸಂವೇದನೆಯನ್ನು ನೃತ್ಯದ ಮೂಲಕ ಅಭಿವ್ಯಕ್ತಿಸುತ್ತ ಹೋದರು.
ತೃತೀಯಲಿಂಗಿ ಸಮುದಾಯಕ್ಕೆ ಮಾದರಿಯಾಗಿ ನಿಂತ ನರ್ತಕಿ ನಟರಾಜನ್
ಕಳೆದು 3 ದಶಕಗಳ ಕಾಲದಲ್ಲಿ ನರ್ತಕಿ ನಟರಾಜನ್ ಜೀವನ ಭರತನಾಟ್ಯದ ತರಬೇತಿ, ತಾಲೀಮು, ಪ್ರದರ್ಶನಗಳಲ್ಲೇ ಕಳೆದುಹೋಗಿದೆ. ಚೆನ್ನೈನಲ್ಲಿ ʼವೆಲ್ಲಿಯಂಬಲಮ್ ಟ್ರಸ್ಟ್ ಡಾನ್ಸ್ ಸ್ಕೂಲ್ʼ ಎಂಬ ನೃತ್ಯ ಶಾಲೆಯನ್ನು ನರ್ತಕಿ ನಟರಾಜನ್ ನಡೆಸುತ್ತಿದ್ದಾರೆ. ಅಮೆರಿಕಾ, ಬ್ರಿಟನ್, ನಾರ್ವೆ ದೇಶಗಳಲ್ಲಿ ಈ ಭರತನಾಟ್ಯ ಶಾಲೆಯ ಶಾಖೆಗಳಿವೆ. ಭರತನಾಟ್ಯ ಶಾಲೆಯಿಂದ ಬಂದ ಹೆಚ್ಚಿನ ಆದಾಯವನ್ನು ತೃತೀಯಲಿಂಗಿಗಳ ಅಭಿವೃದ್ಧಿಗೆ ಅವರು ಮೀಸಲಿಟ್ಟಿದ್ದಾರೆ.
“ಭರತನಾಟ್ಯಂ ಪ್ರತಿಭೆ ಮತ್ತು ಪರಿಶ್ರಮದಿಂದ ಮಾತ್ರ ನನಗೆ ಇದುವರೆಗೆ ಗೌರವ ಮತ್ತು ಪ್ರಶಸ್ತಿಗಳು ಬಂದಿವೆ. ಕೆಲವರು ತೃತೀಯಲಿಂಗಿ ಎಂಬ ಕಾರಣಕ್ಕೆ ನನಗೆ ಗೌರವಗಳು ಸಂದಿವೆ ಎಂದು ಹೇಳುತ್ತಾರೆ. ಆದರೆ ಅದನ್ನು ಒಪ್ಪಲು ನಾನು ತಯಾರಿಲ್ಲ” ಎಂದು ನರ್ತಕಿ ನಟರಾಜನ್ ತಮ್ಮ ಕುರಿತಾದ ಟೀಕೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾರೆ.
2019 ರಲ್ಲಿ ನಟರಾಜನ್ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದ ಭಾರತದ ಮೊಟ್ಟ ಮೊದಲ ತೃತೀಯಲಿಂಗಿ ಸಮುದಾಯದ ವ್ಯಕ್ತಿಯಾಗಿ ಗುರುತಿಸಿಕೊಂಡರು. 2014 ರಲ್ಲಿ ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆಯ ಸಿನೀಯರ್ ಫೆಲೋಶಿಪ್ ಅನ್ನು ಕೂಡ ಪಡೆದುಕೊಂಡಿದ್ದಾರೆ. 2016 ರಲ್ಲಿ ಪೆರಿಯಾರ್ ಮನಿಯಮ್ಮೈ ವಿಶ್ವವಿದ್ಯಾಲಯವು ನರ್ತಕಿ ನಟರಾಜನ್ ಅವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಿದೆ.
