Homeನ್ಯಾಯ ಪಥಕೋವಿಡ್ ಎರಡನೆ ಅಲೆಯ ಸುನಾಮಿ; ಸಕಾರಾತ್ಮಕವಾಗಿ ಮುನ್ನಡೆಯಬೇಕು, ಸರಕಾರಾತ್ಮಕವಾಗಿಯಲ್ಲ

ಕೋವಿಡ್ ಎರಡನೆ ಅಲೆಯ ಸುನಾಮಿ; ಸಕಾರಾತ್ಮಕವಾಗಿ ಮುನ್ನಡೆಯಬೇಕು, ಸರಕಾರಾತ್ಮಕವಾಗಿಯಲ್ಲ

- Advertisement -
- Advertisement -

ಸಾಮಾಜಿಕ ಜಾಲತಾಣಗಳನ್ನು ಬಳಸುವ, ಪತ್ರಿಕೆ ಓದುವ, ಟಿವಿ ನೋಡುವ ಎಲ್ಲರೂ ಕೊರೊನಾ ಮಹಾಮಾರಿಯ ಬಗ್ಗೆ ನೂರಾರು ಮಾಹಿತಿಗಳನ್ನು ಪ್ರತಿದಿನವೂ ಪಡೆಯುತ್ತಿದ್ದಾರೆ. ಇತಿಹಾಸದಲ್ಲಿ, ಹಾಲಿವುಡ್ ಸಿನೆಮಾಗಳಲ್ಲಿ, ಕಾಲ್ಪನಿಕ ಕಥೆಗಳಲ್ಲಿ ಕಂಡಿದ್ದ ಹಾಹಾಕಾರ ಮತ್ತು ಆತಂಕಕಾರಿ ಪರಿಸ್ಥಿತಿಯನ್ನು ಈಗ ಇಡೀ ದೇಶ ಎದುರಿಸುತ್ತ್ತಿದೆ. ಇತರರಿಗೆ ಸಹಾಯ ಮಾಡಬೇಕು ಎನ್ನುವವರಿಗೂ ಏನು ಮಾಡಬೇಕು ಎಂಬುದು ತೋಚದೇ ಕೈಚೆಲ್ಲಿ ಕುಳಿತುಕೊಳ್ಳುವ ಪರಿಸ್ಥಿತಿ ಎದುರಾಗಿದೆ?

ನಮಗೆಲ್ಲವೂ ಗೊತ್ತಾ? ನಾವೇನನ್ನೂ ಮಾಡಲು ಆಗುವುದಿಲ್ಲವಾ? ಇದರ ಬಗ್ಗೆ ಇನ್ನೂ ಚರ್ಚಿಸಬೇಕಾ? ಇನ್ನೂ ಮಾತನಾಡಿದರೆ ಏನಾದರೂ ಉಪಯೋಗವುಂಟಾ?

ಭಾರತದಲ್ಲಿ ಸದ್ಯ ಸುಮಾರು 28ಲಕ್ಷ ಜನರಿಗೆ ಕೋವಿಡ್ ಸೋಂಕು ತಗುಲಿರುವವರು ಇದ್ದಾರೆ. ಪ್ರತಿನಿತ್ಯ ಸುಮಾರು ಎರಡೂವರೆ ಸಾವಿರಕ್ಕಿಂತಲೂ ಹೆಚ್ಚು ಜನ ಈ ರೋಗಕ್ಕೆ ಬಲಿಯಾಗುತ್ತಿದ್ದಾರೆ. ಕರ್ನಾಟಕದಲ್ಲಿ ನಿನ್ನೆ ಇನ್ನೂರಕ್ಕೂ ಹೆಚ್ಚು ಜನ ಕೋವಿಡ್‌ನಿಂದ ಅಸುನೀಗಿದ್ದಾರೆ. ಸಾವಿರಾರು ಜನ ಆಸ್ಪತ್ರೆಯ ಬೆಡ್‌ಗಾಗಿ ಪರದಾಡುತ್ತಿದ್ದಾರೆ, ಆಕ್ಸಿಜನ್ ಸಿಗದೇ, ಆಸ್ಪತ್ರೆಯಲ್ಲಿ ಸೇರಿಸಿಕೊಳ್ಳದೇ ಇರುವುದರಿಂದ ರಸ್ತೆಯಲ್ಲಿ, ಅಲ್ಲಲ್ಲಿ ಸಾಯುತ್ತಿದ್ದಾರೆ. ಸಾವಿನಲ್ಲೂ ಘನತೆ ಎಂಬುದು ಕಾಣೆಯಾಗಿದೆ.

