ಬಿಜೆಪಿ ಪರ ಪ್ರಚಾರ: ನೀತಿ ಸಂಹಿತೆ ಉಲ್ಲಂಘಿಸಿದ 8 ಪತ್ರಿಕೆಗಳಿಗೆ ಚುನಾವಣಾ ಆಯೋಗ ನೋಟಿಸ್

ಅಸ್ಸಾಂನಲ್ಲಿ ಮೊದಲ ಹಂತದ ಚುನಾವಣೆ ನಡೆದ ಎಲ್ಲಾ 47 ಸ್ಥಾನಗಳಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ಹೇಳುವ ಶೀರ್ಷಿಕೆಯ ರೂಪದಲ್ಲಿ ಜಾಹೀರಾತನ್ನು ಪ್ರಕಟಿಸಿದ್ದ ಎಂಟು ಪತ್ರಿಕೆಗಳಿಗೆ ಭಾರತ ಚುನಾವಣಾ ಆಯೋಗ (ಇಸಿಐ) ನೋಟಿಸ್ ನೀಡಿದೆ.

ಮಾದರಿ ನೀತಿ ಸಂಹಿತೆ (ಎಂಸಿಸಿ), ಜನರ ಪ್ರಾತಿನಿಧ್ಯ ಕಾಯ್ದೆ, 1951 ರ ಸೆಕ್ಷನ್ 126 ಎ ಮತ್ತು ಮಾರ್ಚ್ 26 ರಂದು ಹೊರಡಿಸಿದ ಇಸಿಐ ನಿರ್ದೇಶನಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಭಾನುವಾರ ರಾತ್ರಿ ಎಫ್‌ಪೂರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಅಸ್ಸಾಂ ಕಾಂಗ್ರೆಸ್‌‌ನ ಕಾನೂನು ವಿಭಾಗದ ಅಧ್ಯಕ್ಷ ನಿರನ್ ಬೋರಾ ಹೇಳಿದ್ದರು. ನಂತರ ದೂರು ಪರಿಶೀಲಿಸಿದ ಇಸಿಐ ಪತ್ರಿಕೆಗಳಿಗೆ ನೋಟಿಸ್ ನೀಡಿದೆ.

ದಿ ಅಸ್ಸಾಂ ಟ್ರಿಬ್ಯೂನ್, ಅಸೋಮಿಯಾ ಪ್ರತಿದಿನ್, ಅಮರ್ ಅಸೋಮ್, ನಿಯೋಮಿಯಾ ಬಾರ್ತಾ, ಅಸೋಮಿಯಾ ಖಬೋರ್, ದೈನಿಕ್ ಅಸ್ಸಾಂ, ದೈನಿಕ್ ಜುಗಶಂಕಾ ಮತ್ತು ದೈನಿಕ್ ಪೂರ್ಣೋದಯ ಸೇರಿ ಪ್ರಮುಖ ಇಂಗ್ಲಿಷ್, ಅಸ್ಸಾಮೀಸ್, ಹಿಂದಿ ಮತ್ತು ಬಂಗಾಳಿ ಪತ್ರಿಕೆಗಳು ಬಿಜೆಪಿ ನೀಡಿದ್ದ ಜಾಹಿರಾತನ್ನು ಪ್ರಕಟಿಸಿದ್ದವು.

ಅಸ್ಸಾಂ ಮುಖ್ಯ ಚುನಾವಣಾ ಅಧಿಕಾರಿ ನಿತಿನ್ ಖಡೆ, ಸೋಮವಾರ ಸಂಜೆ 7 ಗಂಟೆಯೊಳಗೆ ಆಯೋಗಕ್ಕೆ ತಮ್ಮ ನಿಲುವನ್ನು ಸ್ಪಷ್ಟಪಡಿಸುವ ವರದಿಯನ್ನು ಕಳುಹಿಸುವಂತೆ ಪತ್ರಿಕೆಗಳಿಗೆ ನೋಟಿಸ್ ನೀಡಿದ್ದಾರೆ. ನೋಟಿಸ್ ಪಡೆದುಕೊಂಡಿದ್ದ ಪತ್ರಿಕೆಗಳು ಈಗಾಗಲೇ ತಮ್ಮ ವರದಿಗಳನ್ನು ಇಸಿಐಗೆ ರವಾನಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಮಯನ್ಮಾರ್‌ ವಲಸಿಗರಿಗೆ ಆಹಾರ-ಆಶ್ರಯ ಕೊಡಬೇಡಿ: ಮಣಿಪುರ ಸರ್ಕಾರದ ಆಘಾತಕಾರಿ ನಿಲುವು