ತಮಿಳುನಾಡಿನಲ್ಲಿ 11 ನೇ ತರಗತಿಯ ವಿದ್ಯಾರ್ಥಿಗಳಿಗೆ ನರ್ತಕಿ ನಟರಾಜನ್ ಜೀವನ ಕುರಿತು ಒಂದು ಪಾಠವಿದೆ. ಮಕ್ಕಳಿಗೆ ಸಮಾನತೆ, ತಿರಸ್ಕಾರವನ್ನು ಹೋಗಲಾಡಿಸಲು ಡಾ. ನರ್ತಕಿ ನಟರಾಜನ್ ಕುರಿತಾದ ಪಠ್ಯ ಭಾಗ ಸಹಾಯಮಾಡುತ್ತದೆ ಎಂದು ಶಿಕ್ಷಣ ತಜ್ಞರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
2002 ರಲ್ಲಿ ನಟರಾಜನ್ ಕೇಂದ್ರ ಸರ್ಕಾರಕ್ಕೆ ಪತ್ರವನ್ನು ಬರೆದು ತೃತೀಯ ಲಿಂಗಿಗಲಿಗೆ ನೀಡುವ ಪಾಸ್‌ಪೋರ್ಟ್ ಗಳಲ್ಲಿ ಲಿಂಗ ಎಂಬ ಕಾಲಂನಲ್ಲಿ ಯು ಬದಲಿಗೆ F(Female) ಎಂದು ಬಳಸುವಂತೆ ಒತ್ತಾಯಿಸಿದ್ದರು. ಹಾಗೇ ತಮಿಳುನಾಡು ಸರ್ಕಾರದ ಸರ್ಕಾರಿ ಅಧಿಸೂಚನೆಗಳಲ್ಲಿ ಬಳಸುವ ಅರವಾನಿ ಪದವನ್ನು ತೆಗೆದು ಹಾಕುವಂತೆ ಬದಲಾಗಿ ತಿರು ನಂಗೈ (ವಿಶೇಷ ಮಹಿಳೆ) ಪದವನ್ನು ಬಳಸುವಂತೆ ಒತ್ತಾಯಿಸಿ ಹೋರಾಟ ಮಾಡಿದ್ದರು. ಅವರ ಹೋರಾಟದ ಫಲವಾಗಿ ತಮಿಳುನಾಡು ಸರ್ಕಾರ ʼಅರವಾನಿʼ ಪದವನ್ನು ಕೈಬಿಟ್ಟಿದೆ.
ಡಾ. ನರ್ತಕಿ ನಟರಾಜನ್ ಸಾಧನೆ ಕೇವಲ ತೃತೀಯ ಲಿಂಗಿಗಳಿಗಷ್ಟೇ ಅಲ್ಲದೇ ನಮ್ಮೆಲ್ಲರಿಗೂ ಮಾದರಿ. ಅವರನ್ನು ಅಭಿವೃದ್ಧಿ ಪ್ರಾಧಿಕಾರದ ಸದಸ್ಯೆಯನ್ನಾಗಿ ನೇಮಿಸುವ ಮೂಲಕ ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ತೃತೀಯ ಲಿಂಗಿಗಳಿಗೆ ವಿಶೇಷ ಪ್ರಾತಿನಿಧ್ಯವನ್ನು ನೀಡಿದ್ದಾರೆ. ಡಾ. ನರ್ತಕಿ ನಟರಾಜನ್ ಅವರ ಸಾಧನೆ ಮತ್ತು ಅವಕಾಶಗಳು ಮುಂದೆ ಇನ್ನಷ್ಟು ಜನರಿಗೆ ಪ್ರೇರಣೆಯಾಗಬಹುದು. ತೃತೀಯ ಲಿಂಗಿಗಳ ಹಕ್ಕಿನ ಹೋರಾಟಕ್ಕೆ ಅವರ ಉದ್ಯೋಗಾವಕಾಶಕ್ಕೆ ಹೆಚ್ಚಿನ ಅವಕಾಶವನ್ನು ಒದಗಿಸಬಹುದು.
ಮೂಲ : ಪ್ರಿಂಟ್
ಅನುವಾದ : ರಾಜೇಶ್ ಹೆಬ್ಬಾರ್
ಇದನ್ನೂ ಓದಿ : ಹಿಂದೂ ಸಂಘಟನೆಗಳ ವಿರೋಧ: ಮಸೀದಿ, ಮದರಸಾಗಳಿಗೆ ಬಿಡುಗಡೆ ಮಾಡಿದ್ದ ಗೌರವಧನ ಹಿಂಪಡೆದ ಸರ್ಕಾರ