2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪರ್ವೀನ್ ಸಿಂಗ್ ಅವರು ಈಶಾನ್ಯ ದೆಹಲಿ ಗಲಭೆಗೆ ಸಂಬಂಧಿಸಿದ ಲೂಟಿ ಮತ್ತು ಬೆಂಕಿ ಹಚ್ಚುವ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಶಾ ಆಲಂ, ರಶೀದ್ ಸೈಫಿ, ಮೊಹಮ್ಮದ್ ಶದಾಬ್, ಹಬೀಬ್, ಇರ್ಫಾನ್, ಸುಹೇಲ್, ಸಲೀಮ್ ಅಲಿಯಾಸ್ ಆಶು, ಇರ್ಷಾದ್ ಮತ್ತು ಅಜರ್ ಅಲಿಯಾಸ್ ಸೋನು ಎಂಬ ಒಂಬತ್ತು ಜನರ ವಿರುದ್ಧದ ಪ್ರಕರಣವನ್ನು ವಿಚಾರಣೆ ನಡೆಸುತ್ತಿದ್ದರು.
ಮಾರ್ಚ್ 30 ರ ಆದೇಶದಲ್ಲಿ, ನ್ಯಾಯಾಲಯವು, “ಸಾಕ್ಷ್ಯಗಳು ಸಾಮಾನ್ಯ ಸ್ವರೂಪದ್ದಾಗಿದ್ದು, ವಿಶೇಷವಾಗಿ ಈ ಸಾಕ್ಷಿಗಳು ಘಟನೆಯ ಸ್ಥಳಕ್ಕೆ ಸಂಬಂಧಿಸಿದಂತೆ ಸುಳ್ಳು ಹೇಳಿಕೆ ನೀಡಿದ್ದಾರೆ ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು ನಿರ್ದಿಷ್ಟತೆಯ ಕೊರತೆಯಿದೆ… ಆರೋಪಿಗಳನ್ನು ಶಿಕ್ಷಿಸಲು ಈ ಸಾಕ್ಷಿಗಳ ಸಾಕ್ಷ್ಯಗಳನ್ನು ಅವಲಂಬಿಸುವುದು ಅಸುರಕ್ಷಿತ ಎಂದು ನಾನು ಕಂಡುಕೊಂಡಿದ್ದೇನೆ” ಎಂದು ಅಭಿಪ್ರಾಯಪಟ್ಟಿದೆ.
ರಾಷ್ಟ್ರ ರಾಜಧಾನಿಯ ಚಾಂದ್ ಬಾಗ್ ಪ್ರದೇಶದಲ್ಲಿ ಭುಗಿಲೆದ್ದ ಗಲಭೆಯ ಸಂದರ್ಭದಲ್ಲಿ ಇನ್ನೋವಾ ಕ್ರಿಸ್ಟಾ ಕಾರನ್ನು ಧ್ವಂಸಗೊಳಿಸುವುದು, ಮೋಟಾರ್ ಸೈಕಲ್ ಸುಟ್ಟುಹಾಕುವುದು, ಬೀದಿ ವ್ಯಾಪಾರಿಗಳ ಬಂಡಿಗಳನ್ನು ಲೂಟಿ ಮಾಡುವುದು ಮತ್ತು ‘ರಾಯಲ್ ಮೋಟಾರ್ಸ್’ ಎಂಬ ಅಂಗಡಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಯಾಳ್ಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.
ಪ್ರತ್ಯಕ್ಷದರ್ಶಿಗಳ ಸಾಕ್ಷ್ಯಗಳಲ್ಲಿ ವಿರೋಧಾಭಾಸಗಳನ್ನು ಗಮನಿಸಿದ ನ್ಯಾಯಾಲಯ, ಪ್ರಕರಣದ ತನಿಖಾಧಿಕಾರಿ ಘಟನೆಯ ದಿನಾಂಕವನ್ನು ಫೆಬ್ರವರಿ 24 ಎಂದು ತಪ್ಪಾಗಿ ದಾಖಲಿಸಿದ್ದಾರೆ. ಆದರೆ, ಘಟನೆ ಫೆಬ್ರವರಿ 25, 2020 ರಂದು ನಡೆದಿದೆ ಎಂದು ಹೇಳಿದೆ.
