ಬಿರ್ಸಾ ಮುಂಡಾ ಅವರು ಆದಿವಾಸಿಗಳನ್ನು ಹೋರಾಟಕ್ಕೆ ಅಣಿಗೊಳಿಸುತ್ತಿರುವ ದೃಶ್ಯದ ವರ್ಣಚಿತ್ರ

ದೇಶದಲ್ಲಿ ಅಭಿವೃದ್ಧಿಯೆಂಬುದುಕ್ಕೆ ವ್ಯಾಖ್ಯೆಯಾಗಲಿ ವ್ಯಾಪ್ತಿಯಾಗಲೀ ಯಾವುದೂ ಇಲ್ಲ. ಚತುಷ್ಪಥ ರಸ್ತೆ  ನಿರ್ಮಿಸುವುದನ್ನು, ಭೂಮಿಯ ಆಳದಲ್ಲಿರುವ ಅದಿರು ತೆಗೆಯುವುದನ್ನು, ಅಣೆ ಕಟ್ಟೆ ಕಟ್ಟುವುದನ್ನು, ಕಾಡಿನೊಳಗೊಂದು ರೆಸಾರ್ಟು ಲಾಡ್ಜುಗಳ ಕಟ್ಟಿ ಪ್ರವಾಸೋದ್ಯಮ ಹೆಚ್ಚಿಸುವದನ್ನೇ ಅಭಿವೃದ್ಧಿ ಎನ್ನುತ್ತೇವೆ.  ಆದರೆ ಈ ಅಭಿವೃದ್ಧಿಯ ಹುನ್ನಾರಗಳಿಂದ ಹೆಚ್ಚು ಲಾಭವಾಗುವುದು ಜನರಿಗಲ್ಲ. ಬದಲಾಗಿ ಅಭಿವೃದ್ಧಿಯ ಗುತ್ತಿಗೆಯನ್ನು ಪಡೆದ ಸರ್ಕಾರಗಳು, ಅವರ ಅಧೀನ ಆಡಳಿತ ವ್ಯವಸ್ಥೆ, ಉದ್ಯಮಿಗಳು ಹೀಗೆ ಅಡಿಯಿಂದ ಮುಡಿವರೆಗಿನ ನೂರಾರು ಜನರಿಗೆ ಮಾತ್ರ ಇದರ ಲಾಭ. ಉದ್ಯೋಗವಕಾಶದ ಬಣ್ಣ ಬಣ್ಣದ ಕನಸು ತೋರಿಸಿ ಸರ್ಕಾರ ನೈಸರ್ಗಿಕ ಸಂಪತ್ತುಗಳನ್ನು ಅದರ ನೈಜ ವಾರಸುದಾರರಿಂದ ಕಿತ್ತುಕೊಂಡು ಉದ್ಯಮಿ ಮಿತ್ರರಿಗೆ ನೀಡುತ್ತದೆ. ಇವರೆಲ್ಲರೂ ಈ ಅಭಿವೃದ್ಧಿಯ ಪಾಲುದಾರರೇ.

ಇಂದು ಅಭಿವೃದ್ಧಿಯೆಂಬ ಕನಸಿನ ಕುದುರೆಯ ನಾಗಾಲೋಟಕ್ಕೆ ಅತಿಹೆಚ್ಚು ಬಲಿಯಾಗುತ್ತಿರುವವರು ಭಾರತದ ವಿಶಿಷ್ಟ ಸಂಸ್ಕೃತಿಯುಳ್ಳ ಬುಡಕಟ್ಟುಗಳು. ಸರ್ಕಾರ ಅಭಿವೃದ್ಧಿ ಹೆಸರಿನಲ್ಲಿ ವನ್ಯ ಸಂಪತ್ತೆನ್ನೆಲ್ಲ ನಾಶ ಮಾಡಿ ರಕ್ಷಿತಾರಣ್ಯಗಳ ಹೆಸರಿನಲ್ಲಿ ಬುಡಕಟ್ಟು ಜನರ ನೆಲೆಯನ್ನು ಕಿತ್ತುಕೊಂಡು ಹೊಸ ಮಾದರಿಯ ಅಭಿವೃದ್ಧಿಯ ಭಾಷ್ಯವನ್ನು ಬರೆಯುತ್ತಿದೆ. ಸ್ವಾತಂತ್ರ್ಯ ಬಂದಾಗಿನಿಂದಲೂ ಭಾರತದಲ್ಲಿ ಸಾವಿರಾರು ಬುಡಕಟ್ಟು ಜನರು ರಾಷ್ಟ್ರೀಯ ಹೆದ್ದಾರಿಗಳಿಗಾಗಿ, ಕಲಿದ್ದಲು ಗಣಿಗಳಿಗಾಗಿ, ಬೃಹತ್‌ ಆಣೆಕಟ್ಟೆಗಳಿಗಾಗಿ ತಮ್ಮ ನೆಲೆಯನ್ನು ಕಳೆದುಕೊಂಡಿದ್ದಾರೆ. ಸರ್ಕಾರಕ್ಕೆ ಒಂದೇ ಒಂದು ಕ್ಷಣವು ಬುಡಕಟ್ಟು ಜನರ ಸಂವಿಧಾನ ಬದ್ಧ ಹಕ್ಕು ಮುಖ್ಯವೆಂದು ಅನಿಸಿಲ್ಲ. ಇದಕ್ಕೆ ಎರಡು ಜ್ವಲಂತ ನಿದರ್ಶನಗಳೆಂದರೆ ಇತ್ತೀಚಿನ ಎರಡು ಘಟನೆಗಳು. ಮೊದಲನೆಯದು ನರ್ಮದಾ ನದಿಗೆ ಕಟ್ಟಲಾದ ಸರ್ದಾರ್‌ ಸರೋವರ ಅಣೆಕಟ್ಟು. ಅಣೆಕಟ್ಟಿನ ಹಿನ್ನೀರಿನಲ್ಲಿ ನೆಲೆ ಕಳೆದುಕೊಂಡ ಗುಜರಾತ್‌, ಮಧ್ಯಪ್ರದೇಶ ಗಡಿಭಾಗದ ಆದಿವಾಸಿ ಕುಟುಂಬಗಳು. ಇನ್ನೊಂದು ಲಕ್ಷದ್ವೀಪದಲ್ಲಿ ಉದ್ಧೇಶಿತ  ಪ್ರವಾಸೋದ್ಯಮ ಯೋಜನೆಯ ಮೂಲಕ ತಮ್ಮ ನೂರಾರು ವರ್ಷದ ಸಂಸ್ಕೃತಿ, ಜೀವನ ಕ್ರಮವನ್ನು ಕಳೆದುಕೊಳ್ಳಲಿರುವ ಬುಡಕಟ್ಟು ಸಮುದಾಯದ ಜನರು.

