Homeಅಂಕಣಗಳುಕಾಫಿ ವಲಯದಲ್ಲಿನ ಸಾಂಸ್ಕೃತಿಕ ಚಟುವಟಿಕೆಗಳು: ಪ್ರಸಾದ್ ರಕ್ಷಿದಿ

ಕಾಫಿ ವಲಯದಲ್ಲಿನ ಸಾಂಸ್ಕೃತಿಕ ಚಟುವಟಿಕೆಗಳು: ಪ್ರಸಾದ್ ರಕ್ಷಿದಿ

- Advertisement -
- Advertisement -

ಕಳೆದು ಹೋದ ದಿನಗಳು….. ಭಾಗ -2, ಅಧ್ಯಾಯ  -7

ಕಾಫಿ ವಲಯದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಕಡಿಮೆಯೇ ಹೌದು. ಆದರೆ ಇಲ್ಲೂ ಕೊಡಗಿನಂತೆಯೇ ಕೆಲವರು ವ್ಯಕ್ತಿಗಳು ನಿರಂತರವಾಗಿ ಅಲ್ಲದಿದ್ದರೂ ಅಲ್ಲಲ್ಲಿ ಸಾಕಷ್ಟು ಕೆಲಸ ಮಾಡಿದವರಿದ್ದಾರೆ. ಅವರಲ್ಲಿ ಇಲ್ಲಿಯೇ ಹುಟ್ಟಿ ಬೆಳೆದವರು ಕೆಲವರಾದರೆ, ಇನ್ನು ಕೆಲವರು ಬೇರೆ ಕಡೆಗಳಿಂದ ಇಲ್ಲಿಗೆ ಬಂದು ನೆಲೆಸಿದವರು.

ಅವರಲ್ಲೂ ಸ್ವಾತಂತ್ರ್ಯ ಪೂರ್ವದ ತಲೆಮಾರಿನ ಹಲವರಿದ್ದಾರೆ. ಸಕಲೇಶಪುರದ ಗಾಂಧಿಯೆಂದು ಹೆಸರಾಗಿದ್ದ ಎಸ್.ಕೆ.ಕರೀಂಖಾನರು ಮತ್ತು ಅವರ ಸಮಕಾಲೀನರಾದ ಹಾಗೂ ಆನಂದ ಕುಮಾರಸ್ವಾಮಿಯವರ “Time and eternity” ಹಾಗೂ ಗಾಂಧೀಜಿಯ ಹಿಂದ್ ಸ್ವರಾಜ್ ಗ್ರಂಥಗಳ ಬಗ್ಗೆ ವಿಮರ್ಶೆಯನ್ನು ಬರೆದ ಇತಿಹಾಸಕಾರ ‘ಸಕಲೇಶಪುರ ಶ್ರೀಕಂಠಯ್ಯ’ನವರು. ಇವರು The founders of vijayanagara, Founders of Hoysala ಮುಂತಾದ ಗ್ರಂಥಗಳ ಕರ್ತೃವೂ ಹೌದು.

ಕರೀಂಖಾನರು

ಕರೀಂಖಾನರ ಬಾಲ್ಯ ಸ್ನೇಹಿತರೂ ಆಗಿದ್ದ ವಾಲಗದ ಬೀರಯ್ಯ ಹಿರಿಯ ಜಾನಪದ ಕಲಾವಿದರು, ಮೈಸೂರು ಸಂಸ್ಥಾನದ ಎಲ್ಲಕಡೆಗಳಲ್ಲಿಯೂ ಖ್ಯಾತಿಯನ್ನುಗಳಿಸಿದ್ದ ಬೀರಯ್ಯ ಮತ್ತು ಮೋರಿ ಮೊಗಾರಯ್ಯ ಇವರು ಮಲೆನಾಡಿನಲ್ಲಿ ಜಾನಪದ ವಾದ್ಯ, ನೃತ್ಯ, ಕುಣಿತಗಳನ್ನು ಜೀವಂತವಾಗಿಟ್ಟಿದ್ದರು.