ಮನೆಗೆ ಬೆಂಕಿ ಹತ್ತಿ ಧಗಧಗನೇ ಉರಿಯುತ್ತಿದೆ. ನಂದಿಸಲು ಸಾಧ್ಯವೇ? ನಂದಿಸಲು ಮಾಡಬೇಕಾದ್ದೇನು?
ಸಕಾರಾತ್ಮಕ ಮನೋಭಾವದಿಂದ ಸಮಸ್ಯೆಯನ್ನು ಎದುರಿಸಬೇಕು ಎನ್ನುತ್ತಾರೆ, ಹೌದು ಖಂಡಿತವಾಗಿಯೂ ಸಕಾರಾತ್ಮಕವಾಗಿದ್ದುಕೊಂಡು ಈ ಭೀಕರ ಪರಿಸ್ಥಿತಿಯನ್ನು ಎದುರಿಸಬೇಕಿದೆ. ಆದರೆ ಸಕಾರಾತ್ಮಕದ ಅರ್ಥ ಸರಕಾರಾತ್ಮಕವಲ್ಲ; ಸರಕಾರ ಎಲ್ಲವೂ ಮಾಡುತ್ತಿದೆ, ಇಷ್ಟು ದೊಡ್ಡ ಆಸ್ಪತ್ರೆಗಳನ್ನು ನಿರ್ಮಿಸಿದೆ, ಇಷ್ಟು ಕೋಟಿ ಜನರಿಗೆ ಲಸಿಕೆ ನೀಡಿದೆ, (ಅದರ ಶೇಕಡಾವಾರು ಮತ್ತು ಎಲ್ಲರಿಗೂ ಎಷ್ಟು ದಿನದಲ್ಲಿ ಲಸಿಕೆ ನೀಡಬಹುದು ಎಂಬುದನ್ನು ಹೇಳದೆ), ಇಷ್ಟೊಂದು ಆಕ್ಸಿಜನ್ ಉತ್ಪಾದನೆ ಮಾಡಲಾಗುತ್ತಿದೆ, ಇದರ ಬಗ್ಗೆ ಮಾತನಾಡುವುದರಿಂದ ದೇಶವಿರೋಧಿ ಶಕ್ತಿಗಳಿಗೆ ಲಾಭವಾಗಲಿದೆ ಎನ್ನುವುದು – ಇವೆಲ್ಲಾ ಸಕಾರಾತ್ಮಕ ಚಿಂತನೆಯಲ್ಲ, ಜವಾಬ್ದಾರಿಯಿಂದ ನುಣುಚಿಕೊಳ್ಳುವ ದಾರಿಗಳಷ್ಟೇ ಹಾಗೂ ಅದು ಅತ್ಯಂತ ಅಪಾಯಕಾರಿ ಕೂಡ.

ಸತ್ಯವನ್ನು ಹೇಳುವುದು ನಮ್ಮ ಮೊದಲ ಕರ್ತವ್ಯ.
ಮೊದಲನೆಯದಾಗಿ, ದೇಶ ಇನ್ನೂ ಪೀಕ್‌ಗೆ ತಲುಪಿಲ್ಲ. ಸರಕಾರಿ ವರದಿಯನ್ನೊಳಗೊಂಡು, ಇತರ ಎಲ್ಲಾ ವೈಜ್ಞಾನಿಕ ವರದಿಗಳೂ ಹೇಳುತ್ತಿರುವುದು ಅದನ್ನೇ; ಮೇ ತಿಂಗಳಲ್ಲಿ ಈ ಎರಡನೇ ಅಲೆಯು ತನ್ನ ಗರಿಷ್ಠ ಮಟ್ಟವನ್ನು ತಲುಪಲಿದೆ. ಕನಿಷ್ಠ ಈಗಿನ ಎರಡು ಪಟ್ಟು ಹೊಸ ಸೋಂಕಿತರು ಪ್ರತಿದಿನ ಹೆಚ್ಚಾಗಲಿದ್ದಾರೆ. ಆ ಮಟ್ಟವು ಎಷ್ಟು ದಿನ ಮುಂದುವರೆಯಲಿದೆಯೋ? ಆಗ ಹಾಹಾಕಾರ ಇನ್ನೂ ಹೆಚ್ಚಲಿದೆ, ಲಕ್ಷಾಂತರ ಜನರು ಆಸ್ಪತ್ರೆಗಳ ಬೆಡ್‌ಗಳ ಕೊರತೆಯನ್ನು ಅನುಭವಿಸಲಿದ್ದಾರೆ. ಆಸ್ಪತ್ರೆಗೆ ಭರ್ತಿಯಾಗದೇ, ಆಕ್ಸಿಜನ್ ಇಲ್ಲದೇ, ಘನತೆಯೂ ಇಲ್ಲದೇ ಸಾಯುವ ಜನರ ಸಂಖ್ಯೆ ಅನೇಕ ಪಟ್ಟು ಹೆಚ್ಚಲಿದೆ. ಇದನ್ನೂ ಯಾವುದೋ ರೀತಿಯಲ್ಲಿ ತಪ್ಪಿಸಬೇಕೆಂದರೆ, ಸತ್ಯವನ್ನು ಹೇಳುವುದು ಅತ್ಯಂತ ಅಗತ್ಯ. ಸಾಂಕ್ರಾಮಿಕವು ಇನ್ನೂ ಬಾಧಿಸುತ್ತಿದ್ದಾಗ, ಅದರ ಬಗ್ಗೆ ಮಾತನಾಡುವುದನ್ನು ಬಿಟ್ಟು, ಸಿಡಿ ಬಗ್ಗೆಯೋ, ಒಬ್ಬ ನಟನ ಆತ್ಮಹತ್ಯೆಯ ಬಗ್ಗೆ ತಿಂಗಳುಗಟ್ಟಲೆ ಮಾತನಾಡಿದ ಪರಿಣಾಮವನ್ನು ನಾವೀಗ ನೋಡುತ್ತಿದ್ದೇವೆ.