ಬುಡಕಟ್ಟು ಸಮುದಾಯದ ಜನರ ಹಕ್ಕುಗಳಿಗೆ ಅವರ ಮೇಲಾಗುವ ಶೋಷಣೆಗಳ ವಿರುದ್ಧ ಬಹುತೇಕ ನಾಗರಿಕ ಸಮಾಜ ಎಂದೂ ಸರ್ಕಾರವನ್ನು ಪ್ರಶ್ನಿಸುವ ಗೋಜಿಗೆ ಹೋಗುವುದಿಲ್ಲ. ಒಂದಷ್ಟು ಜನರು ಮಾತ್ರ ಅವರ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಾರೆ. ಆದರೆ ಹೆಚ್ಚು ವಿದ್ಯಾವಂತರಲ್ಲದ ಭಾರತದ ಬುಡುಕಟ್ಟು ಸಮುದಾಯದ ಇಂದಿನ ಅಸಾಹಾಯಕ ಸ್ಥಿತಿಯ ನಡುವೆಯೂ ಅವರೆಲ್ಲರಿಗೆ ಸ್ಪೂರ್ತಿಯ ಚಿಲುಮೆಯಂತೆ ಕಾಣುವುದು ಸ್ವಾತಂತ್ರ್ಯ ಯೋಧ ಬಿರ್ಸಾ ಮುಂಡಾ.. ಅವರ ಹೋರಾಟದ ಜೀವನದ ಒಂದು ಪಕ್ಷಿನೋಟ ನೋಡೋಣ.

1830 ರಿಂದ 1925 ರವರೆಗೆ ನಡೆದ ಆದಿವಾಸಿದಂಗೆಗಳು ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಬಹುಮುಖ್ಯ ಘಟನೆಗಳು. ಆ ಕಾಲಘಟ್ಟದಲ್ಲಿ ಆದಿವಾಸಿ ಸಮುದಾಯ ತನ್ನ ಹಕ್ಕುಗಳಿಗಾಗಿ ಸತತವಾಗಿ ಬ್ರಿಟಿಷರ ಮೇಲೆ ಒತ್ತಡ ಹೇರುತ್ತಲೇ ಬಂದಿತ್ತು. ಅಂದು ಹೆಚ್ಚಿನ ಹೋರಾಟಗಳು ಜಾರ್ಖಂಡ್ ಹಾಗೂ ಛತ್ತಿಸ್‌ಘಡ್‌ ರಾಜ್ಯದ ಛೋಟಾ ನಾಗಪುರ್ ಅರಣ್ಯ ಪ್ರದೇಶದಲ್ಲಿ ನಡೆದವು. ಆ ಪ್ರದೇಶದ ಅರಣ್ಯಗಳಲ್ಲಿ ವಾಸಿಸುತ್ತಿದ್ದ ಆದಿವಾಸಿಗಳ ಮೇಲೆ  ಬ್ರಿಟಿಷರು ಮತ್ತು ಜಮೀನ್ದಾರರು ನಿರಂತರ ದಬ್ಬಾಳಿಕೆ ಹಾಗೂ ಶೋಷಣೆ ನಡೆಸುತ್ತಿದ್ದು  ಆ ದಿನಗಳಲ್ಲಿ ಅತ್ಯಂತ ಸಾಮಾನ್ಯ ಸಂಗತಿಯಾಗಿತ್ತು. ಬ್ರಿಟಿಷರ, ಜಮೀನ್ದಾರರ ಶೋಷಣೆಯ ವಿರುದ್ಧ ಮೊಟ್ಟ ಮೊದಲ ಬಾರಿಗೆ ಆದಿವಾಸಿಗಳ ಹಕ್ಕಿನ ಹೋರಾಟವನ್ನು ಆರಂಭಿಸಿದ ಶ್ರೇಯ ಬಿರ್ಸಾ ಮುಂಡಾ ಅವರಿಗೆ ಸಲ್ಲುತ್ತದೆ. ಅಂದು ಅರಣ್ಯವಾಸಿಗಳ ಸಂಘಟಿಸಿ ಅವರ ನೆಲ ಜಲದ ಹಕ್ಕಿಗೆ ಬಿರ್ಸಾ ಮುಂಡಾ ಹೋರಾಡಿರದಿದ್ದರೆ ಇಂದು ಝಾರ್ಖಂಡ್‌, ಛತ್ತಿಸ್‌ಘಡ್‌ ಮುಂತಾದ ಕಡೆ ಆದಿವಾಸಿಗಳ ಯಾವ ಕುಟುಂಬಗಳೂ ಉಳಿಯುತ್ತಿರಲಿಲ್ಲ. ಕಲ್ಲಿದ್ದಿನ ಗಣಿಗಳ ಅಡಿಯಲ್ಲಿ ಅಳಿದುಹೋದ ಇತಿಹಾಸಗಳಾಗಿರುತ್ತಿದ್ದರಷ್ಟೇ. ಸ್ವಾತಂತ್ರ್ಯಾಪೂರ್ವದಲ್ಲೇ ಆದಿವಾಸಿಗಳನ್ನು ಸಂಘಟಿಸಿ ಹೋರಾಟ ನಡೆಸಿದ ಬಿರ್ಸಾ ಮುಂಡಾ ಇಂದಿಗೂ ಆದಿವಾಸಿಗಳ ಹೋರಾಟಗಳಿಗೆ ದೊಡ್ಡ ಸ್ಪೂರ್ತಿಯಾಗಿ ಉಳಿದಿದ್ದಾರೆ.

