ದಕ್ಷಿಣ ಅಮೆರಿಕ ಖಂಡದ ವೆನಿಜುವೆಲಾ ದೇಶದ ಸರ್ಕಾರ ಆಯೋಜಿಸಿದ್ದ ‘ಫ್ಯಾಸಿಸಂ ವಿರೋಧಿ ವಿಶ್ವ ಸಂಸದೀಯ ವೇದಿಕೆ’ಯಲ್ಲಿ ಪಾಲ್ಗೊಳ್ಳಲು ಸಿಪಿಐ(ಎಂ) ರಾಜ್ಯಸಭಾ ಸಂಸದ ವಿ. ಶಿವದಾಸನ್‌ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಅನುಮತಿ ನಿರಾಕರಿಸಿದೆ. ನವೆಂಬರ್ 4 ಮತ್ತು 5 ರಂದು ಕ್ಯಾರಕಾಸ್‌ನಲ್ಲಿ ನಡೆಯಲಿರುವ ‘ಫ್ಯಾಸಿಸಂ ವಿರೋಧಿ ವಿಶ್ವ ಸಂಸದೀಯ ವೇದಿಕೆ’ಯಲ್ಲಿ ವಿಶ್ವದಾದ್ಯಂತ 300 ಸಂಸದರು ಭಾಗವಹಿಸುವ ನಿರೀಕ್ಷೆಯಿದೆ.
ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ (ಎಫ್‌ಸಿಆರ್‌ಎ) ಅನುಮತಿಯ ನಂತರ ಗೃಹ ಸಚಿವಾಲಯ (ಎಂಎಚ್‌ಎ) ಒಪ್ಪಿಗೆ ನೀಡಿದ ಹೊರತಾಗಿಯೂ ವಿದೇಶಾಂಗ ಸಚಿವಾಲಯ ಅನುಮತಿ ನಿರಾಕರಿಸಲಾಗಿದೆ ಎಂದು ವರದಿಯಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರುವ ಸಂಸದ ಶಿವದಾಸನ್, “ಎಫ್‌ಸಿಆರ್‌ಎ ಅನುಮತಿ ನೀಡಿದ್ದು ಇದರಿಂದ ಸರ್ಕಾರಕ್ಕೆ ಬೇರೆ ಯಾವುದೂ ಸಮಸ್ಯೆ ಇಲ್ಲ ಎಂದು ತೋರಿಸುತ್ತದೆ. ಆದರೂ, ಯಾವುದೇ ಕಾರಣ ಉಲ್ಲೇಖಿಸದೆ, ವಿದೇಶಾಂಗ ಸಚಿವಾಲಯ ತನ್ನ ಅನುಮತಿ ನಿರಾಕರಣೆ ಪತ್ರದಲ್ಲಿ ‘ರಾಜಕೀಯ ದೃಷ್ಟಿ ಕೋನದಿಂದ ಅನುಮತಿ ನಿರಾಕರಿಸಲಾಗಿದೆ’ ಎಂದು ಹೇಳಿದೆ” ಎಂದು ಹೇಳಿದ್ದಾರೆ.
ಕಳೆದ ತಿಂಗಳು ವಿದೇಶಾಂಗ ಸಚಿವಾಲಯಕ್ಕೆ ಕಳುಹಿಸಲಾದ ಆಮಂತ್ರಣ ಪತ್ರದಲ್ಲಿ ವೆನಿಜುವೆಲಾದ ಉಪಾಧ್ಯಕ್ಷ ಪೆಡ್ರೊ ಇನ್‌ಫಾಂಟೆ ಅವರು ಕಾರ್ಯಕ್ರಮಕ್ಕಾಗಿ ಸಂಸದ ವಿ. ಶಿವದಾಸನ್‌ಗೆ ಪ್ರಯಾಣಿಸಲು ಅನುಕೂಲ ಮಾಡಿಕೊಟ್ಟ ಭಾರತ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದರು. ಸಿಪಿಐ(ಎಂ)
ಸಚಿವಾಲಯದ ಈ ಕ್ರಮದ ವಿರುದ್ಧ ತಮ್ಮ ಪ್ರತಿಭಟನೆಯನ್ನು ದಾಖಲಿಸಿರುವ ಶಿವದಾಸನ್, ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಅವರು, ಫ್ಯಾಸಿಸಂ ವಿರುದ್ಧದ ಸಂಸದೀಯ ವೇದಿಕೆಯಲ್ಲಿ ಭಾಗವಹಿಸಲು ನಿರಾಕರಿಸಿರುವ ಬಗ್ಗೆ ಅಘಾತ ವ್ಯಕ್ತಪಡಿಸಿದ್ದು, ಇದು ತನ್ನ ಹಕ್ಕುಗಳ ಮೇಲಿನ ದಾಳಿ ಎಂದು ಪ್ರತಿಪಾದಿಸಿದ್ದಾರೆ.
ಭಾರತ ಮತ್ತು ವೆನಿಜುವೆಲಾ ದೇಶದ ನಡುವೆ ಉತ್ತಮ ಸಂಬಂಧವಿದೆ. ಭಾರತದಲ್ಲಿ ಇತ್ತೀಚೆಗೆ ರೂಪುಗೊಂಡ ಅಂತರರಾಷ್ಟ್ರೀಯ ಸೌರ ಒಕ್ಕೂಟ ಸೇರಿದಂತೆ ಅನೇಕ ಬಹು-ಪಕ್ಷೀಯ ವೇದಿಕೆಗಳಲ್ಲಿ ವೆನಿಜುವೆಲಾ ದೇಶ ಭಾಗವಹಿಸಿದೆ. ಪರಿಸ್ಥಿತಿ ಹೀಗಿರುವಾಗ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಕಾರ್ಯಕ್ರಮಕ್ಕೆ ಹಾಜರಾಗಲು ಅನುಮತಿ ನಿರಾಕರಿಸಿದ್ದು ಆಶ್ಚರ್ಯಕರವಾಗಿದೆ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ. ಅಷ್ಟೆ ಅಲ್ಲದೆ, ಭಾರತದಂತೆ ವೆನಿಜುವೆಲಾ ಕೂಡ ಅಲಿಪ್ತ ಚಳವಳಿಯ ಸದಸ್ಯ ರಾಷ್ಟ್ರವಾಗಿದೆ ಎಂದು ಅವರು ಹೇಳಿದ್ದಾರೆ.
“ಈ ಕಾರ್ಯಕ್ರಮವು ವಿವಿಧ ದೇಶಗಳ ಸಂಸದರ ಸಭೆಯಾಗಿದೆ. ಪ್ರಸ್ತುತ ಜಾಗತಿಕ ರಾಜಕೀಯ ಪರಿಸ್ಥಿತಿಯಲ್ಲಿನ ಪ್ರಮುಖ ಬೆದರಿಕೆಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ವೆನಿಜುವೆಲಾದ ಸಂಸತ್ತು ಆಹ್ವಾನಿಸಿದೆ” ಎಂದು ಸಂಸದ ಶಿವದಾಸನ್ ಹೇಳಿದ್ದಾರೆ.
“ಪ್ರಪಂಚದಾದ್ಯಂತ ಬಲಪಂಥೀಯ ಮತ್ತು ನವ-ಫ್ಯಾಸಿಸ್ಟ್ ಪಕ್ಷಗಳ ಬೆಳವಣಿಗೆಯನ್ನು ಅನೇಕ ಪ್ರಜಾಪ್ರಭುತ್ವಗಳು ಸಾಮಾಜಿಕ ರಚನೆಗೆ ಬೆದರಿಕೆ ಎಂದು ಗುರುತಿಸಿವೆ. ಪ್ರಜಾಪ್ರಭುತ್ವದ ಬಗ್ಗೆ ಕಾಳಜಿ ಹೊಂದಿರುವ ಅನೇಕ ಸರ್ಕಾರಗಳು ಮತ್ತು ಪಕ್ಷಗಳು ಈ ಬೆದರಿಕೆಯನ್ನು ಎದುರಿಸಲು ಒಗ್ಗೂಡುತ್ತಿವೆ. ನಾನು ಈ ಪ್ರಯತ್ನಗಳಿಗೆ ಸೇರಲು ಮತ್ತು ಅಂತಹ ಉಪಕ್ರಮವನ್ನು ಬಲಪಡಿಸಲು ಬಯಸುತ್ತೇನೆ” ಎಂದು ಅವರು ಹೇಳಿದ್ದಾರೆ.
“ಎಡ ರಾಜಕೀಯ ಚಿಂತನೆ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಪಕ್ಷವನ್ನು ಪ್ರತಿನಿಧಿಸುವ ನಾನು ಈ ವಿಷಯದ ಬಗ್ಗೆ ನನ್ನ ಅಭಿಪ್ರಾಯಗಳನ್ನು ಮುಂದಿಡಲು ಮತ್ತು ಬಲಪಂಥೀಯ, ನವ-ಫ್ಯಾಸಿಸ್ಟ್ ಬೆದರಿಕೆಯ ವಿರುದ್ಧ ಹೋರಾಟವನ್ನು ಬಲಪಡಿಸಲು ಇದು ನನಗೆ ಒಂದು ಅವಕಾಶವಾಗಿದೆ” ಎಂದು ಅವರು ಹೇಳಿದ್ದಾರೆ.
ಅಕ್ಟೋಬರ್ 25 ರಂದು, ವೆನಿಜುವೆಲಾದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಡೆಲ್ಸಿ ರೋಡ್ರಿಗಸ್ ಅವರು ಭಾರತಕ್ಕೆ ಭೇಟಿ ನೀಡಿದ್ದರು. ಅವರ ಈ ಭೇಟಿಯ ಸಮಯದಲ್ಲಿ, ರೋಡ್ರಿಗಸ್ ಅವರು ಹಣಕಾಸು ಸಚಿವರು, ವಿದೇಶಾಂಗ ಸಚಿವರು ಮತ್ತು ಇಂಧನ ಸಚಿವರು ಸೇರಿದಂತೆ ಪ್ರಮುಖ ಭಾರತೀಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದರು.
ಇದನ್ನೂ ಓದಿ: ವಕ್ಫ್ ಸ್ವತ್ತುಗಳನ್ನು ರಾಷ್ಟ್ರೀಕರಣಗೊಳಿಸಲು ಪ್ರಧಾನಿಗೆ ಪತ್ರ ಬರೆದ ಶಾಸಕ ಯತ್ನಾಳ್
ವಕ್ಫ್ ಸ್ವತ್ತುಗಳನ್ನು ರಾಷ್ಟ್ರೀಕರಣಗೊಳಿಸಲು ಪ್ರಧಾನಿಗೆ ಪತ್ರ ಬರೆದ ಶಾಸಕ ಯತ್ನಾಳ್