ಸುದ್ದಿ ವಾಹಿನಿಯೊಂದರ ವಾಹನ (ಇನ್ನೋವಾ ಕ್ರಿಸ್ಟಾ) ಮೇಲಿನ ದಾಳಿಗೆ ಸಂಬಂಧಿಸಿದಂತೆ, ಚಾಲಕ ಮತ್ತು ಪ್ರಯಾಣಿಕನು, ಪೊಲೀಸರರು ಗುರಿತಿಸಿದ ಸ್ಥಳ ಯೋಜನೆ ಹಾಗೂ ಪೊಲೀಸ್ ಸಾಕ್ಷ್ಯಗಳಿಗೆ ಸಂಪೂರ್ಣವಾಗಿ ವಿರುದ್ಧವಾದ ಸ್ಥಳ ಮತ್ತು ಸಮಯವನ್ನು ಗುರುತಿಸಿದ್ದಾರೆ ಎಂದು ನ್ಯಾಯಾಲಯ ಗಮನಿಸಿದೆ.
“ಈ ಘಟನೆಗೆ ಸಂಬಂಧಿಸಿದಂತೆ ಕಾನ್ಸ್ಟೆಬಲ್ ಗ್ಯಾನ್ ಸಿಂಗ್ ಮತ್ತು ಹೆಡ್ ಕಾನ್ಸ್ಟೆಬಲ್ ಸುನಿಲ್ ಅವರ ಸಾಕ್ಷ್ಯಗಳು ಸಂಪೂರ್ಣವಾಗಿ ಸುಳ್ಳು ಎಂದು ಕಂಡುಬಂದಿದೆ” ಎಂದು ನ್ಯಾಯಾಧೀಶರು ಹೇಳಿದರು. ಈ ಘಟನೆ ವಾಸ್ತವವಾಗಿ ಪೊಲೀಸರು ಹೇಳಿಕೊಂಡ ಸ್ಥಳದಿಂದ ದೂರದಲ್ಲಿ ನಡೆದಿದೆ ಎಂದು ಗಮನಿಸಿದರು.
ಪ್ರಮುಖ ಘಟನೆಗಳ ಸಮಯ ಮತ್ತು ಸ್ಥಳದ ಬಗ್ಗೆ ಪ್ರಾಥಮಿಕ ಸಾಕ್ಷಿಗಳು ಸುಳ್ಳು ಹೇಳಿಕೆ ನೀಡಿರುವುದರಿಂದ, ಇತರ ಆಪಾದಿತ ಗಲಭೆಗಳಿಗೆ ಆರೋಪಿಗಳನ್ನು ಶಿಕ್ಷೆಗೆ ಒಳಪಡಿಸಲು ಅವರ ಸಾಕ್ಷ್ಯಗಳನ್ನು ಅವಲಂಬಿಸುವುದು ಅಸುರಕ್ಷಿತ ಎಂದು ನ್ಯಾಯಾಲಯ ಗಮನಿಸಿತು.
“ಆರೋಪಿಗಳನ್ನು ಶಿಕ್ಷೆಗೆ ಒಳಪಡಿಸಲು ಈ ಸಾಕ್ಷಿಗಳ ಸಾಕ್ಷ್ಯಗಳನ್ನು ಅವಲಂಬಿಸುವುದು ಅಸುರಕ್ಷಿತ ಎಂದು ನಾನು ಕಂಡುಕೊಂಡಿದ್ದೇನೆ. ಅದಕ್ಕೆ ಅನುಗುಣವಾಗಿ ಆರೋಪಿಗಳು ಅನುಮಾನದ ಲಾಭಕ್ಕೆ ಅರ್ಹರು ಎಂದು ನಾನು ಕಂಡುಕೊಂಡಿದ್ದೇನೆ” ಎಂದು ನ್ಯಾಯಾಲಯವು ಹೇಳಿತು. ಅವರ ಜಾಮೀನುದಾರರನ್ನು ಬಿಡುಗಡೆ ಮಾಡಯವ ಜೊತೆಗೆ ಜಾಮೀನು ಬಾಂಡ್ಗಳನ್ನು ರದ್ದುಗೊಳಿಸಬೇಕು ಎಂದು ಆದೇಶಿಸಿತು.


