ಭಾರತದಲ್ಲಿ ಮಹಿಳೆಯರ, ಮಕ್ಕಳ ಮೇಲಿನ ಅಪರಾಧಗಳು, ಆತ್ಮಹತ್ಯೆಗಳು ಮತ್ತು ಅಪಘಾತಗಳು 2021ಕ್ಕೆ ಹೋಲಿಕೆ ಮಾಡಿದಾಗ 2022ರಲ್ಲಿ ಹೆಚ್ಚಳವಾಗಿದೆ ಎಂದು ಎನ್‌ಸಿಆರ್‌ಬಿ ವರದಿ ಬಹಿರಂಗಪಡಿಸಿದೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB), ವಾರ್ಷಿಕ ಅಪರಾಧ ವರದಿ ಮತ್ತು ಭಾರತದಲ್ಲಿ ಅಪಘಾತದಿಂದಾಗುವ ಸಾವುಗಳು ಹಾಗೂ ಆತ್ಮಹತ್ಯೆಗಳ ಕುರಿತು (ADSI) ವರದಿಯನ್ನು ಬಿಡುಗಡೆ ಮಾಡಿದೆ. ಕಳೆದ ವರ್ಷ ಇದೇ ವರದಿಯನ್ನು ಆಗಸ್ಟ್‌ನಲ್ಲಿ ಪ್ರಕಟಿಸಲಾಗಿತ್ತು. ಆದರೆ ಈ ಬಾರಿ ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಬಿಡುಗಡೆ ಮಾಡಲಾಗಿದೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ವರದಿಯು 2022ರ ಭಾರತದಲ್ಲಿನ ಅಪರಾಧ ಸನ್ನಿವೇಶದ ಸಮಗ್ರ ಅವಲೋಕನವನ್ನು ಮಾಡಿದೆ. ವರದಿಯಲ್ಲಿ ಹಠಾತ್ ಸಾವುಗಳು, ಆತ್ಮಹತ್ಯೆಗಳು, ಮಹಿಳೆಯರು, ಮಕ್ಕಳ ವಿರುದ್ಧದ ಅಪರಾಧಗಳನ್ನು ಅವಲೋಕನ ಮಾಡಿದೆ. ಭಾರತದಲ್ಲಿ ಒಟ್ಟಾರೆ ಅಪರಾಧದ ಪ್ರಮಾಣವು 2021ರಲ್ಲಿ 7% ಇದ್ದು 2022ರಲ್ಲಿ 6.9%ಕ್ಕೆ ಇಳಿದಿದೆ. ಆದರೆ ಮಹಿಳೆಯರು, ಮಕ್ಕಳು, SC- ST ಮತ್ತು ಸೈಬರ್ ಅಪರಾಧ ಸೇರಿದಂತೆ ನಿರ್ದಿಷ್ಟ ವರ್ಗಗಳ ವಿರುದ್ಧದ ಅಪರಾಧಗಳು 2021ಕ್ಕೆ ಹೋಲಿಕೆ ಮಾಡಿದರೆ ಹೆಚ್ಚಳವಾಗಿದೆ ಎಂದು ವರದಿಯು ತಿಳಿಸಿದೆ.
ದೇಶಾದ್ಯಂತ ವರದಿಯಾದ ಹಠಾತ್ ಸಾವುಗಳ ಸಂಖ್ಯೆಯಲ್ಲಿ 11.6% ಹೆಚ್ಚಳವಾಗಿದೆ. 2022ರಲ್ಲಿ ಕನಿಷ್ಠ 56,653 ಹಠಾತ್ ಸಾವುಗಳು ಸಂಭವಿಸಿದೆ. ಇದರಲ್ಲಿ ಹೃದಯಾಘಾತದಿಂದ 32,410 ಸಾವುಗಳು ಸಂಭವಿಸಿವೆ. 24,243 ಸಾವುಗಳಿಗೆ ಇತರ ಕಾರಣಗಳಿಂದ ಸಂಭವಿಸಿದೆ. 45-60ವರ್ಷ ವಯಸ್ಸಿನವರಲ್ಲಿ ಗರಿಷ್ಠ ಸಂಖ್ಯೆಯ ಸಾವುಗಳು ಎಂದರೆ 19,456 ಸಾವುಗಳು ಸಂಭವಿಸಿದೆ ಎಂದು ವರದಿ ತಿಳಿಸಿದೆ.
