ಕೊರೊನಾ ಎರಡನೆ ಅಲೆಗೆ ಕಾರಣವೇನೆಂದು ದಿ ಪ್ರಿಂಟ್ ಪೋರ್ಟಲ್ ಪ್ರಕಟಿಸಿದ ಈ ವಿಶ್ಲೇಷಣಾತ್ಮಕ ವರದಿಯನ್ನು ನಾನುಗೌರಿ ಓದುಗರಿಗಾಗಿ ಅನುವಾದಿಸಿ ಕೊಡುತ್ತಿದ್ದೇವೆ. ಸುನಂದಾ ಜಯನ್ ಮೂರು ಭಾಗಗಳಲ್ಲಿ ಸಂಪಾದಿಸಿದ ಈ ವಿಶ್ಲೇಷಣೆಯ ಎರಡನೇ ಭಾಗವಿದು.
ಮೊದಲ ಕೋವಿಡ್ ಪ್ರಕರಣಗಳು ಪತ್ತೆಯಾದ ನಂತರ ಕಳೆದ 16 ತಿಂಗಳುಗಳಲ್ಲಿ, ಭಾರತವು “ಎಲ್ಲವೂ ಚೆನ್ನಾಗಿದೆ” ಎಂಬ ಧ್ಯೇಯವಾಕ್ಯದಿಂದ ಬದುಕುತ್ತ ಬಂದಿದೆ. ಇದು ಮಿತಿಗಳ ಕಾರಣದಿಂದ ಕಾರ್ಯತಂತ್ರ ರೂಪಿಸುವಾಗ ಅಡ್ಡ ದಾರಿ ಹಿಡಿದ ರಾಜಕೀಯ ನಡೆಗೆ ಸಾಕ್ಷಿಯಾಗಿದೆ ಮತ್ತು ಎರಡನೇ ಅಲೆಗೆ ಇದು ವೇದಿಕೆ ಒದಗಿಸಿದೆ.
ವಿಶ್ವ ಆರೋಗ್ಯ ಸಂಸ್ಥೆ ‘ಟೆಸ್ಟ್ ಟೆಸ್ಟ್ ಟೆಸ್ಟ್’ ಎಂಬ ಪಾಲಿಸಿ ಮೊರೆ ಹೋಗಿ ಅಂದಾಗ ಇಲ್ಲಿ “ಐಸೊಲೇಟ್ ಐಸೋಲೇಟ್ ಐಸೊಲೇಟ್” ಅನ್ನು ಕೌಂಟರ್ ಎಂಬಂತೆ ಬಳಸಲಾಗಿತು. ಸಾಂಕ್ರಾಮಿಕ ರೋಗದ ಆರಂಭದಲ್ಲಿ, ಪರೀಕ್ಷಾ ಕಿಟ್‌ಗಳು ಕಡಿಮೆ ಪೂರೈಕೆಯಲ್ಲಿದ್ದಾಗ ಈ ತಂತ್ರ ಅನುಸರಿಸಲಾಯಿತು.
ಪ್ರತಿ ವಾರವೂ ತನ್ನ ಕೋವಿಡ್ ಬ್ರೀಫಿಂಗ್‌ಗಳಲ್ಲಿ, ಸರ್ಕಾರವು ಭಾರತದ ಪ್ರಕರಣಗಳು ಮತ್ತು ಸಾವುಗಳನ್ನು ಸಂಪೂರ್ಣ (ansolute) ಸಂಖ್ಯೆಯ ಬದಲು ಒಂದು ಮಿಲಿಯನ್ (10 ಲಕ್ಷ) ಜನಸಂಖ್ಯೆಗೆ ದರಗಳಾಗಿ ಪ್ರಸ್ತುತಪಡಿಸಿತು. ದೇಶದ ಸೋಂಕು ಮತ್ತು ಸಾವಿನ ಪ್ರಮಾಣವು ವಿಶ್ವದಲ್ಲೇ ಅತ್ಯಂತ ಕಡಿಮೆ ಎಂದು ಒತ್ತಿಹೇಳುವ ಉದ್ದೇಶ ಇದಾಗಿತ್ತು.
