Homeಎಕಾನಮಿಕೋವಿಡ್‌ನಿಂದ ನೆಲಕಚ್ಚಿರುವ ಆರ್ಥಿಕತೆಯನ್ನು ಮೇಲೆತ್ತಲು ಸರ್ಕಾರ ಮಾಡಬೇಕಾದುದ್ದೇನು?

ಕೋವಿಡ್‌ನಿಂದ ನೆಲಕಚ್ಚಿರುವ ಆರ್ಥಿಕತೆಯನ್ನು ಮೇಲೆತ್ತಲು ಸರ್ಕಾರ ಮಾಡಬೇಕಾದುದ್ದೇನು?

- Advertisement -
- Advertisement -

ಇತರ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹೋಲಿಸಿದರೆ ಕೋವಿಡ್-19 ಗೆ ಭಾರತದ ಪ್ರತಿಕ್ರಿಯೆ ಹೇಗಿದೆ? ಪ್ರಮಾಣದಲ್ಲಿ ಹಾಗೂ ಗುಣಮಟ್ಟದಲ್ಲಿ ಅದು ಎಲ್ಲಿ ನಿಲ್ಲುತ್ತದೆೆ? ಅಂತರರಾಷ್ಟ್ರೀಯ ಹಣಕಾಸು ನಿಧಿಯ ಪಾಲಿಸಿ ಟ್ರಾಕರ್, ಕೊಲಂಬಿಯಾ ವಿಶ್ವವಿದ್ಯಾನಿಲಯದ ಕೊವಿಡ್-19 ಆರ್ಥಿಕ ಉತ್ತೇಜಕ ಸೂಚಿ ಹಾಗೂ ಜಾಗತಿಕ ಬ್ಯಾಂಕಿನ ಮಾಹಿತಿಯನ್ನು ಆಧರಿಸಿ ಇಲ್ಲಿ ವಿಶ್ಲೇಷಣೆಯನ್ನು ಮಾಡಿದ್ದೇವೆ. (ಇದು ಏಪ್ರಿಲ್ 18, 2020 ರ ದಿ ಹಿಂದು ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಲೇಖನದ ಮುಂದುವರಿಕೆ)

  • ಅಮಿತ್ ಬಾಸೊಲೆ ಹಾಗೂ ಜೋನಾಥನ್ ಕೌಟಿನ್ಹೋ
  • ಅನುವಾದ: ಟಿ.ಎಸ್ ವೇಣುಗೋಪಾಲ್

ಆತ್ಮನಿರ್ಭರ್ ಭಾರತ್ ಪ್ಯಾಕೇಜ್ ಘೋಷಿಸುವ ತನಕ ಭಾರತ ಈ ನಿಟ್ಟಿನಲ್ಲಿ ತುಂಬಾ ಹಿಂದೆ ಬಿದ್ದಿತ್ತು. ಸುಮಾರಿಗೆ ನಮ್ಮಷ್ಟೇ ತಲಾ ಬಂಡವಾಳದ ಜಿಡಿಪಿ ಹೊಂದಿರುವ, ನಮ್ಮ ಸರ್ಕಾರದಷ್ಟೇ ಸಾಮರ್ಥ್ಯ ಮತ್ತು ಶ್ರಮಿಕರ ಸ್ಥಿತಿಗತಿ ಇರುವ ದೇಶಗಳಿಗೆ ಹೋಲಿಸಿದರೆ ಭಾರತದ ಹೂಡಿಕೆ ತುಂಬಾ ಕಡಿಮೆಯಿತ್ತು. ಜುಲೈ ಮೊದಲಲ್ಲಿ ಈ ಅಂತರ ಸ್ವಲ್ಪ ಕಮ್ಮಿಯಾಗಿರುವಂತೆ ತೋರುತ್ತದೆ.