ಎರಡನೆಯದಾಗಿ, ಕೋವಿಡ್ ಪರೀಕ್ಷೆಗಳು ಆಗುತ್ತಿಲ್ಲ. ಅನೇಕರಿಗೆ ರೋಗಲಕ್ಷಣಗಳು ಕಾಣಿಸಿಕೊಂಡರೂ ಹೆದರಿಕೊಂಡು ಪರೀಕ್ಷೆ ಮಾಡಿಸಿಕೊಳ್ಳದೇ ಇರುವುದು ಒಂದು ಕಾರಣವಾದರೆ, ದೇಶದ ಅನೇಕ ಕಡೆ ಪರೀಕ್ಷೆ ಮಾಡಿಸಿಕೊಳ್ಳಲು ಬರುವವರಿಗೆ ವಾಪಸ್ ಕಳುಹಿಸಲಾಗುತ್ತಿದೆ. ಟೆಸ್ಟ್ ಮಾಡಿ ಪಾಸಿಟಿವ್ ಬಂದರೆ ತಾನೇ ತೊಂದರೆ; ಹಾಗಾಗಿ ಉತ್ತರಪ್ರದೇಶ ಮತ್ತಿತರ ರಾಜ್ಯಗಳಲ್ಲಿ ಟೆಸ್ಟ್ ಮಾಡುವುದನ್ನು ಪ್ರೋತ್ಸಾಹಿಸದೇ ತಡೆಯೊಡ್ಡುವ ವರದಿಗಳು ಬರುತ್ತಿವೆ. ಇದರಿಂದ ಈ ಭೀಕರ ರೋಗದ ಸಂಪೂರ್ಣ ಚಿತ್ರಣ ಸಿಗುತ್ತಿಲ್ಲ. ಸಂಪೂರ್ಣ ಚಿತ್ರಣ ಸಿಕ್ಕಾಗ ಮಾತ್ರ ಸರಕಾರ ಅದಕ್ಕನುಗುಣವಾಗಿ ತಯಾರಿ ಮಾಡಿಕೊಳ್ಳುವುದು ಸಾಧ್ಯ.

ಇದಕ್ಕೆ ಸಂಬಂಧಿಸಿದ ಇನ್ನೊಂದು ಸತ್ಯ; ವಾಸ್ತವ ಇನ್ನೂ ಭೀಕರವಾಗಿದೆ. ಈಗ ನಮಗೆ ಕಂಡುಬರುತ್ತಿರುವ ಅಂಕಿಅಂಶಗಳಿಗಿಂತ ಅನೇಕ ಪಟ್ಟು ಜನರು ಸೋಂಕಿತರಾಗಿದ್ದಾರೆ ಹಾಗೂ ಬಲಿಯಾಗುತ್ತಿದ್ದಾರೆ.

ಹಾಗೂ ಈಗ ಅತಿಹೆಚ್ಚು ಪ್ರಕರಣಗಳು ದಾಖಲಾಗುತ್ತಿರುವುದು ಮುಂಬಯಿ ಮತ್ತು ಬೆಂಗಳೂರಿನಂತಹ ನಗರಪ್ರದೇಶಗಳಲ್ಲಿ ಆದರೆ ಮುಂದಿನ ದಿನಗಳಲ್ಲಿ ವಾಸ್ತವ ಭಿನ್ನವಾಗಲಿದೆ. ಸಣ್ಣಪುಟ್ಟ ಹಳ್ಳಿಗಳಲ್ಲಿಯೂ ಈ ಸೋಂಕು ಶೀಘ್ರವಾಗಿ ಹರಡಲಿದೆ. ಆ ಪ್ರದೇಶಗಳಲ್ಲಿ ವೆಂಟಿಲೇಟರ್‌ನಂತಹ ಸೌಲಭ್ಯ ಇಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಹಾಗೂ ಈ ರೋಗದ ಕೇಂದ್ರ ಮುಂಬಯಿ, ಮಹಾರಾಷ್ಟ್ರ ಅಥವಾ ಕರ್ನಾಟಕವಾಗಿರದೇ ಉತ್ತರಪ್ರದೇಶ ಕೇಂದ್ರಬಿಂದು ಆಗಲಿದೆ ಎಂಬ ವರದಿಗಳು ಬರುತ್ತಿವೆ. ಅಲ್ಲಿ ಎಲ್ಲಕ್ಕಿಂತ ಹೆಚ್ಚು ಅಂಡರ್‌ರಿಪೋರ್ಟಿಂಗ್ ಅಗುತ್ತಿದೆ ಎಂಬುದು ಈಗ ಎಲ್ಲರಿಗೂ ತಿಳಿದ ವಿಷಯ. ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಂಬುದು ಇಲ್ಲ ಎನ್ನುವಷ್ಟು ಕಳಪೆಯಾಗಿದೆ. ಅಲ್ಲಿ ಉಂಟಾಗಲಿರುವ ಹಾಹಾಕಾರವನ್ನು ತಪ್ಪಿಸಲು ಈಗಲೇ ಕ್ರಮಗೊಳ್ಳಬೇಕಿದೆ.