ಅದೇ ಸಮಯದಲ್ಲಿ, ವರದಿ ಕಾರ್ಡ್ ಉತ್ತಮವಾಗಿ ಕಾಣುವಂತೆ ಮಾಡಲು ಟೆಸ್ಟ್‌ಗಳ ಸಂಖ್ಯೆ ಮತ್ತು (ಈಗ ವ್ಯಾಕ್ಸಿನೇಷನ್) ಅಂಕಿಅಂಶಗಳನ್ನು ಸಂಪೂರ್ಣವಾಗಿ ನಿಖರವಾಗಿ ನೀಡಲಾಯಿತು. ವ್ಯಾಕ್ಸಿನೇಷನ್ ಅಂಕಿಅಂಶಗಳನ್ನು ಜನಸಂಖ್ಯೆಯ ಶೇಕಡಾವಾರು ಪ್ರಮಾಣದಲ್ಲಿ ಹಂಚಿಕೊಂಡಿದ್ದರೆ, ಭಾರತವು ಇಸ್ರೇಲ್, ಅಮೆರಿಕ ಮತ್ತು ಬ್ರೆಜಿಲ್‌ನಂತಹ ರಾಷ್ಟ್ರಗಳಿಗಿಂತ ಹಿಂದುಳಿದಿದೆ ಎಂಬುದು ಜನರಿಗೆ ತಿಳಿಯುತ್ತಿತ್ತು.
ಭಾರತವು ಇಲ್ಲಿಯವರೆಗೆ ತನ್ನ ಕೆಟ್ಟ ದೈನಂದಿನ ಪ್ರಕರಣಗಳ ಸಂಖ್ಯೆಯನ್ನು ನೋಂದಾಯಿಸುತ್ತಿದ್ದರೂ, ರೂಪಾಂತರಿತ ತಳಿಗಳಿಗೆ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಭಾರತ ಸರ್ಕಾರ ನಿರಾಕರಿಸಿದೆ. ತಜ್ಞರು ಅನ್ಯಥಾ ಹೇಳಿಕೊಂಡರೂ ಸಹ, ವೈರಸ್‌ನ “ಭಾರತೀಯ” ತಳಿಯಿದೆ ಎಂಬುದನ್ನು ಅದು ನಿರಾಕರಿಸುತ್ತದೆ.
ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಹೇಳುತ್ತಾರೆ, ಮೇಲೆ ಉಲ್ಲೇಖಿಸಿದ ಎಲ್ಲ ಕಾರಣಗಳು “ಭಾರತ ವಿಶೇಷ” ಎಂಬ ಕಲ್ಪನೆಯನ್ನು ಸೃಷ್ಟಿಸಿದೆ ಮತ್ತು ಎತ್ತಿಹಿಡಿದಿದೆ, ಮತ್ತು ಭಾಗಶಃ ಈ ಸುಳ್ಳು ವಿಶ್ವಾಸವು ಕೋವಿಡ್-ಸೂಕ್ತವಾದ ಮಾರ್ಗಸೂಚಿಯ ಉಲ್ಲಂಘನೆಗೆ ಕಾರಣವಾಗಿದೆ.
ಇತ್ತೀಚಿನ ತಿಂಗಳುಗಳಲ್ಲಿ, ಕೋವಿಡ್ ಹರಡುವಿಕೆಗೆ ಸಾರ್ವಜನಿಕರ ಬೇಜವಾಬ್ದಾರಿ ವರ್ತನೆ – ಮಾಸ್ಕ್ ಧರಿಸದಿರುವುದು, ಸಾಮಾಜಿಕ ಅಂತರ ಕಾಪಾಡದಿರುವುದು – ಮುಂತಾದ ತಡೆಗಟ್ಟುವ ಕ್ರಮಗಳನ್ನು ದೂರವಿಡುವುದನ್ನು ಸರ್ಕಾರ ದೂಷಿಸಿದೆ.