ಆದರೆ ಒಟ್ಟಾರೆ ಪರಿಹಾರದಲ್ಲಿ ವಿತ್ತೀಯ ಹೂಡಿಕೆ ಹಾಗೂ ಹಣಕಾಸಿನ ಅಂಶಗಳನ್ನು ಪ್ರತ್ಯೇಕಿಸಿ ಲೆಕ್ಕಹಾಕುವುದು ಕಷ್ಟ. ಹಾಗಾಗಿ ಈ ಪರಿಸ್ಥಿತಿಯಲ್ಲಿ ಬೇರೆ ದೇಶಗಳೊಂದಿಗೆ ಹೋಲಿಸಬಹುದಾದ ಹೆಚ್ಚು ನಿಖರವಾದ ವಿತ್ತೀಯ ಕ್ರಮಗಳ ಪ್ರಮಾಣವನ್ನು ಲೆಕ್ಕಹಾಕುವುದು ನಿಜವಾಗಿಯೂ ಸವಾಲೇ ಸರಿ. ಉದಾಹರಣೆಗೆ ಒಟ್ಟಾರೆ ಆತ್ಮನಿರ್ಭರ್ ಪ್ಯಾಕೇಜಿನ ಪ್ರಮಾಣವನ್ನು ಜಿಡಿಪಿಯ ಶೇಕಡ 10ರಷ್ಟು ಎಂದು ಹೇಳಲಾಗುತ್ತಿದೆ. ಅಂತರರಾಷ್ಟ್ರೀಯ ದತ್ತಾಂಶ ಪ್ರಕಾರ ಅದು ಜಿಡಿಪಿಯ ಶೇಕಡ 4ರಷ್ಟು. ಆದರೆ ನಾವು ಮತ್ತು ಇತರ ಕೆಲವರು ಮಾಡಿರುವ ಅಂದಾಜಿನ ಪ್ರಕಾರ ಅದು ಒಟ್ಟು ಜಿಡಿಪಿಯ ಕೇವಲ ಸುಮಾರು ಶೇಕಡ 1.7ರಷ್ಟು ಆಗುತ್ತದೆ.

ಅದರಲ್ಲಿ ಪ್ರಧಾನ ಮಂತ್ರಿ ಗರೀಬಿ ಕಲ್ಯಾಣ್ ಯೋಜನೆ, ಅತ್ಮನಿರ್ಭರ್ ಭಾರತ್ ಪ್ಯಾಕೇಜಿನಲ್ಲಿಯ ನೇರ ವಿತ್ತಿಯ ಕ್ರಮಗಳು, ಸಾರ್ವಜನಿಕ ವಿತರಣ ವ್ಯವಸ್ಥೆಯ ಮೂಲಕ ಇತ್ತೀಚೆಗೆ ಪಡಿತರವನ್ನು ವಿಸ್ತರಿಸಿರುವುದು ಇವೆಲ್ಲವೂ ಸೇರಿದೆ. ಆತ್ಮನಿರ್ಭರ್ ಭಾರತ್ ಪ್ಯಾಕೇಜಿನ ಅಡಿಯಲ್ಲಿ ಹೆಚ್ಚುವರಿಯಾಗಿ ಉದ್ಯೋಗ ಖಾತ್ರಿ ಯೋಜನೆಗಾಗಿ 40,000 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ಇದು ಬೇಡಿಕೆ ಹೆಚ್ಚಿಸುವ ನಿಟ್ಟಿನಲ್ಲಿ ಒಂದು ಮಹತ್ವದ ಕ್ರಮ ಅನ್ನಬಹುದು. ಉಳಿದ ಬೇಡಿಕೆ ಹೆಚ್ಚಿಸುವ ಕ್ರಮಗಳು ಈಗಾಗಲೇ ಬಿಡುಗಡೆಯಾಗಿರುವ ಮೊತ್ತವನ್ನು ಕ್ರೋಢೀಕರಿಸುವ, ಅಥವಾ ಮರುಬಳಕೆ, ಅಥವಾ ಈಗಾಗಲೇ ಬಿಡುಗಡೆಯಾಗಿರುವ ಮೊಬಲಗುಗಳು.

ಉದಾಹರಣೆಗೆ ಇತ್ತೀಚೆಗೆ ಘೋಷಿಸಿದ ಗರೀಬಿ ಕಲ್ಯಾಣ ರೋಜ್‌ಗಾರ್ ಅಭಿಯಾನಕ್ಕೆ ಘೋಷಿಸಿರುವ 50,000 ಕೋಟಿ ರೂಪಾಯಿಗಳು 12 ಮಂತ್ರಾಲಯಗಳ /ವಿಭಾಗಗಳ ಯೋಜನೆಗಳ ಕ್ರೋಢೀಕರಣ.

