ಮಧ್ಯಪ್ರದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದ ಸಂದರ್ಭದಲ್ಲಿ, ಉನ್ನತ ಬಿಜೆಪಿ ಮತ್ತು ಕಾಂಗ್ರೆಸ್ ರಾಜಕಾರಣಿಗಳು ಏಪ್ರಿಲ್ 17 ರ ಉಪ ಚುನಾವಣೆಗೆ ದಮೋಹ್ ದಲ್ಲಿ ಪ್ರಚಾರ ನಡೆಸಿದರು. ಇದರಿಂದಾಗಿ ಕೋವಿಡ್‌ನಿಂದ ಏಳು ನಾಯಕರು ಸಾವನ್ನಪ್ಪಿದರೆ, ಇತರ ಕೆಲವರು ಕುಟುಂಬ ಸದಸ್ಯರನ್ನು ಕಳೆದುಕೊಂಡರು.
ಮತದಾನ ಮುಂದೂಡಿದ್ದರೆ ಪ್ರಜಾಪ್ರಭುತ್ವವೇನೂ ಅಲ್ಲಾಡಿ ಹೋಗುತ್ತಿತ್ತಾ ಎಂದು ಮೃತ ನಾಯಕರ ಕುಟುಂಬಗಳು ಮಧ್ಯಪ್ರದೇಶದ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ.
ಏಪ್ರಿಲ್ 9 ರಂದು ಮಧ್ಯಪ್ರದೇಶದಲ್ಲಿ 4,882 ಹೊಸ ಕೋವಿಡ್ ಪ್ರಕರಣಗಳು ದಾಖಲಾದಾಗ, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ದಮೋಹ್ ಜಿಲ್ಲೆಯಲ್ಲಿ ಬೃಹತ್ ಚುನಾವಣಾ ರ‍್ಯಾಲಿ ನಡೆಸುತ್ತಿದ್ದರು. ಹಿಂದಿನ ದಿನ, ಚೌಹಾಣ್ ಸರ್ಕಾರವು ದಮೋಹ್ ಹೊರತುಪಡಿಸಿ ಇಡೀ ರಾಜ್ಯದಲ್ಲಿ ವಾರಾಂತ್ಯದ ಲಾಕ್‌ಡೌನ್ ಘೋಷಿಸಿತ್ತು. ಇಲ್ಲಿ ಮಾತ್ರ ಏಪ್ರಿಲ್ 17ರಂದು ನಡೆದ ವಿಧಾನಸಭೆ ಉಪಚುನಾವಣೆ ನಿಮಿತ್ತ ಲಾಕ್‌ಡೌನ್ ಘೋಷಣೆ ಮಾಡಿರಲಿಲ್ಲ.
ಮಧ್ಯಪ್ರದೇಶದ ಉನ್ನತ ರಾಜಕೀಯ ನಾಯಕರು ಈ ಉಪ ಚುನಾವಣೆಯಲ್ಲಿ ರ‍್ಯಾಲಿಗಳನ್ನು ನಡೆಸಿದರು. ಬಿಜೆಪಿಯ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಉಮಾಭಾರತಿ, ಹಾಗೂ ಕಾಂಗ್ರೆಸ್‌ನ ಕಮಲ್ ನಾಥ್ ಮತ್ತು ದಿಗ್ವಿಜಯ ಸಿಂಗ್ ಉಪಚುನಾವಣೆಯಲ್ಲಿ ಬೃಹತ್ ರ‍್ಯಾಲಿಗಳಲ್ಲಿ ಭಾಗಿಯಾಗಿದ್ದರು.