ತಜ್ಞರು ಹೇಳುವಂತೆ ಇದು ಸಾರ್ವಜನಿಕರು ಸಾಂಕ್ರಾಮಿಕ ರೋಗವನ್ನು ಕಡಿಮೆ ಅಂದಾಜು ಮಾಡಲು ಸರ್ಕಾರದ ಆಶಾವಾದಿ ಸಂವಹನಗಳೇ ಕಾರಣವಾಗಿವೆ. ಸರ್ಕಾರ ಸೃಷ್ಟಿಸಿದ ಈ ಹುಸಿ ಆಶಾಭಾವನೆಯೇ ಹೊಸ ಕೋವಿಡ್ ಅಲೆಗೆ ವೇದಿಕೆ ಕಲ್ಪಿಸಿದೆ. ಇದು ಗುರುವಾರ ಮತ್ತು ಶುಕ್ರವಾರ ಸತತ ಎರಡು ದಿನಗಳವರೆಗೆ 2 ಲಕ್ಷ ಪ್ರಕರಣಗಳಲ್ಲಿ ‘ಫಲಿತಾಂಶ’ವನ್ನು ಕಂಡುಕೊಂಡಿದೆ.
ಗೋಲ್‌ಪೋಸ್ಟ್‌ಗಳ ಸ್ಥಳಾಂತರ (ಗುರಿ-ಉದ್ದೇಶಗಳ ಬದಲಾವಣೆ) ಒಂದು ಹಂತದಲ್ಲಿ ಪ್ರಸರಣ ಸರಪಳಿಯನ್ನು ಮುರಿಯುವುದರಿಂದ, ಇನ್ನೊಂದರಲ್ಲಿ ದ್ವಿಗುಣಗೊಳಿಸುವ ಸಮಯವನ್ನು ಹೆಚ್ಚಿಸುವವರೆಗೆ – ಈ ಎರಡರಲ್ಲೂ ಸಹ ಸಹಾಯ ಮಾಡಿಲ್ಲ ಎನ್ನುವ ತಜ್ಞರು, ಕಾಲಾಂತರದಲ್ಲಿ ಇದು ಕೋವಿಡ್ ಕುರಿತ ಸರ್ಕಾರಿ ಸಂದೇಶಗಳ ಮೇಲೆ ಸಾರ್ವಜನಿಕರು ನಂಬಿಕೆ ಕಳೆದುಕೊಳ್ಳುವಂತೆ ಮಾಡಿದೆ.
ಸಂಖ್ಯೆಗಳ ಕಣ್ಕಟ್ಟು
ಭಾರತವು ಕಳೆದ ಹಲವು ತಿಂಗಳುಗಳಿಂದ ತನ್ನ ಕೋವಿಡ್ -19 ಹೊರೆಯನ್ನು ಸುಮಾರು 138 ಕೋಟಿ ಜನಸಂಖ್ಯೆಯ ಮಸೂರದ ಮೂಲಕ ನೋಡಿದೆ. ಸಾವು ಮತ್ತು ಸೋಂಕುಗಳನ್ನು ಪ್ರತಿ ಮಿಲಿಯನ್‌ಗೆ ದರ ಎಂದು ಲೆಕ್ಕಹಾಕುತ್ತಾ, ಭಾರತವು ಇತರ ದೇಶಗಳಿಗಿಂತ ಗಮನಾರ್ಹವಾಗಿ ಕಡಿಮೆ ಸಂಖ್ಯೆ ಪ್ರಕರಣ ಹೊಂದಿ ಉತ್ತಮ ಸ್ಥಿತಿಯಲ್ಲಿದೆ ಎಂದು ಬಿಂಬಿಸುತ್ತ ಬರಲಾಗಿತ್ತು.
ಭಾರತವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸೂಚಿಸಲು ಈ ಅಂಕಿಅಂಶಗಳನ್ನು ಸರ್ಕಾರದ ಸಾಪ್ತಾಹಿಕ ಕೋವಿಡ್ ಮಾಧ್ಯಮ ಬ್ರೀಫಿಂಗ್‌ನಲ್ಲಿ ಪ್ರಸ್ತುತಪಡಿಸಲಾಯಿತು.
