ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ (2017ರ ಪ್ರಕರಣ) ಮಲಯಾಳಂನ ಪ್ರಮುಖ ನಟ ದಿಲೀಪ್ ಅವರನ್ನು ಎರ್ನಾಕುಲಂನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಸೋಮವಾರ (ಡಿಸೆಂಬರ್ 8) ಖುಲಾಸೆಗೊಳಿಸಿದೆ.
ನ್ಯಾಯಮೂರ್ತಿ ಹನಿ ಎಂ. ವರ್ಗೀಸ್ ಅವರು ಮುಕ್ತ ನ್ಯಾಯಾಲಯದಲ್ಲಿ ತೀರ್ಪು ಪ್ರಕಟಿಸಿದ್ದು, ಈ ಮೂಲಕ 8 ವರ್ಷಗಳ ಕಾಲ ನಡೆದ ವಿಚಾರಣೆಗೆ ಅಂತ್ಯ ಹಾಡಿದ್ದಾರೆ.
ನ್ಯಾಯಾಧೀಶರು ಪ್ರಕರಣ ಇತರ ಆರೋಪಿಗಳಾದ ಪಲ್ಸರ್ ಸುನಿ (ಎ1), ಮಾರ್ಟಿಂಗ್ ಆಂಟನಿ (ಎ2), ಬಿ. ಮಣಿಕಂದನ್ (ಎ3), ವಿಪಿ ವಿಜೀಶ್ (ಎ4), ಎಚ್. ಸಲೀಮ್ (ಎ5), ಸಿ. ಪ್ರದೀಪ್ (ಎ 6) ಅವರನ್ನು ಅತ್ಯಾಚಾರ, ಪಿತೂರಿ, ಅಪಹರಣ ಮತ್ತು ಇತರ ಅಪರಾಧಗಳಲ್ಲಿ ತಪ್ಪಿತಸ್ಥರೆಂದು ಘೋಷಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120 ಬಿ, 340, 354, 366, 354 ಬಿ ಮತ್ತು 376 ಡಿ ಅಡಿಯ ಅಪರಾಧಗಳಲ್ಲಿ ಇವರನ್ನು ತಪ್ಪಿತಸ್ಥರೆಂದು ಘೋಷಣೆ ಮಾಡಲಾಗಿದೆ. ಡಿಸೆಂಬರ್ 12 ರಂದು ಶಿಕ್ಷೆ ಪ್ರಕಟವಾಗಲಿದೆ.
ಪ್ರಕರಣದಲ್ಲಿ ದಿಲೀಪ್ 8ನೇ ಆರೋಪಿ ಎಂದು ಗುರುತಿಸಲಾಗಿತ್ತು. ಅಪರಾಧದ ಹಿಂದಿನ ಪ್ರಮುಖ ಸಂಚುಕೋರ ಎಂಬ ಆರೋಪ ಅವರ ಮೇಲೆ ಹೊರಿಸಲಾಗಿತ್ತು. ದಿಲೀಪ್ ಜೊತೆಗೆ, ನ್ಯಾಯಾಲಯ ಪ್ರಕರಣದ 7, 9 ಮತ್ತು 15ನೇ ಆರೋಪಿಗಳನ್ನೂ ಖುಲಾಸೆಗೊಳಿಸಿದೆ.
ಈ ಪ್ರಕರಣವು ಫೆಬ್ರವರಿ 17, 2017 ರಂದು ಕೊಚ್ಚಿ ನಗರದ ಹೊರವಲಯದಲ್ಲಿ ಖ್ಯಾತ ನಟಿಯೊಬ್ಬರನ್ನು ಅಪಹರಿಸಿ, ಚಲಿಸುತ್ತಿದ್ದ ಕಾರಿನಲ್ಲಿ ಲೈಂಗಿಕ ದೌರ್ಜನ್ಯವೆಸಗಿದ ಘಟನೆಗೆ ಸಂಬಂಧಿಸಿದೆ. ಆರೋಪಿಗಳು ತಮ್ಮ ದುಷ್ಕೃತ್ಯದ ವಿಡಿಯೋ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಪಲ್ಸರ್ ಸುನಿ ಯಾನೆ ಸುನಿಲ್ ಎನ್.ಎಸ್ ಪ್ರಮುಖ ಮೊದಲ ಆರೋಪಿಯಾಗಿದ್ದರೆ, ಟ ದಿಲೀಪ್ 8ನೇ ಆರೋಪಿಯಾಗಿದ್ದರು. ಅಪಹರಣ ಮತ್ತು ಲೈಂಗಿಕ ದೌರ್ಜನ್ಯದ ಹಿಂದೆ ಕ್ರಿಮಿನಲ್ ಪಿತೂರಿ ನಡೆಸಿದ ಆರೋಪ ದಿಲೀಪ್ ಮೇಲಿತ್ತು.
ಮೂಲತಃ ಪ್ರಕರಣದಲ್ಲಿ 12 ಜನ ಆರೋಪಿಗಳಿದ್ದರು. ಅವರಲ್ಲಿ ಪ್ರತೀಶ್ ಚಾಕೊ ಮತ್ತು ರಾಜು ಜೋಸೆಫ್ ಎಂಬ ಇಬ್ಬರನ್ನು ಈ ಹಿಂದೆ ಖುಲಾಸೆಗೊಳಿಸಲಾಗಿತ್ತು. ಇನ್ನೊಬ್ಬರು ವಿಷ್ಣುವನ್ನು ಅಪ್ರೂವರ್ ಆಗಿ ಪರಿವರ್ತಿಸಲಾಗಿತ್ತು. ಮಾರ್ಟಿನ್ ಆಂಟೋನಿ, ಮಣಿಕಂಠನ್ ಬಿ., ವಿಜೀಶ್ ವಿ.ಪಿ., ಸಲೀಂ ಎಚ್ ಯಾನೆ ವಡಿವಲ್ ಸಲೀಂ, ಪ್ರದೀಪ್, ಚಾರ್ಲಿ ಥಾಮಸ್ ಮತ್ತು ಸನೀಲ್‌ಕುಮಾರ್ ಯಾನೆ ಮೇಸ್ತರಿ ಸನೀಲ್ ಪ್ರಕರಣದ ಇತರ ಆರೋಪಿಗಳಾಗಿದ್ದರು.
ಹೈಕೋರ್ಟ್ ಜಾಮೀನು ನೀಡುವ ಮೊದಲು ನಟ ದಿಲೀಪ್ ಸುಮಾರು 80 ದಿನಗಳ ಕಾಲ ಕಸ್ಟಡಿಯಲ್ಲಿದ್ದರು. ವಿಚಾರಣೆ ಬೇಗ ಮುಗಿಯುವ ಸಾಧ್ಯತೆ ಇಲ್ಲ ಎಂಬ ಆಧಾರದಲ್ಲಿ ಸೆಪ್ಟೆಂಬರ್ 2024ರಲ್ಲಿ ಸುಪ್ರೀಂ ಕೋರ್ಟ್ ಅಂತಿಮವಾಗಿ ಜಾಮೀನು ನೀಡುವ ಮೊದಲು ಸುನಿ ಸುಮಾರು 7 ½ ವರ್ಷಗಳ ಕಾಲ ಜೈಲಿನಲ್ಲಿ ಕಳೆದಿದ್ದರು.