ಇದನ್ನೂ ಓದಿ : ಶ್ರದ್ಧಾಂಜಲಿ; ಗಾಂಧಿವಾದಿಗಳ ಬಗ್ಗೆ ಇದ್ದ ತಕರಾರುಗಳಿಗೆ ಉತ್ತರ ನೀಡುತ್ತಿದ್ದ ದೊರೆಸ್ವಾಮಿಯವರು..

ಅಂದು ಆದಿವಾಸಿಗಳು ಕಾಡಿನ ಭೂ ಭಾಗವೊಂದನ್ನು ಕಡಿದು ಕೃಷಿಭೂಮಿಯಾಗಿ ಪರಿವರ್ತಿಸಿದ್ದರು‌. ಅದರಿಂದ ಬಂದ ಬೆಳೆಯನ್ನು ಎಲ್ಲರೂ ಹಂಚಿ ತಿನ್ನುವ ಸಮೂಹ ಒಡೆತನದ ಸಂಸ್ಕೃತಿ ಅವರದ್ದಾಗಿತ್ತು. ಕಾಡುಮೇಡಿನಿಂದ ಸಂಗ್ರಹಿಸಿದ್ದ ಗೆಡ್ಡೆ,ಗೆಣಸು, ನೈಸರ್ಗಿಕ ಉತ್ಪನ್ನಗಳಿಂದ ತಮ್ಮ ಜೀವನ ನಡೆಸುತ್ತಿದ್ದರು. ಬ್ರಿಟಿಷರ ಆಗಮನದ ಬಳಿಕ ಅವರ ಜೀವನ ಹಾಗೆಯೇ ಮುಂದುವರಿಯಲಿಲ್ಲ. ಬ್ರಿಟಿಷರು ಮಧ್ಯವರ್ತಿಗಳ ಮೂಲಕ ಆದಿವಾಸಿಗಳಿಗೆ ತೆರಿಗೆಯನ್ನು ಕಟ್ಟುವಂತೆ ಒತ್ತಾಯಿಸಿದರು. ಮಧ್ಯವರ್ತಿಗಳು ಆದಿವಾಸಿಗಳ ಶೋಷಣೆಗೆ ಇಳಿದರು. ಆದಿವಾಸಿಗಳಿಗೆ ಭೂಮಿಯ ಹಕ್ಕುಗಳ ಕುರಿತು ಏನೂ ತಿಳಿದಿರಲಿಲ್ಲ. ಅವರ ಪ್ರಕಾರ ಅವರು ಹುಟ್ಟಿ ಬೆಳೆದ ಭೂಭಾಗ ಕಾಡುಮೇಡು ಅಲ್ಲಿಂದ ಸಂಗ್ರಹಿಸಿದ ಉತ್ಪನ್ನಗಳು ಗೆಡ್ಡೆ ಗೆಣಸು, ಹಣ್ಣುಗಳೆಲ್ಲವೂ ಅವರ ಸಮಾಜವಾಗಿತ್ತು. ಹಕ್ಕುಗಳು, ತೆರಿಗೆಗಳ ಕುರಿತು ಅವರಿಗೆ ಗಂಧಗಾಳಿಯೂ ಇರಲಿಲ್ಲ. ಅವರ ಪೂರ್ವಜರು ಬದುಕಿ ಬಾಳಿದ ಕಾಡು, ಮೇಡೆಲ್ಲವೂ ಅವರ ಬುಡಕಟ್ಟಿನ ಆಸ್ತಿಯಾಗಿತ್ತು. ಆದರೆ ಬ್ರಿಟಿಷರು ಬುಡಕಟ್ಟುಗಳ ಮೂಲ ಅಸ್ಥಿತ್ವವಾದ ಅರಣ್ಯವನ್ನೇ ಅವರಿಗೆ ನಿರಾಕರಿಸಲು ಮುಂದಾದರು.