ದೈನಂದಿನ ಪಾಸಿಟಿವ್ ಸಂಖ್ಯೆ 2 ಲಕ್ಷವನ್ನು ಮೀರಿದ ಸಮಯದಲ್ಲಿ ಸಹ, ಭಾರತದ ಪ್ರಕರಣಗಳು-ಪ್ರತಿ ಮಿಲಿಯನ್ ಅಂಕಿಅಂಶಗಳ ಆಧಾರದಲ್ಲಿ 9,977 ರಷ್ಟಿದ್ದು, ಜಾಗತಿಕ ಸರಾಸರಿ 17,711 ರಷ್ಟಿದೆ. ಪ್ರತಿ ಮಿಲಿಯನ್‌ಗೆ ಸಾವುಗಳು ಜಾಗತಿಕ ಸರಾಸರಿ 381.4 ರ ವಿರುದ್ಧ 124 ರಷ್ಟಿದೆ ಎಂದು ಅಂಕಿಸಂಖ್ಯೆಗಳ ಕಣ್ಕಟ್ಟು ಮಾಡುತ್ತ ನಡೆದಿದೆ ಸರ್ಕಾರ.
ಏಪ್ರಿಲ್ 16 ರ ಹೊತ್ತಿಗೆ ಭಾರತವು 1,74,308 ಕೋವಿಡ್ -19 ಸಾವುಗಳನ್ನು ದಾಖಲಿಸಿದೆ.
ದೇಶದಲ್ಲಿ ಸಾವಿನ ವರದಿಯ ಸತ್ಯಾಸತ್ಯತೆಯ ಬಗ್ಗೆ ಸಂದೇಹವಿರುವುದರಿಂದ ಈ ಅಂಕಿ ಅಂಶವೇ ಪ್ರಶ್ನಾರ್ಹವಾಗಿದೆ. ವಿವಿಧ ರಾಜ್ಯಗಳು “ಕೋವಿಡ್ ಡೆತ್” ಎಂದರೇನು ಎಂಬುದರ ಬಗ್ಗೆ ತಮ್ಮದೇ ಆದ ಮಾನದಂಡಗಳನ್ನು ನಿರ್ಧರಿಸುತ್ತಿವೆ: ಹೃದಯ ರೋಗಿಯು ಸತ್ತರೆ ಅದು ಕೋವಿಡ್ ಸಾವು ಅಲ್ಲವೆ? ಏಕೆಂದರೆ ಕೊರೋನಾ ಸೋಂಕು ಅವರ ಅಸ್ತಿತ್ವದಲ್ಲಿರುವ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆಯೇ? – ಹೀಗೆ ವಿವಿಧ ಗೊಂದಲಗಳು ಇನ್ನೂ ಇವೆ.
ಟೆಸ್ಟ್ ಮತ್ತು ಲಸಿಕಾಯಣ
ಟೆಸ್ಟ್ ಮತ್ತು ವ್ಯಾಕ್ಸಿನೇಷನ್ ಸಂಖ್ಯೆಗಳಿಗೆ ಸಂಪೂರ್ಣವಾಗಿ ವಿಭಿನ್ನವಾದ ಗಜಕಡ್ಡಿಗಳನ್ನು ಅಂದರೆ ಮಾನದಂಡಗಳನ್ನು ಬಳಸಲಾಗಿದೆ. ಈ ಅಂಕಿಅಂಶಗಳನ್ನು ನೇರವಾಗಿ ನೀಡಲಾಗಿದೆ. ಇಲ್ಲೂ ಮಿಲಿಯನ್‌ಗೆ ಇಷ್ಟು ಟೆಸ್ಟ್ ಅಥವಾ ಇಷ್ಟು ಲಸಿಕೆ ಎಂದು ಹೇಳಿದ್ದರೆ ಅದು ಈಗ ಬಿಂಬಿತವಾದ ಚಿತ್ರವನ್ನು ತಲೆಕೆಳಗು ಮಾಡುತ್ತಿತ್ತು!
