Patna: Bihar Chief Minister Nitish Kumar at Bihar Assembly, in Patna on July 12, 2019. (Photo: IANS)

ಬಿಹಾರ ತನ್ನ ಕೋವಿಡ್ ಸಾವುಗಳ ಕುರಿತು ಪರಿಷ್ಕೃತ ವರದಿ ನೀಡಿದ್ದು, ಕೋವಿಡ್‍ ಸಾವುಗಳ ಸಂಖ್ಯೆ 9 ಸಾವಿರಕ್ಕಿಂತ ಹೆಚ್ಚಿದೆ ಎಂದು ತಿಳಿಸಿದೆ. ಇದು ಈಗ ವಿವಾದಾತ್ಮಕವಾಗಿದೆ,  ಅಂದರೆ ಕಳೆದ ವರ್ಷದಿಂದ ಅದು ಸಾವಿನ ಪ್ರಮಾಣವನ್ನು ಮುಚ್ಚಿಡುತ್ತ ಬಂದಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಅದು ಮೊದಲು ಹೇಳುತ್ತ ಬಂದಿದ್ದ ಸಾವಿನ ಸಂಖ್ಯೆಗಿಂತ ಈಗ ನೀಡಿರುವ ಸಾವಿನ ಸಂಖ್ಯೆ ಶೇಕಡಾ 72 ರಷ್ಟು ಹೆಚ್ಚಿದೆ. ಇದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಬಿಹಾರದ ಈ ಪರಿಷ್ಕೃತ ವರದಿಯಿಂದಾಗಿ, ಭಾರತವು ಇಂದು 6,148 ಹೊಸ ಸಾವುಗಳನ್ನು ವರದಿ ಮಾಡಿದೆ, ಇದು ಇದುವರೆಗಿನ ಏಕದಿನದಲ್ಲಿ ಅತಿ ಗರಿಷ್ಠ! ಇದಕ್ಕೆ ಕಾರಣ, ಬಿಹಾರದಲ್ಲಿ ಮರೆಮಾಚಿದ್ದ ಕೋವಿಡ್‍ ಸಾವುಗಳ ಸಂಖ್ಯೆ ಈಗ ಸೇರ್ಪಡೆಯಾಗಿರುವುದಾಗಿದೆ.

ಸಾಂಕ್ರಾಮಿಕ ರೋಗದಲ್ಲಿ ರಾಜ್ಯಾದ್ಯಂತ ಒಟ್ಟು ಸಾವಿನ ಸಂಖ್ಯೆ 9,429 ಎಂದು ನಿತೀಶ್ ಕುಮಾರ್ ನೇತೃತ್ವದ ಎನ್‍ಡಿಎ ಸರ್ಕಾರ ಬುಧವಾರ ವರದಿ ಮಾಡಿದೆ. ಮೊದಲು ಇದನ್ನು  5,424 ಎಂದು ತಿಳಿಸಲಾಗಿತ್ತು.

ರಾಜ್ಯದಲ್ಲಿ ಸೋಂಕುಗಳು ಮತ್ತು ಸಾವುಗಳ ಪ್ರಮಾಣವನ್ನು ಬಿಹಾರ ಸರ್ಕಾರ ಮರೆಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದರಿಂದ, ಪಾಟ್ನಾ ಹೈಕೋರ್ಟ್ ಏಪ್ರಿಲ್-ಮೇ  ಅವಧಿಯ ಎರಡನೇ ಅಲೆಯಲ್ಲಿ ಸಾವುನೋವುಗಳ ಲೆಕ್ಕಪರಿಶೋಧನೆ (ಆಡಿಟ್‍) ಮಾಡಲು ಸೂಚಿಸಿತ್ತು.

ಕಳೆದ ತಿಂಗಳು ಬಕ್ಸಾರ್ ಬಳಿ ನದಿಯಲ್ಲಿ ಶವಗಳು ತೇಲುತ್ತಿರುವ ಆಘಾತಕಾರಿ ದೃಶ್ಯಗಳು ಪ್ರತಿಪಕ್ಷಗಳ ಆರೋಪವನ್ನು ಬಲಪಡಿಸಿದ್ದವು.

