ಕೇಂದ್ರ ಸರ್ಕಾರದ ವಿರುದ್ಧ ಗರಂ ಆಗಿದ್ದ ಸಚಿವ ಮಾಧುಸ್ವಾಮಿ, ‘ಕೇಂದ್ರ ಸರ್ಕಾರದಿಂದ ಸರ್ವಾಧಿಕಾರಿ ಧೋರಣೆ ಆರಂಭವಾಗಿದೆ’ ಎಂದು ಹೇಳಿಕೆ ನೀಡಿದ್ದರು. ಈಗ ಉಲ್ಟಾ ಹೊಡೆದಿರುವ ಮಾಧುಸ್ವಾಮಿ, ತನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿದ್ದಾರೆ.
ಈ ಹೇಳಿಕೆಗಳು ರಾಜ್ಯ ರಾಜಕೀಯ ವಲಯದಲ್ಲಿ ಸಂಚಲವನ್ನುಂಟುಮಾಡಿತ್ತು. ಬಿಜೆಪಿಯೇತರರು ಮಾಧುಸ್ವಾಮಿಯನ್ನು ಅಭಿನಂಧಿಸಿದರೆ, ಬಿಜೆಪಿ ನಾಯಕರು ಈ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದ್ದರು.
ಈಗ ತುಮಕೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮಾಧುಸ್ವಾಮಿ, “ನಾನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಬಗ್ಗೆ ಮಾತನಾಡಿಲ್ಲ. ವಿಚಾರ ಸಂಕಿರಣದಲ್ಲಿ ಮಾತನಾಡಿದ್ದನ್ನು ತಪ್ಪಾಗಿ ವ್ಯಾಖ್ಯಾನಿಸಲಾಗಿದೆ” ಎಂದು ಹೇಳಿದ್ದಾರೆ.
“ಅಲ್ಲಿ ಮಾತನಾಡಿದ ವಿಷಯ ವಿಚಾರ ಸಂಕಿರಣಕ್ಕಷ್ಟೇ ಸೀಮಿತ. ಪ್ರಾದೇಶಿಕ ಭಾವನೆ, ಒಕ್ಕೂಟ ವ್ಯವಸ್ಥೆ ಬಗ್ಗೆ ಹೇಳುವಾಗ ಕಳೆದ 70 ವರ್ಷಗಳ ಕೇಂದ್ರದ ಸರ್ವಾಧಿಕಾರಿ ಧೋರಣೆ, ಕಾಲಕಾಲಕ್ಕೆ ಸರ್ಕಾರಗಳು ತೆಗೆದುಕೊಳ್ಳುವ ನಿರ್ಣಯಗಳು ಪ್ರಾದೇಶಿಕ ಭಾವನೆ ಹೆಚ್ಚಾಗಲು ಕಾರಣ ಎಂದು ಹೇಳಿದ್ದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಅದನ್ನು ತಪ್ಪಾಗಿ ಗ್ರಹಿಸಿ ‘ಮಾಧುಸ್ವಾಮಿ ರಾಜ್ಯದ ಜನರ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಅದಕ್ಕೆ ಅಭಿನಂದನೆಗಳು’ ಎಂದು ಹೇಳಿದ್ದಾರೆ. ನಾನು ಬಿಜೆಪಿ ಸರ್ಕಾರದ ಸಚಿವನಾಗಿ ಕೇಂದ್ರವನ್ನು ಟೀಕಿಸುತ್ತೇನಾ? ವಿಚಾರ ಸಂಕಿರಣದಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯವನ್ನು ದೊಡ್ಡದಾಗಿ ಬಿಂಬಿಸುವ ಅಗತ್ಯವಿಲ್ಲ. ನಾನು ಹೇಳಿದ್ದು