ಹಾಗೂ ಕೊನೆಯದಾಗಿ, ಇಂತಹ ಬಿಕ್ಕಟ್ಟಿಗೆ ನಾವು ಸುತರಾಂ ಸಿದ್ಧರಾಗಿಲ್ಲ ಎಂಬುದೂ ವಾಸ್ತವ. ಕೋಟ್ಯಂತರ ಜನಕ್ಕೆ ಲಸಿಕೆಯ ಮೊದಲ ಡೋಸ್ ನೀಡಲಾಗಿದ್ದರೂ. ಎರಡೂ ಡೋಸ್‌ಗಳನ್ನು ದೇಶದ ಎಲ್ಲಾ ಜನತೆಗೆ ನೀಡುವುದಕ್ಕೆ ಇನ್ನೊಂದೆರಡು ವರ್ಷಗಳೇ ಬೇಕಾಗಬಹುದು. ಇದರರ್ಥ ಲಸಿಕೆ ನೀಡುವುದು ನಿಲ್ಲಿಸಬೇಕು ಎಂತಲ್ಲ. ಲಸಿಕೆ ನೀಡುವ ಪ್ರಕ್ರಿಯೆಯನ್ನು ಇನ್ನಷ್ಟು ತ್ವರಿತಗೊಳಿಸಬೇಕು ಹಾಗೂ ವಾಸ್ತವವನ್ನು ಎದುರಿಗಿಟ್ಟುಕೊಂಡು ಪ್ಲ್ಯಾನ್ ಮಾಡಬೇಕು ಎಂದರ್ಥ.

ಈ ಎಲ್ಲಾ ಸತ್ಯಗಳನ್ನು ನಾವು ಹೇಳಿದರೆ ಮಾತ್ರ ಪರಿಸ್ಥಿತಿ ಸುಧಾರಿಸಲು ಸಾಧ್ಯ.

ಮಾಡಬೇಕಾದದ್ದೇನು?
ಮೊದಲನೆಯದಾಗಿ, ದಯವಿಟ್ಟು ಎಲ್ಲಾ ಅಂಕಿಅಂಶಗಳನ್ನು ಸಾರ್ವಜನಿಕರ ಮುಂದಿಡಿ. ಎಲ್ಲಾ ಅಂಕಿಅಂಶಗಳು ಸಾರ್ವಜನಿಕವಾದಾಗಲೇ ತಜ್ಞರು ಸೂಕ್ತ ಪರಿಹಾರ ಸೂಚಿಸಲು ಸಾಧ್ಯ. ಅಂಕಿಅಂಶಗಳನ್ನು ಮರೆಮಾಚಿದಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದಾಗ ಇನ್ನಷ್ಟು ಅತಂತ್ರ ಸ್ಥಿತಿಗೆ ತಲುಪಬೇಕಾಗುತ್ತೆ. ನಮ್ಮದು ಪ್ರಜಾಪ್ರಭುತ್ವ, ಸತ್ಯ ಬಹಿರಂಗಗೊಂಡಾಗಲೇ, ಜನರು ಮಾಧ್ಯಮಗಳು ಸರಕಾರದ ಮೇಲೆ ಹೆಚ್ಚಿನ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಡ ಹೇರಲು ಸಾಧ್ಯ. ಪ್ರಧಾನಿಗಳೇ ಹೇಳಿದಂತೆ, ಈ ಬಿಕ್ಕಟ್ಟಿನೊಂದಿಗೆ ಕೇವಲ ಸರಕಾರ ಮಾತ್ರ ಹೋರಾಟ ಮಾಡಿದರೆ ಸಾಲದು, ಸಾರ್ವಜನಿಕರೆಲ್ಲರೂ ಜೊತೆಗೂಡಬೇಕಾಗುತ್ತದೆ, ಹಾಗಾಗಬೇಕೆಂದರೆ ವಾಸ್ತವಾಂಶ ಎಷ್ಟೇ ಭೀಕರವಾಗಿರಲಿ, ಅದನ್ನು ಸಾರ್ವಜನಿಕಗೊಳಿಸಲೇಬೇಕು.

ಲಸಿಕೆ
Photo Courtesy: Zee News

ಲಸಿಕೆಯ ಪ್ರಕ್ರಿಯೆಯನ್ನು ಇನ್ನಷ್ಟು ತ್ವರಿತಗೊಳಿಸುವುದರೊಂದಿಗೆ, ಎಲ್ಲರಿಗೂ ಉಚಿತ ಲಸಿಕೆ ಲಭ್ಯವಾಗುವಂತೆ ಮಾಡಬೇಕು. ಹದಿನೆಂಟು ವಯಸ್ಸು ತುಂಬಿದ ಎಲ್ಲರಿಗೂ ಉಚಿತ ಲಸಿಕೆ ನೀಡಲು ತಗಲುವ ಖರ್ಚು ಒಂದು ಲಕ್ಷ ಕೋಟಿಗಿಂತಲೂ ಕಡಿಮೆ. ಹೇಗೂ ಕಳೆದ ವರ್ಷ ಕೋವಿಡ್‌ಗೆಂದು ೨೦ ಲಕ್ಷ ಕೋಟಿಯ ಪ್ಯಾಕೇಜ್‌ಅನ್ನು ವಿತ್ತ ಸಚಿವೆ ಘೋಷಿಸಿದ್ದರು. ಇದನ್ನು ಮಾಡಲು ಅವರಿಗೆ ಯಾವುದೇ ಅಡ್ಡಿಯಾಗಬಾರದಲ್ಲವೇ?