ಆದರೆ ಭಾರತ ಸೋಂಕು ನಿಯಂತ್ರಣ ಕ್ರಮಗಳನ್ನು ಮಾತ್ರ ಉಳಿದ ಬಹುಪಾಲು ದೇಶಗಳಿಗಿಂತ ಹೆಚ್ಚು ಕಠಿಣವಾಗಿ ಜಾರಿಗೊಳಿಸಿದೆ. ಅಷ್ಟೊಂದು ತೀವ್ರವಾಗಿ ಲಾಕ್‌ಡೌನ್ ಜಾರಿಗೊಳಿಸಿದ್ದರಿಂದ ಆಗಿರುವ ಆರ್ಥಿಕ ತೊಂದರೆ ಹಾಗೂ ಏರುಪೇರುಗಳಿಗೆ ಸರಿಗಟ್ಟುವ ಪ್ರಮಾಣದ ಕ್ರಮಗಳನ್ನು ಭಾರತ ತೆಗೆದುಕೊಂಡಂತೆ ತೋರುವುದಿಲ್ಲ. ವಿಯೆಟ್ನಾಂ, ಇಂಡೋನೇಷ್ಯಾ, ಪಾಕಿಸ್ತಾನ್ ಮತ್ತು ಈಜಿಪ್ಟ್ ತೆಗೆದುಕೊಂಡ ನಿಯಂತ್ರಣ ಕ್ರಮಗಳು ಇಷ್ಟೊಂದು ತೀವ್ರವಾಗಿರಲಿಲ್ಲ. ಆದರೆ ಆ ದೇಶಗಳು ಇದೇ ಪ್ರಮಾಣದ ಅಥವಾ ಇದ್ಕಕಿಂತ ಹೆಚ್ಚಿನ ಮಟ್ಟದ ಉತ್ತೇಜನ ಕ್ರಮಗಳನ್ನು ತೆಗೆದುಕೊಂಡಿವೆ.

ನಗದು ವರ್ಗಾವಣೆಗೆ ಸಂಬಂಧಿಸಿದಂತೆ:

ಪೂರೈಕೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಉಳಿದ ಅಭಿವೃದ್ಧಿಶೀಲ ರಾಷ್ಟ್ರಗಳು ಘೋಷಿಸಿರುವ ಕ್ರಮಗಳು ಭಾರತಕ್ಕೆ ಇನ್ನಷ್ಟು ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳುವ ದೃಷ್ಟಿಯಿಂದ ಉದಾಹರಣೆಯಾಗಬಹುದು. ಹೀಗೆ ಆ ದೇಶಗಳು ತೆಗೆದು ಕೊಂಡಿರುವ ಬೆಂಬಲ ಕ್ರಮಗಳಲ್ಲಿ ನಗದು ವರ್ಗಾವಣೆಯದ್ದೇ ಸಿಂಹಪಾಲು. ಇದರಲ್ಲಿ ಆಶ್ಚರ್ಯವೇನಿಲ್ಲ. ಜಾಗತಿಕ ಬ್ಯಾಂಕಿನ ವರದಿಯ ಪ್ರಕಾರ ಮೊದಲು ಮೂರು ತಿಂಗಳ ಆವಧಿಯಲ್ಲಿ ಮಾಸಿಕ ತಲಾ ಬಂಡವಾಳ ಜಿಡಿಪಿಯ ಶೇಕಡ 30 ರಷ್ಟು ನಗದನ್ನು ಫಲಾನುಭಾವಿಗಳಿಗೆ ವರ್ಗಾವಣೆ ಮಾಡಲಾಗಿದೆ.