ಮೋದಿ ಸರ್ಕಾರದ ಬಗ್ಗೆ ಅಲ್ಲ, ಹಿಂದಿನ ಸರ್ಕಾರಗಳ ಬಗ್ಗೆ” ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಕೇಂದ್ರದ ಸರ್ವಾಧಿಕಾರಿ ಧೋರಣೆ ಹೇಳಿಕೆ: ಮಾಧುಸ್ವಾಮಿ ಅಭಿನಂದಿಸಿದ ಕಾಂಗ್ರೆಸ್ – ತೇಜಸ್ವಿ ಸೂರ್ಯ ಆಕ್ಷೇಪ
ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಮಾಧುಸ್ವಾಮಿ, “ಕೇಂದ್ರ ಸರ್ಕಾರದಲ್ಲಿ ಸರ್ವಾಧಿಕಾರಿ ಧೋರಣೆ ಪ್ರಾರಂಭವಾಗಿದ್ದು, ಒಕ್ಕೂಟಕ್ಕೆ ಬಹಳ ದೊಡ್ಡ ಆತಂಕ ಎದುರಾಗಿದೆ. ಬೆಳೆದಂತೆ ಉದಾರವಾದಿಗಳಾಗಬೇಕಾಗಿದ್ದ ನಾವು ಪ್ರಸ್ತುತ ಕೇಂದ್ರೀಕರಣ ಆಗುತ್ತಿದ್ದೇವೆ. ನೀಟ್ ಪರೀಕ್ಷಗೂ, ಕರ್ನಾಟಕಕ್ಕೂ ಏನ್ ಸಂಬಂಧವಿದೆ?” ಎಂದು ಹೇಳಿದ ಅವರು, ಪಕ್ಕದಲ್ಲೇ ಕೂತಿದ್ದ ಸಂಸದ ತೇಜಸ್ವಿ ಸೂರ್ಯ ಅವರಿಗೆ ನೀವಿದನ್ನು ಸಂಸತ್ತಿನಲ್ಲಿ ಕೇಳಬೇಕು ಎಂದು ಎಚ್ಚರಿಸಿದ್ದರು.
“ಕರ್ನಾಟಕದಲ್ಲಿ ಇರುವ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕನ್ನಡಿಗರಿಗೆ ಅವಕಾಶ ಇಲ್ಲ. ತುಮಕೂರಿನಲ್ಲಿ ಪ್ರಧಾನಿ ಉದ್ಘಾಟನೆ ಮಾಡಿದ ಫುಡ್ ಪಾರ್ಕ್, ಬೆಂಗಳೂರಿನಲ್ಲಿರುವ ಕಂಪನಿಗಳು. ಹೀಗೆ ಎಲ್ಲಿಯೂ ಕನ್ನಡಿಗರಿಗೆ ಆದ್ಯತೆ ಇಲ್ಲ. ಜಾಗ, ಸೌಲಭ್ಯ ಎಲ್ಲವೂ ನಮ್ಮದಾದರೂ ಉದ್ಯೋಗ ಮಾತ್ರ ಬೇರೆಯವರಿಗೆ ಸೇರಿದೆ” ಎಂದು ಅವರು ಹೇಳಿದ್ದಾಗಿ ಆಂದೋಲನ ಪತ್ರಿಕೆ ವರದಿ ಮಾಡಿದೆ.
“ಈ ಅನ್ಯಾಯದ ವಿರುದ್ಧ ತಮಿಳುನಾಡಿನಂತಹ ರಾಜ್ಯಗಳು ಹೋರಾಟ ಮಾಡಿ ತಮ್ಮ ರಾಜ್ಯದವರಿಗೆ ಅನುಕೂಲವಾಗುವಂತೆ ಮಾಡಿವೆ. ಆದರೆ ಕರ್ನಾಟಕದ ಜನರು ಹೋರಾಟ ಮಾಡುವುದಿಲ್ಲ, ಯಾಕೆಂದರೆ ನಾವು ರಾಷ್ಟ್ರೀಯವಾದಿಗಳು” ಎಂದು ಮಾಧುಸ್ವಾಮಿ ವ್ಯಂಗ್ಯವಾಡಿದ್ದಾಗಿ ಪತ್ರಿಕೆ ವರದಿ ಮಾಡಿದೆ.
ಇದನ್ನೂ ಓದಿ: ಖಾತೆ ಬದಲಾವಣೆ: ಯಡಿಯೂರಪ್ಪಗೆ ಸೆಡ್ಡು ಹೊಡೆದು ಶೆಟ್ಟರ್ ಪಾಳಯಕ್ಕೆ ಜಿಗಿದರೆ ಮಾಧುಸ್ವಾಮಿ?