ರಂಗಭೂಮಿಯ ವಿಚಾರಕ್ಕೆ ಬಂದರೆ ಗುಬ್ಬಿ ಕಂಪೆನಿಯಲ್ಲಿ ಕೆಲಸಮಾಡಿ ಅಂತದೇ ಸಂಸ್ಥೆಯನ್ನು ಕಟ್ಟಬೇಕೆಂದು ಆಸೆಪಟ್ಟು ಬಾಳ್ಳುಪೇಟೆಯ ಬಸವೇಗೌಡರು, “ಬಸವೇಗೌಡರ ನಾಟಕ ಕಂಪೆನಿ” ಸ್ಥಾಪಿಸಿದ್ದರು. ಇದು ಹಳೆಯ ಮೈಸೂರಿನ ಭಾಗದಲ್ಲಿ ಸಾಕಷ್ಟು ಹೆಸರು ಗಳಿಸಿ ನಾಟಕ ಕಂಪೆನಿಯಾಗಿತ್ತು.

1940ರ ದಶಕದಲ್ಲಿಯೇ ಸಕಲೇಶಪುರದ ಜಾತ್ರೆಯಲ್ಲಿ ಅಖಿಲ ಕರ್ನಾಟಕ ನಾಟಕ ಸ್ಫರ್ಧೆಗಳು ನಡೆಯುತ್ತಿದ್ದವು.

ಜಾತಿ ಪದ್ಧತಿಯ ಕ್ರೌರ್ಯವನ್ನು ಹೇಳುವ “ಮಗನಕೊಂದ ಮಾರಾಯ” ಮದುವೆಗೆ ಮೊದಲೇ ಗಂಡು ಹೆಣ್ಣಿನ ರಕ್ತ ಪರೀಕ್ಷೆ ಮಾಡಿಸಿಬೇಕೆಂಬ ಆಧುನಿಕ ವೈದ್ಯ ವಿಜ್ಞಾನ ವಿಚಾರಗಳ “ರಕ್ತ ಪರೀಕ್ಷೆ” “ಒಡ ಹುಟ್ಟದ ಸಹೋದರ” ಮುಂತಾದ ನಾಟಕಗಳನ್ನು ಬರೆದು ಆಡಿಸಿದ ಮಂಜಪ್ಪ ಹೆನ್ಲಿ ಸಕಲೇಶಪುರದಲ್ಲಿ ಇದ್ದರು. ಮಂಜಪ್ಪ ಹೆನ್ಲಿಯವರ ಹತ್ತಿರದ ಸಂಬಂಧಿಗಳಾದ ಭದ್ರಪ್ಪ ಹೆನ್ಲಿ ಕೂಡಾ ನಾಟಕಕಾರರು, ನಟ ಹಾಗೂ ರಂಗ ನಿರ್ದೇಶಕರೂ ಆಗಿದ್ದಾರೆ. ಮೈಸೂರಿನ ಸುರುಚಿ ರಂಗಮನೆಯ ಸಕ್ರಿಯ ಸದಸ್ಯರೂ ಇವರು. ವೃತ್ತಿಯಲ್ಲಿ ಅಧ್ಯಾಪಕರಾಗಿದ್ದ ಇವರು ಈಗ ಮೈಸೂರಿನಲ್ಲೇ ನೆಲೆಸಿದ್ದಾರೆ. ಹಾಗೆಯೇ ಸುಳ್ಯದಲ್ಲಿ ಅಧ್ಯಾಪಕರಾಗಿದ್ದ ಇಲ್ಲಿನವರೇ ಆದ ನಾಟಕಕಾರ ಮತ್ತು ಅನುವಾದಕ ಎಚ್.ಎಂ.ಕುಮಾರಸ್ವಾಮಿ ಅವರೂ ಕೂಡಾ ಮೈಸೂರಿನಲ್ಲಿ ನೆಲೆಸಿದ್ದಾರೆ.

