Photo Courtesy: Deccan Herald

‘ರಾಷ್ಟ್ರೀಯ ಐಕ್ಯತೆ ಮತ್ತು ಪ್ರಾದೇಶಿಕ ಸ್ವಾತಂತ್ಯ್ರ’ ಎಂಬ ವಿಷಯದ ಬಗ್ಗೆ ನಡೆದ ವಿಚಾರದ ಸಂಕಿರಣದಲ್ಲಿ ಮಾತನಾಡುತ್ತಾ ಸಚಿವ ಜೆ.ಸಿ. ಮಾಧುಸ್ವಾಮಿ ಅವರು, ‘ಕೇಂದ್ರದಲ್ಲಿ ಸರ್ವಾಧಿಕಾರಿ ಧೋರಣೆ ಪ್ರಾರಂಭವಾಗಿದೆ’ ಎಂದು ಕೇಂದ್ರದ ಬಿಜೆಪಿ ಸರ್ಕಾರ ವಿರುದ್ದ ಹರಿಹಾಯ್ದಿದ್ದಕ್ಕೆ ಕಾಂಗ್ರೆಸ್ ಪಕ್ಷ ಅವರನ್ನು ಅಭಿನಂದಿಸಿದೆ.

“ಕೇಂದ್ರ ಬಿಜೆಪಿ ಸರ್ಕಾರದ ಸರ್ವಾಧಿಕಾರಿ ಧೋರಣೆಯನ್ನು ಬಹಿರಂಗವಾಗಿ ಒಪ್ಪಿ, ಖಂಡಿಸಿದ್ದಕ್ಕೆ ಮಾಧುಸ್ವಾಮಿಯವರಿಗೆ ಅಭಿನಂದನೆಗಳು! ರಾಜ್ಯಗಳ ಅಭಿಪ್ರಾಯಕ್ಕೆ ಮನ್ನಣೆ ನೀಡದೆ ರಾಜ್ಯಗಳ ವಿಷಯವಾದ ಕೃಷಿಗೆ ಸಂಬಂಧಿತ ಕಾಯ್ದೆಗಳನ್ನು ಹೇರಿ ರೈತರಿಗೆ ಮರಣ ಶಾಸನ ಬರೆಯುತ್ತಿದೆ ಕೇಂದ್ರ ಸರ್ಕಾರ. ‘ಹಿಂದಿ’ತ್ವ ಹೇರಿಕೆ & GST ತೆರಿಗೆ ಕಬಳಿಕೆಗಳು ರಾಜ್ಯಕ್ಕೆ ಮಾರಕ” ಎಂದು ಕಾಂಗ್ರೆಸ್ ಪಕ್ಷ ಟ್ವೀಟ್ ಮಾಡಿದೆ.

ಆದರೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಸಚಿವ ಮಾಧುಸ್ವಾಮಿಯವರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ಕರ್ನಾಟಕದ ನೆಲೆಯಲ್ಲಿ ಯೋಚಿಸಿದಾಗ ಹಳೆ ಮೈಸೂರು ಪ್ರಾಂತ್ಯ ಅಭಿವೃದ್ದಿಯಾಗಿದೆ. ಅದರೆ ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಹಿಂದುಳಿದಿವೆ. ಹಾಗಾಗಿ ನಾವು ಅವುಗಳಿಗೆ ಒತ್ತು ನೀಡಿದಂತೆ ಕೇಂದ್ರ ಸರ್ಕಾರವು ಸಹ ಹಿಂದುಳಿದ ಉತ್ತರ ಪ್ರದೇಶ, ಬಿಹಾರದಂತಹ ರಾಜ್ಯಗಳಿಗೆ ಒತ್ತು ನೀಡುವುದು ಸರಿಯಿದೆ” ಎಂದು ಸಮರ್ಥಿಸಿಕೊಂಡಿದ್ದಾರೆ.

ಮುಂದುವರಿದು, ದೇಶದ ಇತರ ರಾಜ್ಯಗಳಲ್ಲಿಯೂ ಸಹ ಹೋಗಿ ಕರ್ನಾಟಕದ ವಿದ್ಯಾರ್ಥಿಗಳು ಓದಬಹುದು ಎಂದು ನೀಟ್ ವ್ಯವಸ್ಥೆಯನ್ನು ಸಮರ್ಥಿಸಿಕೊಂಡು ಮಾಧುಸ್ವಾಮಿ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

“ಕೇಂದ್ರ ಸರ್ಕಾರದಲ್ಲಿ ಸರ್ವಾಧಿಕಾರಿ ಧೋರಣೆ ಪ್ರಾರಂಭವಾಗಿದ್ದು, ಒಕ್ಕೂಟಕ್ಕೆ ಬಹಳ ದೊಡ್ಡ ಆತಂಕ ಎದುರಾಗಿದೆ. ಬೆಳೆದಂತೆ ಉದಾರವಾದಿಗಳಾಗಬೇಕಾಗಿದ್ದ ನಾವು ಪ್ರಸ್ತುತ ಕೇಂದ್ರೀಕರಣ ಆಗುತ್ತಿದ್ದೇವೆ. ನೀಟ್ ಪರೀಕ್ಷಗೂ, ಕರ್ನಾಟಕಕ್ಕೂ ಏನ್‌ ಸಂಬಂಧವಿದೆ?” ಎಂದು ಮಾಧುಸ್ವಾಮಿ ನಿನ್ನೆ ಹೇಳಿದ್ದರು. ಅಲ್ಲದೇ ಪಕ್ಕದಲ್ಲೇ ಕೂತಿದ್ದ ಸಂಸದ ತೇಜಸ್ವಿ ಸೂರ್ಯ ಅವರಿಗೆ ನೀವಿದನ್ನು ಸಂಸತ್ತಿನಲ್ಲಿ ಕೇಳಬೇಕು ಎಂದು ಎಚ್ಚರಿಸಿದ್ದರು.

“ಕರ್ನಾಟಕದಲ್ಲಿ ಇರುವ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕನ್ನಡಿಗರಿಗೆ ಅವಕಾಶ ಇಲ್ಲ. ತುಮಕೂರಿನಲ್ಲಿ ಪ್ರಧಾನಿ ಉದ್ಘಾಟನೆ ಮಾಡಿದ ಫುಡ್ ಪಾರ್ಕ್, ಬೆಂಗಳೂರಿನಲ್ಲಿರುವ ಕಂಪನಿಗಳು.. ಹೀಗೆ ಎಲ್ಲಿಯೂ ಕನ್ನಡಿಗರಿಗೆ ಆದ್ಯತೆ ಇಲ್ಲ. ಜಾಗ, ಸೌಲಭ್ಯ ಎಲ್ಲವೂ ನಮ್ಮದಾದರೂ ಉದ್ಯೋಗ ಮಾತ್ರ ಬೇರೆಯವರಿಗೆ ಸೇರಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.


ಇದನ್ನೂ ಓದಿ: ‘ಸರ್ವಾಧಿಕಾರಿ ಧೋರಣೆ ಪ್ರಾರಂಭವಾಗಿದೆ’- ಕೇಂದ್ರದ ವಿರುದ್ದವೆ ಹರಿಹಾಯ್ದ ಸಚಿವ ಮಾಧುಸ್ವಾಮಿ

LEAVE A REPLY

Please enter your comment!
Please enter your name here