ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಗಣನೀಯವಾಗಿ ಇಳಿಕೆಯಾಗಿದೆ. ಆದರೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೋದಿ ಸರಕಾರದ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.
ಕಚ್ಚಾ ತೈಲ ಬೆಲೆಗಳು 19 ತಿಂಗಳುಗಳಲ್ಲಿ 31% ರಷ್ಟು ಕುಸಿದಿದೆ. ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಅನಿಯಂತ್ರಿತ ಲಾಭಕೋರತನಕ್ಕೆ ಅವಕಾಶ ಮಾಡಿಕೊಟ್ಟಿದೆ. ಇದರಿಂದಾಗಿ ಕಚ್ಚಾ ತೈಲ ಬೆಲೆಗಳು ಇಳಿದರೂ ಸಾರ್ವಜನಿಕರಿಗೆ ಪರಿಹಾರವಾಗಿ ಇಂಧನಗಳ ಬೆಲೆಯನ್ನು ಇಳಿಕೆ ಮಾಡಲಾಗಿಲ್ಲ. ಇದರ ಪ್ರಯೋಜನವನ್ನು ಸಾರ್ವಜನಿಕರಿಗೆ ವರ್ಗಾಯಿಸುತ್ತಿಲ್ಲ. ತೈಲ ಕಂಪನಿಗಳೊಂದಿಗೆ ಬೆಲೆ ಇಳಿಕೆಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಸ್ವತಃ ಸಚಿವರೇ ಒಪ್ಪಿಕೊಳ್ಳುತ್ತಾರೆ. ತೈಲ ಕಂಪನಿಗಳು ಪ್ರತಿ ಲೀಟರ್ ಪೆಟ್ರೋಲ್‌ಗೆ ಸಾರ್ವಜನಿಕರಿಂದ 8 ರಿಂದ 10 ಮತ್ತು ಡೀಸೆಲ್‌ನಿಂದ 3 ರಿಂದ 4 ರೂ. ಲಾಭವನ್ನು ಗಳಿಸುತ್ತಿವೆ ಎಂದು ಹೇಳಿದ್ದಾರೆ.
ಸಾರ್ವಜನಿಕ ಉಳಿತಾಯವು 50 ವರ್ಷಗಳಲ್ಲಿ ಅತ್ಯಂತ ಕಡಿಮೆಯಾಗಿದೆ. ದೇಶವು ಭ್ರಮನಿರಸನಗೊಂಡಿದೆ, ಸುಳ್ಳು ಭರವಸೆಗಳು ಮತ್ತು ಪೊಳ್ಳು ಜಾಹೀರಾತುಗಳ ಮೂಲಕ ಬಿಜೆಪಿ ಭರವಸೆ ನೀಡಿದ ಅಚ್ಛೇ ದಿನ್‌ನ್ನು ಹುಡುಕುತ್ತಿದ್ದೇವೆ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ.
ದೆಹಲಿಯಲ್ಲಿ ಪೆಟ್ರೋಲ್ ಬೆಲೆ 96.72ರೂ ಮತ್ತು ಡೀಸೆಲ್ ದರ 89.62ರೂ ಇದೆ. ಮುಂಬೈ, ಬೆಂಗಳೂರಿನಂತಹ ನಗರಗಳಲ್ಲಿ ಇಂಧನ ಬೆಲೆ 100ರ ಗಡಿ ದಾಟಿದೆ. ಕಚ್ಚಾ ತೈಲದ ಪ್ರಸ್ತುತ ಜಾಗತಿಕ ಬೆಲೆ ಗುರುವಾರ ಪ್ರತಿ ಬ್ಯಾರೆಲ್‌ಗೆ 6,016 ರಷ್ಟಿದ್ದು, 1.93% ನಷ್ಟು ಕುಸಿತವನ್ನು ಕಂಡಿದೆ. ಈ ಬಗ್ಗೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಯಾವುದೇ ಸ್ಪಷ್ಟನೆಯನ್ನು ಈವೆರೆಗೆ ನೀಡಿಲ್ಲ.
ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಮಾತನಾಡಿ, ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳು ಮುಖ್ಯವಾಗಿ ಭೌಗೋಳಿಕ ರಾಜಕೀಯ ಕಾರಣಗಳಿಂದ ಏರಿಳಿತಗಳು ಕಾಣುತ್ತಿದೆ. ಮತ್ತು ಲಭ್ಯತೆ ಮತ್ತು ದರಗಳ ಮೇಲೆ ದೇಶದ ಇಂಧನ ಭದ್ರತೆಯನ್ನು ಖಚಿತಪಡಿಸುವುದು ಸರ್ಕಾರದ ಗಮನವಾಗಿದೆ. ಕೆಂಪು ಸಮುದ್ರ ಮತ್ತು ಸೂಯೆಜ್ ಕಾಲುವೆಯ ಮೂಲಕ ಅತ್ಯಂತ ಅನುಕೂಲಕರ ಹಡಗು ಮಾರ್ಗಗಳಲ್ಲಿ ನಡೆಯುತ್ತಿರುವ ಸಂಘರ್ಷಗಳಿಂದಾಗಿ, ದಿನಕ್ಕೆ ಸುಮಾರು 8.2 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲ ಸಾಗಣೆಗೆ ತೊಂದರೆಯಾಗಿದೆ ಎಂದು ಹೇಳಿದ್ದಾರೆ.
ಭಾರತವು 87% ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಸೆಪಟ್ಟಂಬರ್ 2023ಕ್ಕೆ ಹೋಲಿಕೆ ಮಾಡಿದರೆ ಡಿಸೆಂಬರ್‌ನಲ್ಲಿ ಕಚ್ಚಾ ತೈಲದ ಸರಾಸರಿ ಆಮದು ವೆಚ್ಚದಲ್ಲಿ 17% ಕುಸಿತವನ್ನು ಕಂಡಿದೆ. ಜಾಗತಿಕ ಕಚ್ಚಾ ತೈಲ ದರಗಳ ಕುಸಿತದ ಹೊರತಾಗಿಯೂ, ಭಾರತದ ಪ್ರಮುಖ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಇಂಡಿಯನ್ ಆಯಿಲ್ ಕಾರ್ಪ್ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪ್ (ಬಿಪಿಸಿಎಲ್), ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪ್ (ಎಚ್‌ಪಿಸಿಎಲ್) ಗಮನಾರ್ಹ ಲಾಭವನ್ನು ಗಳಿಸಿದೆ. ಆದರೆ ಸಾರ್ವಜನಿಕರಿಗೆ ತೈಲ ಬೆಲೆ ಇಳಿಕೆ ಮಾಡಲಾಗಿಲ್ಲ.
ಇದನ್ನು ಓದಿ: ಹೆಚ್ಚಿದ ನಿರುದ್ಯೋಗ: 15 ಹುದ್ದೆಗಳಿಗೆ 25,000ಕ್ಕೂ ಅಧಿಕ ಮಂದಿ ಅರ್ಜಿ ಸಲ್ಲಿಕೆ