ಇಂಗ್ಲಿಷ್ ನಾಟಕಗಳ ಅನುವಾದ ಮಾಡಿ ರಂಗಕ್ಕೆ ತಂದಿದ್ದ ಗೋಪಾಲ ಅಯ್ಯಂಗಾರ್, ವರದರಾಜ್, ಸಾರಂಗ ಕಾವ್ಯನಾಮದ ರಂಗೇಗೌಡ, ಕರೀಂಖಾನರ ಯಚ್ಚಮನಾಯಕ ನಾಟಕದ, ಯಚ್ಚಮನಾಯಕನಾಗಿ ಅಭಿನಯಿಸಿ ಕರ್ನಾಟಕದಾದ್ಯಂತ ಹೆಸರಾಗಿದ್ದ ಕಲಾಕೇಸರಿ  ಟೈಲರ್ ಮೂರ್ತಿ ರಾವ್, ಸ್ವತಃ ನಿರಕ್ಷರಿಯಾಗಿದ್ದರೂ ಸುಮಾರು ಎಪ್ಪತ್ತು ನಾಟಕಗಳನ್ನು ಬಾಯಿಪಾಠ ಮಾಡಿಕೊಂಡಿದ್ದ ನಟ ಮಳಲಿ ರಾಮಪ್ಪ ಇವರೆಲ್ಲ ಕಾಫಿವಲಯದಲ್ಲಿ ಒಂದಷ್ಟು ಸಾಂಸ್ಕೃತಿಕ ವಾತಾವರಣವನ್ನು ಕಾಪಾಡಿಕೊಂಡಿದ್ದರು.

ಇತಿಹಾಸಕಾರ ಸಕಲೇಶಪುರ ಶ್ರೀಕಂಠಯ್ಯ, ಸಾರಂಗ ರಂಗೇಗೌಡರು, ಮಳಲಿ ರಾಮಪ್ಪನವರು

ಇವೆಲ್ಲವೂ ಹೆಚ್ಚಾಗಿ ನಗರ ಕೇಂದ್ರಿತ ಚಟುವಟಿಕೆಗಳಾಗಿದ್ದವೇ ಹೊರತು ಗ್ರಾಮಾಂತರದಲ್ಲಿ ಇದರ ಪ್ರಭಾವ ಹರಡಿದ್ದು ಕಡಿಮೆಯೇ. ಆದರೆ ಇವೆಲ್ಲದರ ಹಿಂದೆ ಬಹಳ ಮುಖ್ಯವಾಗಿ ಗಮನಿಸಿಬೇಕಾದ ಸಂಗತಿಯೆಂದರೆ, ಈ ಎಲ್ಲ ವ್ಯಕ್ತಿಗಳ ಕಾರ್ಯಚಟುವಟಿಕೆಗಳೂ ಗಾಂಧೀಜಿಯ ವಿಚಾರಧಾರೆಯಿಂದ ಪ್ರಭಾವಿತವಾದ ಸಂಗತಿಗಳಾಗಿರುವುದು.

ಸ್ವಾತಂತ್ರ್ಯಾ ನಂತರವೂ ಹೆಚ್ಚಿನ ಏಳುಬೀಳುಗಳನ್ನು ಕಾಣದೆ ಇದು ನಡೆದುಬಂತು. ಜೊತೆಯಲ್ಲಿ ಹಾಸನ ಜಿಲ್ಲೆಯ ಕಾಫಿ ತೋಟಗಳಲ್ಲಿ ದುಡಿಯಲು ಬಂದ ದಕ್ಷಿಣಕನ್ನಡ ಜಿಲ್ಲೆಯ ಜನರಲ್ಲಿ ಕಾರ್ಮಿಕರು ಕುಶಲ ಕರ್ಮಿಗಳು. ನೌಕರರು, ಹೋಟೆಲ್ ಉದ್ಯಮಿಗಳು, ಎಲ್ಲರೂ ಇದ್ದರು. ನಂತರದ ವರ್ಷಗಳಲ್ಲಿ ಹೆಚ್ಚಿನವರು ಇಲ್ಲೇ ನೆಲೆನಿಂತರು. ತಮ್ಮ ಕಲೆ ಸಂಸ್ಕೃತಿಯನ್ನೂ ಇಲ್ಲಿ ಬೆಳೆಸಿದರು. ಮುಖ್ಯವಾಗಿ ಯಕ್ಷಗಾನ ಕಲೆಯನ್ನು ಇಲ್ಲಿಗೆ ತಂದರು. ಆದ್ದರಿಂದ ಪ್ರತಿವರ್ಷ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಯಕ್ಷಗಾನ ಮೇಳಗಳು ಸಕಲೇಶಪುರ ತಾಲ್ಲೂಕಿನ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿಯೂ ಪ್ರದರ್ಶನ ನೀಡುತ್ತಿದ್ದವು.

