ಮೇಕೆದಾಟು ಯೋಜನೆ: ತ್ವರಿತಗೊಳಿಸಿ ಎಂದು ಎಎಪಿಯಿಂದ ಉಪವಾಸ ಸತ್ಯಾಗ್ರಹ

ಮೇಕೆದಾಟು ಕಾಮಗಾರಿಯನ್ನು ತಕ್ಷಣವೇ ಆರಂಭಿಸಿ, ಒಂದು ವರ್ಷದೊಳಗೆ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿ ಆಮ್‌ ಆದ್ಮಿ ಪಾರ್ಟಿಯ ಕಾರ್ಯಕರ್ತರು ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ನೇತೃತ್ವದಲ್ಲಿ ಬೆಂಗಳೂರಿನ ಆನಂದ್‌ ಸರ್ಕಲ್‌ ಬಳಿ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ.

ಉಪವಾಸ ಸತ್ಯಾಗ್ರಹಕ್ಕೆ ಚಾಲನೆ ನೀಡಿ ಮಾತನಾಡಿದ ಎಎಪಿ ರಾಜ್ಯಾಧ್ಯಕ್ಷರಾದ ಪೃಥ್ವಿ ರೆಡ್ಡಿ, “13 ವರ್ಷಗಳ ಹಿಂದೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೇವಲ 100 ವಾರ್ಡ್‌ಗಳಿದ್ದವು. 2007ರಲ್ಲಿ 110 ಹಳ್ಳಿಗಳು ಸೇರಿ ವಾರ್ಡ್‌ಗಳ ಸಂಖ್ಯೆ 198 ತಲುಪಿತು. ಈಗ 45 ವಾರ್ಡ್‌ಗಳನ್ನು ಸೇರಿಸಿ 243 ವಾರ್ಡ್‌ ಮಾಡಲು ಸಿದ್ಧತೆ ನಡೆಯುತ್ತಿದೆ. 2007ರಲ್ಲಿ ಸೇರಿದ 110 ವಾರ್ಡ್‌ಗಳಿಗೇ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಅಲ್ಲಿನ ಪೈಪುಗಳಲ್ಲಿ ನೀರಿನ ಬದಲು ಕೇವಲ ಗಾಳಿ ಬರುತ್ತಿದೆ. ಮೇಕೆದಾಟು ಅಣೆಕಟ್ಟು ನಿರ್ಮಾಣವಾಗದೇ 243 ವಾರ್ಡ್‌ಗಳಿಗೆ ಕುಡಿಯುವ ನೀರು ಪೂರೈಕೆ ಅಸಾಧ್ಯ” ಎಂದು ಹೇಳಿದ್ದಾರೆ.

’ಕುಡಿಯುವ ನೀರು ಕೂಡ ಇಲ್ಲದ ಬೆಂಹಳೂರು ನಗರವು ಎಂತಹ ಸ್ಮಾರ್ಟ್‌ ಸಿಟಿ ಆಗಬಹುದು? ಮೇಕೆದಾಟು ಯೋಜನೆಯು ಕರ್ನಾಟಕದ ಹಕ್ಕು. ಇದರ ಜಾರಿಗೆ ಯಾವುದೇ ರೀತಿಯ ಕಾನೂನು ಅಡ್ಡಿಯಿಲ್ಲ. ನ್ಯಾಯಮಂಡಳಿಯಿಂದ ತೊಂದರೆಯಿದೆ ಎಂದು ಬಿಜೆಪಿ ನಾಯಕರು ಸುಳ್ಳು ಹೇಳುತ್ತಿದ್ದಾರೆ. ಒಂದು ವರ್ಷದೊಳಗೆ ಪೂರ್ಣಗೊಳ್ಳಬೇಕೆಂಬ ಕಾಲಮಿತಿ ಇಟ್ಟುಕೊಂಡು ಮೇಕೆದಾಟು ಯೋಜನೆಯ ಕಾಮಗಾರಿಗೆ ಕೂಡಲೇ ಗುದ್ದಲಿ ಪೂಜೆ ನೆರವೇರಿಸಬೇಕು’ ಎಂದು ಪೃಥ್ವಿ ರೆಡ್ಡಿ ಆಗ್ರಹಿಸಿದ್ದಾರೆ.

ಎಎಪಿ ಮುಖಂಡ ಮೋಹನ್‌ ದಾಸರಿ, “ಈ ಡಬಲ್‌ ಎಂಜಿನ್‌ ಸರ್ಕಾರಕ್ಕೆ ರಾಜ್ಯದ ಪರವಾಗಿ ದನಿ ಎತ್ತುವ ತಾಕತ್ತಿಲ್ಲ. ಮೇಕೆದಾಟು ವಿಚಾರದಲ್ಲಿ ಕೇಂದ್ರ ಸರ್ಕಾರವು ತಮಿಳುನಾಡಿನ ಪರವಾಗಿದೆ ಎಂದು ತಮಿಳುನಾಡಿನ ಬಿಜೆಪಿ ಮುಖಂಡರು ಹೇಳುತ್ತಿದ್ದಾರೆ. ಕೇಂದ್ರ ಸರ್ಕಾರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದರಲ್ಲಿ ರಾಜ್ಯದ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ” ಎಂದು ಕಿಡಿಕಾರಿದ್ದಾರೆ.

ಎಎಪಿಯ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್‌ ಸದಂರವರು ಮಾತನಾಡಿ, “ಕಳೆದ ಎಪ್ಪತ್ತು ವರ್ಷಗಳಿಂದಲೂ ಕೇಂದ್ರ ಸರ್ಕಾರವು ನೀರಾವರಿ ಯೋಜನೆಗಳಲ್ಲಿ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ. ಇದನ್ನು ವಿರೋಧಿಸಿ ರಾಜ್ಯಕ್ಕೆ ನ್ಯಾಯ ದೊರೆಕಿಸಿಕೊಡಲು ರಾಜ್ಯವನ್ನಾಳಿದ ಎಲ್ಲಾ ಸರ್ಕಾರಗಳು ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.


ಇದನ್ನೂ ಓದಿ: ಬಸವರಾಜ್‌ ಬೊಮ್ಮಾಯಿ ಮುಖ್ಯಮಂತ್ರಿ ಹುದ್ದೆಗೆ ನ್ಯಾಯ ಒದಗಿಸುವರೇ?: ಎಎಪಿ

LEAVE A REPLY

Please enter your comment!
Please enter your name here