ಏಪ್ರಿಲ್ 16ರಂದು, ಮಾಜಿ ಸಿಎಂ ದಿಗ್ವಿಜಯಸಿಂಗ್ ಅವರಿಗೆ ಪಾಸಿಟಿವ್ ಕಾಣಿಸಿಕೊಂಡಿತು. ಹಿರಿಯ ನಾಯಕರಂತೆ ಸ್ಥಳೀಯ ನಾಯಕರೂ ಬೃಹತ್ ರ‍್ಯಾಲಿ, ಪ್ರಚಾರಗಳಲ್ಲಿ ಭಾಗಿಯಾದರು. ಮುಂದಿನ ಏಳು ದಿನಗಳಲ್ಲಿ ಅವರಲ್ಲಿ ಏಳು ಮಂದಿ ಸಾವನ್ನಪ್ಪಿದರು.
ಪ್ರಾಣ ಕಳೆದುಕೊಂಡ ಬಿಜೆಪಿ ಸದಸ್ಯರಲ್ಲಿ ದಮೋಹ್ ಜಿಲ್ಲಾ ಮಾಜಿ ಮುಖ್ಯಸ್ಥ ದೇವನಾರಾಯಣ್ ಶ್ರೀವಾಸ್ತವ, ವಾರ್ಡ್ ಕೌನ್ಸಿಲರ್ ಮಹೇಂದ್ರ ರೈ, ಯುವ ಮೋರ್ಚಾ ನಾಯಕ ಸಂದೀಪ್ ಪಂಥಿ ಮತ್ತು ಬಿನಾ ನಗರ ಪಕ್ಷದ ಮುಖ್ಯಸ್ಥ ಅಮೃತ ಖತಿಕ್ ಸೇರಿದ್ದಾರೆ. ಕಾಂಗ್ರೆಸ್‌ನ ಪೈಕಿ ಮಾಜಿ ರಾಜ್ಯ ವಾಣಿಜ್ಯ ಸಚಿವ ಮತ್ತು ದಮೋಹ್ ಉಪಚುನಾವಣೆ ಉಸ್ತುವಾರಿ ಬ್ರಜೇಂದ್ರ ಸಿಂಗ್ ರಾಥೋಡ್, ಮಹಿಳಾ ವಿಭಾಗದ ರಾಜ್ಯ ಅಧ್ಯಕ್ಷೆ ಮಾಂಡ್ವಿ ಚೌಹಾಣ್ ಮತ್ತು ಸ್ಥಳೀಯ ಮುಖಂಡ ಗೋಕುಲ್ ಪಟೇಲ್ ಕೋವಿಡ್‌ಗೆ ಬಲಿಯಾಗಿದ್ದರೆ.
ಕೊರೊನಾಕ್ಕೆ ಹೆದರಬೇಡಿ: ಚುನಾವಣಾ ಆಯೋಗದ ಪೋಸ್ಟರ್‌ಗಳು
ಇಲ್ಲಿನ ಕಾಂಗ್ರೆಸ್ ಶಾಸಕ ರಾಹುಲ್ ಲೋಧಿ ಅವರು ಪಕ್ಷವನ್ನು ತೊರೆದು 2020 ರ ಅಕ್ಟೋಬರ್‌ನಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಾಗ ದಮೋಹ್ ಉಪಚುನಾವಣೆ ಅಗತ್ಯವಾಗಿತ್ತು. ಉಪಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ಪೋಸ್ಟರ್ ಮತ್ತು ಬ್ಯಾನರ್‌ಗಳನ್ನು ಹಾಕಿತು, ಜನರು ಹೊರಗೆ ಬಂದು ಮತ ಚಲಾಯಿಸುವಂತೆ ಸಕ್ರಿಯವಾಗಿ ಪ್ರೋತ್ಸಾಹಿಸಿತು ಮತ್ತು “ಭಯಪಡಬೇಡಿ” ಎಂದು ಪೋಸ್ಟರ್‌ಗಳನ್ನು ಹಾಕಿತ್ತು.