ವಾಸ್ತವ ಹೀಗಿದೆ: ಪ್ರತಿ 10 ಲಕ್ಷ ಜನಸಂಖ್ಯೆಗೆ 1,89,459 ಟೆಸ್ಟಿಂಗ್ (ಏಪ್ರಿಲ್ 16 ರಂತೆ) ನಡೆದಿವೆ. ಈ ಲೆಕ್ಕದಲ್ಲಿ ಭಾರತವು ಯುಎಸ್, ಫ್ರಾನ್ಸ್, ಯುಕೆ, ರಷ್ಯಾ, ಟರ್ಕಿ ಮತ್ತು ಇತರ ಹಲವು ದೇಶಗಳಿಗಿಂತ ಬಹಳ ಹಿಂದಿದೆ.
ಅಂದಾಜು ಶೇ. 7.27 ರಷ್ಟು ಭಾರತೀಯರು ಈವರೆಗೆ ಎರಡು-ಡೋಸ್ ಕೋವಿಡ್ -19 ಲಸಿಕೆಗಳಲ್ಲಿ ಕನಿಷ್ಠ ಒಂದು ಡೋಸ್ ಪಡೆದಿದ್ದಾರೆ. ಹೋಲಿಸಬಹುದಾದ ಸಂಖ್ಯೆಗಳು ಇಲ್ಲಿವೆ ನೋಡಿ: ಇಸ್ರೇಲ್ 61.47, ಬ್ರಿಟನ್ 47.42, ಅಮೆರಿಕಾ 35.65, ಜರ್ಮನಿಯಲ್ಲಿ 15.80, ಟರ್ಕಿಯಲ್ಲಿ 12.93 ಮತ್ತು ಬ್ರೆಜಿಲ್‌ನಲ್ಲಿ ಶೇ 9.72.
“ನಾವು ಇಡೀ ದೇಶದ ಒಂದು ಸಮಗ್ರ ವಿಧಾನದಲ್ಲಿದ್ದೇವೆ ಎಂದು ನಾನು ಭಾವಿಸುವುದಿಲ್ಲ. ಆದರೆ ಸಂದೇಶ ಕಳುಹಿಸುವಿಕೆಯು ಅಸಮಂಜಸವಾಗಿದೆ. ಅದು ರಾಷ್ಟ್ರೀಯವಾಗಿರಬೇಕು. ಇದು ಗಂಭೀರ ರೋಗವೇ ಅಥವಾ ಅಲ್ಲವೇ?’ ಎಂಬುದು ರಾಷ್ಟ್ರೀಯವಾಗಿ ಸ್ಪಷ್ಟವಾಗುವಂತೆ ಒಂದು ದೃಢ ಸಂದೇಶದ ಅಗತ್ಯವಿದೆ ಎಂದು ಸಾರ್ವಜನಿಕ ಆರೋಗ್ಯ ಸಂಶೋಧನಾ ಸಂಸ್ಥೆಯಾದ ಸೆಂಟರ್ ಫಾರ್ ಡಿಸೀಸ್ ಡೈನಾಮಿಕ್ಸ್, ಎಕನಾಮಿಕ್ಸ್ & ಪಾಲಿಸಿಯ ಅಂಗಸಂಸ್ಥೆ ಪ್ರಾಧ್ಯಾಪಕ, ಜಾಗತಿಕ ಆರೋಗ್ಯ ನಿರ್ದೇಶಕ ರಮಣನ್ ಲಕ್ಷ್ಮೀ ನಾರಾಯಣ್ ಹೇಳಿದರು.