ಕೆಳ ಮಧ್ಯಮ ಆದಾಯದ ದೇಶಗಳಲ್ಲಿ ಶೇಕಡ 46 ರವರೆಗೆ ನಗದನ್ನು ವರ್ಗಾಯಿಸಲಾಗಿದೆ. ಹಲವು ದೇಶಗಳು ಕೋವಿಡ್-19 ರ ಹಿಂದಿನ ಮಟ್ಟಕ್ಕೆ ಹೋಲಿಸಿದರೆ ಅದರ ವ್ಯಾಪ್ತಿಯನ್ನೂ ಹೆಚ್ಚಿಸಿವೆ. ಬಾಂಗ್ಲಾದೇಶದಲ್ಲಿ ಅದರ ಪ್ರಮಾಣ ಶೇಕಡ 163 ರಷ್ಟು ಹೆಚ್ಚಾಗಿದ್ದರೆ, ಇಂಡೋನೇಷ್ಯಾದಲ್ಲಿ ಅದು ಶೇಕಡ 111 ರಷ್ಟು ಹೆಚ್ಚಾಗಿದೆ. ಇಂಡೋನೇಷ್ಯಾದಲ್ಲಿ ಈಗ ಆ ಯೋಜನೆ 158 ಮಿಲಿಯನ್ ಜನರನ್ನು ಅಂದರೆ ಒಟ್ಟು ಜನಸಂಖ್ಯೆಯ ಶೇಕಡ 60 ರಷ್ಟು ಜನರಿಗೆ ತಲುಪುತ್ತಿದೆ. ಅದು ಚಾಲ್ತಿಯಲ್ಲಿರುವ ಸಾಮಾಜಿಕ ರಕ್ಷಣಾ ಕ್ರಮಗಳು ತಲುಪದ 20 ಮಿಲಿಯನ್ ಜನರ ಅನುಕೂಲಕ್ಕಾಗಿ ಸಂಪ್ರದಾಯಿಕವಲ್ಲದ ಹೊಸ ನಗದು ಯೋಜನೆಗಳನ್ನು ಪ್ರಾರಂಭಿಸಿವೆ. ಭಾರತ ಕೂಡ ಈಗಿರುವ ವರ್ಗಾವಣೆ ಯೋಜನೆಗಳನ್ನು ವಿಸ್ತರಿಸುವ ಅಥವಾ ಹೊಸ ಯೋಜನೆಗಳನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಯೋಚಿಸುವುದು ಸೂಕ್ತ.

ನರೇಗಾ ಯೋಜನೆಯನ್ನು ಹೆಚ್ಚಿಸಿ:

ಜಾಗತಿಕ ಬ್ಯಾಂಕಿನ ಪಟ್ಟಿಯ ಪ್ರಕಾರ 173 ದೇಶಗಳಲ್ಲಿ ಒಟ್ಟಾರೆ ತೆಗೆದುಕೊಂಡಿರುವ 621 ಕ್ರಮಗಳಲ್ಲಿ ಅರ್ಧದಷ್ಟು ನಗದು ಆಧಾರಿತ ಕ್ರಮಗಳು. ಉಳಿದ ಹೆಚ್ಚಿನವು ಆಹಾರದ ನೆರವು (ಶೇಕಡ 23ರಷ್ಟು) ಅಥವಾ ಸಾಲದ ಮರುಪಾವತಿಯನ್ನು ರದ್ದುಗೊಳಿಸಿರುವ ಅಥವಾ ಆವಧಿಯನ್ನು ವಿಸ್ತರಿಸುವುದಕ್ಕೆ ಸಂಬಂಧಿಸಿದ ಕ್ರಮಗಳು (ಶೇಕಡ 25). ಕೇವಲ ಶೇಕಡ 2 ರಷ್ಟು ಮಾತ್ರ ಸಾರ್ವಜನಿಕ ಉದ್ಯೋಗಕ್ಕೆ ಮೀಸಲಿಡಲಾಗಿದೆ. ಅಂದರೆ ಅದಾಯ ಬೆಂಬಲಕ್ಕೆ ಸಂಬಂಧಿಸಿದಂತೆ ತೆಗೆದುಕೊಂಡಿರುವ ಕ್ರಮಗಳಲ್ಲಿ ಸಾರ್ವಜನಿಕ ದುಡಿಮೆಗೆ ಹೋಲಿಸಿದರೆ ನಗದು ವರ್ಗಾವಣೆ ಹೆಚ್ಚು ಜನಪ್ರಿಯ ಅನ್ನುವುದು ಸ್ಪಷ್ಟ.