ಇಂತಹ ಬಿಕ್ಕಟ್ಟಿನ ಪರಿಸ್ಥಿತಿಯಲ್ಲೂ ಲಾಭಕೋರತನವು ಅವ್ಯಾಹತವಾಗಿ ನಡೆಯುತ್ತಿದೆ. ಔಷಧಿಗಳು, ಆಕ್ಸಿಜನ್ ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ವರದಿ ಬರುತ್ತಿವೆ. ಆಸ್ಪತ್ರೆಗಳು ರೋಗಿಗಳಿಗೆ ಲಕ್ಷಾಂತರ ರೂಪಾಯಿಗಳ ಬಿಲ್ ಮಾಡುತ್ತಿವೆ. ಇವರ ಮೇಲೆ ಕಠಿಣ ಕ್ರಮ ಕೈಗೊಂಡು, ಲಾಭಕೋರತನದ ಮೇಲೆ ಕಡಿವಾಣ ಹಾಕಲೇಬೇಕು.

ಮಾಧ್ಯಮಗಳು ಇನ್ನಾದರೂ ಎಚ್ಚೆತ್ತುಕೊಂಡು, ನೇರವಾದ ವಸ್ತುನಿಷ್ಠವಾದ ವರದಿ ಮಾಡಬೇಕು. ಕೇವಲ ದೂರುವುದನ್ನು ಮಾಡದೇ ಸರಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಡ ಹಾಕಬೇಕು. ಜನರಿಗೆ ಸಹಾಯವಾಗುವಂತಹ ಮಾಧ್ಯಮವಾಗಬೇಕು. ಒಂದೆಡೆ ಬಿಡಿ ಘಟನೆಗಳ ದಾರುಣತೆಯನ್ನು ಬಿಂಬಿಸುವುದು, ಇನ್ನೊಂದೆಡೆ ಪ್ರಧಾನಮಂತ್ರಿಯ ಭಜನೆ ಮಾಡುವುದು ಇವೆರಡೇ ಕೆಲಸವಾದರೆ ಅದನ್ನು ಮಾಧ್ಯಮ ಎನ್ನಲಾಗದು.

ಇಂದು ರಸ್ತೆಯಲ್ಲಿ ಮಾಸ್ಕ್ ಹಾಕಿಕೊಳ್ಳದೇ ಇರುವ ಒಬ್ಬ ವ್ಯಕ್ತಿಯೂ ಕಾಣುತ್ತಿಲ್ಲ. ಹೆಚ್ಚಿನ ಜನರು ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಿದ್ದಾರೆ. ಹಾಗೂ ಅನೇಕ ಜನರು ಗುಂಪುಗಳನ್ನು ಕಟ್ಟಿಕೊಂಡು, ರೋಗಿಗಳಿಗೆ ತಮಗಾದಷ್ಟು ಸಹಾಯ ಮಾಡುತ್ತಿದ್ದಾರೆ. ಅನೇಕ ಹೆಲ್ಪ್‌ಲೈನ್‌ಗಳನ್ನು ರಚಿಸಿ, ಆಸ್ಪತ್ರೆಯಲ್ಲಿ ದಾಖಲಿಸುವುದಕ್ಕೆ, ಆಕ್ಸಿಜನ್ ತರಿಸಿಕೊಡುವುದಕ್ಕೆ, ನೊಂದ ರೋಗಿಗಳಿಗೆ, ಅವರ ಕುಟುಂಬದವರಿಗೆ ಉಚಿತವಾಗಿ ಕೌನ್ಸೆಲಿಂಗ್ ಮಾಡುವುದು ಹಾಗೂ ಮೃತ ರೋಗಿಗಳ ಜಾತಿಧರ್ಮ ಲೆಕ್ಕಿಸದೇ ಅವರವರ ಧರ್ಮಕ್ಕನುಗುಣವಾಗಿ ಶವಸಂಸ್ಕಾರ ಮಾಡುತ್ತಿದ್ದಾರೆ. ಸತ್ತವರ ಮನೆಯವರೇ ಮುಂದೆ ಬರದ ಸಂದರ್ಭದಲ್ಲಿ ಏನನ್ನೂ ಲೆಕ್ಕಿಸದೇ ಘನತೆಯಿಂದ ಸಾವಿರಾರು ಶವಸಂಸ್ಕಾರ ಮಾಡಿದವರೂ ನಮ್ಮ ಜೊತೆಗಿದ್ದಾರೆ.

ಇದರೊಂದಿಗೆ ಗಮನದಲ್ಲಿಟ್ಟುಕೊಳ್ಳಬೇಕಾದ ಕೆಲವು ಅಂಶಗಳಿವೆ.
ಪರಿಸ್ಥಿತಿ ಇಷ್ಟೆಲ್ಲ ಹದಗೆಟ್ಟಿದ್ದರೂ, ಕೋವಿಡ್ ದೃಢಪಟ್ಟವರಲ್ಲಿ ನೂರಕ್ಕೆ ೯೯ ಜನರು ಸಂಪೂರ್ಣ ಗುಣಮುಖರಾಗುತ್ತಾರೆ. ಹಾಗಾಗಿ ರೋಗಲಕ್ಷಣ ಕಂಡ ಪ್ರತಿಯೊಬ್ಬರೂ ಆತಂಕದಿಂದ ಒದ್ದಾಡಿದರೆ ಅನಾಹುತವೇ ಹೆಚ್ಚು.