ವೈಯಕ್ತಿಕ ಹಕ್ಕಿನ ಕಾನೂನು ಜಾರಿಯಾದಾಗ, ಕೆಲವು ಜಮೀನ್ದಾರರು ಆದಿವಾಸಿಗಳ ಹಕ್ಕುಗಳನ್ನು ಆಕ್ರಮಿಸಿಕೊಂಡರು. ಬ್ರಿಟಿಷರು ಆದಿವಾಸಿಗಳ ಕುರಿತು ಅನಾಗರಿಕರು, ಅಂಜುಕುಳಿಗಳು ಎಂಬ ಭಾವನೆಯನ್ನು ತಳೆದು ಅವರನ್ನು ಕಾಡಿನಿಂದ ಒಕ್ಕಲೆಬ್ಬಿಸುವ ನಿರ್ಧಾರಕ್ಕೆ ಬಂದರು. ಬ್ರಿಟಿಷರು ಆದಿವಾಸಿ ಮಹಿಳೆಯರ ಮೇಲೆ ದೌರ್ಜನ್ಯವನ್ನು ಎಸಗಲು ಮುಂದಾಗಿದ್ದು ಬುಡಕಟ್ಟುಗಳ ಸಿಟ್ಟನ್ನು ಇನ್ನಷ್ಟು ಹೆಚ್ಚಿಸಿತು. ಈ ಎಲ್ಲ ಆಕ್ರೋಶ ಮತ್ತು ಸಿಟ್ಟು ಕಟ್ಟೆಯೊಡೆದು ಒಂದು ದಿನ ಅದು ಬಿರ್ಸಾಮುಂಡಾ ನಾಯಕತ್ವದಲ್ಲಿ ಬುಡಕಟ್ಟು ಚಳಯವಳಿಯಾಗಿ ರೂಪುಗೊಂಡಿತು. ಮಧ್ಯವರ್ತಿಗಳ ವಿರುದ್ಧ ದಂಗೆಗೆ ಪ್ರೇರೇಪಿಸಿತು.

1872 ರಲ್ಲಿ ಜನಿಸಿದ ಬಿರ್ಸಾಮುಂಡಾ ಬಾಲ್ಯದಲ್ಲಿಯೇ ಬ್ರಿಟಿಷರ ವಿರುದ್ಧ ಆದಿವಾಸಿಗಳ ಹಕ್ಕಿಗಾಗಿ ಹೋರಾಟವನ್ನು ಆರಂಭಿಸಿದವರು. ಬ್ರಿಟಿಷರು ಆದಿವಾಸಿಗಳ ಮೇಲೆ ತೆರಿಗೆ ವಿಧಿಸಲು ಮುಂದಾದಾಗ ಅದರ ವಿರುದ್ಧ ಜನ ಸಂಘಟನೆಯನ್ನು ಮಾಡುವ ಮೂಲಕ ದೇಶದಲ್ಲಿ ಧ್ವನಿಯಿಲ್ಲದ ಆದಿ ಸಮುದಾಯಕ್ಕೆ ಒಂದು ಸ್ಪಷ್ಟವಾದ ಹೋರಾಟದ ಧ್ವನಿಯನ್ನು ನೀಡಿದರು.

ಈ ಮಧ್ಯದಲ್ಲಿ ಬ್ರಿಟಿಷರು ಆದಿವಾಸಿಗಳಿಗೆ ಅರಣ್ಯದೊಳಗೆ ಪ್ರವೇಶಕ್ಕೂ ನಿರ್ಬಂಧ ಹೇರಿದ ಘಟನೆ ಬಿರ್ಸಾ ಮುಂಡಾ ಅವರ ಹೋರಾಟ ಇನ್ನಷ್ಟು ತೀವ್ರಗೊಳ್ಳುವಂತೆ ಮಾಡಿತು. 1882ರ ಭಾರತದ ಅರಣ್ಯಗಳ ಕಾಯ್ದೆ 7 ರ ಅಡಿಯಲ್ಲಿ ಹಲವಾರು ರಕ್ಷಿತಾರಣ್ಯಗಳನ್ನು ಸರ್ಕಾರ ಘೋಷಿಸಿತು.  ಈ ಕಾಯ್ದೆ ಆದಿವಾಸಿಗಳಿಗೆ ಅರಣ್ಯದ ಒಳಗೆ ಹೋಗಲು ಅವಕಾಶ ನೀಡಲಿಲ್ಲ‌. ಆಗ ಬಿರ್ಸಾ ಮುಂಡಾ ನಾಯಕತ್ವದಲ್ಲಿ  ಹಲವಾರು ಆದಿವಾಸಿಗಳ ಹೋರಾಟಗಳು ನಡೆದವು. ನಡುವೆ ಬಿರ್ಸಾ ಮುಂಡಾ ಅವರು ಉದ್ಯೋಗ ಅರಸುತ್ತಾ  ದೇಶದ ನಾನಾ ಭಾಗಗಳಿಗೆ ಅಲೆದಾಡಿದರು. ಈ ಅಲೆದಾಟದಿಂದ ಅವರು ದೇಶ ಕೃಷಿ ಬಿಕ್ಕಟ್ಟಿನಿಂದ ಅನುಭವಿಸುತ್ತಿರುವ  ಸಮಸ್ಯೆಯನ್ನು ಅರಿತರು. ಬುಡಕಟ್ಟುಗಳಿಗೆ ಕೃಷಿಯೊಂದೆ ಜೀವನವನ್ನು ಕಟ್ಟಿಕೊಡಬಹುದೆಂದು ಅರ್ಥಮಾಡಿಕೊಂಡು ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದರು.