ಏಪ್ರಿಲ್ 1 ರಂದು, ಉಪಚುನಾವಣೆಯ ಪ್ರಚಾರ ಪ್ರಾರಂಭವಾಗುವ ಮುನ್ನ, ಜಿಲ್ಲೆಯಲ್ಲಿ ವರದಿಯಾದ ಕೋವಿಡ್ -19 ಪ್ರಕರಣಗಳ ಸಂಖ್ಯೆ 11 ಆಗಿತ್ತು. ಏಪ್ರಿಲ್ 6 ರಂದು, ಈ ಸಂಖ್ಯೆ 28 ಕ್ಕೆ ಏರಿತು, ಮತ್ತು 10 ದಿನಗಳ ನಂತರ, ಏಪ್ರಿಲ್ 16 ರಂದು, ಅಂದರೆ ಮತದಾನದ ಹಿಂದಿನ ದಿನ 377 ಹೊಸ ಪ್ರಕರಣಗಳು ಕಂಡುಬಂದವು. ಜಿಲ್ಲೆಯಲ್ಲಿ ಅದುವರೆಗಿನ ದೈನಿಕ ಸೋಂಕು ಪ್ರಮಾಣದಲ್ಲಿ ಇದೇ ಅಧಿಕವಾಗಿತ್ತು.
ಮತದಾನದ ಆರು ದಿನಗಳ ನಂತರ, ಏಪ್ರಿಲ್ 23 ರಂದು 165 ಪ್ರಕರಣಗಳು ದಾಖಲಾಗಿದ್ದು, ಜಿಲ್ಲೆಯ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1,060 ಕ್ಕೆ ತಲುಪಿತು.
ಮಧ್ಯಪ್ರದೇಶದ ಉನ್ನತ ನಾಯಕರ ರ‍್ಯಾಲಿಗಳ ಬಗ್ಗೆ ಆಶ್ಚರ್ಯವಾಯಿತು ಎಂದು ದಮೋಹ್ ನಿವಾಸಿಗಳು ತಿಳಿಸಿದ್ದಾರೆ. “ಆ ಸಮಯದಲ್ಲಿ ಪಶ್ಚಿಮ ಬಂಗಾಳ ಚುನಾವಣೆಗಳು ನಡೆಯದಿದ್ದರೆ, ಪ್ರಧಾನಿ ಮೋದಿ ಅಥವಾ ಅಮಿತ್ ಶಾ ಕೂಡ ದಮೋಹ್‌ಗೆ ಬರ‍್ತಾ ಇದ್ದರು ಎಂದು ನನಗೆ ಖಾತ್ರಿಯಿದೆ” ಎಂದು ನಾಗರಿಕರೊಬ್ಬರು ಹೇಳಿದ್ದಾರೆ.
ಮೇ 2 ರಂದು ಫಲಿತಾಂಶಗಳನ್ನು ಪ್ರಕಟಿಸುವ ಮುನ್ನ ಮಧ್ಯಪ್ರದೇಶದ ಹೈಕೋರ್ಟ್ ದಾಮೋಹ್ ದಲ್ಲಿ ವಿಜಯ ಮೆರವಣಿಗೆಗಳನ್ನು ನಿಷೇಧಿಸಿತು. ಆದರೆ ಅಷ್ಟೊತ್ತಿಗೆ ತಡವಾಗಿತ್ತು. ಉಪಚುನಾವಣೆಯ ನಂತರ, ದಮೋಹ್ ಮತಕ್ಷೇತ್ರ ಪ್ರತಿದಿನ ಸುಮಾರು 150-160 ಕೋವಿಡ್ ಪ್ರಕರಣಗಳನ್ನು ದಾಖಲಿಸುತ್ತಿದೆ.
