ಸುಮಾರು 2,200 ಕೋಟಿ ರೂ. ಮೌಲ್ಯದ ಕಿರು ಜಲವಿದ್ಯುತ್ ಯೋಜನೆಯ ಸಿವಿಲ್ ಕಾಮಗಾರಿಗಳ ಗುತ್ತಿಗೆಗಳನ್ನು ನೀಡಲಾಗಿದೆ ಎಂಬ ಆರೋಪದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ (ಸಿಬಿಐ) ಗುರುವಾರ ಜಮ್ಮು ಮತ್ತು ಕಾಶ್ಮೀರದ ಮಾಜಿ ಗವರ್ನರ್ ಸತ್ಯ ಪಾಲ್ ಮಲಿಕ್ ವಿರುದ್ಧ ಆರೋಪಪಟ್ಟಿ ಸಲ್ಲಿಸಿದೆ.
ಕಿಶ್ತ್ವಾರ್‌ನಲ್ಲಿರುವ ಕಿರು ಜಲವಿದ್ಯುತ್ ಯೋಜನೆಯ ಟೆಂಡರ್ ಪ್ರಕ್ರಿಯೆಯಲ್ಲಿನ ಶಂಕಿತ ಅಕ್ರಮಗಳಿಗೆ ಈ ಪ್ರಕರಣ ಸಂಬಂಧಿಸಿದೆ.
ಆಗಸ್ಟ್ 23, 2018 ರಿಂದ ಅಕ್ಟೋಬರ್ 30, 2019 ರವರೆಗೆ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದ ಮಲಿಕ್, ಈ ಹಿಂದೆ ಎರಡು ಫೈಲ್‌ಗಳನ್ನು ತೆರವುಗೊಳಿಸಲು ತನಗೆ 300 ಕೋಟಿ ರೂ. ಲಂಚದ ಆಫರ್ ನೀಡಲಾಗಿದೆ ಎಂದು ಆರೋಪಿಸಿದ್ದರು. ಅದರಲ್ಲಿ ಒಂದು ವಿವಾದಿತ ಯೋಜನೆಗೆ ಸಂಬಂಧಿಸಿದೆ.
ಫೆಬ್ರವರಿ 2024 ರಲ್ಲಿ, ಸಿಬಿಐ ತನ್ನ ತನಿಖೆಯ ಭಾಗವಾಗಿ ದೆಹಲಿ, ಜಮ್ಮು ಮತ್ತು ಕಾಶ್ಮೀರದಲ್ಲಿರುವ ಮಲಿಕ್ ಅವರ ನಿವಾಸಗಳು ಸೇರಿದಂತೆ 30 ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ನಡೆಸಿತು.
ಈ ದಾಳಿಗಳು ಮಲಿಕ್ ಅವರ ಸಹಚರರು ಮತ್ತು ಕಿರು ಜಲವಿದ್ಯುತ್ ಯೋಜನೆಯ ಕಾರ್ಯನಿರ್ವಾಹಕ ಸಂಸ್ಥೆಯಾದ ಚೆನಾಬ್ ವ್ಯಾಲಿ ಪವರ್ ಪ್ರಾಜೆಕ್ಟ್ಸ್ (ಪಿ) ಲಿಮಿಟೆಡ್ (ಸಿವಿಪಿಪಿಪಿಎಲ್) ಗೆ ಸಂಬಂಧಿಸಿದ ಅಧಿಕಾರಿಗಳನ್ನು ಗುರಿಯಾಗಿರಿಸಿಕೊಂಡಿವೆ.
ಸಿವಿಪಿಪಿಪಿಎಲ್‌ನ ಮಾಜಿ ಅಧ್ಯಕ್ಷ ನವೀನ್ ಕುಮಾರ್ ಚೌಧರಿ, ಮಾಜಿ ಅಧಿಕಾರಿಗಳಾದ ಎಂ.ಎಸ್. ಬಾಬು, ಎಂ.ಕೆ. ಮಿತ್ತಲ್ ಮತ್ತು ಅರುಣ್ ಕುಮಾರ್ ಮಿಶ್ರಾ ಹಾಗೂ ಗುತ್ತಿಗೆ ಪಡೆದ ಪಟೇಲ್ ಎಂಜಿನಿಯರಿಂಗ್ ಲಿಮಿಟೆಡ್ ಸೇರಿದಂತೆ ಹಲವಾರು ವ್ಯಕ್ತಿಗಳು ಸಿಬಿಐನ ತನಿಖೆಗೆ ಒಳಪಟ್ಟರು.
ಸಿವಿಪಿಪಿಪಿಎಲ್‌ನ 47 ನೇ ಮಂಡಳಿಯ ಸಭೆಯಲ್ಲಿ ರಿವರ್ಸ್ ಹರಾಜಿನ ಮೂಲಕ ಇ-ಟೆಂಡರಿಂಗ್ ಮೂಲಕ ಯೋಜನೆಯನ್ನು ಮರು-ಟೆಂಡರ್ ಮಾಡಲು ನಿರ್ಧರಿಸಿದ್ದರೂ, ಇದನ್ನು ಕಾರ್ಯಗತಗೊಳಿಸಲಾಗಿಲ್ಲ, ಅಂತಿಮವಾಗಿ ಒಪ್ಪಂದವನ್ನು ಪಟೇಲ್ ಎಂಜಿನಿಯರಿಂಗ್ ಲಿಮಿಟೆಡ್‌ಗೆ ನೀಡಲಾಯಿತು ಎಂದು ಸಿಬಿಐ ತಿಳಿಸಿದೆ.
ಈ ಹಿಂದೆ ಮಲಿಕ್ ಅವರು ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದರು; ದಾಳಿಗಳನ್ನು ಟೀಕಿಸಿದ್ದರು. ಇದು ತನ್ನನ್ನು ಬೆದರಿಸುವ ಪ್ರಯತ್ನ ಎಂದು ಹೇಳಿದ್ದರು.
“ನಾನು ಕಳೆದ ಮೂರು ನಾಲ್ಕು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದೇನೆ, ಆಸ್ಪತ್ರೆಗೆ ದಾಖಲಾಗಿದ್ದೇನೆ. ಇದರ ಹೊರತಾಗಿಯೂ, ಸರ್ವಾಧಿಕಾರಿಯು ಸರ್ಕಾರಿ ಸಂಸ್ಥೆಗಳ ಮೂಲಕ ನನ್ನ ಮನೆಯ ಮೇಲೆ ದಾಳಿ ಮಾಡುತ್ತಿದ್ದಾನೆ. ನನ್ನ ಚಾಲಕ ಮತ್ತು ನನ್ನ ಸಹಾಯಕನ ಮೇಲೂ ಅನಗತ್ಯವಾಗಿ ದಾಳಿ ಮಾಡಿ ಕಿರುಕುಳ ನೀಡಲಾಗುತ್ತಿದೆ. ನಾನು ರೈತನ ಮಗ, ಈ ದಾಳಿಗಳಿಗೆ ನಾನು ಹೆದರುವುದಿಲ್ಲ. ನಾನು ರೈತರೊಂದಿಗಿದ್ದೇನೆ” ಎಂದು ಮಲಿಕ್ ಎಕ್ಸ್‌ನಲ್ಲಿ ಬರೆದಿದ್ದಾರೆ.
ಗುಜರಾತ್: 7,000ಕ್ಕೂ ಹೆಚ್ಚು ಮುಸ್ಲಿಂ ಮನೆಗಳ ನೆಲಸಮ; 6,500 ಜನರ ಬಂಧನ