“ನಾವು ರೋಗದ ತೀವ್ರತೆ ಮತ್ತು ಮರಣ ಪ್ರಮಾಣವನ್ನು ತಪ್ಪಾಗಿ ಪ್ರಕಟಣೆ ಮಾಡಿದರೆ, ಬೀದಿಯಲ್ಲಿರುವ ವ್ಯಕ್ತಿ ಮಾಸ್ಕ್ ಮತ್ತು ಸುರಕ್ಷಿತ ದೂರವನ್ನು ಅನುಸರಿಸುವುದಿಲ್ಲ ಎಂಬುದು ಸಹಜ. ಅದು ಜನಸಾಮಾನ್ಯನ ತಪ್ಪಲ್ಲ. ನಾವು ಭಯ ಮತ್ತು ತೃಪ್ತಿಯ ನಡುವೆ ಆ ಕಡೆ ಈ ಕಡೆ ಜೋಕಾಲಿ ಆಡುತ್ತಿದ್ದೇವೆ. ಇದು ಸರಿಯಾದ ವಿಧಾನವೂ ಅಲ್ಲ. ಇಲ್ಲಿ ಒಂದು ಸ್ಪಷ್ಟತೆ ಬೇಕು” ಎಂದು ಅವರು ಎಚ್ಚರಿಸಿದ್ದಾರೆ.
ಗೋಲ್‌ಪೋಸ್ಟ್‌ಗಳನ್ನು ಬದಲಾಯಿಸಲಾಗುತ್ತಿದೆ
ಭಾರತವು ತನ್ನ ಸಾಂಕ್ರಾಮಿಕದ ವಿರುದ್ಧದ ಪ್ರಯಾಣವನ್ನು ಅಬ್ಬರದಿಂದ ಪ್ರಾರಂಭಿಸಿತು. ಇದು “ಪ್ರಸರಣ ಸರಪಳಿಯನ್ನು ಮುರಿಯಲು” ಹೇರಿದ ಒಂದು ಅವಾಸ್ತವಿಕ ಲಾಕ್‌ಡೌನ್ ಆಗಿತ್ತು. ಒಂದು ತಿಂಗಳಿಗಿಂತಲೂ ಕಡಿಮೆ ಅವಧಿಯಲ್ಲಿ, ಗುರಿ ಬದಲಾಗಿತ್ತು. ದೇಶವು “ದ್ವಿಗುಣಗೊಳಿಸುವ ಸಮಯವನ್ನು” ಹೆಚ್ಚಿಸುವಲ್ಲಿ ತನ್ನ “ಯಶಸ್ಸನ್ನು” ಆನಂದಿಸಿತು. (ಸೋಂಕುಗಳ ಸಂಖ್ಯೆ ದ್ವಿಗುಣಗೊಳ್ಳಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದರ ಲೆಕ್ಕಾಚಾರ) ಆದರೆ ವಾಸ್ತವ ಬೇರೆಯೇ ಇತ್ತು. ವಾಸ್ತವ ಸಂಖ್ಯೆಗಳು ಕಠೋರವಾಗಿ ಕಾಣುತ್ತಿರುವಾಗ, ಜವಾಬ್ದಾರಿ ಮೊದಲು ರಾಜ್ಯಗಳ ಮೇಲೆ ಬಿತ್ತು ಮತ್ತು ನಂತರ “ಬೇಜವಾಬ್ದಾರಿತನ”ದ ಕೇಂದದ ನಿಲುವುಗಳತ್ತ ತಿರುಗಿತು.
ಪರೀಕ್ಷಾ ಕಿಟ್‌ಗಳ ಪೂರೈಕೆ ಸರಾಗವಾಗಿದ್ದರಿಂದ ಪರೀಕ್ಷೆಯ ಬಗ್ಗೆ ಭಾರತದ ದೃಷ್ಟಿಕೋನವು ಈಗ ವಿಕಸನಗೊಂಡಿದೆ. ಆದರೂ, ಮಾರ್ಚ್ 2020 ಕ್ಕೆ ಹಿಂತಿರುಗಿ ನೋಡಿ ಆಗ ದೃಶ್ಯ ವಿಭಿನ್ನವಾಗಿತ್ತು.. ವೈರಸ್ ಅನ್ನು ಸೋಲಿಸಲು ವಿಶ್ವ ಆರೋಗ್ಯ ಸಂಸ್ಥೆಯ “ಟೆಸ್ಟ್ ಟೆಸ್ಟ್ ಟೆಸ್ಟ್” ಪ್ರತಿಪಾದನೆಗೆ ಪ್ರತಿಕ್ರಿಯಿಸಿದ ಭಾರತ, ಕ್ವಾರಂಟೈನ್ ಕ್ವಾರಂಟೈನ್ ಕ್ವಾರಂಟೈನ್’ ಎಂಬ ಹಾದಿ ಹಿಡಿದಿತ್ತು..
