ಗುಜರಾತ್‌ನ ನರ್ಮದಾ ಜಿಲ್ಲೆಯ ದೇಡಿಯಾಪದ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಭಾರತೀಯ ಬುಡಕಟ್ಟು ಪಕ್ಷದ (ಬಿಟಿಪಿ) ರಾಷ್ಟ್ರೀಯ ಅಧ್ಯಕ್ಷ ಮಹೇಶ್ ವಾಸವ ಅವರು ಸೋಮವಾರ (ಏ.14) ಬಿಜೆಪಿ ತೊರೆದಿದ್ದು, ಕೇಸರಿ ಪಕ್ಷದೊಂದಿಗಿನ ತಮ್ಮ ಒಂಬತ್ತು ತಿಂಗಳ ಸಂಬಂಧವನ್ನು ಕೊನೆಗೊಳಿಸಿದ್ದಾರೆ. ಮಹೇಶ್ ವಾಸವ ಅವರು ಹಿರಿಯ ಬುಡಕಟ್ಟು ನಾಯಕ ಛೋಟು ವಾಸವ ಅವರ ಮಗ.
“ನನ್ನ ಪ್ರದೇಶಗಳ ಸಾರ್ವಜನಿಕ ಪ್ರಯೋಜನಕಾರಿ ಕೆಲಸಗಳು ನಡೆಯಲಿ ಎಂದು ನಾನು ಬಿಜೆಪಿಗೆ ಸೇರಿದ್ದೆ, ಆದರೆ ನನ್ನ ಶಿಫಾರಸುಗಳ ಮೇಲೂ ಏನೂ ನಡೆಯುತ್ತಿಲ್ಲ. ನಾನು ಲೋಕಸಭಾ ಚುನಾವಣೆಯ ಸಮಯದಲ್ಲಿ ಕೆಲಸ ಮಾಡಿದ್ದೇನೆ ಮತ್ತು ಬಿಜೆಪಿ ಅಭ್ಯರ್ಥಿ ಮತ್ತು ಹಾಲಿ ಸಂಸದ ಮನ್ಸುಖ್ ವಾಸವಾ ಪರ ಪ್ರಚಾರ ಮಾಡಿದ್ದೇನೆ. ಅವರು ಚುನಾವಣೆಯಲ್ಲಿ ಗೆದ್ದಿದ್ದಾರೆ. ಚುನಾವಣಾ ಫಲಿತಾಂಶಗಳು ಪ್ರಕಟವಾದ ನಂತರ, ಬಿಜೆಪಿ ನಾಯಕರು ನನ್ನನ್ನು ಯಾವುದೇ ಪಕ್ಷದ ಕಾರ್ಯಕರ್ತರ ಸಭೆ ಅಥವಾ ಸಾರ್ವಜನಿಕ ಸಭೆಗೆ ಆಹ್ವಾನಿಸಿಲ್ಲ. ಅವರು ಉದ್ದೇಶಪೂರ್ವಕವಾಗಿ ನನ್ನಿಂದ ದೂರವಾಗಿದ್ದಾರೆ. ನಾನು ಬಿಟಿಪಿಗಾಗಿ ಕೆಲಸ ಮಾಡುತ್ತೇನೆ. ಮುಂಬರುವ ದಿನಗಳಲ್ಲಿ, ರಾಜಕೀಯ ಭೂಕಂಪ ಸಂಭವಿಸಲಿದೆ ಮತ್ತು ಅದಕ್ಕೆ ಭರೂಚ್ ಕೇಂದ್ರ ಬಿಂದುವಾಗಿರುತ್ತದೆ” ಎಂದು ಮಹೇಶ್ ವಾಸವಾ ಹೇಳಿದ್ದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಮಹೇಶ್ ವಾಸವ ಮತ್ತು ಬನಸ್ಕಾಂತದ ಪಾಲನ್‌ಪುರದ (2017) ಮಾಜಿ ಕಾಂಗ್ರೆಸ್ ಶಾಸಕ ಮಹೇಶ್ ಪಟೇಲ್ ಅವರು ಲೋಕಸಭಾ ಚುನಾವಣೆಗೆ ಮುನ್ನ ಮಾರ್ಚ್ 11, 2024 ರಂದು ಬಿಜೆಪಿಗೆ ಪಕ್ಷಾಂತರ ಮಾಡಿದ್ದರು. ಈ ಇಬ್ಬರೂ ನಾಯಕರು 2,000ಕ್ಕೂ ಹೆಚ್ಚು ಬೆಂಬಲಿಗರೊಂದಿಗೆ ಗಾಂಧಿನಗರದ ಕಮಲಂ ಕಚೇರಿಯಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಪಾಟೀಲ್ ಸ್ವಾಗತಿಸಿದ್ದರು.