ಆತ್ಮಹತ್ಯೆಗಳು ಮತ್ತು ಆಕಸ್ಮಿಕ ಸಾವುಗಳು
ಭಾರತದಲ್ಲಿ 2021ರಲ್ಲಿ 1,64,033ರಷ್ಟು ಆತ್ಮಹತ್ಯೆ ಪ್ರಕರಣ ದಾಖಲಾಗಿದ್ದು, ಅದು 2022ರಲ್ಲಿ 1,70,924ಕ್ಕೆ ಏರಿಕೆಯಾಗಿದೆ. 2021ರಲ್ಲಿ ಅಪಘಾತದಿಂದ ಭಾರತದಲ್ಲಿ 3,97,530 ಮಂದಿ ಮೃತಪಟ್ಟಿದ್ದು, 2022ರಲ್ಲಿ ಅಪಘಾತದಲ್ಲಿ 4,30,504 ಮಂದಿ ಮೃತಪಟ್ಟಿದ್ದಾರೆ.
ಇಂಡಿಯಾ ಸ್ಪೆಂಡ್ ವರದಿಯ ಪ್ರಕಾರ, ಭಾರತವು 2021ರಲ್ಲಿ ಇತಿಹಾಸದಲ್ಲೇ ಅತಿ ಹೆಚ್ಚು ಆತ್ಮಹತ್ಯೆ ಪ್ರಕರಣವನ್ನು ವರದಿ ಮಾಡಿದೆ. ಪ್ರತಿ 1,00,000 ಜನರಿಗೆ 12 ಆತ್ಮಹತ್ಯೆಗಳು ಸಂಭವಿಸಿದೆ.
ಮಹಿಳೆಯರ ವಿರುದ್ಧದ ಅಪರಾಧಗಳು
2022ರಲ್ಲಿ ಕನಿಷ್ಠ 4,45,256 ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳು ದಾಖಲಾಗಿದ್ದು, 2021ರಿಂದ ಇದು 4% ಹೆಚ್ಚಳವಾಗಿದೆ ಎಂದು ವರದಿ ತಿಳಿಸಿದೆ.
ಪತಿ ಮತ್ತು ಆತನ ಸಂಬಂಧಿಕರಿಂದ ಕ್ರೌರ್ಯ, ಮಹಿಳೆಯರ ಅಪಹರಣ, ಮಹಿಳೆಯರ ಮೇಲೆ ಹಲ್ಲೆ ಮತ್ತು ಅತ್ಯಾಚಾರದಂತಹ ಪ್ರಕರಣಗಳು ಸೇರಿದೆ. ವಿಶ್ವ ಆರೋಗ್ಯ ಸಂಸ್ಥೆಯ ದಾಖಲೆಯನ್ನು ಉಲ್ಲೇಖಿಸಿ 2022ರಲ್ಲಿ ಬಿಬಿಸಿ ಮಾಡಿದ ವರದಿಯ ಪ್ರಕಾರ ಜಾಗತಿಕವಾಗಿ ಮೂವರು ಮಹಿಳೆಯರಲ್ಲಿ ಓರ್ವರು ಲಿಂಗ ಆಧಾರಿತ ಹಿಂಸೆಯನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದೆ.
2021ರಲ್ಲಿ ಭಾರತವು ಮಹಿಳೆಯರ ವಿರುದ್ಧ ಅತಿ ಹೆಚ್ಚು ಅಪರಾಧಗಳನ್ನು ದಾಖಲಿಸಿದೆ ಎಂದು ವರದಿಯು ಗಮನಿಸಿದೆ. ಇದು 2016ರಿಂದ 6 ವರ್ಷಗಳಲ್ಲಿ 26.35% ರಷ್ಟು ಏರಿಕೆಯಾಗಿದೆ.
