Homeಅಂಕಣಗಳುಕಾಫಿ ಬೆಳೆ ಮತ್ತು ಕಾರ್ಮಿಕರ ಜೀವನ; ಪ್ರಸಾದ್ ರಕ್ಷಿದಿ

ಕಾಫಿ ಬೆಳೆ ಮತ್ತು ಕಾರ್ಮಿಕರ ಜೀವನ; ಪ್ರಸಾದ್ ರಕ್ಷಿದಿ

ಈಗ ಮಾಲಿಕ-ಕಾರ್ಮಿಕ ಎರಡೂ ವರ್ಗಗಳಲ್ಲಿ ಹಳೆಯ ತಲೆಮಾರಿನ ಜನರು ತೀರ ಕಡಿಮೆಯಾಗಿದ್ದಾರೆ. ಎರಡೂ ಕಡೆಯ ಯುವ ಪೀಳಿಗೆ ಹೆಚ್ಚಿನ ಪಾಲು ನಗರ ಸೇರಿದೆ.

- Advertisement -
- Advertisement -

ಕಳೆದು ಹೋದ ದಿನಗಳು ಭಾಗ -2, ಅಧ್ಯಾಯ -19

ಕಾಫಿ ವಲಯದ ಈ ಸಂಕಥನ ಪ್ರಾರಂಭವಾಗುವುದು ಸುಮಾರು 1850ರ ಕಾಲದಿಂದ. ಅಂದರೆ ಬ್ರಿಟಿಷರು ಪ್ಲಾಂಟೇಷನ್ ಕೃಷಿಗೆ ತೊಡಗಿದ ಸಮಯದಿಂದ. ಒಂದು ಶತಮಾನಕ್ಕೂ ಹೆಚ್ಚು ಕಾಲ ಇಲ್ಲಿನ ಜನಜೀವನ ಆನೆ ನಡಿಗೆಯಲ್ಲಿತ್ತು. ಆನೆ ಹೋದದ್ದೇ ದಾರಿಯೆಂಬ ಮಾತಿದೆ. ಹೌದು ಬ್ರಿಟಿಷರಿಗೂ ಅವರನ್ನು ಅನುಸರಿಸಿದವರಿಗೂ ಇಲ್ಲಿ ನಡೆದದ್ದೇ ದಾರಿಯಾಗಿತ್ತು. ಆನೆ ನಡಿಗೆಯಲ್ಲಿ ಒಂದು ಗಾಂಭೀರ್ಯವಿದೆ, ನೋಡುವವರ ಕಣ್ಣಿಗೆ ಅಚ್ಚರಿ ಸಂತಸವಿದೆ. ಆದರೆ ಆನೆಯ ಕಾಲಡಿಯಲ್ಲಿ ಸಿಕ್ಕಿ ಅಪ್ಪಚ್ಚಿಯಾಗುವ ಅಸಂಖ್ಯಾತ ಜೀವಿಗಳ ಬದುಕೂ ಇದೆ. ಇದು ಪ್ರಕೃತಿ ಸಹಜ ಎನ್ನಬಹುದು. ಆನೆಯ ವಿಚಾರದಲ್ಲಿ ಅದು ಸಹಜ, ಅದರೆ ಅನೆಯಂತೆ ನಡೆದ ಮನುಷ್ಯನ ಅಡಿಯಲ್ಲಿ ನೂರಾರು ಕುಟುಂಬಗಳು ನಲುಗಿವೆ, ನಾಶವಾಗಿವೆ. ರೋಗ ರುಜಿನಗಳಿಗೆ ತುತ್ತಾಗಿವೆ. ಅಕ್ಷರಶಃ ಸಂಕೋಲೆಯೊಳಗಿನ ಜೀತದಾಳುಗಳಾಗಿ ಅನಾಮಿಕರಾಗಿ ಸತ್ತವರ ನಿಟ್ಟುಸಿರಿದೆ. (1983ರಲ್ಲಿ ನಮ್ಮ ತಂಡ ಅನಾಮಿಕರು ಎಂಬ ನಾಟಕವನ್ನೂ ಪ್ರದರ್ಶಿಸಿತ್ತು). ಬ್ರಿಟಿಷ್ ಸಾಮ್ರಾಜ್ಯಶಾಹಿ ಮತ್ತು ಸ್ಥಳೀಯ ಪಾಳೆಗಾರಿ ದಬ್ಬಾಳಿಕೆ ಮತ್ತು ಕ್ರೌರ್ಯ ನಿರಂತರವಾಗಿ ಕಾರ್ಮಿಕರ ಮೇಲೆ ನಡೆದಿತ್ತು. ಕೂಲಿ ಮತ್ತು ಸವಲತ್ತುಗಳಲ್ಲಿ ವಂಚನೆ ಸಾಮಾನ್ಯ ಸಂಗತಿಯಾಗಿತ್ತು. ಎಷ್ಟೋ ಕಡೆಗಳಲ್ಲಿ ಕೆಲಸಗಾರರನ್ನು ಕೂಡಿಹಾಕಿ ಹೊಡೆಯಲೆಂದೇ ಪ್ರತ್ಯೇಕ ಕೊಠಡಿಗಳಿದ್ದವು! ಅವರು ತಪ್ಪಿಸಿಕೊಂಡು ಹೋಗುವುದು ಕೂಡಾ ಸುಲಭವಿರಲಿಲ್ಲ. ತಪ್ಪಿಸಿಕೊಂಡು ಹೋದವರು ಕೂಡಾ ಇನ್ನೊಂದು ಸ್ಥಳದಲ್ಲಿ ಬೇರೆಯದೇ ಹೆಸರಿನಲ್ಲಿ ಬದುಕಬೇಕಾಗಿತ್ತು.