ನಂತರದಲ್ಲಿ ಸರ್ಕಾರವೇ ಜನರು ಪರೀಕ್ಷೆಗೆ ಒಳಗಾಗುವಂತೆ ಮನವಿ ಮಾಡಿದರೂ ಸಹ, ಹಿಂಜರಿಕೆ, ಆತಂಕಗಳು ಸಹ ಇದ್ದವು. ಇದು ಕೂಡ ಸರ್ಕಾರ ಟೆಸ್ಟಿಂಗ್ ಬಗ್ಗೆ ಆರಂಭದಲ್ಲಿ ತಳೆದ ಧೋರಣೆಯ ಫಲವಾಗಿತ್ತು.
“ಈ ಸಾಂಕ್ರಾಮಿಕದಾದ್ಯಂತ ಮಿಶ್ರ ಸಂದೇಶ ಕಳುಹಿಸುವುದು, ನಾವು ಏನೂ ಇಲ್ಲದಿದ್ದಾಗ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಹೇಳುವುದು ನಿರಂತರ ಸಮಸ್ಯೆಯಾಗಿದೆ. ಆ ಸಂದೇಶಗಳನ್ನು ನಂಬದ ಹೊರತು ಜನರು ಸಾರ್ವಜನಿಕ ಆರೋಗ್ಯ ಸಂದೇಶವನ್ನು ಕೇಳುವುದಿಲ್ಲ. ಅದು ಇಲ್ಲಿಯೇ ಸಂಭವಿಸಿದೆ ಎಂದು ತೋರುತ್ತದೆ” ಎಂದು ಅಶೋಕ ವಿಶ್ವವಿದ್ಯಾಲಯದ ತ್ರಿವೇದಿ ಸ್ಕೂಲ್ ಆಫ್ ಬಯೋಸೈನ್ಸ್ನ ನಿರ್ದೇಶಕ ವೈರಾಲಜಿಸ್ಟ್ ಡಾ.ಶಾಹಿದ್ ಜಮೀಲ್ ಹೇಳಿದ್ದಾರೆ.
ಸಮುದಾಯ ಪ್ರಸರಣ
ಸಮುದಾಯ ಪ್ರಸರಣವನ್ನು ನಿರಾಕರಿಸಲು ಸರ್ಕಾರವು ಹೆಚ್ಚಿನ ಪ್ರಯತ್ನಗಳನ್ನು ಮಾಡಿದೆ, ಹೊಸ ಮತ್ತು ಉದಯೋನ್ಮುಖ ಸೋಂಕುಗಳ ಮೂಲವು ಇನ್ನು ಮುಂದೆ ತಿಳಿದಿಲ್ಲ ಮತ್ತು ಸಂವಹನವು ಹೇಗೆ ನಡೆಯುತ್ತಿದೆ ಎಂಬುದರ ಬಗ್ಗೆ ವ್ಯವಸ್ಥೆಯಿಲ್ಲದೆ ಸಮುದಾಯದಲ್ಲಿ ವೈರಸ್ ಸಡಿಲವಾಗಿ ಹೊಕ್ಕಿದೆ.
ತಂತ್ರಜ್ಞರು, ಆಫ್-ದಿ-ರೆಕಾರ್ಡ್ ಸಂಭಾಷಣೆಗಳಲ್ಲಿ, ಅದನ್ನು “ಭ್ರಮೆ” ಎಂದು ನಗಿಸಿದರೂ ನಿರಾಕರಣೆ ಮುಂದುವರಿಯುತ್ತದೆ.