ಕಾಫಿ ಬೆಳೆಗೆ ಸಿಕ್ಕಿದ ಹೆಚ್ಚಿನ ಬೆಲೆ ಮತ್ತು ಅದರಿಂದ ಜನರಲ್ಲಿ ಆದ ಹಣದ ಪ್ರಸರಣ ಕಾಫಿವಲಯದಲ್ಲಿ ಹೊಡೆದಾಟ, ಗಲಭೆ, ಕಳ್ಳತನ, ದರೋಡೆಗಳಂತಹ ಸಾಮಾಜಿಕ ಸಮಸ್ಯೆಗಳನ್ನು ತಂದದ್ದು ಮಾತ್ರವಲ್ಲ  ಸಾಂಸ್ಕೃತಿಕ  ಕ್ಷೇತ್ರಗಳಲ್ಲಿಯೂ ಪರಿಣಾಮ ಬೀರಿತು. ಮನೆ ಮನೆಗೂ ಡಿಷ್ ಆಂಟೆನಾಗಳು, ಟಿ.ವಿ. ಬಂದವು. ಜನ ಸಂಜೆ ಮನೆಯಿಂದ ಹೊರಗೆ ಬರುವುದು ಕಡಿಮೆಯಾಯಿತು. ಸಾಂಸ್ಕೃತಿಕ ಕೆಲಸಗಳಿಗೆ ಒಂದಷ್ಟು ಹಣ ಸಹಾಯ ಮಾಡುತ್ತಿದ್ದ ಪ್ಲಾಂಟರ್‌ಗಳು ಕೈಗೇ ಸಿಗದಾದರು. ಯಕ್ಷಗಾನ ಮೇಳಗಳು ಕೂಡಾ ಇತ್ತ ಬರುವುದು ನಿಂತುಹೋಯಿತು.

ಯಾವುದೇ ಜನಪದವಾಗಲಿ, ಹೊಟ್ಟೆ ತುಂಬಿರಲಿ ಹಸಿವಿರಲಿ ತನ್ನ ಸಾಂಸ್ಕೃತಿಕ ಅಭಿವ್ಯಕ್ತಿಯನ್ನು ಸಂಪೂರ್ಣವಾಗಿ ಬಿಟ್ಟುಕೊಡದು. ಶಿಷ್ಟ ಮಾರ್ಗಗಳು ಇಲ್ಲದಿದ್ದಾಗಲೂ ಜಾನಪದ ತನ್ನ ಕಾಡುಹಾದಿಯನ್ನು, ಕಾಲುದಾರಿಯನ್ನು ಹುಡುಕಿಕೊಂಡು ತನ್ನ ಚಲನಶೀಲತೆಯನ್ನು ಮತ್ತು ಉಸಿರಾಟವನ್ನು ಹಿಡಿದಿಟ್ಟುಕೊಂಡೇ ಇರುತ್ತದೆ. ಹಸಿವಿನಿಂದ ಇದ್ದಾಗ ಎಲ್ಲ ಸಮಸ್ಯೆಗಳ ನಡುವೆಯೂ ಈ ತುಡಿತ ಹೆಚ್ಚಾಗಿಯೇ ಇರುತ್ತದೆ ಎನ್ನುವುದು ಸಾಮಾನ್ಯರ ಅನುಭವ.