ಆ ನಂತರದ ದಿನಗಳಲ್ಲಿ ಹಲವು ಕಾರ್ಮಿಕ ಸಂಘಟನೆಗಳು ಪ್ರಾರಂಭವಾದವು. ಎಡ ಪಕ್ಷಗಳಲ್ಲದೆ ಕಾಂಗ್ರೆಸ್ ಪಕ್ಷದ ಕಾರ್ಮಿಕ ಸಂಘಟನೆಯಾದ ಐಟಕ್ ಕೂಡಾ ಪ್ರಬಲವಾಗಿಯೇ ಬೆಳೆಯಿತು. ಬೆಳೆಗಾರರ ಸಂಘಟನೆಗಳಾದ ಉಪಾಸಿ, ಕರ್ನಾಟಕ ಬೆಳೆಗಾರರ ಒಕ್ಕೂಟ ಮುಂತಾದವರ ಜೊತೆ ಕುಳಿತು ಮಾತುಕತೆ ಚೌಕಾಸಿ ಮಾಡುವ ಹಂತಕ್ಕೆ ಇವು ಬೆಳೆದವು. ಸರ್ಕಾರವೂ ಅನಿವಾರ್ಯವಾಗಿ ಹಲವು ಕಾರ್ಮಿಕ ಕಾನೂನು ಮತ್ತು ಕಲ್ಯಾಣ ಯೋಜನೆಗಳನ್ನು ರೂಪಿಸಿತು. ಇದೆಲ್ಲದರಿಂದ ದೊಡ್ಡ ಪ್ರಮಾಣದಲ್ಲಿ ಅಲ್ಲದಿದ್ದರೂ ಸಂಘಟಿತ ವಲಯದ ಕಾರ್ಮಿಕರಿಗೆ ಒಂದಷ್ಟು ಪ್ರಯೋಜನ ದೊರಕಿತು.

ಕಾರ್ಮಿಕರು, ಮಕ್ಕಳು ಎಪ್ಪತ್ತರ ದಶಕದಲ್ಲಿ

ಬಹುಶಃ ಕನ್ನಡ ಸಾಹಿತ್ಯದಲ್ಲಿ ಈ ವಿಚಾರದಲ್ಲಿ ಅಲ್ಪಸ್ವಲ್ಪ ವಿವರಣೆಗಳು ಸಿಗುವುದು ಕಾರಂತರ ಚೋಮನದುಡಿಯಲ್ಲಿ ಮತ್ತು ಭಾರತೀಸುತರ ಹುಲಿಬೋನು ಕಾದಂಬರಿಯಲ್ಲಿ. ತೇಜಸ್ವಿ ಇದೇ ಪ್ರದೇಶದಲ್ಲಿ ನೆಲೆಸಿದರೂ ಅವರ ಕಾದಂಬರಿಗಳ, ಸಾಹಿತ್ಯದ ಹರಹು ಮತ್ತು ಲೋಕ ಬೇರೆಯದು.

ಈ ಕಾರಣದಿಂದ ಅಂತಹ ಬದುಕನ್ನು ಸಹನೀಯಗಳಿಸಲು ಪ್ರಯತ್ನಿಸಿದ ಕೆಲವರ ಬದುಕಿನ ವಿವರಗಳನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ. ಈ ಕೆಲವೇ ಕೆಲವು ಜನರೂ ಕೂಡಾ ಒಟ್ಟೂ ಸಮಾಜದಲ್ಲಿ ಆ ಕಾಲದಲ್ಲಿ ಉಳಿದವರಿಂದ ಹೆಚ್ಚು ಸಹಕಾರವನ್ನು ಪಡೆದಿರಲಿಲ್ಲ. ಅಂದಿನ ಬಹುತೇಕ ಇತರ ಬೆಳೆಗಾರರರು. ಇಂಥವರನ್ನು ಪ್ರಚಾರ ಪ್ರಿಯರೆಂದೋ, ರಾಜಕೀಯ ಮಾಡುತ್ತ ಆಳುಗಳನ್ನು ಎತ್ತಿಕಟ್ಟುತ್ತಿದ್ದಾರೆಂದು ದೂರುತ್ತಿದ್ದರು. ಕಾರ್ಮಿಕ ವಲಯದಲ್ಲಿ ಇವರ ಕೆಲಸಗಳಿಂದ ಅನುಕೂಲ ಪಡೆದವರು ಕೂಡಾ ಏನೋ ಒಂದು ಬಗೆಯ ಅನುಮಾನ ಮತ್ತು ಹಿಂಜರಿಕೆಗಳಿಂದಲೇ ಇದ್ದರು.

ಶಿವರಾಮ ಕಾರಂತರು ಸಂದರ್ಶನವೊಂದರಲ್ಲಿ ಮಾತನಾಡುತ್ತ, ಚೋಮನ ದುಡಿಯ ಕಾಲದ ದಲಿತರ ಸ್ಥಿತಿ ಹಾಗೆಯೇ ಉಳಿದಿದೆ. ಅಲ್ಲೊಬ್ಬ ಇಲ್ಲೊಬ್ಬ ದಲಿತರು ಕೃಷಿಕರಾಗಿರಬಹುದು, ಆದರೆ ಒಟ್ಟಾರೆಯಾಗಿ ದಲಿತರು ಕೃಷಿಕರಾಗಿಲ್ಲ ಎಂದಿದ್ದರು. ಸರ್ಕಾರಗಳಾಗಲೀ ಇತರ ಸಂಘಟನೆಗಳಾಗಲೀ ದಲಿತರಿಗೆ ಭೂಮಿ ಕೊಡಿಸುವ ಪ್ರಯತ್ನವನ್ನು ಒಂದು ಚಳುವಳಿಯನ್ನಾಗಿ ಮಾಡಲೇ ಇಲ್ಲ. ಈ ಹಿನ್ನೆಲೆಯಲ್ಲಿ ಗಣಪಯ್ಯನಂತರವರ ಕೆಲವು ಬಿಡಿ ಬಿಡಿಯಾದ ಪ್ರಯತ್ನಗಳು ಕೂಡಾ ಬಹಳ ಮುಖ್ಯವೆನಿಸುತ್ತದೆ.

ಆದರೆ ಇಷ್ಟು ವರ್ಷಗಳ ಬಳಿಕ ಈ ಎಲ್ಲರ ಕೆಲಸಗಳು ಮಾಡಿದ ಒಟ್ಟು ಪರಿಣಾಮ ಅದ್ಭುತವೆನಿಸಿದೆ. ಮತ್ತು ಈ ಬರಹಕ್ಕೆ ಅಂದಿನ ಕಾಲವನ್ನು ಬಲ್ಲ ಜನಸಾಮಾನ್ಯರಿಂದ ಬರುತ್ತಿರುವ ಪ್ರತಿಕ್ರಿಯೆಗಳೇ ಸಾಕ್ಷಿಯಾಗಿದೆ.

ದೇಶಕ್ಕೆ ಸ್ವಾತಂತ್ರ್ಯ ಬಂದರೂ ಸುಮಾರಾಗಿ ಎಪ್ಪತ್ತರ ದಶಕದವರೆಗೂ ಇಲ್ಲಿನ ಬದುಕು ಇದೇ ರೀತಿ ಮುಂದುವರೆಯಿತು. ನಂತರ ಒಂದಷ್ಟು ಬದಲಾವಣೆಗಳು ಬಂದವು. ಇಲ್ಲಿನ ಬದುಕು ವೇಗವನ್ನೂ ಹಲವು ತಿರುವುಗಳನ್ನು ಪಡೆಯಿತು. ಈ ಬದಲಾವಣೆಗಳು ದುಡಿಯುವವರಿಗೆ ಒಂದಷ್ಟು ಆರ್ಥಿಕ ಮತ್ತು ಸಾಮಾಜಿಕ ನೆಮ್ಮದಿಯನ್ನು ತಂದದ್ದೂ ನಿಜ. ಆದರೆ ಈ ಬದಲಾವಣೆಗಳು ಮತ್ತು ದೊರಕಿದ ವಿದ್ಯೆ ಬೇರೆಯೇ ಪರಿಣಾಮಗಳನ್ನು ಬೀರಿತು.

ಈಗ ಮಾಲಿಕ-ಕಾರ್ಮಿಕ ಎರಡೂ ವರ್ಗಗಳಲ್ಲಿ ಹಳೆಯ ತಲೆಮಾರಿನ ಜನರು ತೀರ ಕಡಿಮೆಯಾಗಿದ್ದಾರೆ. ಎರಡೂ ಕಡೆಯ ಯುವ ಪೀಳಿಗೆ ಹೆಚ್ಚಿನ ಪಾಲು ನಗರ ಸೇರಿದೆ. ಎಷ್ಟೋ ತೋಟಗಳ ಒಡೆಯರು ಮಾರಾಟಮಾಡಿ ನಗರ ಸೇರಿದ್ದಾರೆ ಇಲ್ಲವೇ ಇರುವ ವಿಸ್ತೀರ್ಣವನ್ನು ಕಡಿಮೆ ಮಾಡಿಕೊಂಡಿದ್ದಾರೆ. ಹೊರಗಿನಿಂದ ನಾನಾ ಉದ್ಯಮಿಗಳು ಮತ್ತು ರಾಜಕಾರಣಿಗಳು ಇಲ್ಲಿಗೆ ಬಂದು ತೋಟಗಳನ್ನು ಕೊಂಡಿದ್ದರೂ, ಅದಕ್ಕೆ ನಾನಾ ಉದ್ದೇಶಗಳಿವೆ. ಬರಿಯ ಕೃಷಿಯನ್ನೇ ನಂಬಿ ಬದುಕುವವರ ಸ್ಥಿತಿ ಮಾತ್ರ ಕಷ್ಟದ್ದಾಗಿದೆ.

ಗುಮ್ಮಿಗಳೆಂದು ಕರೆಯಲಾಗುತ್ತಿದ್ದ ಲೈನ್ ಮನೆಗಳು

ಇಲ್ಲಿಗೆ ಬರುತ್ತಿರುವ ಅಭಿವೃದ್ಧಿ ಯೋಜನೆಗಳೆಲ್ಲವೂ ಬೇರೆ ಪ್ರದೇಶಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದ್ದಾಗಿವೆ. ಜಲವಿದ್ಯುತ್, ರಸ್ತೆ, ನದೀ ತಿರುವು, ರೈಲ್ವೆ ಎಲ್ಲದರ ಎಲ್ಲ ರೀತಿಯ ಲಾಭ ಪಡೆಯುತ್ತಿರುವವರು ಹೊರಗಿನವರು. ಈಗ ಪ್ರವಾಸೋದ್ಯಮದ ಹೆಸರಿನಲ್ಲಿ ಸರ್ಕಾರ ಹೋಮ್ ಸ್ಟೇಗಳಿಗೆ ಹೆಚ್ಚು ಹೆಚ್ಚು ಉತ್ತೇಜನ ನೀಡುತ್ತಿದೆ. ಇದರಿಂದ ಮಲೆನಾಡಿನಲ್ಲಿ ಉದ್ಯೋಗ ಮತ್ತು ಹಣದ ಹರಿವು ಹೆಚ್ಚಿರುವುದು ನಿಜ. ಆದರೆ ಅನೇಕ ಸಾಮಾಜಿಕ ಸಮಸ್ಯೆಗಳನ್ನೂ ತಂದೊಡ್ಡಿದೆ. ಜೊತೆಗೆ ಪಶ್ಚಿಮಘಟ್ಟಗಳು ಕಸದ ತೊಟ್ಟಿಯಾಗುತ್ತಿವೆ.

ಪ್ರಾಣಿಗಳಿಗೆ ತಾಣವೇ ಇಲ್ಲದೆ ಅಂಡಲೆಯುವ ಸ್ಥಿತಿ ನಿರ್ಮಾಣವಾಗಿರುವುದರಿಂದ ಅವುಗಳು ನಿರಂತರ ದಾಳಿ ಮಾಡುತ್ತಿದ್ದು ಕೃಷಿ ಅಸಾಧ್ಯವೆನ್ನಿಸುವಷ್ಟು ತೊಂದರೆಯಾಗುತ್ತಿದೆ.

ಅಭಿವೃದ್ಧಿ ಯೋಜನೆಗಳಿಗೆಂದು ಒಂದಷ್ಟು ನೆಲ ಉದ್ಯಮಿಗಳ ಪಾಲಾದರೆ ಕೃಷಿ ಅಸಾಧ್ಯವಾಗಿ ಮಾರಾಟವಾಗುತ್ತಿರುವ ಜಮೀನೂ ದೊಡ್ಡ ಪ್ರಮಾಣದಲ್ಲಿಯೇ ಇವೆ.

ಅಲ್ಲೆಲ್ಲ ತೋಟಗಳ ನಡುವೆ, ಗೇಟೆಡ್ ಕಮ್ಯೂನಿಟಿಗಳೆಂಬ ಶ್ರೀಮಂತರ ಗುಂಪು ವಸತಿಗಳು ನಿರ್ಮಾಣವಾಗುತ್ತಿವೆ.

ಮುಂದಿನ ದಿನಗಳು ಕಾಫಿ ವಲಯ ಇನ್ನಷ್ಟು ಬದಲಾವಣೆಯಾಗಲಿದೆ. ಮತ್ತು ಇಲ್ಲಿನ ಸಾಂಸ್ಕೃತಿಕ ಸಾಮಾಜಿಕ ಸ್ವರೂಪವನ್ನು ನಿರ್ಧರಿಸುವ ಶಕ್ತಿಗಳೂ ಬದಲಾಗಲಿವೆ.