ಬಿಜೆಪಿ ಸೇರಿದ ನಂತರ, ಮಹೇಶ್ ವಾಸವ ಅವರು ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಶ್ಲಾಘಿಸಿದ್ದರು. “ಕಾಂಗ್ರೆಸ್ ಬಹಳ ವರ್ಷಗಳಿಂದ ಮಾಡದ ಕೆಲಸವನ್ನು ಕಳೆದ ಒಂದು ದಶಕದಲ್ಲಿ ಬಿಜೆಪಿ ಮಾಡಿದೆ”ಎಂದಿದ್ದರು.
ಬಿಜೆಪಿ ಅಧ್ಯಕ್ಷ ಪಾಟೀಲ್ ಅವರಿಗೆ ಕಳುಹಿಸಿರುವ ರಾಜೀನಾಮೆ ಪತ್ರದಲ್ಲಿ ಮಹೇಶ್ ವಾಸವ, “ಭಾರತದ ಸಂವಿಧಾನವನ್ನು ಬರೆದ ಡಾ. ಭೀಮರಾವ್ ಅಂಬೇಡ್ಕರ್ ಅವರ ಜನ್ಮದಿನದಂದು ನಾನು ಅವರಿಗೆ ನಮಸ್ಕರಿಸುತ್ತೇನೆ. ಪ್ರಸ್ತುತ ಕಾಲದಲ್ಲಿ, ಭಾರತವು ಸಂವಿಧಾನದೊಂದಿಗೆ ನಡೆಯುತ್ತಿಲ್ಲ. ಆದಿವಾಸಿ, ದಲಿತ, ಒಬಿಸಿ, ಮುಸ್ಲಿಂ, ಕ್ರಿಶ್ಚಿಯನ್, ಸಿಖ್ ಎಲ್ಲರೂ ಒಟ್ಟಾಗಿ ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಸಿದ್ಧಾಂತದ ವಿರುದ್ಧ ಒಟ್ಟಾಗಿ ಹೋರಾಡಲಿದ್ದಾರೆ. ಇದು ದೀರ್ಘ ಯುದ್ಧ ಮತ್ತು ಇದಕ್ಕಾಗಿ ನಾವು ಒಗ್ಗಟ್ಟಾಗಿರಬೇಕು. ಆಂತರಿಕವಾಗಿ ಕಚ್ಚಾಡುತ್ತಿರಬಾರದು ಎಂಬುವುದಾಗಿ ಹೇಳಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ತಿಳಿಸಿದೆ.
ಗಮನಾರ್ಹವಾಗಿ, ಮಹೇಶ್ ವಾಸವ ಅವರ ತಂದೆ ಭರೂಚ್ ಜಿಲ್ಲೆಯ ಜಗಾಡಿಯಾ ವಿಧಾನಸಭಾ ಕ್ಷೇತ್ರದಿಂದ ಏಳು ಬಾರಿ ಶಾಸಕರಾಗಿದ್ದರು. ಮಹೇಶ್ ವಾಸವ 2002 ಮತ್ತು 2017 ರಲ್ಲಿ ದೇಡಿಯಾಪದಾ ಕ್ಷೇತ್ರದಿಂದ ಗೆಲುವು ದಾಖಲಿಸಿದ್ದರು. ಕಳೆದ 2022ರ ಚುನಾವಣೆಯಲ್ಲಿ, ಅವರ ಆಪ್ತ ಸಹಾಯಕ ಚೈತರ್ ವಾಸವ ಎಎಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿ ಗೆದ್ದಿದ್ದರು.