ಕಲಾಕೇಸರಿ ಮೂರ್ತಿ ರಾವ್, ಮತ್ತು ಪ್ರೆಸ್ ಸ್ವಾಮಿ ಯಚ್ಚಮನಾಯಕ ನಾಟಕದಲ್ಲಿ

ಇದು ಕಾಫಿ ವಲಯದಲ್ಲೂ ನಿಜವೇ. ಶತಮಾನಗಳಿಂದ ಇಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಕಡಿಮೆ ಇರಬಹುದು. ಅಥವಾ ಬ್ರಿಟಿಷ್ ಜೀವನ ಶೈಲಿಯ ಪ್ರಭಾವದಿಂದ ಬೆಳವಣಿಗೆಯ ಮಾರ್ಗ ಕುಂಠಿತವಾಗಿರಬಹುದು ಆದರೆ ಆಗಲೂ ಜನಪದ ಪ್ರಕಾರಗಳಲ್ಲಿ ಒಂದಷ್ಟು ಕಾವ್ಯ, ಕತೆ, ನೃತ್ಯ, ನಾಟಕ, ಹರಿಕತೆ, ಗೊಂಬೆಯಾಟಗಳು ನಡೆದೇ ಇದ್ದವು. ದೊಡ್ಡಮನೆ ಚನ್ನಯ್ಯ ಶೆಟ್ಟಿ, ನಿಡಿಗೆರೆ ನರಸಿಂಹ ಶಾಸ್ತ್ರಿ, ಕರಗೂರು ಗಿರಿಜಮ್ಮ, ಚಿನ್ನಹಳ್ಳಿ ಗಂಗಮ್ಮ, ತಂಬೂರಿ ನಿಂಗಯ್ಯ ಮುಂತಾದವರು ಬ್ರಿಟಿಷ್ ಕಾಲದಲ್ಲಿಯೂ ಮಂಜರಾಬಾದ್ ವಲಯದ ಶಿಷ್ಟ ಮತ್ತು ಜಾನಪದ ಕ್ಷೇತ್ರವನ್ನು ಜೀವಂತವಾಗಿ ಉಳಿಸಿಕೊಂಡು ಬಂದಿದ್ದರು.

1990ರಲ್ಲಿ ದೇಶಾದ್ಯಂತ ಮಂಡಲ- ಮಂದಿರ ವಿಚಾರಗಳು ಬೀದಿಗೆ ಬಂದಿದ್ದವು. ರಥಯಾತ್ರೆಗಳ ಭರಾಟೆ ಪ್ರಾರಂಭವಾಗಿತ್ತು. ಅಯೋಧ್ಯಾ ಪ್ರಕರಣದ ನಂತರವಂತೂ ದೇಶವೇ ಹತ್ತಿ ಉರಿದಿತ್ತು. ಎಲ್ಲೆಲ್ಲೂ ರಸ್ತೆ ತಡೆ, ಬೆಂಕಿ, ಹೊಡೆದಾಟ, ಸಾವು ಇತ್ಯಾದಿಗಳಲ್ಲದೆ, ಸಂಚಾರ ವ್ಯವಸ್ಥೆ, ಟೆಲಿಫೋನ್, ಟಪಾಲು ಎಲ್ಲವೂ ಅಸ್ತವ್ಯಸ್ತವಾಗಿದ್ದವು.

ಕರ್ನಾಟಕ ತಮಿಳುನಾಡುಗಳಲ್ಲಿ ಕಾಡುಗಳ್ಳ ವೀರಪ್ಪನ್‌ನ ಅಟ್ಟಹಾಸವೂ ಜೋರಾಗಿತ್ತು. ಮೈಸೂರು ಜೈಲಿನಿಂದ ವೀರಪ್ಪನ್‌ ಅನ್ನು ಬೇರೆಡೆಗೆ ಕರೆದೊಯ್ಯುವಾಗ ಕೆಲವರು ಅವನಿಗೆ ಜೈಕಾರ ಹಾಕಿದ್ದರು.

ಈ ಎಲ್ಲ ವಿಚಾರಗಳು ಮತ್ತು ಅಂದಿನ ರಾಜಕೀಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು “ಇಂಡಿಯಾ 1991” ಎನ್ನುವ ನಾಟಕ ಬರೆದೆ.