ಮಕ್ಕಳ ವಿರುದ್ಧದ ಅಪರಾಧಗಳು
2022ರಲ್ಲಿ ಮಕ್ಕಳ ವಿರುದ್ಧದ ಅಪರಾಧಗಳ ಕನಿಷ್ಠ 1,62,449 ಪ್ರಕರಣಗಳು ದಾಖಲಾಗಿವೆ. ಇದು 2021 ರಿಂದ 8.7% ಹೆಚ್ಚಳವಾಗಿದೆ. ಇವುಗಳಲ್ಲಿ ಅಪಹರಣ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆಗಳು ಹೆಚ್ಚು ದಾಖಲಾಗಿವೆ.
ಇದಲ್ಲದೆ 2022ರಲ್ಲಿ ಹಿರಿಯ ನಾಗರಿಕರು, ಪರಿಶಿಷ್ಟ ಜಾತಿಗಳು (ಎಸ್‌ಸಿ), ಪರಿಶಿಷ್ಟ ಪಂಗಡಗಳ ಮೇಲಿನ ಅಪರಾಧಗಳು ಮತ್ತು ಆರ್ಥಿಕ ಅಪರಾಧಗಳು ಭಾರಿ ಹೆಚ್ಚಳವನ್ನು ತೋರಿಸಿವೆ. 60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರ ವಿರುದ್ಧದ ಅಪರಾಧಕ್ಕಾಗಿ ಒಟ್ಟು 28,545 ಪ್ರಕರಣಗಳನ್ನು ದಾಖಲಿಸಲಾಗಿದೆ. ಇದು 2021ಕ್ಕೆ ಹೋಲಿಕೆ ಮಾಡಿದರೆ 9.3% ಹೆಚ್ಚಳವಾಗಿರುವುದನ್ನು ತೋರಿಸುತ್ತದೆ.
ಎಸ್‌ಸಿಗಳ ವಿರುದ್ಧದ ಅಪರಾಧಕ್ಕೆ ಸಂಬಂಧಿಸಿ ಒಟ್ಟು 57,582 ಪ್ರಕರಣಗಳು ದಾಖಲಾಗಿವೆ. ಇದು 2021ರಿಂದ 13.1% ಹೆಚ್ಚಳವನ್ನು ತೋರಿಸುತ್ತದೆ. ಪರಿಶಿಷ್ಟ ಪಂಗಡಗಳ(ಎಸ್‌ಟಿ) ಸಮುದಾಯದ ಜನರ ವಿರುದ್ಧದ ಅಪರಾಧಕ್ಕಾಗಿ ಒಟ್ಟು 10,064 ಪ್ರಕರಣಗಳನ್ನು ದಾಖಲಿಸಲಾಗಿದೆ.
ಆರ್ಥಿಕ ಅಪರಾಧಗಳಿಗೆ ಸಂಬಂಧಿಸಿ ಕನಿಷ್ಠ 1,93,385 ಪ್ರಕರಣಗಳನ್ನು ದಾಖಲಿಸಲಾಗಿದೆ. ಇದು 2021ರಿಂದ 11.1% ಹೆಚ್ಚಳವಾಗಿದೆ. ಸೈಬರ್ ಅಪರಾಧಕ್ಕೆ ಸಂಬಂಧಿಸಿ 65,893 ಪ್ರಕರಣಗಳನ್ನು ದಾಖಲಿಸಲಾಗಿದೆ. ಇದು 2021ಕ್ಕೆ ಹೋಲಿಕೆ ಮಾಡಿದಾಗ 4.4% ಹೆಚ್ಚಳವಾಗಿದೆ ಎಂದು ಎನ್‌ಸಿಆರ್‌ಬಿ ವರದಿ ಬಹಿರಂಗಪಡಿಸಿದೆ.
ಇದನ್ನು ಓದಿ: ELECTION UPDATE: ಮಿಜೋರಾಂನಲ್ಲಿ ಬಹುಮತ ಪಡೆದ ZPM: ಸಿಎಂಗೆ ಸೋಲು