‘ಯಾರೂ ಸಹಾಯ ಮಾಡಲು ಬಂದಿಲ್ಲ’
ಬಿಜೆಪಿ ನಾಯಕ ದೇವನಾರಾಯಣ್ ಶ್ರೀವಾಸ್ತವ ಅವರಲ್ಲಿ ಏಪ್ರಿಲ್ 17ರ ಉಪಚುನಾವಣೆಯ ಕೆಲವು ದಿನಗಳ ನಂತರ ಕೋವಿಡ್ ರೋಗಲಕ್ಷಣಗಳು ಕಾಣಿಸಿಕೊಂಡವು. ಅವರು ಏಪ್ರಿಲ್ 27 ರಂದು ನಿಧನರಾದರು. ಅವರ 26 ವರ್ಷದ ಮಗಳು ಸೋನಾಕ್ಷಿ, ನಾವು ಪ್ರಚಾರಕ್ಕೆ ಹೋಗಬೇಡಿ ಎಂದು ತಂದೆಯನ್ನು ತಡೆಯಲು ಯತ್ನಿಸಿದೆವು. ಆದರೆ ಅವರ ಪಕ್ಷನಿಷ್ಟೆಗೆ ಕಟ್ಟುಬಿದ್ದು ಜೀವ ಕಳೆದುಕೊಂಡರು’ ಎಂದು ದಿ ಪ್ರಿಂಟ್‌ಗೆ ತಿಳಿಸಿದ್ದಾರೆ.
ಆದರೆ ಪಕ್ಷದ ಬಗ್ಗೆ ಈ ನಿಷ್ಠೆಯ ಹೊರತಾಗಿಯೂ, ಶ್ರೀವಾಸ್ತವ ಅನಾರೋಗ್ಯಕ್ಕೆ ಒಳಗಾದಾಗ “ಯಾರೂ ಸಹಾಯ ಮಾಡಲು ಬಂದಿಲ್ಲ” ಎಂದು ಸೋನಾಕ್ಷಿ ಆರೋಪಿಸಿದರು.
“ನಂತರ, ನಾವು ಅನೇಕ ಜನರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದೇವೆ. ಆದರೆ ಜಯಂತ್ ಮಲೈಯಾ (ಬಿಜೆಪಿಯ ಹಿರಿಯ ಮುಖಂಡ ಮತ್ತು ದಮೋಹ್‌ನ ಮಾಜಿ ಶಾಸಕ) ಅವರಲ್ಲದೆ ಪಕ್ಷದ ಬೇರೆ ಯಾರೂ ಸಹಾಯ ಮಾಡಲಿಲ್ಲ. ಪ್ರತಿಯೊಬ್ಬರೂ ಟ್ವಿಟರ್‌ನಲ್ಲಿ ಅವರಿಗೆ ಸಂತಾಪ ಸಂದೇಶಗಳನ್ನು ಬರೆದಿದ್ದಾರೆ… ಆದರೆ ನಮಗೆ ನಿಜವಾದ ಸಹಾಯ ಬೇಕಾದಾಗ ಯಾರೂ ಸಹಾಯ ಮಾಡಲಿಲ್ಲ” ಎಂದು ಅವರು ಹೇಳಿದರು.
ಆರು ತಿಂಗಳಲ್ಲಿ, ಸೋನಾಕ್ಷಿ ತನ್ನ ಹೆತ್ತವರನ್ನು ಕಳೆದುಕೊಂಡಿದ್ದಾರೆ. ತಂದೆಯ ಸಾವಿಗೆ ಉಪ ಚುನಾವಣೆಯೇ ಕಾತಣ ಎಂದು ಅಪಾದಿಸಿದ್ದಾರೆ.