ಮಲ್ನಾಡ್ ಕಲಾ ಸಂಘ (ಘಟಂ ಮತ್ತು ತಬಲಾ ದಲ್ಲಿ ಕರೀಂಖಾನರ ಸೋದರ ಸಂಬಂಧಿಗಳು ,ರಿಯಾಜ್ ಖಾನ್ ಮತ್ತು ಫಯಾಜ್ ಖಾನ್

ಪೂರ್ಣಿಮಾ ಎಸ್ಟೇಟ್ ಮಾರಾಟವಾದ ನಂತರ ಹರಿದು ಹಂಚಿಹೋದಂತಿದ್ದ ನಮ್ಮ ರಂಗ ತಂಡವನ್ನು ಮತ್ತೆ ಒಗ್ಗೂಡಿಸಬೇಕಿತ್ತು. ಕೆಲವರು ಹೊಸಬರು ತಂಡಕ್ಕೆ ಸೇರಿದರು. ಒಂದೆರಡು ತಿಂಗಳಲ್ಲಿ ನಾಟಕ ಪ್ರದರ್ಶನಕ್ಕೆ ಸಿದ್ಧವಾಯಿತು. ಅಲ್ಲಲ್ಲಿ ಈ ನಾಟಕದ ಪ್ರದರ್ಶನ ನಡೆಯಿತು. ಹಲವರ ಕೆಂಗಣ್ಣಿಗೂ ಈ ನಾಟಕ ಗುರಿಯಾಯಿತು.

ಆ ವರ್ಷ ಲೋಕಸಭೆಗೆ ಚುನಾವಣೆಗಳು ನಡೆಯಲಿದ್ದವು. ಚುನಾವಣೆ ಘೋಷಣೆಯಾಗುವ ತನಕ ಈ ನಾಟಕದ ಪ್ರದರ್ಶನಗಳು ಮುಂದುವರೆದವು. ಚುನಾವಣೆಯ ನಡುವಿನಲ್ಲಿಯೇ ರಾಜೀವ್ ಗಾಂಧಿ ಹತ್ಯೆಯಾದುದರಿಂದ ಚುನಾವಣೆಯೂ ಮುಂದಕ್ಕೆ ಹೋಗಿ ಅದರ ಪ್ರಕ್ರಿಯೆಗಳು ಮುಗಿಯುವ ಹೊತ್ತಿಗೆ ಮಳೆಗಾಲ ಬಂದಿತ್ತು. ನಂತರ ಆ ವರ್ಷ ನಾಟಕದ ಪ್ರದರ್ಶನ ಸಾಧ್ಯವಾಗಲಿಲ್ಲ.

ಆ ಚುನಾವಣೆಯಲ್ಲಿ ಹೆಚ್.ಡಿ.ದೇವೇಗೌಡರು ಹಾಸನದಿಂದ ಲೋಕಸಭೆಗೆ ಆಯ್ಕೆಯಾದರು. ಕೇಂದ್ರದಲ್ಲಿ ಪಿ.ವಿ ನರಸಿಂಹರಾಯರ ಸರ್ಕಾರ ಬಂತು.

ಮಳೆಗಾಲ ಕಳೆದ ನಂತರ ಮತ್ತೆ ನಮ್ಮ “ಇಂಡಿಯಾ 1991” ನಾಟಕವನ್ನು ಪ್ರಾರಂಭಿಸಿದೆವು. ಆದರೆ  ರಥಯಾತ್ರೆಯಿಂದ ಪ್ರಾರಂಭವಾದ ಗಲಭೆಗಳು ಮತ್ತು ಬಾಬರಿ ಮಸೀದಿಯ ಗಲಾಟೆಗಳು ಹೆಚ್ಚುತ್ತಾ ಹೋದಂತೆ ನಮಗೆ ನಾಟಕ ಪ್ರದರ್ಶನ ಮಾಡಲು ಸಾಧ್ಯವಾಗದಂತ ಸ್ಥಿತಿ ನಿರ್ಮಾಣವಾಯಿತು. ಅದನ್ನು ನಿಲ್ಲಿಸಿದೆವು.