ಮೂರು ವಾರಗಳ ಲೆಕ್ಕಪರಿಶೋಧನೆಯ ನಂತರದ ಹೊಸ ಅಂಕಿ ಅಂಶಗಳು ಬಿಡುಗಡೆಯಾಗಿವೆ. ಮಾರ್ಚ್ 2020 ಮತ್ತು 2021 ರ ನಡುವೆ ಬಿಹಾರದಲ್ಲಿ ಕೋವಿಡ್‌ನಿಂದ 1,600 ಜನರು ಸಾವನ್ನಪ್ಪಿದ್ದರೆ, ಈ ವರ್ಷ ಏಪ್ರಿಲ್‌ನಿಂದ ಜೂನ್ 7 ರವರೆಗೆ ಸಾವಿನ ಸಂಖ್ಯೆ 7,775 ರಷ್ಟಿದೆ. ಇದು ಸುಮಾರು ಆರು ಪಟ್ಟು ಹೆಚ್ಚು!

ಎಲ್ಲಾ ಜಿಲ್ಲೆಗಳ ಪರಿಶೀಲನೆಯ ನಂತರ ಶೇಕಡಾ 72 ರಷ್ಟು ಹೆಚ್ಚಿನ ಸಾವುಗಳನ್ನು ಈಗ ಅಧಿಕೃತವಾಗಿ ಸೇರಿಸಲಾಗಿದೆ ಎಂದು ರಾಜ್ಯದ ಆರೋಗ್ಯ ಇಲಾಖೆ ತಿಳಿಸಿದೆ. ಇದು 38 ಜಿಲ್ಲೆಗಳಿಂದ ದಾಖಲಾದ ಒಟ್ಟು ಕೋವಿಡ್‍ ಸಾವುಗಳ ವಿವರವಾಗಿದೆ. ಆದರೆ ಈ ‘ಹೆಚ್ಚುವರಿ’ ಸಾವುಗಳು ಯಾವಾಗ ಸಂಭವಿಸಿದವು ಎಂಬುದನ್ನು ನಿರ್ದಿಷ್ಟವಾಗಿ ಹೇಳಿಲ್ಲ. ಇದು ಕೂಡ ಅನುಮಾನಕ್ಕೆ ಎಡೆ ಮಾಡಿದೆ.

ಹೊಸ ಅಂಕಿಅಂಶಗಳ ಪ್ರಕಾರ, ಹೆಚ್ಚಿನ ಸಾವುಗಳು (2,303 ಸಾವು) ರಾಜ್ಯ ರಾಜಧಾನಿ ಪಾಟ್ನಾದಲ್ಲಿ ಸಂಭವಿಸಿವೆ. ಪರಿಶೀಲನೆಯ ನಂತರ ವರದಿಯಾದ ಹೆಚ್ಚುವರಿ ಸಾವುಗಳು ಪಾಟ್ನಾಕ್ಕೆ ಸಂಬಂಧಿಸಿವೆ.

ಆದರೆ ಪಾಟ್ನಾದಲ್ಲಿ ಸರ್ಕಾರ ನಡೆಸುತ್ತಿರುವ ಮೂರು ಶವಾಗಾರ ಕೇಂದ್ರಗಳ ದಾಖಲೆಗಳು 3,243 “ಕೋವಿಡ್ ದಹನ”ಗಳನ್ನು ದೃಢಪಡಿಸುತ್ತವೆ! ಈ ಹೊಸ ವ್ಯತ್ಯಾಸವು ಕೂಡ  ಇನ್ನಷ್ಟು ವಿವಾದಾತ್ಮಕ ವಿಷಯವಾಗುತ್ತಿದೆ.

ರಾಜ್ಯ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪ್ರತ್ಯಯ ಅಮೃತ್,  ‘ಪಾಟ್ನಾದಲ್ಲಿ ಬೇರೆ ಜಿಲ್ಲೆಯ ವ್ಯಕ್ತಿಯೊಬ್ಬರು ಮೃತಪಟ್ಟರೆ ಮತ್ತು ಇಲ್ಲಿ ಅವರ ಅಂತ್ಯಸಂಸ್ಕಾರ ಮಾಡಿದರೆ, ಸಾವನ್ನು ಸಂತ್ರಸ್ತರ ಸ್ಥಳೀಯ ಜಿಲ್ಲೆಯ ಅಂಕಿಸಂಖ್ಯೆಯಲ್ಲಿಯೇ ಪರಿಗಣಿಸಲಾಗುತ್ತದೆಯೇ ಹೊರತು ಪಾಟ್ನಾದ ಅಂಕಿಸಂಖ್ಯೆಯಲ್ಲಿ ಅಲ್ಲ’ ಎಂದಿದ್ದಾರೆ.

ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ತವರು ಜಿಲ್ಲೆ ನಳಂದಾದಲ್ಲಿ ಹೊಸದಾಗಿ 222 ಸಾವುಗಳನ್ನು ವರದಿಯಲ್ಲಿ ಸೇರಿಸಲಾಗಿದೆ

ರಾಜ್ಯದ ಚೇತರಿಕೆಯ ಪ್ರಮಾಣವನ್ನು ಶೇ. 98.70 ರಿಂದ 97.65ಕ್ಕೆ ಇಳಿದಿದೆ ಎಂದು ಪರಿಷ್ಕೃತ ವರದಿ ತಿಳಿಸಿದೆ.

ಕೋವಿಡ್‍ ಬಿಕ್ಕಟ್ಟನ್ನು ನಿಭಾಯಿಸುವಲ್ಲಿನ ವೈಫಲ್ಯವನ್ನು ಮರೆಮಾಚಲು ಬಿಹಾರದಲ್ಲಿ ರಾಜ್ಯ ಸರ್ಕಾರವು ಅಂಕಿಅಂಶಗಳನ್ನು ತಿರುಚುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತ ಬಂದಿದ್ದವು. ಈಗ ಹೈಕೋರ್ಟ್ ಸೂಚನೆ ಪ್ರಕಾರ ತಯಾರಿಸಿದ ಆಡಿಟ್‍ ವರದಿ ಇದನ್ನು ಪುಷ್ಟೀಕರಿಸಿದೆ. ಅಂಕಿಅಂಶಗಳನ್ನು ಮತ್ತೆ ಪರಿಷ್ಕರಿಸಬಹುದಾಗಿದೆ ಎಂದು ರಾಜ್ಯ ಸರ್ಕಾರ ಹೇಳಿದೆ.

ನಿಜವಾದ ಸಾವಿನ ಸಂಖ್ಯೆ ಇಪ್ಪತ್ತು ಪಟ್ಟು ಹೆಚ್ಚಾಗಿದೆ ಎಂದು ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಟ್ವೀಟ್ ಮಾಡಿದ್ದಾರೆ.

“ಜನರು ತಮ್ಮ ಕುಟುಂಬ ಸದಸ್ಯರು ಕೋವಿಡ್‌ನಿಂದ ಸಾವನ್ನಪ್ಪಿದ್ದಾರೆಂದು ಸಾಬೀತುಪಡಿಸಲು ನಿಜವಾದ ದಾಖಲೆಯೊಂದಿಗೆ  ಮುಂದೆ ಬಂದರೆ ಅಂಕಿಅಂಶಗಳನ್ನು ಪರಿಷ್ಕರಿಸಲು ನಾವು ಮುಕ್ತರಾಗಿದ್ದೇವೆ. ಸಹಾಯ ಮಾಡುವುದು ನಮ್ಮ ನಿಜವಾದ ಉದ್ದೇಶವೇ ಹೊರತು ವಿಷಯವನ್ನು  ಮರೆಮಾಡುವುದಲ್ಲ. ಇನ್ನೂ ಕಾಣೆಯಾಗಿರುವ ಕೆಲವು ಹೆಸರುಗಳನ್ನು ನಾವು ತಳ್ಳಿಹಾಕುತ್ತಿಲ್ಲ” ಎಂದು ಬಿಹಾರ ಆರೋಗ್ಯ ಸಚಿವ ಮಂಗಲ್ ಪಾಂಡೆ ಎನ್‌ಡಿಟಿವಿಗೆ ತಿಳಿಸಿದ್ದಾರೆ.


ಇದನ್ನೂ ಓದಿ: ಪಕ್ಷಾಂತರ ಚರ್ಚೆ: ‘ಸಾಯುವವರೆಗೂ ಬಿಜೆಪಿ ಸೇರಲಾರೆ’ ಎಂದ ಕಪಿಲ್‍ ಸಿಬಲ್‍

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here