‘ಈ ಉಪಚುನಾವಣೆ ನಡೆಯದಿದ್ದಲ್ಲಿ ನಮ್ಮ ಪ್ರಜಾಪ್ರಭುತ್ವವು ಅಪಾಯಕ್ಕೆ ಸಿಲುಕುತ್ತಿರಲಿಲ್ಲ.… ಇದನ್ನು ಮುಂದೂಡಿದ್ದರೆ ಪ್ರಜಾಪ್ರಭುತ್ವವೇನೂ ಅಳ್ಳಾಡುತ್ತಿರಲಿಲ್ಲ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೈಪೋಲ್‌ನ ಸಮಯವು ಹೆಚ್ಚು ಸೂಕ್ತವಲ್ಲ
ಕಾಂಗ್ರೆಸ್ ಅಭ್ಯರ್ಥಿ ಅಜಯ್ ಟಂಡನ್ ದಮೋಹ್ ಉಪಚುನಾವಣೆಯನ್ನು ಆರಾಮವಾಗಿ ಗೆದ್ದರು. ಆದರೆ ಅವರ ಪರವಾಗಿ ಸಕ್ರಿಯವಾಗಿ ಪ್ರಚಾರ ಮಾಡಿದ ನಾಯಕರಲ್ಲಿ ಒಬ್ಬರಾದ ಲಾಲ್ ಚಂದ್ ರಾಯ್ ಅವರು ವಿಷಾದದಿಂದ ಹೊರಬರುತ್ತಾರೆ.
ಮತದಾನದ ಕೆಲವು ದಿನಗಳ ನಂತರ ಕಾಂಗ್ರೆಸ್ ನಾಯಕ ಲಾಲ್ ಚಂದ್ ಎಂಬ ನಾಯಕರಿಗೆ ಪಾಸಿಟಿವ್ ಕಾಣಿಸಿಕೊಂಡಿತು. ನಂತರ ಅವರ ಪತ್ನಿ ವಂದನಾ ಮತ್ತು ಅವರ 17 ವರ್ಷದ ಮಗ ಕೂಡ ಸೋಂಕಿಗೆ ಒಳಗಾಗಿದ್ದಾರೆ. ಲಾಲ್ ಚಂದ್ ಮತ್ತು ಅವರ ಮಗ ಚೇತರಿಸಿಕೊಂಡರೆ, ವಂದನಾ ನಿಧನರಾದರು
“ಚುನಾವಣಾ ಪ್ರಚಾರದಿಂದಾಗಿ ದಾಮೋಹ್ ದಲ್ಲಿನ ಹಲವಾರು ಕುಟುಂಬಗಳು ಹಾಳಾಗಿವೆ. ನನ್ನ ಜೀವನ ಸಂಗಾತಿ ಈ ಕಾರಣದಿಂದಾಗಿ ನಿಧನರಾದರು … ನಾನು ತುಂಬಾ ವಿಚಲಿತನಾಗಿದ್ದೇನೆ” ಎಂದು ಕಾಂಗ್ರೆಸ್ ನಾಯಕ ದಿ ಪ್ರಿಂಟ್‌ಗೆ ತಿಳಿಸಿದ್ದು, ಕೋವಿಡ್ ಹೆಚ್ಚುತ್ತಿರುವಾಗ ಉಪಚುನಾವಣೆ ನಡೆಸುವುದು ಸೂಕ್ತವಲ್ಲ ಎಂದಿದ್ದಾರೆ.
ಕೋವಿಡ್‌ಗೆ ಬಲಿಯಾದ ಬಿಜೆಪಿ ಕೌನ್ಸಿಲರ್ ಮಹೇಂದ್ರ ರಾಯ್ ಅವರ 17 ವರ್ಷದ ಮಗ ಸಚಿನ್ ರೈ, ಉಪಚುನಾವಣೆ ಮೂಂದೂಡಲಿಲ್ಲವೇಕೆ ಮತ್ತು ದಾಮೋಹ್ ದಲ್ಲಿ ಏಕೆ ಲಾಕ್ ಡೌನ್ ವಿಧಿಸಲಿಲ್ಲವೇಕೆ? “ಜನರ ಜೀವನಕ್ಕಿಂತ ಉಪಚುನಾವಣೆ ಮುಖ್ಯವಾಯಿತೇ?’ ಎಂದು ಅವರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಕೋವಿಡ್‌ನಿಂದ ಯುಪಿ ಸಚಿವ ನಿಧನ: 2ನೆ ಅಲೆಗೆ ಯುಪಿ ಬಿಜೆಪಿಯ 5 ಶಾಸಕರು ಬಲಿ