ಇಂಡಿಯಾ 1991 ನಾಟಕದ ವಿವರ

ಮಲೆನಾಡಿನ ಕಾಫಿ ವಲಯದಲ್ಲಿಯೂ ಗಲಭೆಗಳಾದವು. ಸಕಲೇಶಪುರ ತಾಲ್ಲೂಕಿನ ಹಾನುಬಾಳು, ಹೆತ್ತೂರು, ಬಾಳ್ಳುಪೇಟೆಯಂತಹ ಹಳ್ಳಿಗಳಿಗೂ ಗಲಭೆ ಹಬ್ಬಿತ್ತು. ಪ್ರಥಮ ಬಾರಿಗೆ ಕರ್ಫ್ಯೂ ಎಂದರೇನೆಂದು ಸಕಲೇಶಪುರದ ಜನ ಅನುಭವಿಸಿದರು. ಕೋಮು ಗಲಭೆಯ ಕಳಂಕ ನಮ್ಮ ತಾಲ್ಲೂಕಿಗೂ ಅಂಟಿಕೊಂಡಿತ್ತು. ಕೆಲವು ತಿಂಗಳ ಕಾಲ ಹಳ್ಳಿಗಳಲ್ಲಿಯೂ ಒಂದು ರೀತಿಯ ಭಯ ಮತ್ತು ಅಪನಂಬಿಕೆಯ ವಾತಾವರಣ ಸೃಷ್ಟಿಯಾಗಿತ್ತು.

ನಮ್ಮ ಈ ನಾಟಕದ ಪ್ರದರ್ಶನವನ್ನು ಹಾರ್ಲೆ ಎಸ್ಟೇಟಿನಲ್ಲಿಯೂ ಮಾಡಿದ್ದೆವು. ರವಿಂದ್ರನಾಥರು ಇಡೀ ನಾಟಕವನ್ನು ನೋಡಿದರು. ನಂತರ “ನಾಟಕದ ಮೂಲಕ ಹಲವು ವಿಚಾರಗಳನ್ನು ಹೇಳಲು ಪ್ರಯತ್ನಿಸಿದ್ದೀಯ. ಹೌದು ಅಸಹನೆಯ ಮೂಲಕ ಯಾವ ಸಮಾಜವನ್ನೂ ಕಟ್ಟಲು ಸಾಧ್ಯವಿಲ್ಲ. ಇದನ್ನು ನೋಡಿ ಕೆಲವರಿಗಾದರೂ ಅರ್ಥವಾಗಬಹುದು. ಬೇರೆ ಕಡೆಯ ಪ್ರದರ್ಶನಗಳಲ್ಲಿ ಜನರ ಸ್ಪಂದನೆ ಹೇಗಿತ್ತು? ಎಂದು ಕೇಳಿದರು”.

ನಾನು “ಸುಮಾರಾಗಿತ್ತು, ಆದರೆ ರಾಜಕೀಯ ವಿಷಯಗಳ ನಾಟಕಗಳನ್ನೂ ಜನ ಅರ್ಥಮಾಡಿಕೊಳ್ಳುವುದು ಮಾತ್ರವಲ್ಲ ಇಷ್ಟಪಡುತ್ತಾರೆ. ಆದರೆ ವಿದ್ಯಾವಂತರಿಗೆ ಹೆಚ್ಚು ಅರ್ಥವಾಗಬಹುದು” ಎಂದೆ.

“ಹಾಗೇನಿಲ್ಲ ಶಾಲೆಯ ಮೂಲಕ ಕಲಿತದ್ದು ವಿದ್ಯೆ ಅನ್ನುವುದು ನಮ್ಮ ಅನಿಸಿಕೆ ಅಷ್ಟೇ, ಅವರಿಗೆ ಜೀವನಾನುಭವ ಹೆಚ್ಚಿನ ವಿದ್ಯೆ ಕೊಟ್ಟಿರುತ್ತದೆ” ಎಂದರು.

  • ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)

ಕಳೆದುಹೋದ ದಿನಗಳು ಭಾಗದ ಹಿಂದಿನ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.


ಇದನ್ನೂ ಓದಿ: ನಮ್ಮ ರಾತ್ರಿ ಶಾಲೆ ಮತ್ತು ನಾಟಕ ತಂಡದ ಬೆಳವಣಿಗೆ: ಪ್ರಸಾದ್ ರಕ್ಷಿದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...