ಕರ್ನಾಟಕವು ಮೇಕೆದಾಟು ಬಳಿ ಸಮನಾಂತರ ಜಲಾಶಯ ನಿರ್ಮಿಸುವ ಯೋಜನೆಯನ್ನು ತಮಿಳುನಾಡಿನ ಹಲವರು ವಿರೋಧಿಸಿರುವುದು ನಮಗೆಲ್ಲಾ ಗೊತ್ತಿದೆ. ಆದರೆ ಈ ಯೋಜನೆಗೆ ಕರ್ನಾಟಕದ ಶಾಸಕ, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ ರವಿ ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ!
ಆಗಸ್ಟ್ 5 ರಂದು ಮೇಕೆದಾಟು ಯೋಜನೆ ವಿರೋಧಿಸಿ ಅಣ್ಣಾಮಲೈ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು. ಆ ಚಿತ್ರಗಳನ್ನು ಟ್ವೀಟ್ ಮಾಡಿ ಕರ್ನಾಟಕದ ಸಹೋದರ, ಸಹೋದರಿಯರು ಈ ಯೋಜನೆಗೆ ಒತ್ತಡ ಹೇರದಂತೆ ಮನವಿ ಮಾಡುತ್ತೇನೆ ಎಂದು ಬರೆದಿದ್ದರು. ಅದನ್ನು ಸಿ.ಟಿ ರವಿ ಮರುಟ್ವೀಟ್ ಮಾಡುವ ಮೂಲಕ ಅಣ್ಣಾಮಲೈಗೆ ಬೆಂಬಲ ಸೂಚಿಸಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಅಣ್ಣಾಮಲೈಗೆ ಅವರ “ರಾಜ್ಯ ಮೊದಲು”, ಇದನ್ನು ರಿಟ್ವೀಟ್ ಮಾಡಿದ ಸಿ.ಟಿ ರವಿಗೆ “ದೇಶ ಮೊದಲು”.. ಈ ‘ದೇಮೋ’ಗಳು ಮನೆಗೆ ಮಗಾನೂ ಆಗೋದಿಲ್ಲ, ಊರಿಗೆ ಆಳೂ ಆಗೋದಿಲ್ಲ. ಒಟ್ಟಿನಲ್ಲಿ ಟೋಟಲ್ ಕುಲಘಾತಕರು.. ಎಂದು ಗುರು ಕುಲಕರ್ಣಿ ಕಿಡಿಕಾರಿದ್ದಾರೆ.
ಇದನ್ನ ರೀಟ್ವಿಟ್ ಮಾಡಿ ಸಪೋರ್ಟ್ ಮಾಡ್ತಿದ್ದಿರೇನ್ರಿ ಸಿಟಿ ರವಿ ಅವ್ರೇ, ಮೊದಲು ನಮ್ಮ ಜನ ಸರಿಯಿಲ್ಲ, ನಾಡು, ನುಡಿ, ನೆಲ, ಜಲದ ವಿಷಯದಲ್ಲಿ ಬದ್ಧತೆ ಇಲ್ಲದವರನ್ನು ಆಯ್ಕೆ ಮಾಡ್ತಾರೆ. ನೋಡಿ ನಮ್ಮದೆ ತಪ್ಪು, ಅವಯ್ಯನಿಗೆ ತನ್ನ ನಾಡೇ ಮೊದಲಾಯಿತು, ಇವಯ್ಯನಿಗೆ?? ಎಂದು ಶಿವಸೂರ್ಯ ಎಂಬುವವರು ಪ್ರತಿಕ್ರಿಯೆ ನೀಡಿದ್ದಾರೆ.