ಮುಂದಿನ ದಿನಗಳಲ್ಲಿ ಬಿರ್ಸಾ ಮುಂಡಾ ತಮ್ಮ ಮನೆಯಿಂದಲೇ ಆದಿವಾಸಿಗಳು ಕೃಷಿ ಮಾಡಬೇಕೆಂದು ಕರೆಕೊಡತೊಡಗಿದರು. ಈ ನಿಟ್ಟಿನಲ್ಲಿ ಅನೇಕರಿಗೆ ಮಾರ್ಗರ್ಶನ ಮಾಡಲು ಆರಂಭಿಸಿದರು. ಇದರ ಪರಿಣಾಮ ಬಿರ್ಸಾ ಮನೆಯ ಮುಂದೆ ನೂರಾರು ಕೂಲಿ ಕಾರ್ಮಿಕರು ಸೇರತೊಡಗಿದರು. ಇನ್ನು ಮುಂದೆ ಬರುವುದು ಬಿರ್ಸಾ ರಾಜ್ಯ ಅಲ್ಲಿ ಯಾವುದೇ ತೆರಿಗೆಗಳಿರುವುದಿಲ್ಲ. ಆದಿವಾಸಿಗಳು ಯಾವುದೇ ಸರ್ಕಾರಕ್ಕೂ ತಲೆ ಬಾಗಬೇಕಾಗಿಲ್ಲ ಎಂದು ಪ್ರಚಾರ ಪ್ರಾರಂಭವಾಯಿತು. ಇದು ಸರ್ಕಾರದ ಕಿವಿಗೂ ಮುಟ್ಟಿತ್ತು. ಇತ್ತಕಡೆ ಸರ್ಕಾರದ ಯಾವುದೇ ನೋಟೀಸುಗಳು ಇಲ್ಲಿ ನಡೆಯುವುದಿಲ್ಲ ಎಂದು 1895 ಆಗಸ್ಟ್ 24 ರ ರಾತ್ರಿ ಒಂದು ಬೃಹತ್ ದಂಗೆಗೆ ಬಿರ್ಸಾ ಕರೆ ನೀಡಿದರು. ಬರ ಬರುತ್ತಾ ಸರ್ಕಾರದ ರಾಜ್ಯಭಾರ ಮುಗಿದಿದೆ ಎಂಬ ಉದ್ಘೋಷಗಳೊಂದಿಗೆ ಹೋರಾಟ ತೀವ್ರಗೊಂಡಿತು.

ಕಾನೂನಿನ ವಿರುದ್ಧವಾಗಿ ಜನಸಾಮಾನ್ಯರನ್ನು ಸೇರಿಸುತ್ತಿರುವ ಆರೋಪದ ಮೇಲೆ ಬಿರ್ಸಾಮುಂಡಾನನ್ನು 1895 ನವೆಂಬರ್ 19ರಂದು ರಾತ್ರೋರಾತ್ರಿ  ಅನಿರೀಕ್ಷಿತವಾಗಿ ದಾಳಿಮಾಡಿ  ಪೊಲೀಸರು ಬಂಧಿಸಿದರು. ಆಗ ಬಿರ್ಸಾಗೆ 22 ವಯಸ್ಸು. ವಿಚಾರಣೆ ನಡೆಸಿ ಎರಡು ವರ್ಷಗಳ ಕಾಲ ಕಠಿಣ ಸಜೆಯನ್ನು ಘೋಷಿಸಿದರು.