ಚುನಾವಣೆ ನಡೆದ ಅಸ್ಸಾಂನಲ್ಲಿನ ಎಲ್ಲಾ ಕ್ಷೇತ್ರದಲ್ಲೂ ಬಿಜೆಪಿ ಜಯಗಳಿಸಿದೆ ಎಂಬ ‘ಜಾಹೀರಾತನ್ನು, ಸುದ್ದಿಯ ರೂಪದಲ್ಲಿ ನೀಡಿದ್ದಾರೆ’ ಎಂದು ಆರೋಪಿಸಿ ದೂರು ದಾಖಲಾಗಿತ್ತು. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್, ರಾಜ್ಯದ ಬಿಜೆಪಿ ಅಧ್ಯಕ್ಷ ರಂಜೀತ್‌ ಕುಮಾರ್‌ ದಾಸ್ ಮತ್ತು ಎಂಟು ಪ್ರಮುಖ ಪತ್ರಿಕೆಗಳ ವಿರುದ್ದ ಕಾಂಗ್ರೆಸ್ ದೂರು ದಾಖಲಿಸಿತ್ತು.

“ಬಿಜೆಪಿ ನಾಯಕರು ಮತ್ತು ಸದಸ್ಯರು ಎಂಸಿಸಿ, ಜನರ ಪ್ರಾತಿನಿಧ್ಯ ಕಾಯ್ದೆ, 1951 ಮತ್ತು ಇಸಿಐನ ಸಂಬಂಧಿತ ಸೂಚನೆಗಳು ಮತ್ತು ಮಾಧ್ಯಮ ನೀತಿಗಳ ಉಲ್ಲಂಘನೆಯಾಗಿದೆ. ಬಿಜೆಪಿಗೆ ಸೋಲಾಗುತ್ತದೆ ಎಂದು ತಿಳಿದ ನಂತರ ರಾಜ್ಯದ ಮತದಾರರ ಮೇಲೆ ಪ್ರಭಾವ ಬೀರಲು ಹತಾಶ, ಅಕ್ರಮ ಮತ್ತು ಅಸಂವಿಧಾನಿಕ ವಿಧಾನಗಳನ್ನು ಆಶ್ರಯಿಸಿದ್ದಾರೆ” ಎಂದು ನಿರನ್ ಬೋರಾ ಹೇಳಿದ್ದರು.

“ಮತದಾರರ ಮನಸ್ಸನ್ನು ಪೂರ್ವಾಗ್ರಹ ಪೀಡಿತಗೊಳಿಸುವ ರೀತಿಯಲ್ಲಿ ಜಾಹೀರಾತುಗಳನ್ನು ಪ್ರಸ್ತುತಪಡಿಸಲಾಗಿದೆ. ಈ ದುರುದ್ದೇಶಪೂರಿತ ಮತ್ತು ತಿರುಚಿರುವ ಜಾಹೀರಾತುಗಳು ಜನರ ಪ್ರತಿನಿಧಿ ಕಾಯ್ದೆ 1951 ರ ಸೆಕ್ಷನ್ 126 ಎ ಅನ್ನು ಸ್ಪಷ್ಟವಾಗಿ ಉಲ್ಲಂಘಿಸಿವೆ” ಎಂದು ಅವರು ಆರೋಪಿಸಿದ್ದರು.

ಅಸ್ಸಾಂನಲ್ಲಿ ಶನಿವಾರ ನಡೆದ ಮೊದಲ ಹಂತದ ಮತದಾನದ ವೇಳೆ ಒಟ್ಟು 81.09 ಲಕ್ಷ ಮತದಾರರಲ್ಲಿ ಶೇಕಡಾ 79.93 ರಷ್ಟು ಜನರು 47 ವಿಧಾನಸಭಾ ಕ್ಷೇತ್ರಗಳಲ್ಲಿ ತಮ್ಮ ಮತ ಚಲಾಯಿಸಿದ್ದಾರೆ. ಎರಡನೇ ಹಂತದಲ್ಲಿ 39 ಸ್ಥಾನಗಳಿಗೆ ಚುನಾವಣೆ ಏಪ್ರಿಲ್ 1 ರಂದು ಮತ್ತು 40 ಸ್ಥಾನಗಳಿಗೆ ಮೂರನೇ ಮತ್ತು ಅಂತಿಮ ಹಂತದಲ್ಲಿ ಏಪ್ರಿಲ್ 6 ರಂದು ಮತದಾನ ನಡೆಯಲಿದೆ.


ಇದನ್ನೂ ಓದಿ: ‘ಬಿಜೆಪಿ ಸರ್ಕಾರದ ಸಚಿವನಾಗಿ ಕೇಂದ್ರವನ್ನು ಟೀಕಿಸುತ್ತೇನಾ’ – ಉಲ್ಟಾ ಹೊಡೆದ ಮಾಧುಸ್ವಾಮಿ ಹೇಳಿದ್ದೇನು?

1 COMMENT

LEAVE A REPLY

Please enter your comment!
Please enter your name here