ಸಾಮಾಜಿಕ ಅಂತರವನ್ನು ಕುರಿತ ಕಾಳಜಿ ಇದಕ್ಕೆ ಭಾಗಶಃ ಕಾರಣವಿರಬಹುದು. ಸಾರ್ವಜನಿಕ ದುಡಿಮೆಗೆ ಸಂಬಂಧಿಸಿದಂತೆ ಮೆಕ್ಸಿಕೋದಲ್ಲಿ ದೇಶದ ಗ್ರಾಮೀಣ ಶಾಶ್ವತ ಉದ್ಯೋಗ ನೀತಿಯನ್ನು ಇನ್ನೂ 200,000 ರೈತರು ಹಾಗೂ ಫಲಾನುಭವಿಗಳನ್ನು ಒಳಗೊಳ್ಳುವಂತೆ ವಿಸ್ತರಿಸುವುದಾಗಿ ಘೋಷಿಸಿದೆ. ಇಂಡೋನೇಷ್ಯಾ 7000 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣವನ್ನು ಸಾರ್ವಜನಿಕ ಉದ್ಯೋಗ ಯೋಜನೆಗೆ ಖರ್ಚುಮಾಡಲಾಗಿದೆ. ಇದರಿಂದ ಕನಿಷ್ಠ 600,000 ಕೆಲಸಗಾರರಿಗೆ ಅನುಕೂಲವಾಗಲಿದೆ.
ಜೊತೆಗೆ ಇಂಡೋನೇಷ್ಯಾದ ಕೇಂದ್ರ ಸರ್ಕಾರ ಗ್ರಾಮೀಣ ಆಡಳಿತವನ್ನು ‘ದುಡಿಮೆಗೆ ಹಣ’ ಯೋಜನೆಗೆ ತಮ್ಮ ಬಜೆಟ್ಟಿನಲ್ಲಿ ಆದ್ಯತೆ ಕೊಡಬೇಕೆಂದು ನಿರ್ದೇಶಿಸಿದೆ. ದಿನಗೂಲಿ ಕಾರ್ಮಿಕರು ಹಾಗೂ ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸುವ ದೃಷ್ಟಿಯಿಂದ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ.

ಉದ್ಯೋಗ ಖಾತ್ರಿ ಯೋಜನೆಯಲ್ಲಿ ಭಾರತ ಮುಂಚೂಣಿಯಲ್ಲಿದೆ. ಈ ಯೋಜನೆ ಭಾರತದ ಒಂದು ಪ್ರಮುಖ ಯೋಜನೆ. ಈ ಕಾರ್ಯಕ್ರಮದ ವ್ಯಾಪ್ತಿಯನ್ನು ವಿಸ್ತರಿಸುವುದಕ್ಕೆ ಇದು ಸಕಾಲ. ಮತ್ತು ಇದನ್ನು ನಗರಗಳಲ್ಲೂ ಜಾರಿಗೆ ತರಬೇಕು. ಇದಕ್ಕಾಗಿ ಹಲವರು ಒತ್ತಾಯಿಸಿದ್ದಾರೆ.

ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ತೆಗೆದುಕೊಂಡಿರುವ ಕ್ರಮಗಳು:

ಅಭಿವೃದ್ಧಿಶೀಲ ರಾಷ್ಟ್ರಗಳು ಕೋವಿಡ್ -19 ಕ್ಕೆ ಪ್ರತಿಕ್ರಿಯೆಯಾಗಿ ಹಲವು ತೀವ್ರವಾದ ವಿತ್ತೀಯ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಹಾಗೆ ತೆಗೆದುಕೊಂಡ ಕ್ರಮಗಳಲ್ಲಿ ಬಜೆಟ್ಟಿನ ಕಾನೂನಿನ ಮಿತಿಗಳಿಗೆ ಸಂಬಂಧಿಸಿದಂತೆ ತಿದ್ದುಪಡಿ ತಂದಿರುವುದು, ಬಾಂಡುಗಳ ಬಿಡುಗಡೆಯ ಪ್ರಮಾಣವನ್ನು ಹಿಗ್ಗಿಸಿರುವುದು ಪ್ರಮುಖವಾದವು. ಉದಾಹರಣೆಗೆ ಇಂಡೋನೇಷ್ಯಾ ‘ಪ್ಯಾಂಡಮಿಕ್ ಬಾಂಡನ್ನು’ ಬಿಡುಗಡೆ ಮಾಡಿದೆ.