ಎರಡು ವರ್ಷಗಳ ನಂತರ ಬಿರ್ಸಾ ಮುಂಡಾ ಬಿಡುಗಡೆಯಾಯಿತು. ಬಿರ್ಸಾ ಬಿಡುಗಡೆಯಿಂದ ಕಳೆದು ಹೋದ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳುವ ಆದಿವಾಸಿಗಳ ಕನಸಿಗೆ ಮತ್ತೆ ಜೀವ ಬಂತು. ಬಿರ್ಸಾ ಜೈಲಿನಲ್ಲಿದ್ದ ಸಂದರ್ಭದಲ್ಲಿ ರಾಂಚಿ ಜಿಲ್ಲೆಯಲ್ಲಿ ಬರದಿಂದಾಗಿ ಬಹಳಷ್ಟು ಮುಂಡ ಬುಡಕಟ್ಟಿನ ಜನರು ಬೇರೆ ಊರುಗಳಿಗೆ ವಲಸೆ ಹೋಗಿದ್ದರು. ಜೈಲಿನಿಂದ ಹೊರಬಂದ ನಂತರ ಬರಗಾಲ ಮತ್ತು ಸಾಂಕ್ರಾಮಿಕ ರೋಗಗಳಿಂದ ತತ್ತರಿಸಿ ಹೋಗಿದ್ದ ಜನರಿಗೆ ಸ್ವಚ್ಛತೆಯ ಅರಿವು ಮೂಡಿಸಲಾರಂಭಿಸಿದರು. ರೋಗಿಗಳನ್ನು ಆರೋಗ್ಯವಂತ ರಿಂದ ಬೇರ್ಪಡಿಸಿ ಶುಭ್ರವಾಗಿಸಿ ಉಪಚರಿಸುವ ವ್ಯವಸ್ಥೆ ಬಿರ್ಸಾಮುಂಡಾ ಮಾರ್ಗದರ್ಶನದಲ್ಲಿ ನಡೆಯಿತು. ಬಹುಬೇಗ ಈ ರೋಗಗಳಿಂದ ಗುಣಮುಖರಾದ ಜನರು ಬಿರ್ಸಾಮುಂಡಾನಲ್ಲಿ ತಮ್ಮ ದೇವರನ್ನು ಕಾಣಲು ಪ್ರಾರಂಭಿಸಿದರು.  ಬಿರ್ಸಾ ಮುಂಡಾ ಬೇರೆ ಬೇರೆ ಊರುಗಳಿಗೆ ಹೋಗಿ  ಹೋರಾಟದ ವಿಷಯಗಳನ್ನು ಹೇಳಲು ಪ್ರಾರಂಭಿಸಿದರು. ನಮಗೀಗ ಸತ್ಯಯುಗ ಬಂದಿದೆ ನಮ್ಮ ಪೂರ್ವಜರು ಹಕ್ಕುಗಳನ್ನು ಮರಳಿ ಪಡೆಯುವ ಕಾಲ ಬಂದಿದೆ. ರಾಜರು ಮತ್ತು ಜಮೀನ್ದಾರರು ನಮ್ಮನ್ನು ಶೋಷಿಸಿ  ಬಲವಂತದಿಂದ ಬಿಟ್ಟಿ ಕೂಲಿ ಆಳುಗಳನ್ನಾಗಿಸಿದ್ದಾರೆ ಎಂದು ಜನರನ್ನು ಮತ್ತೆ ಹೋರಾಟಕ್ಕೆ ಅಣಿಗೊಳಿಸುವ ಕೆಲಸ ಬಿರ್ಸಾ ಮುಂಡಾ ಮತ್ತವರ ತಂಡದಿಂದ ನಡೆಯಿತು. ಆತ ಹಾಗೂ ಆತನ ಅನುಯಾಯಿಗಳ ತಂಡ ಬುಡಕಟ್ಟುಗಳನ್ನು ಸಂಪರ್ಕಿಸಿ ಅಲ್ಲಲ್ಲಿ ಚಿಕ್ಕ ಚಿಕ್ಕ ಸಭೆಗಳನ್ನು ಮಾಡುತ್ತಾ ಜನರನ್ನು ಎಚ್ಚರಿಸಲು ಪ್ರಾರಂಭಿಸಿತು. ‘ಕಾಟ್ ಮಾರ್ ಮಾರ್ ಕೆ ರಹೆಂಗೆ ‘(ಕತ್ತರಿಸಿ ಹೊಡೆದೆ ತೀರುತ್ತೇವೆ) ಎಂಬ ಉದ್ಘೋಷದೊಂದಿಗೆ ಮುಂಡಾನ ಅನುಯಾಯಿಗಳು ದಂಗೆ ತಯಾರಾದರು.  ಇನ್ನೊಂದೆಡೆ ಸರ್ಕಾರವು ಈ ದಂಗೆಯನ್ನು ಶಮನಗೊಳಿಸಲು ಸಜ್ಜಾಗುತ್ತಿತ್ತು. ಆದಿವಾಸಿಗಳ ಮೂಲ ಸಂಸ್ಕೃತಿ ಹಾಗೂ ಹಕ್ಕುಗಳಿಗಾಗಿ ಜೀವ ಕೊಡಲು ಹೆದರದ ತಂಡ ಬೆಳೆಯುತ್ತಾ ಹೋಯಿತು. ಆದಿವಾಸಿಗಳ ದಂಗೆಯ ಸುದ್ದಿ ಎಲ್ಲೆಡೆಗೆ ವ್ಯಾಪಿಸಲು ಪ್ರಾರಂಭಿಸಿತು.