ಸಮುದಾಯ ಪ್ರಸರಣವಿಲ್ಲದಿದ್ದರೆ, ನಾವು ಫೆಬ್ರವರಿಯಿಂದ ಏಪ್ರಿಲ್‌ನಲ್ಲಿ ಗರಿಷ್ಠ ಮಟ್ಟಕ್ಕೆ ಹೇಗೆ ಬಂದೆವು? ನಾವು ಸೋಂಕನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ ಎಂಬುದು ಇದಕ್ಕೆ ಕಾರಣ. ಪರೀಕ್ಷೆ ಮತ್ತು ಟ್ರ‍್ಯಾಕಿಂಗ್ ಬಗ್ಗೆ ನಾವು ಇನ್ನೂ ಅರ್ಥಹೀನವಾಗಿ ಮಾತನಾಡುತ್ತಿರುವುದು ಆ ನಿರಾಕರಣೆಯಾಗಿದೆ” ಎಂದು ಸಾಂಕ್ರಾಮಿಕ ನಿಯಂತ್ರಣ ತಂತ್ರದ ಚೌಕಟ್ಟಿನೊಂದಿಗೆ ನಿಕಟ ಸಂಬಂಧ ಹೊಂದಿರುವ ಸರ್ಕಾರಿ ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಹೇಳಿದರು.
“ರೂಪಾಂತರವು ನೈಸರ್ಗಿಕ ಪ್ರಕ್ರಿಯೆ. ನಾವು 13 ಮಿಲಿಯನ್ ಸೋಂಕುಗಳನ್ನು ಹೊಂದಿರುವಾಗ ವೈರಸ್ ರೂಪಾಂತರಗೊಂಡಿಲ್ಲ ಎಂದು ಭಾವಿಸುವುದು ಮೂರ್ಖತನ. ಈ ಸಮಯದಲ್ಲಿ, ವೈರಸ್ ಹೆಚ್ಚು ಸಾಂಕ್ರಾಮಿಕವಾಗಿದೆ – ದೆಹಲಿಯಲ್ಲಿ, ನಾವು ಕೆಲವು ಅಧ್ಯಯನಗಳನ್ನು ಮಾಡಿದ್ದೇವೆ, ಅದು ಶೇಕಡಾ 50 ರಷ್ಟು ಹೆಚ್ಚು ಸಾಂಕ್ರಾಮಿಕವಾಗಿದೆ ಎಂದು ತೋರಿಸುತ್ತದೆ ” ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಜಮೀಲ್ ಹೇಳಿದರು.
“ಭಾರತೀಯ ರೂಪಾಂತರವಿದೆ ಎಂದು ಸಹ ಉತ್ತಮವಾಗಿ ದಾಖಲಿಸಲಾಗಿದೆ. ಯುಕೆ ರೂಪಾಂತರವಿದೆ, ಬ್ರೆಜಿಲ್ ರೂಪಾಂತರವಿದೆ, ಏಕೆ ಭಾರತೀಯ ರೂಪಾಂತರ ಇರಬಾರದು? ನಮ್ಮ ಬಗ್ಗೆ ಏನು ವಿಶೇಷ?’ ಎಂದು ಜಮೀಲ್ ಕೇಳುತ್ತಾರೆ.
ಈಗಲೂ ನೋಡಿ, ಪ್ರಧಾನಿ, ಗೃಹ ಸಚಿವರಿಗೆ ಚುನಾವಣೆ ರ‍್ಯಾಲಿ ಮತ್ತು ಕುಂಭಮೇಳ ಮುಖ್ಯವಾಗಿವೆ ಹೊರತು ದೇಶವನ್ನು ತೀವ್ರವಾಗಿ ಕಾಡುತ್ತಿರುವ ಕೊರೋನಾ ಎರಡನೇ ಅಲೆ ಅಲ್ಲ!
ಕೃಪೆ: ದಿ ಪ್ರಿಂಟ್
ಇದನ್ನೂ ಓದಿ: ಆಕ್ಸಿಜನ್ ಕೊರತೆ ಕುರಿತು ಪ್ರಧಾನಿಗೆ ಕರೆ ಮಾಡಿದ ಉದ್ಧವ್ ಠಾಕ್ರೆ: ಬಂಗಾಳ ಚುನಾವಣಾ ಪ್ರಚಾರದಲ್ಲಿದ್ದಾರೆ ಎಂದ ಪಿಎಂಒ!