ಸಾರ್ವಜನಿಕ ಆರೋಗ್ಯ ಸೇವೆಯ ಬಗ್ಗೆ ಜನಸಾಮಾನ್ಯರು ಮಾತನಾಡುವುದನ್ನೇ ನಿಲ್ಲಿಸಿದ್ದರು. ಈಗ ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಸಾರ್ವಜನಿಕ ಆರೋಗ್ಯ ಸೇವೆಯೇ ಜನರನ್ನು ಕಾಪಾಡಬಹುದು ಎಂದು ಗೊತ್ತಾಗಿದೆ. ಈಗಲಾದರೂ ಸಾರ್ವಜನಿಕ ಆರೋಗ್ಯ ಸೇವೆಯನ್ನು ಸರಕಾರ ಬಲಪಡಿಸುವುದು ಎಂದು ಆಶಿಸಬಹುದು ಹಾಗೂ ಅದರಂತೆ ನಿರಂತರ ಒತ್ತಡ ಹಾಕಬೇಕು.

ಕೊನೆಯದಾಗಿ, ಕೋಮುವಾದವನ್ನು ಹಿಮ್ಮೆಟ್ಟಿಸಲು ಇಂತಹ ಬಿಕ್ಕಟ್ಟೇ ಬರಬೇಕಾಯಿತು. ಕಳೆದ ವರ್ಷ ಮೊದಲ ಅಲೆಯಲ್ಲಿ ಒಂದು ನಿರ್ದಿಷ್ಟ ಕೋಮಿಗೆ ಈ ವೈರಸ್ ಅನ್ನು ತಗಲುಹಾಕಲಾಯಿತು. ಇದನ್ನು ಅನೇಕ ಮಾಧ್ಯಮಗಳು ತಬ್ಲೀಘಿ ವೈರಸ್ ಎಂದೇ ಕರೆದವು. ಈ ವೈರಸ್‌ಗೆ ಜಾತಿಮತದ ಭೇದವಿಲ್ಲ ಎಂದು ಆ ದ್ವೇಷ ಹುಟ್ಟಿಸುವವರಿಗೂ ಮನದಟ್ಟಾದಂತಿದೆ. ಕಳೆದ ವರ್ಷ ಲಾಕ್‌ಡೌನ್ ತಂದ ಸಂಕಷ್ಟಗಳಿಗೆ ದುಡಿದ ಮುಸ್ಲಿಂ ಸಮುದಾಯವು ಈ ವರ್ಷ ರೋಗಿಗಳಿಗೆ ಸಹಾಯ ಮಾಡುವಲ್ಲಿ ನಿರತರಾಗಿದೆ. ಮನೆಯವರೇ ಹಿಂದೆ ಸರಿದಾಗ ಮೃತವ್ಯಕ್ತಿಗಳ ಶವಸಂಸ್ಕಾರವನ್ನು ಅವರ ಧರ್ಮಕ್ಕನುಗುಣವಾಗಿ ಮಾಡುತ್ತಿದ್ದಾರೆ. ಯಾವುದನ್ನೂ ಲೆಕ್ಕಿಸದೇ ಇತರರ ಜೊತೆಗೂಡಿ ಈ ಮಾನವೀಯ ಕೆಲಸ ಮಾಡುತ್ತಿವೆ. ಜಾತಿಯ ಹೆಸರಿನಲ್ಲಿಯ ಸಂಘಟನೆಗಳೂ ಈ ಕೆಲಸದಲ್ಲಿ ಕೈಜೋಡಿಸಿವೆ. ಬಿಕ್ಕಟ್ಟೇನೇ ಇರಲಿ, ಎಷ್ಟೇ ಭೀಕರವಾಗಿರಲಿ ನಾವು ಎದುರಿಸುವೆವು ಎಂಬ ಧೈರ್ಯ ನೀಡುತ್ತಿರುವವು ಈ ಸಂಘಟನೆಗಳೇ.

ಒಂದು ಅಸಾಧಾರಣ ಪರಿಸ್ಥಿತಿ ಎದುರಾಗಿದೆ. ಈಗ ಅಸಾಧಾರಣವಾದ ರೀತಿಯಲ್ಲಿ ಸಮಾಜವು ಕೆಲಸ ಮಾಡಬೇಕು. ಇದುವರೆಗೆ ಜವಾಬ್ದಾರಿ ಮರೆತವರನ್ನು ಎಚ್ಚರಿಸುವ ಕೆಲಸವೂ ಜೊತೆ ಜೊತೆಗೇ ನಡೆಯಬೇಕಿದೆ. ಇಡೀ ಸಮಾಜವು ಎಚ್ಚೆತ್ತು ಸಕಾರಾತ್ಮಕ ನಿಟ್ಟಿನಲ್ಲಿ ವಿಶ್ವಾಸವನ್ನು, ಆರೋಗ್ಯ ವ್ಯವಸ್ಥೆಯನ್ನು, ಆರ್ಥಿಕತೆಯನ್ನು ಕಟ್ಟಬೇಕಿದೆ.