ಒಂದು ಕಡೆ ದಶಕಗಳ ದಮನದಿಂದಾಗಿ ಸಿಡಿದೆದ್ದಿದ್ದ ಬಿರ್ಸಾ ಮುಂಡಾ ನೇತೃತ್ವದ ಆದಿವಾಸಿಗಳು, ಇನ್ನೊಂದೆಡೆ ಬ್ರಿಟಿಷರ ಅಡಿಯಾಳಾಗಿ ಕೆಲಸ ಮಾಡುತ್ತಿದ್ದ ಅಧಿಕಾರಿಗಳು. ಆದಿವಾಸಿಗಳೀಗ ಶೋಷಣೆಯ ವಿರುದ್ಧ ಸಿಡಿದೆದ್ದಿದ್ದರು. ಬ್ರಿಟಿಷರ ಗುಂಡುಗಳ ಮುಂದೆ ಅವರ ಕೊಡಲಿ ಬಿಲ್ಲುಗಳು ಸಮನಾಗಿರಲಿಲ್ಲ. ಆದರೆ ಅನ್ಯಾಯದ ವಿರುದ್ಧ ನಿಂತ ಆದಿವಾಸಿಗಳಿಗೆ ಇದಾವುದು ಲೆಕ್ಕಕ್ಕಿಲ್ಲ. ಹೋರಾಟದ ವಿಶೇಷವೆಂದರೆ ಬ್ರಿಟಿಷ್‌ ಸೈನ್ಯವನ್ನು ಎದುರಿಸಲು ಬುಡಕಟ್ಟು ಹೆಣ್ಣು ಮಕ್ಕಳು ಕೂಡ ಸಜ್ಜಾಗಿದ್ದುದು. ಬಿರ್ಸಾ ಮುಂಡಾನ ನೂರಾರು  ಅನುಯಾಯಿಗಳನ್ನು ಹಳ್ಳಿಹಳ್ಳಿಗಳಿಗೆ ಹೋಗಿ ಸರ್ಕಾರ ಬಂಧಿಸಿತು.

ಇದೇ ವೇಳೆ ಜಮೀನ್ದಾರನೊಬ್ಬನ ಸೂಚನೆಯ ಮೇರೆಗೆ ಬಿರ್ಸಾಮುಂಡಾ ಮಲಗಿದ್ದ ಮನೆಯನ್ನು ಪೊಲೀಸರು ಸುತ್ತುವರಿದು ಬಂಧಿಸಿದರು. ಬಿರ್ಸಾ ಮುಂಡಾನನ್ನು ಬಂಧಿಸಲು ಹೋದ ಪೊಲೀಸರಿಗೆ ಅಚ್ಚರಿ ಕಾದಿತ್ತು. ಮೂರು ಜನ ಹೆಣ್ಣು ಮಕ್ಕಳೂ ಬಿರ್ಸಾ ಮುಂಡಾನನ್ನು ರಕ್ಷಿಸಲು ಪೊಲೀಸರ ವಿರುದ್ಧ ಸೆಣಸಾಟಕ್ಕೆ ನಿಂತಿದ್ದರು. ಬಿರ್ಸಾ ಮುಂಡಾ ಹೋರಾಟದ ಪ್ರೇರಣೆಯಿಂದ ಅಂದು ಗಂಡು ಹೆಣ್ಣೆನ್ನದೆ ಪ್ರತಿಯೊಬ್ಬರೂ ತಮ್ಮ ಬದುಕಿನ ಮೇಲಾದ ದಾಳಿಯ ವಿರುದ್ಧ ಶಾಶ್ವತ ಪರಿಹಾರಕ್ಕಾಗಿ ಹೋರಾಟಕ್ಕಿಳಿದಿದ್ದರು.

ಬಿರ್ಸಾ ಚಳುವಳಿಯ ಇನ್ನೊಂದು ಬಹುಮುಖ್ಯ ವಿಶೇಷವೇನೆಂದರೆ ಲಿಂಡಾ ಓರನ್ ಹಾಗೂ ಮಾಯಾ ಓರನ್ ಎಂಬ ಇಬ್ಬರು ನಾಯಕಿಯರು ಬೇರೆ ಬೇರೆ ಕಾಲಘಟ್ಟದಲ್ಲಿ ಈ ಚಳುವಳಿಗೆ ನಾಯಕತ್ವ ವಹಿಸಿದ್ದುದು. ಅಂದು ಬ್ರಿಟಿಷ್‌ ಪೋಲಿಸರು ಮಲಗಿದ್ದ ಬಿರ್ಸಾಮುಂಡಾನನ್ನು ಕ್ಷಣಾರ್ಧದಲ್ಲಿ ಸೆರೆಹಿಡಿದು ದೂರದ ರಾಂಚಿಯ ಪೊಲೀಸ್‌ ಠಾಣೆಯಲ್ಲಿ ಬಂಧಿಸಿಟ್ಟರು. ಬ್ರಿಟಿಷ್ ಸರಕಾರವು ಬಿರ್ಸಾ ಮುಂಡಾರನ್ನು ಪ್ರತ್ಯೇಕ ಸೆಲ್ ನಲ್ಲಿಇರಿಸಿತು. ನಂತರ ಕಾಲರಾ ರೋಗದಿಂದ ಬಿರ್ಸಾ ಮುಂಡಾ ಮೃತಪಟ್ಟರೆಂದು ಬ್ರಿಟಿಷ್‌ ಸರ್ಕಾರ ಹೇಳಿತು. ಇಂದಿಗೂ ಬಿರ್ಸಾ ಮುಂಡಾ ಅವರ ಅನುಯಾಯಿಗಳು ಸರ್ಕಾರಿ ದಾಖಲೆಗಳನ್ನು ಒಪ್ಪಲು ಸಿದ್ಧವಿಲ್ಲ. ಬಿರ್ಸಾ ಮುಂಡಾ ಅವರನ್ನು ತಮ್ಮ ಹುತಾತ್ಮ ನಾಯಕೆರೆಂದು ಅನೇಕ ಆದಿವಾಸಿಗಳು ಇಂದಿಗೂ ಆರಾಧಿಸುತ್ತಾರೆ.