ಹಲವು ಅಭಿವೃದ್ಧಿಶೀಲ ಆರ್ಥಿಕತೆಗಳಲ್ಲಿ ಸಾರ್ವಜನಿಕ ಹಾಗೂ ಖಾಸಗಿ ಬಾಂಡುಗಳನ್ನು ಸೆಕೆಂಡರಿ ಮಾರುಕಟ್ಟೆಗಳಲ್ಲಿ ಕೇಂದ್ರ ಬ್ಯಾಂಕುಗಳು ಕೊಳ್ಳುವುದಕ್ಕೆ ಸಂಬಂಧಿಸಿದಂತೆ ಪ್ರಯೋಗಗಳನ್ನು ಮಾಡುತ್ತಿವೆ. ಅಥವಾ ನೇರವಾಗಿ ಸರ್ಕಾರಿ ಬಾಂಡುಗಳನ್ನು ಪ್ರಾಥಮಿಕ ಮಾರುಕಟ್ಟೆಯಲ್ಲಿ ಕೊಂಡುಕೊಳ್ಳುತ್ತಿವೆ (ಕೊರತೆಯ ನಗದೀಕರಣ). ಭಾರತದಲ್ಲಿ ರಿಸರ್ವ ಬ್ಯಾಂಕ್ ಆಫ್ ಇಂಡಿಯಾ ಸೆಕೆಂಡರಿ ಮಾರುಕಟ್ಟೆಯಲ್ಲಿ ಸಾವರಿನ್ ಬಾಂಡ್ ಕೊಳ್ಳುತ್ತಿದೆ. ಆದರೂ ಕೊರತೆಯನ್ನು ತುಂಬಲು ನೇರವಾಗಿ ಹಣ ಒದಗಿಸುವುದಕ್ಕೆ ಅನುಕೂಲವಾಗುವಂತೆ ಭಾರತ ಸರ್ಕಾರ ವಿತ್ತೀಯ ಜವಾಬ್ದಾರಿ ಹಾಗೂ ಬಜೆಟ್ ನಿರ್ವಹಣೆ ಕಾಯ್ದೆಗೆ ಸಂಬಂಧಿಸಿದಂತೆ ‘ಪಾರಾಗುವ ಕಾಯ್ದೆ’ಯನ್ನು ಜಾರಿಗೊಳಿಸಬೇಕೇ ಅನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ.

ಇಂಡೋನೇಷ್ಯಾ ಹಾಗೂ ಬ್ರೆಜಿಲ್ ತಮ್ಮ ಕೇಂದ್ರ ಬ್ಯಾಂಕುಗಳು ಸರ್ಕಾರಿ ಬಾಂಡುಗಳನ್ನು ಕೊಳ್ಳುವುದಕ್ಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ ತಮ್ಮ ಕಾನೂನುಗಳನ್ನು ಬದಲಿಸಿಕೊಂಡಿವೆ. ಇಂಡೋನೇಷ್ಯಾದ ಕೇಂದ್ರ ಬ್ಯಾಂಕುಗಳು ಪ್ರಮುಖ ಹಾಗೂ ಸೆಕೆಂಡರಿ ಮಾರುಕಟ್ಟೆಗಳಿಂದ ಬಾಂಡುಗಳನ್ನು ಕೊಳ್ಳುತ್ತಿವೆ. ಅದೇ ಸಮಯದಲ್ಲಿ ಫಿಲಿಪೈನ್ಸ್ ಕೇಂದ್ರ ಬ್ಯಾಂಕ್ 6 ಬಿಲಿಯನ್ ಡಾಲರ್ ಅಂದರೆ ಸುಮಾರು 42,250 ಕೋಟಿ ರೂಪಾಯಿ ಮೌಲ್ಯದ ಸರ್ಕಾರದ ಬಾಂಡುಗಳನ್ನು ಕೊಂಡಿದೆ. ಇದನ್ನು ಮೂರು-ತಿಂಗಳ ಪುನರ್ ಖರೀದಿ ಒಪ್ಪಂದ ಮೇಲೆ ಕೊಳ್ಳಲಾಗಿದೆ. ಮೂರು ತಿಂಗಳ ನಂತರ ಈ ಅವಧಿಯನ್ನು ವಿಸ್ತರಿಸಬಹುದು.