ರಾಜಶೇಖರ ಅಕ್ಕಿ
ಸಾಮಾಜಿಕ ಕಾರ್ಯಕರ್ತರಾಗಿರುವ ಅಕ್ಕಿ ಅಭಿನಯ, ಚಿತ್ರಕಥೆ ಬರಹ ಕಲಿಸಿಕೊಡುತ್ತಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ನಾನು ಹಿಂದೂ ಅಲ್ಲ, ಮನುಷ್ಯ’: ಎಸ್‌ಪಿ ನಾಯಕ ಶಿವರಾಜ್ ಸಿಂಗ್ ಯಾದವ್ ಹೇಳಿಕೆ ತಿರುಚಿ ವಿವಾದ ಸೃಷ್ಟಿಸಿದ ಬಿಜೆಪಿ ಬೆಂಬಲಿಗರು

ಸಮಾಜವಾದಿ ಪಕ್ಷದ ನಾಯಕ, ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಆಪ್ತ ಸಹಾಯಕ ಹಾಗೂ ಉತ್ತರ ಪ್ರದೇಶದ ಫಿರೋಜಾಬಾದ್‌ನ ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷ ಶಿವರಾಜ್ ಸಿಂಗ್ ಯಾದವ್ ‘ನಾನು ಹಿಂದೂ ಅಲ್ಲ, ನಾನು...

ಛತ್ತೀಸ್‌ಗಢ : ಎಂಟು ಮಂದಿ ಬಂಗಾಳಿ ಮುಸ್ಲಿಂ ವಲಸೆ ಕಾರ್ಮಿಕರ ಮೇಲೆ ಬಜರಂಗದಳ ಕಾರ್ಯಕರ್ತರಿಂದ ಹಲ್ಲೆ; ವರದಿ

ಛತ್ತೀಸ್‌ಗಢದ ರಾಯ್‌ಪುರದಲ್ಲಿ ಭಾನುವಾರ (ಜ.4) ಬಜರಂಗದಳ ಕಾರ್ಯಕರ್ತರು ಎಂಟು ಮಂದಿ ಬಂಗಾಳಿ ಮಾತನಾಡುವ ಮುಸ್ಲಿಂ ವಲಸೆ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ್ದು, ಒಬ್ಬ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ರಾಯ್‌ಪುರ ಜಿಲ್ಲೆಯ ಕಟೋವಾಲಿ...

‘ಉಮರ್ ಮತ್ತು ಶಾರ್ಜಿಲ್ ಜಾಮೀನು ನಿರಾಕರಣೆ’: ಶಾಸಕಾಂಗ, ನ್ಯಾಯಾಂಗದ ಕಾರ್ಯವೈಖರಿಯಲ್ಲಿನ ವೈರುಧ್ಯಗಳಿಗೆ ಉದಾಹರಣೆ: ಶ್ರೀಪಾದ್ ಭಟ್

ಇಂಡಿಯನ್ ಎಕ್ಸ್ಪ್ರೆಸ್ ನಲ್ಲಿನ ವರದಿಯ ಪ್ರಕಾರ ಈ ಪ್ರಕರಣದ ವಿಚಾರಣೆಯಲ್ಲಿರುವ ಮುಖ್ಯ ಪ್ರಶ್ನೆ: ಬಂಧನವಾಗಿ ಐದು ವರ್ಷಗಳಾದರೂ ಸಹ ಇನ್ನೂ ವಿಚಾರಣೆ ಆರಂಭವಾಗಿಲ್ಲ. ದೀರ್ಘಕಾಲದ ಜೈಲುವಾಸವನ್ನು ಭಯೋತ್ಪಾದಕ ವಿರೋಧಿ ಕಾನೂನಿನ ಅಡಿಯಲ್ಲಿ ಸಮರ್ಥಿಸಬಹುದೇ?...

ಉತ್ತರ ಪ್ರದೇಶ SIR : ಮತದಾರರ ಪಟ್ಟಿಯಿಂದ 2.89 ಕೋಟಿ ಹೆಸರು ಡಿಲೀಟ್

ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐರ್‌) ಬಳಿಕ ಸುಮಾರು 2.89 ಕೋಟಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಉತ್ತರ ಪ್ರದೇಶದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ನವದೀಪ್ ರಿನ್ವಾ...

ಕರೂರ್ ಕಾಲ್ತುಳಿತ ಪ್ರಕರಣ: ಟಿವಿಕೆ ನಾಯಕ ವಿಜಯ್‌ಗೆ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ನೋಟಿಸ್

ಕರೂರ್ ಕಾಲ್ತುಳಿತ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಟಿವಿಕೆ ನಾಯಕ ವಿಜಯ್ ಅವರಿಗೆ ಸಿಬಿಐ ನೋಟಿಸ್ ಜಾರಿ ಮಾಡಿದೆ ಎಂದು ಪಿಟಿಐ ಮಂಗಳವಾರ ವರದಿ ಮಾಡಿದೆ. ಸೆಪ್ಟೆಂಬರ್ 27 ರಂದು ನಟ-ರಾಜಕಾರಣಿ ವಿಜಯ್ ಅವರ ತಮಿಳಗ...

