ಕೊರೊನಾ ಲಾಕ್‌ಡೌನ್‌ನಿಂದಾದ ಆರ್ಥಿಕ ಮುಗ್ಗಟ್ಟಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಘೋಷಿಸಿರುವ ಕೊರೊನಾ ಪುನಶ್ಚೇತನ ಪ್ಯಾಕೇಜ್ ಅಸಮರ್ಪಕವಾಗಿದೆ ಹಾಗೂ ದೇಶದ ಆರ್ಥಿಕತೆ ಕುಸಿಯುತ್ತಿದೆ ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಹ್ಮಣ್ಯನ್ ಸ್ವಾಮಿ ಹೇಳಿದ್ದಾರೆ.
ಇಷ್ಟಾಗಿಯು 2024 ರ ಚುನಾವಣೆಯಲ್ಲಿ ಮತ್ತೆ ಹಿಂದೂತ್ವವೇ ಗೆಲ್ಲಲಿದೆ, 2014, 2019 ರಲ್ಲಿ ಕೂಡ ಹಿಂದುತ್ವ ಗೆದ್ದಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಜಿಡಿಪಿ ಕುಸಿತ: “ಮೋದಿನಾಮಿಕ್ಸ್” ವಿಫಲವಾಗಿದೆ: ಅಧೀರ್ ರಂಜನ್ ಚೌಧರಿ
ಕೇಂದ್ರ ಸರ್ಕಾರದ ಪ್ಯಾಕೆಜ್ ಬಗ್ಗೆ ಮಾತನಾಡಿದ ಸುಬ್ರಹ್ಮಣ್ಯನ್ ಸ್ವಾಮಿ, “ಕೇಂದ್ರ ಸರ್ಕಾರ 21 ಟ್ರಿಲಿಯನ್ ಪರಿಹಾರ ಘೋಷಿಸಿದೆ. ಅದರಲ್ಲಿ, ಕೇವಲ 1.2 ಟ್ರಿಲಿಯನ್ ಮಾತ್ರ ಪ್ರೋತ್ಸಾಹಕವಾಗಿದೆ. ಉಳಿದದ್ದು ಉದ್ದೀಪಕ ಮತ್ತು ಹಣಕಾಸು ರಿಯಾಯಿತಿಗಳಾಗಿವೆ. ಪ್ರೋತ್ಸಾಹಕ ಪ್ಯಾಕೇಜ್ ಅಸಮರ್ಪಕವಾಗಿದೆ. ಅದು ಪೂರೈಕೆದಾರರನ್ನು ಬೆಳೆಸಿ, ಅಧಿಕಾರ ನೀಡುತ್ತದೆ” ಎಂದು ಅವರು ಹೇಳಿದ್ದಾರೆ.
2014-15 ರ ಆರ್ಥಿಕ ವರ್ಷದಲ್ಲಿ ದೇಶದ ಅಭಿವೃದ್ಧಿ ದರ ಶೇ.8 ರಷ್ಟಿತ್ತು. ನಂತರದ ವರ್ಷಗಳಲ್ಲಿ ಅದು ವರ್ಷದಿಂದ ವರ್ಷಕ್ಕೆ ಕುಸಿಯುತ್ತಾ ಬಂದಿದೆ. 2019-20 ನೇ ಸಾಲಿನ ಮೊದಲ ತ್ರೈಮಾಸಿಕದಲ್ಲಿ ಅಭಿವೃದ್ಧಿ ದರ 3.1 ಕ್ಕೆ ಕುಸಿದಿತ್ತು. ಕೊರೊನಾ ನಂತರದಲ್ಲಿ ಮತ್ತಷ್ಟು ಕುಸಿತ ಕಂಡಿದೆ. ಲಾಕ್‌ಡೌನ್ ಹೇರಿಕೆಯಿಂದಾಗಿ ವ್ಯಾಪಾರ, ವಹಿವಾಟು, ಉತ್ಪಾದನಾ ಕ್ಷೇತ್ರ ಎಲ್ಲವೂ ಸ್ಥಗಿತಗೊಂಡಿದ್ದು, ಅಭಿವೃದ್ಧಿ ಸೂಚ್ಯಂಕ ಬಿದ್ದಿದೆ ಎಂದು ಸುಬ್ರಹ್ಮಣ್ಯನ್ ಸ್ವಾಮಿ ಹೇಳಿರುವುದಾಗಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಇದನ್ನೂ ಓದಿ: ಐತಿಹಾಸಿಕ ಜಿಡಿಪಿ ಕುಸಿತಕ್ಕೆ ಕೊರೊನಾ ಮಾತ್ರ ಕಾರಣವೆ? ಕರ್ನಾಟಕದ ತಜ್ಞರು ಏನಂತಾರೆ?
source: tradingeconomics.com
ಜಿಡಿಪಿ ದರ ಗಣನೀಯವಾಗಿ ಕುಸಿಯುತ್ತಿದೆ ಎಂದು ನಾನು ಹೇಳುತ್ತಲೇ ಇದ್ದೆ. ಆದರೆ, ಎಲ್ಲರೂ ನನಗೆ ಬೈದು ಬಾಯಿಮುಚ್ಚಿಸುತ್ತಿದ್ದರು. ಈಗ, 2020-2021 ರ ಹಣಕಾಸು ವರ್ಷದ ಆರಂಭದಲ್ಲಿ (ಏಪ್ರಿಲ್-ಜೂನ್ 30) ದೇಶದ ಜಿಡಿಪಿ ಶೇಕಡಾ 23.9 ರಷ್ಟು ಕುಸಿದಿದೆ. ಈ ವರ್ಷದ ಅಂತ್ಯದ ವೇಳೆಗೆ ದೇಶದ ಅಭಿವೃದ್ಧಿ ದರ -15% ಗೆ ಇಳಿಯಬಹುದು. ಕೊನೆಗೆ ಒಟ್ಟಾರೆ ದೇಶದ ಬೆಳವಣಿಗೆ ಶೇಕಡಾ 15 ರಷ್ಟಾಗಬಹುದು ಎಂದು ಅವರು ಹೇಳಿದ್ದಾರೆ.
ಕಳೆದ ನಾಲ್ಕೈದು ವರ್ಷಗಳಿಂದ ವಿತ್ತೀಯ ಕೊರತೆಯುಂಟಾಗಿದೆ. ನೋಟು ಅನಾಣ್ಯೀಕರಣ ಮತ್ತು ಜಿಎಸ್‌ಟಿಯಿಂದ ಇದು ಸಂಭವಿಸಿದೆ. ಇದನ್ನು ತೆರಿಗೆ ಭಯೋತ್ಪಾದನೆ ಎಂದು ನಾವು ಕರೆಯಬಹುದು. ಆದಾಯ ತೆರಿಗೆ ದಿನದಿಂದ ದಿನಕ್ಕೆ ಕಠಿಣವಾಗುತ್ತಿದೆ. ಸರ್ಕಾರ ಜನರ ಕೈಗೆ ಹೇಗೆ ಹಣ ತಲುಪಬೇಕು ಎಂಬುದರ ಬಗ್ಗೆ ಯೋಚಿಸಬೇಕು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಭಾರತಕ್ಕಿಂತ ಅಮೆರಿಕ, ಜಪಾನ್ ಜಿಡಿಪಿ ಕುಸಿತ ಹೆಚ್ಚು?: ಸುಳ್ಳು ಹರಡುತ್ತಿರುವ ಪೋಸ್ಟ್ ಕಾರ್ಡ್
ಕೊರೊನಾ ಪರಿಸ್ಥಿತಿಯನ್ನು ಸರ್ಕಾರ ಉತ್ತಮವಾಗಿ ನಿಭಾಯಿಸಿದೆ. ಆದರೆ, ದೇಶಾದ್ಯಂತ ಲಾಕ್‌ಡೌನ್ ಹೇರುವ ಮುನ್ನ ಜನರಿಗೆ ತಮ್ಮ ಜೀವನೋಪಾಯಕ್ಕೆ ಬೇಕಾದ ತಯಾರಿ ಮಾಡಿಕೊಳ್ಳಲು ಕಾಲಾವಕಾಶ ನೀಡಬೇಕಾಗಿತ್ತು. ಆದರೆ, ಅದು ಆಗಲಿಲ್ಲ ಹಾಗಾಗಿ ಜನರು ಸಂಕಷ್ಟಗಳನ್ನು ಎದುರಿಸಬೇಕಾಯಿತು ಎಂದು ಅವರು ಹೇಳಿದ್ದಾರೆ.
ಮುಂಬರುವ ಅಮೆರಿಕ ಚುನಾವಣೆಯಲ್ಲಿ ಮತ್ತೆ ಡೊನಾಲ್ಡ್ ಟ್ರಂಪ್ ಅವರೆ ಅಧ್ಯಕ್ಷರಾಗಬಹುದು. ಬಿಡೆನ್ ಮುಸ್ಲಿಮರ ಬಳಿ ಹೋಗಿ, ನಾವು ಅಧಿಕಾರಕ್ಕೆ ಬಂದರೆ, ಭಾರತೀಯರಿಗೆ ಪಾಠ ಹೇಳುತ್ತೇವೆ ಎಂದು ಹೇಳಿ ತಪ್ಪು ಮಾಡಿದ್ದಾರೆ. ಹಾಗಾಗಿ ಟ್ರಂಪ್ ಗೆಲ್ಲುತ್ತಾರೆಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಜಿಡಿಪಿ ಪಾತಾಳದಲ್ಲಿದ್ದರೂ ಸುಳ್ಳು ಹೇಳುತ್ತಿರುವ ಕರ್ನಾಟಕ ಬಿಜೆಪಿ;ಫ್ಯಾಕ್ಟ್‌ಚೆಕ್.


