Homeಮುಖಪುಟಮಸ್ಕಿ ಬೆವರು ಬೆಂಗಳೂರಿನಲ್ಲಿ: ಬಸವಕಲ್ಯಾಣದಲ್ಲಿ ನಾರಾಯಣರಾವ್ ಸರಳತೆ ಉಳಿಯುವುದೇ?

ಮಸ್ಕಿ ಬೆವರು ಬೆಂಗಳೂರಿನಲ್ಲಿ: ಬಸವಕಲ್ಯಾಣದಲ್ಲಿ ನಾರಾಯಣರಾವ್ ಸರಳತೆ ಉಳಿಯುವುದೇ?

- Advertisement -
- Advertisement -

ಮಸ್ಕಿ ಎಂಬ ಪುಟ್ಟ ತಾಲೂಕಿನ ಮ್ಯಾಲ ಐದಾರು ನೀರಾವರಿ ಯೋಜನೆ ಹೇರಿಬಿಟ್ಟಿದೆ ನಮ್ಮ ಸರ್ಕಾರ! ತಮ್ಮನ್ನು ಅಧಿಕಾರಕ್ಕೆ ತಂದರು ಎಂಬ ಏಕೈಕ ಕಾರಣಕ್ಕೆ ಇಂತಹ ಕ್ಷೇತ್ರಗಳಿಗೆ ಸಿಕ್ಕಾಪಟ್ಟೆ ಯೋಜನೆ ಘೋಷಣೆ ಮಾಡಿಬಿಟ್ಟಿದೆ ಯಡಿಯೂರಪ್ಪ ಸರ್ಕಾರ!

ನಂಜುಂಡಪ್ಪ ವರದಿಯ ಅತಿ ಹಿಂದುಳಿದ ತಾಲೂಕುಗಳ ಪಟ್ಟಿಯಲ್ಲಿ ಈ ಮಸ್ಕಿಯೂ ಒಂದು. ಇಲ್ಲಿನ ತಳ ಸಮುದಾಯದ ಜನಕ್ಕೆ ಭೂಮಿ ಇಲ್ಲ. ಅವರೆಲ್ಲ ಬೆಂಗಳೂರಿಗೋ, ಮಂಗಳೂರಿಗೋ ಹೋಗಿ ಬೆವರು ಹರಿಸುತ್ತಾರೆ, ಹೊಟ್ಟೆ ತುಂಬಿಸಿಕೊಳ್ಳಲು.

ಮೀಸಲು ಕ್ಷೇತ್ರ ಮಸ್ಕಿ ಎರಡು ಜಿಲ್ಲೆಗಳಲ್ಲಿ ಹರಿದು ಹಂಚಿ ಹೋಗಿದೆ. ಕೊಪ್ಪಳ ಮತ್ತು ರಾಯಚೂರಿನ ನೂರಾರು ಗ್ರಾಮಗಳನ್ನು ಸೇರಿಸಿ ಈ ಮಸ್ಕಿ ಕ್ಷೇತ್ರ ಮಾಡಲಾಗಿದೆ. ಸಿಂಧನೂರಿನಲ್ಲಿ ತುಂಗಭದ್ರೆ ಹರಿಯುತ್ತಾಳೆ, ಆ ಭಾಗ್ಯ ಮಸ್ಕಿ ಜನರಿಗಿಲ್ಲ. ಅವರು ಈಗ ಪಕ್ಕದಲ್ಲೇ ಹಾದು ಹೋಗುವ ಕೃಷ್ಣೆಯ ನೀರು ಕೇಳುತ್ತಿದ್ದಾರೆ. ಮುಖ್ಯವಾಹಿನಿ ಮಾಧ್ಯಮಕ್ಕೆ ಇದು ಒಂದು ಇಶ್ಯೂ ಆಗಲೇ ಇಲ್ಲ!

ಮಸ್ಕಿ ಮ್ಯಾಲ ದೊಡ್ಡ ಭಾರ

107 ಹಳ್ಳಿಗಳು ಅದರಲ್ಲೂ ಮುಖ್ಯವಾಗಿ 58 ಹಳ್ಳಿಗಳು ತಮ್ಮ ಭೂಮಿಗೆ ನೀರು ಬೇಕು ಅನ್ನುತ್ತಿವೆ. ಆದರೆ ಕೃಷ್ಣಾದಿಂದ ನೀರು ಕೊಡಲು ಆಗದು ಎಂದು ಅಧಿಕಾರಿಗಳು ಸಲ್ಲಿಸಿದ ವರದಿಯನ್ನೇ ಪ್ರತಾಪಗೌಡ ಪಾಟೀಲರು ಸತ್ಯ ಎಂದು ನಂಬಿದ್ದಾರೆ.