ಲಂಡನ್‌ನಲ್ಲಿ ಪ್ಯಾಲೆಸ್ತೀನ್ ರಾಯಭಾರ ಕಚೇರಿ ಉದ್ಘಾಟನೆ : ‘ಐತಿಹಾಸಿಕ ಕ್ಷಣ’ ಎಂದ ರಾಯಭಾರಿ ಹುಸಾಮ್ ಝೊಮ್ಲೋಟ್

ಲಂಡನ್‌ನಲ್ಲಿ ಪ್ಯಾಲೆಸ್ತೀನ್ ದೇಶದ ರಾಯಭಾರಿ ಕಚೇರಿ ಅಧಿಕೃತವಾಗಿ ಉದ್ಘಾಟನೆಯಾಗಿದ್ದು, ಯುಕೆಯ ಪ್ಯಾಲೆಸ್ತೀನ್‌ ರಾಯಭಾರಿ ಇದನ್ನು 'ಐತಿಹಾಸಿಕ ಕ್ಷಣ' ಎಂದು ಬಣ್ಣಿಸಿದ್ದಾರೆ. ಸೋಮವಾರ (ಜ.5) ಪಶ್ಚಿಮ ಲಂಡನ್‌ನ ಹ್ಯಾಮರ್‌ಸ್ಮಿತ್‌ನಲ್ಲಿ ನಡೆದ ರಾಯಭಾರ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ...

ಬಾಂಗ್ಲಾದೇಶದಲ್ಲಿ ಹಿಂದೂ ಉದ್ಯಮಿ ಮತ್ತು ಪತ್ರಕರ್ತನಾಗಿದ್ದ ರಾಣಾ ಪ್ರತಾಪ್ ಬೈರಾಗಿ ತಲೆಗೆ ಗುಂಡಿಕ್ಕಿ ಹತ್ಯೆ 

ಬಾಂಗ್ಲಾದೇಶದ ಜೆಸ್ಸೋರ್ ಜಿಲ್ಲೆಯಲ್ಲಿ ಸೋಮವಾರ 38 ವರ್ಷದ ರಾಣಾ ಪ್ರತಾಪ್ ಬೈರಾಗಿ ಅವರ ತಲೆಗೆ ಅಪರಿಚಿತ ವ್ಯಕ್ತಿಗಳು ಗುಂಡು ಹಾರಿಸಿದ್ದಾರೆ ಎಂದು ಹಲವು ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿದೆ.  ಬೈರಾಗಿ ಒಬ್ಬ ಹಿಂದೂ ಉದ್ಯಮಿ ಮತ್ತು...

ತಿರುಪರನ್‌ಕುಂದ್ರಂ ಬೆಟ್ಟದ ಮೇಲೆ ದೀಪ ಬೆಳಗಿಸುವ ಆದೇಶ ಎತ್ತಿ ಹಿಡಿದ ಮದ್ರಾಸ್ ಹೈಕೋರ್ಟ್

ಮಧುರೈನ ತಿರುಪರನ್‌ಕುಂದ್ರಂ ಬೆಟ್ಟದ ಮೇಲಿರುವ ಕಲ್ಲಿನ ಕಂಬದಲ್ಲಿ ದೀಪ ಬೆಳಗಿಸಲು ಅನುಮತಿ ನೀಡಿ ಮದ್ರಾಸ್‌ ಹೈಕೋರ್ಟ್‌ನ ಮಧುರೈ ಪೀಠದ ಏಕ ಸದಸ್ಯ ನ್ಯಾಯಾಧೀಶರು ನೀಡಿದ ಆದೇಶವನ್ನು ವಿಭಾಗೀಯ ಪೀಠ ಎತ್ತಿಹಿಡಿದಿದೆ. ನ್ಯಾಯಮೂರ್ತಿ ಜಿ. ಜಯಚಂದ್ರನ್...

ಕರ್ನಾಟಕದ ದೀರ್ಘಾವಧಿಯ ಮುಖ್ಯಮಂತ್ರಿಯಾಗಿ ದಾಖಲೆ ಸೃಷ್ಟಿಸಿದ ಸಿದ್ದರಾಮಯ್ಯ

ಬೆಂಗಳೂರು: ಕರ್ನಾಟಕದ ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ದಿವಂಗತ ಡಿ.ದೇವರಾಜ್ ಅರಸ್ ಅವರ ದಾಖಲೆಯನ್ನು (7 ವರ್ಷ 239 ದಿನಗಳು) ಸಿದ್ದರಾಮಯ್ಯ ಮುರಿದಿದ್ದಾರೆ.  ದೇವರಾಜು ಅರಸು ಮತ್ತು ಸಿದ್ದರಾಮಯ್ಯ ಅವರು ಸಾಮಾಜಿಕ...

ಅಜ್ಮೀರ್ ದರ್ಗಾಕ್ಕೆ ಪ್ರಧಾನಿ ಚಾದರ್ ಅರ್ಪಿಸುವುದನ್ನು ತಡೆಯುವಂತೆ ಅರ್ಜಿ : ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಉರೂಸ್ ಪ್ರಯುಕ್ತ ಅಜ್ಮೀರ್‌ನ ಸೂಫಿ ಸಂತ ಖ್ವಾಜಾ ಮುಯೀನುದ್ದೀನ್ ಹಸನ್ ಚಿಸ್ತಿ ಅವರ ದರ್ಗಾಕ್ಕೆ ಪ್ರಧಾನಿ ಚಾದರ್ ಅರ್ಪಿಸುವುದನ್ನು ಮತ್ತು ದರ್ಗಾಕ್ಕೆ ಸರ್ಕಾರದ ವತಿಯಿಂದ ನೀಡಲಾಗುವ ಗೌರವಗಳನ್ನು ತಡೆಯುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು...