ಯುಪಿ ಚುನಾವಣೆ: 10 ಲಕ್ಷ ರೂ.ವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ ಘೋಷಿಸಿದ ಪ್ರಿಯಾಂಕಾ ಗಾಂಧಿ
PC: REUTERS

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮತ್ತೊಂದು ಚುನಾವಣಾ ಭರವಸೆ ನೀಡಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ತಮ್ಮ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದರೆ ರಾಜ್ಯದ ಜನರಿಗೆ 10 ಲಕ್ಷ ರೂಪಾಯಿಗಳವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಲಾಗುವುದು ಎಂದು ಸೋಮವಾರ ಘೋಷಿಸಿದ್ದಾರೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮತ್ತು 20 ಲಕ್ಷ ಜನರಿಗೆ ಉದ್ಯೋಗ ಸೇರಿದಂತೆ ಏಳು ಭರವಸೆಗಳೊಂದಿಗೆ ಪಕ್ಷದ “ಪ್ರತಿಜ್ಞಾ ಯಾತ್ರೆ” ಯನ್ನು ಶನಿವಾರ ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯಿಂದ ಪ್ರಿಯಾಂಕಾ ಗಾಂಧಿ ಆರಂಭಿಸಿದ್ದಾರೆ.

ಈ ಹಿಂದೆ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ 40% ದಷ್ಟು ಟಿಕೆಟ್ ನೀಡುವುದಾಗಿಯೂ, 12 ನೇ ತರಗತಿ ಉತ್ತೀರ್ಣರಾದ ಹುಡುಗಿಯರಿಗೆ ಸ್ಮಾರ್ಟ್‌ಫೋನ್ ಮತ್ತು ಎಲ್ಲಾ ಪದವೀಧರ ಯುವತಿಯರಿಗೆ ಎಲೆಕ್ಟ್ರಾನಿಕ್ ಸ್ಕೂಟಿ ನೀಡುತ್ತೇವೆ ಎಂದು ಘೋಷಿಸಿದ್ದರು.

ಇದನ್ನೂ ಓದಿ: ಯುಪಿಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಿದರೆ ಪದವಿ ವಿದ್ಯಾರ್ಥಿನಿಯರಿಗೆ ‘ಸ್ಕೂಟಿ’: ಪ್ರಿಯಾಂಕ ಗಾಂಧಿ ಮತ್ತೊಂದು ಘೋಷಣೆ

“ಕೊರೊನಾ ಅವಧಿಯಲ್ಲಿ ಮತ್ತು ಈಗ ಹರಡುತ್ತಿರುವ ನಿಗೂಢ ಜ್ವರದ ಸಮಯದಲ್ಲಿ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಯುಪಿಯ ಆರೋಗ್ಯ ವ್ಯವಸ್ಥೆ ಶಿಥಿಲ ಸ್ಥಿತಿಯನ್ನು ತಲುಪಿರುವುದನ್ನು ಎಲ್ಲರೂ ನೋಡಿದ್ದಾರೆ. ಹೀಗಾಗಿ ಉತ್ತಮ ಮತ್ತು ಅಗ್ಗದ ಚಿಕಿತ್ಸೆಯನ್ನು ನೀಡಲು ಪ್ರಣಾಳಿಕೆ ಸಮಿತಿಯ ಒಪ್ಪಿಗೆಯೊಂದಿಗೆ, ಯುಪಿಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ನಮ್ಮ ಸರ್ಕಾರವು ಯಾವುದೇ ರೋಗದ ಚಿಕಿತ್ಸೆಗಾಗಿ 10 ಲಕ್ಷ ರೂ.ಗಳನ್ನು ನೀಡಲಿದೆ” ಎಂದು ಪ್ರಿಯಾಂಕಾ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ಪಕ್ಷವು ಗೋಧಿ ಮತ್ತು ಭತ್ತವನ್ನು ಕ್ವಿಂಟಲ್‌ಗೆ 2,500 ರೂ.ಗೆ ಖರೀದಿಸುವುದು ಮತ್ತು ಕಬ್ಬಿಗೆ ಕ್ವಿಂಟಲ್‌ಗೆ 400 ರೂ. ನೀಡುವುದಾಗಿಯೂ ಘೋಷಿಸಿದೆ.

20 ಲಕ್ಷ ಜನರಿಗೆ ಉದ್ಯೋಗದ ಭರವಸೆ, ಎಲ್ಲರ ವಿದ್ಯುತ್ ಬಿಲ್ ಅನ್ನು ಅರ್ಧದಷ್ಟು ಕಡಿಮೆ ಮಾಡುವುದು ಮತ್ತು ಕೋವಿಡ್ ಬಿಕ್ಕಟ್ಟಿನ ನಡುವೆ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಕುಟುಂಬಗಳಿಗೆ 25,000 ರೂಪಾಯಿ ಪರಿಹಾರ ನಿಡುವುದಾಗಿಯೂ ಘೋಷಿಸಿದೆ. 2022ರ ಆರಂಭದಲ್ಲಿ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ನಿಗದಿಯಾಗಿದೆ.


ಇದನ್ನೂ ಓದಿ: ಠೇವಣಿಯನ್ನೂ ಉಳಿಸಿಕೊಳ್ಳಲಾಗದ ಕಾಂಗ್ರೆಸ್‌ಗೆ ಕ್ಷೇತ್ರ ಬಿಟ್ಟು ಕೊಡಬೇಕಿತ್ತೆ?: ಲಾಲು

LEAVE A REPLY

Please enter your comment!
Please enter your name here