ಈಗ ಏನಾಗಿದೆ ಅಂದರೆ, ಮಸ್ಕಿಯ ಮೇಲೆ ಹಲವು ನೀರಾವರಿ ಪ್ರಾಜೆಕ್ಟ್ ಹೇರಲಾಗಿದೆ. ಇವೆಲ್ಲ ಕಾಟಾಚಾರದ ಯೋಜನೆಗಳು. ಬಜೆಟ್ ಅಲೊಕೇಷನ್ ಇಲ್ಲವೇ ಇಲ್ಲ! ಕೃಷ್ಣಾ ನದಿಯಿಂದ 17 ಕೆರೆ ತುಂಬಿಸುವ ಯೊಜನೆಯಲ್ಲಿ ಈಗ 87 ಕೋಟಿ ರೂ ಬಿಡುಗಡೆ ಆಗಿದೆ. ಅದು ಕಂಟ್ರಾಕ್ಟರ್‌ಗಳ ಪಾಲಾಗಿದೆ ಎಂಬ ದೊಡ್ಡ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ಮಸ್ಕಿ ಉಪಚುನಾವಣೆ: NRBC_5A ನೀರಾವರಿ ಹೋರಾಟ ಫಲಿತಾಂಶ ಬದಲಿಸಬಲ್ಲದೇ?

’58 ಹಳ್ಳಿಯ ಜನ 100 ದಿನದಿಂದ ಪ್ರತಿಭಟನೆ ಮಾಡ್ತಾ ತಮ್ಮ ಭೂಮಿಗೆ ನೀರು ಬೇಕು ಅಂತಾರಲ್ಲರಿ?’ ಎಂದು ನಾವು ಬಿಜೆಪಿ ಅಭ್ಯರ್ಥಿ ಪ್ರತಾಪಗೌಡರನ್ನು ಕೇಳಿದೆವು. ‘’ಹಂಗೆಲ್ಲ ನೀರ್ ಕೋಡೋಕ್ ಆಗಲ್ಲ. ಅದೊಂದು ಅವೈಜ್ಞಾನಿಕ ಯೋಜನಾ ಅದ.. ನಾವ್ ಜನ್ರಿಗೆ ತಿಳವಳಿಕೆ ಕೊಟ್ಟೀವಿ. ಅಲ್ಲಿ ಯಾರೋ ಸ್ವಲ್ಪ ಮಂದಿ ಸ್ಟ್ರೈಕ್ ಮಾಡಾಕ ಹತ್ಯಾರ’ ಎಂದರು.
ಅಲ್ಲ ನೀವು ಪರ್ಯಾಯದ ಬಗ್ಗೆ ವಿಚಾರನಾ ಮಾಡಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರತಾಪಗೌಡರು, ನಂದವಾಡಗಿ ನೀರಾವರಿ ಯೋಜನಾ ಅದ, ಕೋಟೆಕಲ್ ಬಸವಣ್ಣ ಏತ ನೀರಾವರಿ ಯೋಜನಾನೂ ಐತಿ, 500 ಕೋಟಿ ರೂ ಕೊಟ್ಟು ಕೆರೆ ತುಂಬಿಸ್ತಾ ಇದ್ದೀವಿ’ ಎಂದರು.

ಮಸ್ಕಿಯಲ್ಲಿ ಗುಳೆ ಸಮಸ್ಯೆ ವ್ಯಾಪಕವಾಗಿದೆ. ಇಲ್ಲಿನ ಎಸ್‌ಸಿ/ಎಸ್‌ಟಿ ಸಮುದಾಯದ ಜನರು ಕೂಲಿಗಾಗಿ ಬೆಂಗಳೂರು, ಮಂಗಳೂರು, ಗೋವಾ ಕಡೆ ವಲಸೆ ಹೋಗುವುದು ನಿತ್ಯದ ಕತೆಯೇ ಆಗಿದೆ.

ಆದರೆ ಗೆಜೆಟ್‌ನಲ್ಲಿ ಮಸ್ಕಿ ಭರಪೂರ ನೀರಾವರಿ ಆಗಿಬಿಟ್ಟಿದೆ.. ಅದನ್ನೆ ಪ್ರತಾಪಗೌಡ ಪಾಟೀಲರು ನಂಬಿದ್ದಾರೆ. ಜನ ಏನು ನಂಬುತ್ತಾರೆ ಎಂಬುವುದು ಚುನಾವಣಾ ಫಲಿತಾಂಶದಲ್ಲಿ ಗೋಚರವಾಗಲಿದೆ.

ಬಸವಕಲ್ಯಾಣ: ಆಟ ‘ಟಫ್’ ಇದೆ, ಬಟ್ ನಾರಾಯಣರಾವ್ ಸರಳತೆ ಚಾಲ್ತಿಗೆ ಬಂದಿದೆ!

ಆರಾಮಾಗಿ ಎತ್ತಿಕೊಳ್ಳಬಹುದಾದ ಈ ಕ್ಷೇತ್ರದಲ್ಲಿ ಬಿಜೆಪಿ ಸಿಕ್ಕಾಪಟ್ಟೆ ರೊಕ್ಕ ಹರಿಸಿಯೂ ನಿಟ್ಟುಸಿರು ಬಿಡ್ತಾ ಇದೆ, ಅದಕ್ಕೆ ಕಾರಣ ಮೃತ ಕಾಂಗ್ರಸ್ ಶಾಸಕ ನಾರಾಯಣರಾವ್ ಸರಳತೆ!
ಸದನದಲ್ಲಿ ಸಿಕ್ಕ ಒಂದೇ ಅವಕಾಶದಿಂದ ರೊಕ್ಕದ ರಾಜಕೀಯ, ಬಾಂಬೇ ಗಮ್ಮತ್ತು ಎಲ್ಲವನ್ನೂ ಬಟಾಬಯಲು ಮಾಡಿದ ನಾರಾಯಣರಾವ್ ಅವರ ಪತ್ನಿ ಈಗ ಕಾಂಗ್ರೆಸ್ ಅಭ್ಯರ್ಥಿ.

ಇದನ್ನೂ ಓದಿ: ಲಿಂಗಾಯಿತರು ನನಗೆ ಮತ ಕೊಡದಿದ್ದರೂ ಪರವಾಗಿಲ್ಲ, ಬಸವ ತತ್ವದ ಮೇಲೆ ನಡೆದರೆ ಸಾಕು: ಶಾಸಕ ಬಿ.ನಾರಾಯಣರಾವ್ 

ಬಿಜೆಪಿಯಿಂದ ನಿಂತಿರುವ ಶರಣು ಸದಲಗ ಕಲಬುರ್ಗಿ ಜಿಲ್ಲೆಯ ಮನುಷ್ಯ ಆಗಿರೋ ಕಾರಣ ಬೀದರ್‌ನ ಬಸವಕಲ್ಯಾಣದಲ್ಲಿ ಈಗ ಒಂದು ಅಪಸ್ವರ ಸಹಜವಾಗಿಯೇ ಎದ್ದಿದೆ.
ನಾರಾಯಣರಾವ್ ಸದನದಲ್ಲಿ ಮಾಡಿದ ಕೊನೆಯ ಭಾಷಣ ಈಗ ಫಲಿತಾಂಶವನ್ನು ನಿರ್ಧರಿಸುವ ಮಟ್ಟಕ್ಕೆ ಬಂದಿದೆ. ‘ಸಿದ್ರಾಮಯ್ಯ ಸಾಹೇಬ್ರು ಟಿಕೇಟ್ ಕೊಟ್ರು’ ಎಂಬ ನಾರಾಯಣರಾವ್ ಮಾತು ಈಗ ಜನಪ್ರಿಯವಾಗಿದ್ದು, ಅವರ ‘ಸಿದ್ರಾಮಯ್ಯ’ ——— ಕೂಡ ಈ ಕ್ಷೇತ್ರವನ್ನು ಸೀರಿಯಸ್ ಆಗಿ ಪರಿಗಣಿಸಿದ್ದಾರೆ ಎನ್ನಲಾಗಿದೆ.

ಹಾಗೆಯೇ ಬಿಜೆಪಿ ಸಂಸದ ಭಗವಂತ ಖೂಬಾರವರ ಪುತ್ರ ಮಲ್ಲಿಕಾರರ್ಜುನ ಖೂಬಾ ಟಿಕೆಟ್ ಸಿಗದೇ ಸಿಕ್ಕಾಪಟ್ಟೆ ಸಿಟ್ಟಾಗಿದ್ದಾರೆ. ನಾಳೆ ನಡೆಯುವ ಪ್ರೆಸ್‌ಮೀಟ್‌ನಲ್ಲಿ ಖೂಬಾ ತಮ್ಮ ಒಲವು ಯಾರ ಕಡೆ ಎಂದು ಘೋಷಣೆ ಮಾಡಲಿದ್ದಾರೆ.


ಇದನ್ನೂ ಓದಿ: ಸದನದಲ್ಲಿಂದು ಗಮನಸೆಳೆದ ಕಾಂಗ್ರೆಸ್ಸಿನ ಶಾಸಕ ಬಿ.ನಾರಾಯಣರಾವ್ ರವರ ಮಾತುಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ ವೀಕ್ಷಿಸುತ್ತಾ ಬೀದಿಯಲ್ಲಿ ತಿರುಗಾಡುವ ಯುವಕರ ಖಾತೆಗಳಿಗೆ ಹಣ...

0
"ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ಗಳನ್ನು ಬಳಸಿಕೊಂಡು ಬೀದಿಗಳಲ್ಲಿ ತಿರುಗುತ್ತಿರುವ ನಮ್ಮ ಯುವಕರ ಬ್ಯಾಂಕ್ ಖಾತೆಗಳಿಗೆ ವಾರ್ಷಿಕ ಒಂದು ಲಕ್ಷ ರೂಪಾಯಿ ಮತ್ತು ತಿಂಗಳಿಗೆ 8,500 ರೂಪಾಯಿಗಳನ್ನು ಜಮಾ ಮಾಡಲಾಗುತ್ತದೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ"...