ಭಾರತದಲ್ಲಿ ಅವಶ್ಯಕವಿದ್ದಷ್ಟು ವಿತ್ತೀಯ ಕ್ರಮಗಳನ್ನು ತೆಗದುಕೊಂಡಿಲ್ಲ. ಹೆಚ್ಚಾಗಿ ಹಣಕಾಸು ಕ್ರಮಗಳನ್ನು ನೆಚ್ಚಿಕೊಂಡಿದ್ದಾರೆ. ಸಾಲ ಹಾಗೂ ಜಿಡಿಪಿಯ ಅನುಪಾತ ಉಳಿದ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಸ್ವಲ್ಪ ಹೆಚ್ಚಿರುವುದು ಇದಕ್ಕೆ ಒಂದು ಕಾರಣ ಇರಬಹುದು. ಆದರೆ ಆರ್ಥಿಕತೆಯಲ್ಲಿ ಸಮಗ್ರ ಬೇಡಿಕೆ ಇಳಿದಿದೆ, ವಿಶ್ವಾಸ ಕುಸಿದಿದೆ. ಹಲವು ತಿಂಗಳು ಕಳೆದರೂ ಅದು ಸುಧಾರಿಸದೇ ಇರಬಹುದು. ಹೆಚ್ಚುವರಿ ವಿತ್ತೀಯ ಹೂಡಿಕೆ (ನಗದು ಹಾಗೂ ಅವಶ್ಯಕ ಸಾಮಗ್ರಿಗಳ ವರ್ಗಾವಣೆ ಹಾಗೂ ಸಾರ್ವಜನಿಕ ಉದ್ಯೋಗ ವಿಸ್ತರಣಾ ಯೋಜನೆಗಳು) ಜೀವ ಹಾಗೂ ಉದ್ಯೋಗಗಳನ್ನು ರಕ್ಷಿಸಬಲ್ಲವು. ಮತ್ತು ದೀರ್ಘಕಾಲೀನ ಆರ್ಥಿಕ ಮಂದಗತಿಯನ್ನು ತಪ್ಪಿಸಬಲ್ಲದು. ಈಗ ಹೆಚ್ಚು ಖರ್ಚು ಮಾಡದೇ ಇದ್ದರೆ, ಬೆಳವಣಿಗೆಯ ಕುಸಿತ ಮುಂದುವರಿಯಬಹುದು. ಆಗ ಮುಂದೆ ಸಾಲ-ಜಿಡಿಪಿಯ ಅನುಪಾತ ಇನ್ನಷ್ಟು ಹದಗೆಡಬಹುದು.

ಅಮಿತ್ ಬಾಸೋಲೆ, ಸ್ಕೂಲ್ ಆಫ್ ಆರ್ಟ್ಸ್ ಅಂಡ್ ಸೈನ್ಸಸ್ ಅಧ್ಯಾಪಕ, ಅಜೀಮ್ ಪ್ರೇಮ್‌‌ಜಿ ವಿಶ್ವವಿದ್ಯಾಲಯ, ಬೆಂಗಳೂರು.

ಜೊನಾಥನ್ ಕೌಟಿನ್ಹೋ, ಸ್ಕೂಲ್ ಆಫ್ ಆರ್ಟ್ಸ್ ಅಂಡ್ ಸೈನ್ಸ್‌‌‌ನ ಸಂಶೋಧನಾ ಸಹಾಯಕ, ಅಜೀಮ್ ಪ್ರೇಮ್‌‌ಜಿ ವಿಶ್ವವಿದ್ಯಾಲಯ, ಬೆಂಗಳೂರು


ಓದಿ: ತಲೆಕೆಳಗಾಗಿರುವುದು ನಾನಲ್ಲ; ನಿಮ್ಮ ಶಿಕ್ಷಣ ವಿಧಾನ: ಕಲಾವಿದನ ಕಲ್ಪನೆ ವೈರಲ್!


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...