ಸದ್ಯಕ್ಕಂತೂ ಕಾಫಿ ವಲಯ ಪ್ರವಾಸೋದ್ಯಮದ ಹೆಸರಿನಲ್ಲಿ ರೆಸಾರ್ಟ್ ಮತ್ತು ಹೋಮ್ ಸ್ಟೇ ಗಳಿಂದ ತುಂಬಿದೆ. ಅವುಗಳೇ ಈಗ ಈ ಪ್ರದೇಶಕ್ಕೆ ಕೋಟ್ಯಂತರ ರೂಪಾಯಿ ಹಣವನ್ನು ತರುತ್ತಿದೆಯಲ್ಲದೆ, ಸಾವಿರಾರು ಜನರಿಗೆ ಉದ್ಯೋಗವನ್ನೂ ಕೊಟ್ಟಿದೆ ಎನ್ನುವುದನ್ನೂ ನಾವು ಮರೆಯಬಾರದು.

ಕಾರ್ಮಿಕರ ಸಾಲು ಮನೆಗಳು

ಒಂದು ಒಳ್ಳೆಯ ಸೃಜನಶೀಲತೆಯ ಮತ್ತು ಚೇತೋಹಾರಿಯಾದ ಉದ್ಯೋಗವಾಗಬಹುದಾದ ಪರಿಸರ ಪ್ರವಾಸೋದ್ಯಮವನ್ನು ಕುರೂಪಿ ಮತ್ತು ಪರಿಸರ ವಿರೋಧಿಯೂ ಆಗಿ ಮಾರ್ಪಡಿಸಿಕೊಂಡವರೂ ನಾವೇ…. ಈ ವಿಚಾರದಲ್ಲಿ ಇತರ ಹಲವಾರು ಸಣ್ಣ ಸಣ್ಣ ದೇಶಗಳಿಂದ ನಾವು ಕಲಿಯುವಂಥದ್ದು ತುಂಬಾ ಇದೆ.

ಆಹಾರದ ಕೊರತೆಯಾಯಿತೆಂದು ನೂರಾರು ತರದ ರಾಸಾಯನಿಕ, ವಿಷ ಸುರಿದು ಆಹಾರ ಬೆಳೆದು ತಿಂದು  ನೂರಾರು ರೋಗಗಳನ್ನು ಆವಾಹಿಸಿಕೊಂಡು ಪ್ರತಿವರ್ಷ ಲಕ್ಷಾಂತರ ರೂಪಾಯಿ ಔಷಧಿ ತಿನ್ನುವ ಸ್ಥಿತಿಯಂತೆಯೇ ಮಲೆನಾಡಿನ ಆರ್ಥಿಕತೆಯೂ ಆಗಿದೆ.

ಇದರಲ್ಲಿ ನಮ್ಮ ಪಾಲಿಲ್ಲವೇ ಖಂಡಿತ ಇದೆ. ಆದರೆ ನಮ್ಮದು ಒಂದು ಪಾಲಾದರೆ ಉಳಿದ ಮೂರು ಪಾಲು ನಿರಂತರವಾಗಿ ನಮ್ಮನ್ನು ಆಳಿದವರದ್ದೇ ಆಗಿದೆ.

ಗಣಪಯ್ಯನವರು ನಡಹಳ್ಳಿಯಲ್ಲಿ ಪ್ರಥಮವಾಗಿ ಮಾಡಿದ,ದಲಿತರ ಸಹಕಾರಿ ಕಾಫಿ ಪ್ಲಾಂಟೇಷನ್ ನಲ್ಲಿ.

ನಗರಗಳ ಬಕಾಸುರ ಹಸಿವೆಯನ್ನು ಹಿಂಗಿಸಲು ನಾವು ತೆರುತ್ತಿರುವ ದಂಡ ಬಹಳ ದೊಡ್ಡದು.

  • ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)

ಕಳೆದುಹೋದ ದಿನಗಳು ಹಿಂದಿನ ಅಂಕಣಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


ಇದನ್ನೂ ಓದಿ: ಕಾಫಿ ಭಾರತಕ್ಕೆ ಬಂದ ಕತೆ: ಕಳೆದು ಹೋದ ದಿನಗಳು ಭಾಗ -2, ಅಧ್ಯಾಯ -18

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...