ಸಿ.ಟಿ ರವಿ ಎನ್ ಸ್ವಾಮಿ ಇದು? ರಾಜ್ಯ ದ್ರೋಹಿ ಇದ್ದೀರಿ ನೀವು. ಅಸಹ್ಯ ಅಗಲ್ವೇ, ಕನ್ನಡಿಗರ ಹಿತಾಸಕ್ತಿ ವಿರುದ್ಧ ಬೆಂಬಲ ಕೊಡಲು? ನಿಮ್ಮ ಸ್ವಾರ್ಥಕ್ಕೆ ರಾಜ್ಯನೆ ಮಾರುತ್ತೀರ? ನಿಮ್ಮ ಧೋರಣೆಗೆ ಧಿಕ್ಕಾರ ಎಂದು ಸಾಮಾನ್ಯ ಕನ್ನಡಿಗ ಎಂಬುವವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ನಾನುಗೌರಿ.ಕಾಂ ಜೊತೆಗೆ ಆಮ್ ಆದ್ಮಿ ಪಕ್ಷದ ಜಂಟಿ ಕಾರ್ಯದರ್ಶಿಗಳಾದ ದರ್ಶನ್ ಜೈನ್ ಮಾತನಾಡಿ, “ಸಿ.ಟಿ ರವಿ ಸೇರಿದಂತೆ ಹಲವು ಬಿಜೆಪಿ ನಾಯಕರಿಗೆ ಕನ್ನಡ ವಿರೋಧಿ ಧೋರಣೆ ಅನುಸರಿಸುವುದು ಚಟವಾಗಿಬಿಟ್ಟಿದೆ. ಇದರಲ್ಲಿ ಅವರು ವಿಕೃತ ಆನಂದ ಅನುಭವಿಸುತ್ತಿದ್ದಾರೆ. ಈ ಹಿಂದೆ ಕೂಡ ಶ್ರೀಲಂಕಾ ಪಾಸ್‌ಪೋರ್ಟ್ ವಿವಾದಯೆದ್ದಾಗ 5-6 ಭಾಷೆಗಳಲ್ಲಿ ಪಾಸ್‌ಪೋರ್ಟ್ ಮಾಹಿತಿ ಸಿಗುತ್ತಿರುವಾಗ ಕನ್ನಡದಲ್ಲಿ ಏಕಿಲ್ಲ? ಎಂದು ಒಬ್ಬರು ಪ್ರಶ್ನಿಸಿದ್ದರು. ಆಗ ಲೋಕಲ್ ಭಾಷೆಯಲ್ಲಿ ಪ್ರಿಂಟ್ ಹಾಕಲು ಇದೇನು ನಿಮ್ಮ ರೇಷನ್ ಕಾರ್ಡ್ ಅಂದುಕೊಂಡಿದ್ದೀರಾ? ಎಂದು ಸಿ.ಟಿ ರವಿ ವ್ಯಂಗ್ಯವಾಡಿದ್ದರು. ಆಗಲೂ ಜನ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು” ಎಂದು ವಿಷಾಧ ವ್ಯಕ್ತಪಡಿಸಿದರು.
ಇದೇ ಸಿ.ಟಿ ರವಿಯವರು ಹಿಂದೆ ನಾನು ನನ್ನ ಮಕ್ಕಳೊಡನೆ ಇಂಗ್ಲಿಷ್‌ನಲ್ಲಿ ಮಾತನಾಡಿಸುತ್ತೇನೆ, ಅವರನ್ನು ಇಂಗ್ಲಿಷ್ ಶಾಲೆಗೆ ಕಳಿಸುತ್ತೇನೆ ಎಂದು ಹೇಳಿಕೆ ನೀಡುವ ಮೂಲಕ ಕನ್ನಡಕ್ಕಿಂತ ಇಂಗ್ಲಿಷ್ ಮೇಲು ಎನ್ನುವ ಅರ್ಥದಲ್ಲಿ ಮಾತನಾಡಿದ್ದರು. ಅವರಿಗೆ ಕನ್ನಡದ ಭಾವನೆಗಳಿಗೆ ಬೆಲೆ ಕೊಡಬೇಕೆನ್ನುವ ಕನಿಷ್ಟ ಸೌಜನ್ಯವಿಲ್ಲ. ಅವರಿಗೆ ಅಧಿಕಾರದ ಮದ ಏರಿದ್ದು ನಾವು ಏನು ಜನಪರ ಕೆಲಸ ಮಾಡದಿದ್ದರೂ ಸಹ ನಾವು ಗೆಲ್ಲುತ್ತೇವೆ ಎನ್ನುವ ಅಹಂ ಅವರದು. ಬಿಜೆಪಿ ಪ್ರಾದೇಶಿಕ ಭಾವನೆಗಳಿಗೆ ಯಾವತ್ತೂ ಬೆಲೆ ಕೊಡುವುದಿಲ್ಲ. ಇದನ್ನು ಜನ ಈಗಲಾದರೂ ಅರ್ಥ ಮಾಡಿಕೊಳ್ಳಬೇಕು ಮತ್ತು ಬಿಸಿ ಮುಟ್ಟಿಸಬೇಕು ಎಂದು ದರ್ಶನ್ ಜೈನ್ ಅಭಿಪ್ರಾಯಪಟ್ಟಿರು.
ಇದನ್ನೂ ಓದಿ: ಮೇಕೆದಾಟು ಯೋಜನೆ ತ್ವರಿತಗೊಳಿಸಿ ಎಂದು ಎಎಪಿಯಿಂದ ಉಪವಾಸ ಸತ್ಯಾಗ್ರಹ



Good luck Priyanka gandi