ಅಂತಿಮವಾಗಿ ಬಿರ್ಸಾ ಮುಂಡ ನೇತೃತ್ವದ ವ್ಯಾಪಕವಾದ ಹೋರಾಟದ ಪರಿಣಾಮವಾಗಿ, 1900ರಲ್ಲಿ ತೆನನ್ಸಿ ಆಕ್ಟ್ ಜಾರಿಯಾಯಿತು. ಅದರ ಪ್ರಕಾರ ಆದಿವಾಸಿಗಳ ಭೂಮಿಯನ್ನು ಆದಿವಾಸಿಗಳಲ್ಲದೆ ಉಳಿದವರು ಖರೀದಿಸುವಂತಿಲ್ಲ ಎಂಬ ನಿಯಮ ಜಾರಿಗೆ ಬಂತು.‌ ಆದಿವಾಸಿಗಳಿಗೆ ಹಕ್ಕುಗಳನ್ನು ಮತ್ತು ಅರಣ್ಯದೊಳಗೆ ಹೋಗಿ ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸುವಲ್ಲಿ ನಿಯಮಗಳನ್ನು ರೂಪಿಸಿದರು. ಆದಿವಾಸಿಗಳನ್ನು ಮನುಷ್ಯರೆಂದೇ ಪರಿಗಣಿಸದೆ ಯಾವ ಹಕ್ಕುಗಳನ್ನು ನೀಡಿದೆ ಉಚಿತವಾಗಿ ದುಡಿಸಿಕೊಂಡು ಶೋಷಿಸುತ್ತಿದ್ದವರಿಗೆ ಹೊಸ ನೀತಿಗಳು ಮುಳುವಾದವು. ಬಿರ್ಸಾ ಮುಂಡಾ ಅಂದುಕೊಂಡಂತೆ ಬ್ರಿಟಿಷರ ವಿರುದ್ಧ ಗೆಲ್ಲಲು ಸಾಧ್ಯವಾಗದಿದ್ದರೂ ಆದಿವಾಸಿಗಳಿಗೆ ಅವರದೇ ಆದ ಒಂದು ಸ್ಥಾನಮಾನ ಕೊಡಿಸುವಲ್ಲಿ ಅವರು ಸಂಘಟಿಸಿದ ಹೋರಾಟಗಳ ಪಾತ್ರ ದೊಡ್ಡದು.

ಇಂದು ಸಾವಿರಾರು ಬುಡಕಟ್ಟು ಜನರು ಅಂದು ಬಿರ್ಸಾ ಮುಂಡಾ ರಂತಹ ಸ್ವಾತಂತ್ರ್ಯ ವೀರರ ಹೋರಾಟದ ಫಲವಾಗಿ ದೊರೆತದ ಅರಣ್ಯದ ಹಕ್ಕುಗಳಿಂದ, ಕೃಷಿ ಭೂಮಿ ಹಕ್ಕುಗಳಿಂದ ಮತ್ತೆ ವಂಚಿತರಾಗಿದ್ದಾರೆ. ಬೇರೆ ಬೇರೆ ಕಾರಣಗಳಿಗೆ ಬುಡಕಟ್ಟುಗಳನ್ನು ಒಕ್ಕಲೆಬ್ಬಿಸುವ ಕಾರ್ಯ ಸತತವಾಗಿ ನಡೆಯುತ್ತಿದೆ. ಇದೆಲ್ಲದರ ವಿರುದ್ಧದ ಹೋರಾಟದ ಸಂಕೇತವಾಗಿ ಬಿರ್ಸಾ ಮುಂಡಾ ಅವರ 121ನೇ ಹುತಾತ್ತ ದಿನ ನಮ್ಮೆಲ್ಲರಿಗೂ ಸ್ಪೂರ್ತಿ ನೀಡಲಿ. ಆದಿವಾಸಿಗಳ ಸಹಜ ಜೀವನ ಸಂಸ್ಕೃತಿಗೆ ಧಕ್ಕೆಮಾಡುವ ಎಲ್ಲಾ ಹುನ್ನಾರಗಳ ವಿರುದ್ಧದ ಹೋರಾಟ ಇನ್ನಷ್ಟು ಪ್ರಬಲವಾಗಿ ಮುಂದುವರೆಯಲಿ..

-ರಾಜೇಶ್ ಹೆಬ್ಬಾರ್


ಇದನ್ನೂ ಓದಿ : ಕೋವಿಡ್‍ ಸಾವುಗಳ ಸಂಖ್ಯೆ ಮುಚ್ಚಿಟ್ಟ ಬಿಹಾರ: ಅತಿ ಹೆಚ್ಚು ಏಕದಿನ ಸಾವುಗಳನ್ನು ದಾಖಲಿಸಿದ ಭಾರತ

 

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ರಾಜೇಶ್ ಹೆಬ್ಬಾರ್
+ posts

LEAVE A REPLY

Please enter your comment!
Please enter your name here